20ರ ಹರೆಯದಲ್ಲಿ ಮೊಡವೆಗಳೇ ಮಾಯವಾಗಿ ಚರ್ಮದ ಹೊಳಪೇ ಒಡವೆಯಾಗಿರುತ್ತದೆ. ಈ ವಯಸ್ಸಿನಲ್ಲಿ ಚರ್ಮದ ಕಾಂತಿ ಮತ್ತು ಸೌಂದರ್ಯಕ್ಕೆ ಹೆಚ್ಚಿನ ಗಮನ ನೀಡಿದಲ್ಲಿ ಆರೋಗ್ಯವಂತ ಚರ್ಮದ ಆಯಸ್ಸು ಖಂಡಿತವಾಗಿಯೂ ಹೆಚ್ಚುತ್ತದೆ. ಮುಖ ನೋಡಿ ನಿಮ್ಮ ಆಯಸ್ಸನ್ನು ಹೇಳುವಂತೆಯೇ ಇಲ್ಲ. ಹರೆಯದ ಹೊಳಪು ಕೊನೆಯವರೆಗೂ ಉಳಿಯಲು ಈ ಹಂತದಲ್ಲಿ ಒಂಚೂರು ಗಮನ ನೀಡುವುದು ಒಳಿತು.
ಪ್ರಖರವಾದ ಸೂರ್ಯನ ಬೆಳಕಿಗೆ ನೇರವಾಗಿ ಮೈ ಒಡ್ಡುವುದು ಬೇಡ. ಇದರಿಂದ ಚರ್ಮ ಮುಪ್ಪಾಗುವುದನ್ನು ತಡೆಯಬಹುದು. ಚರ್ಮದ ನೆರಿಗೆಯನ್ನು ಮುಂದೂಡಬಹುದು. ಚರ್ಮ ಶುಷ್ಕವಾಗುವುದನ್ನು ತಡೆಯಬಹುದು. ವಯಸ್ಸಾಗುವ ಲಕ್ಷಣಗಳನ್ನು ಹಿಂದಕ್ಕಟ್ಟಿ ಸೌಂದರ್ಯ ಮತ್ತು ಉತ್ಸಾಹಗಳನ್ನೇ ಮುಖದ ಮೇಲೆ ಬಿಂಬಿಸಬಹುದು.
* ಪ್ರತಿದಿನವೂ 6–8 ಗ್ಲಾಸು ನೀರನ್ನು ಕುಡಿಯುವುದು ಅಭ್ಯಾಸ ಮಾಡಿಕೊಳ್ಳಿ. ನೀರಿನ ಕೊರತೆಯಾದಲ್ಲಿ ಚರ್ಮ ಶುಷ್ಕವಾಗುತ್ತದೆ. ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಕೋಮಲತನವನ್ನು ಕಳೆದುಕೊಂಡಲ್ಲಿ ಚರ್ಮದ ಕಾಂತಿ ಕುಗ್ಗುತ್ತದೆ. ಕಣ್ಣಿನ ಸುತ್ತ ಕಪ್ಪು ವರ್ತುಲ ಕಾಣುತ್ತದೆ. ಹೇರಳವಾಗಿ ನೀರು ಕುಡಿಯಿರಿ. ಚರ್ಮವನ್ನು ಪೋಷಿಸಿರಿ.
* ನಿಗದಿತ ಸಮಯದಲ್ಲಿ ನಿದ್ದೆ ಮಾಡಿ. ನೀವು ನಿದ್ದೆಗಿಳಿದಾಗ ದೇಹ ವಿಶ್ರಾಂತಿ ಪಡೆದು, ಚರ್ಮ ಪುನಃಶ್ಚೇತನ ಪಡೆಯುತ್ತದೆ. ನಿದ್ದೆಯಿಂದಾಗಿ ಚರ್ಮದ ಹೊಳಪು ಮತ್ತು ಸೌಂದರ್ಯ ಎರಡೂ ಹೆಚ್ಚುತ್ತವೆ.
* ಕಸರತ್ತು ಸಹ ಔಷಧ: ನಿಗದಿತ ಅವಧಿಯ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ರಕ್ತ ಸಂಚಲನ ಸುಗಮವಾಗುತ್ತದೆ.
* ಸಮತೋಲಿತ ಆಹಾರ: ಊಟದಲ್ಲಿ ಧಾರಾಳವಾಗಿ ಹಣ್ಣು ಹಾಗೂ ಎಣ್ಣೆಕಾಳುಗಳನ್ನು ಸೇರ್ಪಡೆಗೊಳಿಸಿ. ಕರಿದ ತಿಂಡಿಯ ಬದಲು ತಾಜಾ ಹಣ್ಣು ತಿನ್ನಬಹುದು. ಗ್ರೀನ್ ಟೀ ಸೇವನೆ, ಸಾಲ್ಮನ್ ಮೀನು ಚಂದದ ಚರ್ಮಕ್ಕೆ ಪೋಷಣೆ ನೀಡುತ್ತವೆ. ಅಗಸೆ ಬೀಜ ಸಹ ಚರ್ಮಕ್ಕೆ ಅಂದವನ್ನು ತಂದು ಕೊಡುತ್ತದೆ.
* ಧೂಮಪಾನ ಮತ್ತು ಮಾದಕ ಪಾನೀಯಗಳ ಸೇವನೆಯನ್ನು ಬಿಟ್ಟುಬಿಡಬೇಕು. ಇವೆರಡೂ ಚರ್ಮದಿಂದ ನೀರಿನಂಶ ಹೀರಿಕೊಳ್ಳುತ್ತವೆ. ಚರ್ಮವು ಕಳಾಹೀನ ಕಾಣುವಂತೆ ಮಾಡುತ್ತವೆ.
ಈ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿದ್ದಲ್ಲಿ ಮುಖದ ಮೇಲೆ ವಯಸ್ಸು ತನ್ನ ಗುರುತು ಬಿಟ್ಟುಕೊಡಲು ಆಗದು. ಸಾಧ್ಯವಿದ್ದಷ್ಟು ಯುವತಿಯರು ತಮ್ಮ ಚರ್ಮದ ಪೋಷಣೆಯನ್ನು ಮಾಡಿಕೊಂಡಲ್ಲಿ, ಬಹುತೇಕರು ಆ್ಯಂಟಿ ಏಜಿಂಗ್ ಕ್ರೀಮ್ ಬಳಸುವ ಸಾಧ್ಯತೆಯೇ ಕಡಿಮೆಯಾಗಬಲ್ಲುದು. ಉತ್ತಮ ಆಹಾರ ಅಭ್ಯಾಸ, ಜೀವನಶೈಲಿಯಿಂದಲೇ ಕಾಂತಿಯುತ ಚರ್ಮ, ಉತ್ಸಾಹಿ ಮನಸು ಪಡೆಯಬಹುದು. ವಯಸ್ಸು ಅಂಕಿಗಳಾಗಿ ಮಾತ್ರ ಉಳಿಯುತ್ತದೆ.
ಅಕ್ಕಿ ಹೊಟ್ಟಿನ ಉಪಾಯ
ಅಕ್ಕಿ ಹೊಟ್ಟಿನ ಮಾಸ್ಕ್ ಜಪಾನಿಗರ ಸಾಂಪ್ರದಾಯಿಕ ಚಿಕಿತ್ಸೆಯಾಗಿದೆ. ಚರ್ಮದ ಸೌಂದರ್ಯ ಹಾಗೂ ಸ್ವಚ್ಛತೆಗೆ ಇದನ್ನು ಬಳಸಲಾಗುತ್ತದೆ. ಉರುಟುರುಟು ಆಗಿರುವುದರಿಂದ ಚರ್ಮದಲ್ಲಿರುವ ಸಣ್ಣ ರಂಧ್ರಗಳಿಂದ ಕೊಳೆಯನ್ನು ಎಣ್ಣೆಯಂಶವನ್ನೂ ಹೀರಿಕೊಳ್ಳುತ್ತದೆ. ನುಣಪಾದ ಕೊಳೆರಹಿತ ಚರ್ಮಕ್ಕೆ ಈ ಮಾಸ್ಕ್ ರಾಮಬಾಣವಿದ್ದಂತೆ. ಅಷ್ಟೇ ಅಲ್ಲ ಮುಖದ ಮೇಲೆ ನೆರಿಗೆಗಳಾಗದಂತೆ ತಡೆಯುತ್ತದೆ.
ಭತ್ತದ ತೌಡನ್ನು ಹಸಿಹಾಲಿನೊಂದಿಗೆ ಓಟ್‌ಮೀಲ್‌ನೊಂದಿಗೆ ಸಮಪ್ರಮಾಣದಲ್ಲಿ ಮಿಶ್ರಣ ಮಾಡಿಕೊಂಡು ಲೇಪನ ಸಿದ್ಧಪಡಿಸಿಕೊಳ್ಳಿ. ಮುಖದ ಮೇಲೆ ವರ್ತುಲಾಕಾರದಲ್ಲಿ ಮಸಾಜ್ ಮಾಡಿಕೊಳ್ಳುತ್ತ ಈ ಮಾಸ್ಕ್ ಅನ್ನು ಮುಖದ ಮೇಲೆ ಲೇಪಿಸಿ. 10–12 ನಿಮಿಷ ಬಿಟ್ಟು ಉಗುರು ಬಿಸಿ ನೀರಿನಿಂದ ಮುಖ ತೊಳೆಯಿರಿ. ವಾರಕ್ಕೊಮ್ಮೆ ಈ ಚಿಕಿತ್ಸೆಯಿಂದ ಚರ್ಮಕ್ಕೆ ಅಗತ್ಯದ ಪೋಷಣೆ ದೊರೆಯುತ್ತದೆ.
(ಮಾಹಿತಿಗೆ: 7676757575)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.