
ನಮ್ಮ ಅಮ್ಮಂದಿರು ನೀರು ಉಳಿತಾಯಕ್ಕೆ ಏನೇನೋ ಮಾಡುತ್ತಿದ್ದರು. ಆದರೆ ನಾವದನ್ನು ಮಾಡುತ್ತಿದ್ದೇವೆಯೇ!
ಆ ಹವಾನಿಯಂತ್ರಿತ ಬಸ್ಸು, ನಗರದ ಹೊರವಲಯದ ಬಿರುಬಿಸಿಲಿನ ಬಯಲಿನಲ್ಲಿ ನಿಂತಾಗ, ಅದುವರೆಗೆ ತಣ್ಣಗೆ ಕುಳಿತಿದ್ದವರೆಲ್ಲ ಒಬ್ಬೊಬ್ಬರಾಗಿ ಇಳಿದು, ಹತ್ತಿರದಲ್ಲೇ ಇದ್ದ ಅರ್ಧ ಮುಗಿದಿದ್ದ, ಅಪಾರ್ಟ್‌ಮೆಂಟಿನತ್ತ ಹೆಜ್ಜೆ ಹಾಕಿದರು. ಗಂಡನಿಗಿಂತ ಎರಡು ಹೆಜ್ಜೆ ಹಿಂದಿದ್ದ ಸ್ಮಿತಾ ಅರೆಗಳಿಗೆ ನಿಂತು ಸುತ್ತಲೂ ಕಣ್ಣು ಹಾಯಿಸಿದಳು.
ಅಲ್ಲಲ್ಲಿ ಇಂತಹದೇ ಅಪಾರ್ಟ್‌ಮೆಂಟುಗಳು ನಿರ್ಮಾಣ ಹಂತದಲ್ಲಿರುವುದು ಕಂಡುಬಂದಿತು. ಇನ್ನುಳಿದಂತೆ ಮುಖ್ಯ ರಸ್ತೆಯಿಂದ ಸುಮಾರು ಆರರಿಂದ ಎಂಟು ಕಿ.ಮೀ. ಒಳಗಿದ್ದ ಆ ಪ್ರದೇಶದಲ್ಲಿ ಯಾವುದೇ ಮನೆಗಳು ಕಂಡುಬರಲಿಲ್ಲ. ಅಪಾರ್ಟ್‌ಮೆಂಟಿನತ್ತ ತುಸು ನಿಧಾನವಾಗಿಯೇ ಹೆಜ್ಜೆ ಹಾಕಿದರು.
ಮುಖ್ಯ ಗೇಟಿನಿಂದ ಒಳಹೊಕ್ಕೊಡನೇ ಕಂಡುಬಂದದ್ದು ಬೇರೆಯದೇ ಲೋಕ. ಅಂಗಳದಲ್ಲಿ ನಿರ್ಮಿಸಿದ ಹಸಿರು ಹುಲ್ಲಿನ ಲಾನ್, ಮಕ್ಕಳ ಆಟಕ್ಕೆ ಜಾರುಬಂಡೆ, ಜೋಕಾಲಿ, ಮರಿಗೋ ರೌಂಡ್‌ಗಳು. ಅಲ್ಲಲ್ಲಿ ಪುಟ್ಟ ದ್ವೀಪದಂತೆ ಕಂಡುಬಂದ ಅಲಂಕಾರಿಕ ಗಿಡಗಳ ಗುಂಪುಗಳು. ಕಟ್ಟಡದ ಒಳಗೆ ಹೋಗುತ್ತಿದ್ದಂತೆಯೇ ಮತ್ತೆ ತಣ್ಣನೆಯ ಅನುಭವ. ಪರವಾ ಇಲ್ಲ ಸಿಟಿಯಿಂದ ದೂರ ಇದ್ರೂ ಕಂಫರ್ಟಬಲ್ ಆಗಿದೆ ಎಂದ ಪತಿ ಶಂಕರನ ಮಾತಿಗೆ ಹೌದೆನ್ನುವಂತೆ ತಲೆಯಾಡಿಸಿದಳು.
ಇವರೆಲ್ಲರನ್ನೂ ಕರೆದುಕೊಂಡು ಬಂದಿದ್ದ ಬಿಲ್ಡರ್ಕಡೆಯ ವ್ಯಕ್ತಿ ಮೊದಲ ಅಂತಸ್ತಿನಲ್ಲಿದ್ದ ಪೂರ್ಣ ತಯಾರಾದ ಫ್ಲ್ಯಾಟ್ ಒಂದರ ಒಳಗೆ ಕರೆದೊಯ್ದ. ದೊಡ್ಡದಾದ ಹಾಲ್, ಅದಕ್ಕಿದ್ದ ಎರಡು ಬಾಲ್ಕನಿಗಳು, ಎರಡು ಬೆಡ್‌ರೂಮ್‌ಗಳು, ಪುಟ್ಟದಾದ ಆದರೆ ಎಲ್ಲವೂ ಅಚ್ಚುಕಟ್ಟಾಗಿದ್ದ ಮಾಡ್ಯುಲರ್ ಕಿಚನ್, ಅಟ್ಯಾಚ್ಡ್ ಬಾತ್‌ರೂಂಗಳು. ಎಲ್ಲರೂ ಸಂತಸದಿಂದ ನೋಡುತ್ತಿದ್ದರು.
ಸ್ವಲ್ಪ ಹಿಂದೆಯೇ ಇದ್ದ ಸ್ಮಿತಾ, ಅಡುಗೆ ಮನೆಯ ವಾಷ್ ಬೇಸಿನ್ನಿನ ನಲ್ಲಿ ತಿರುಗಿಸಿದಳು. `ಗೊರ್~ ಎಂದು ಶಬ್ದ ಮಾಡುತ್ತಾ ನೀರು ಬಂತು. ಮುಖದಲ್ಲಿ ನಗೆಯರಳಿಸಿ ನೀರಿಗೆ ಕೈ ಹಿಡಿದಳು. ಬಿಸಿಲಿಗೆ ನೀರು ಬೆಚ್ಚಗಾಗಿತ್ತು. ಅಂಗೈಯಲ್ಲಿ ತುಂಬಿಸಿಕೊಂಡು ಕೆಳಗೆ ಬಿಡುತ್ತಿದ್ದಾಗ ನೀರಿನ ಬಣ್ಣ ಆಕೆಯ ಗಮನ ಸೆಳೆಯಿತು.
ಕಂದು ಬಣ್ಣದ ನೀರು! ಮತ್ತೂ ಸ್ವಲ್ಪ ಹೊತ್ತು ನೀರು ಬಿಟ್ಟಳು ಮತ್ತೂ ಅಂತಹದೇ ನೀರು! ಅಷ್ಟರಲ್ಲಿ ಆಕೆಯನ್ನು ಹುಡುಕಾಡುತ್ತಾ ಬಂದ ಶಂಕರ್ `ಓಹೋ ನೀನಿನ್ನೂ ಇಲ್ಲೇ ಇದ್ದೀಯಾ, ಬಾ, ಮೂರು ಬೆಡ್‌ರೂಮಿನ ಫ್ಲ್ಯಾಟ್ ತೋರಿಸ್ತಾ ಇದಾರೆ ಎಂದ. ಇಲ್ನೋಡಿ ಈ ನೀರಿನ ಬಣ್ಣ ಎಂದಳು ಸ್ಮಿತಾ.
ಅಯ್ಯೋ ಬೋರ್ ನೀರಲ್ವ ಹೊಸದಾಗಿ ಅದು ಬರೋದು ಹೀಗೇನೇ, ಇಲ್ಲಿಗೆ ಕಾರ್ಪೊರೇಶನ್ ವಾಟರ್ ಕನೆಕ್ಷನ್ ಇಲ್ಲ. ಅಂದರೆ ಇದೇ ಕುಡಿಯೋ ನೀರಾ? ಎಂದ ಸ್ಮಿತಾಳ ಪ್ರಶ್ನೆಗೆ `ಅಯ್ಯೋ ಅದೇನ್ ದೊಡ್ಡ ಸಮಸ್ಯೆ ಅಲ್ಲ.
ಕ್ಯಾನ್ ತರಿಸಿದ್ರಾಯ್ತು.. ಬಿಸಿಲರಿ ಇಲ್ವಾ ಬಾ. ಬಾ~ ಎಂದಾಗ ಅರೆಮನಸ್ಸಿನಿಂದ ಅಲ್ಲಿಂದ ಹೊರನಡೆದಳು ಸ್ಮಿತಾ. ಮತ್ತೂ ಒಂದೆರಡು ಫ್ಲ್ಯಾಟ್, ಹೆಲ್ತ್ ಕ್ಲಬ್, ಸ್ವಿಮ್ಮಿಂಗ್ ಪೂಲ್, ಕಮ್ಯೂನಿಟಿ ಹಾಲ್ ಎಲ್ಲಾ ನೋಡಿಯಾಯಿತು. ಬಂದವರೆಲ್ಲಾ ಯಾವ ಫ್ಲ್ಯಾಟ್ ಬುಕ್ ಮಾಡಬೇಕು? ಎಂದು ಚರ್ಚಿಸಲಾರಂಭಿಸಿದರು.
ನಾವು ಯಾವುದು ಬುಕ್ ಮಾಡೋಣ? ಶಂಕರ ಕೇಳಿದಾಗ ಯೋಚನೆ ಮಾಡೋಣ ಎಂದಳು ಸ್ಮಿತಾ ನೀನು ಯಾವಾಗ್ಲೂ ಹೀಗೇ, ಯಾವುದಕ್ಕೂ ಉತ್ಸಾಹ ಇಲ್ಲ ಎಂದ ಶಂಕರನ ಮಾತಿಗೆ ಗಮನ ಕೊಡದೆ, ಮ್ಯಾನೇಜರ್ ಕಡೆ ತಿರುಗಿ ನೀರು ಯಾಕೆ ಹಾಗೆ ಕಂದು ಬಣ್ಣವಾಗಿದೆ? ಎಂದು ಕೇಳಿದಳು.
ಅದಕ್ಕವನು ಹೊಸಾ ನೀರಲ್ವ ಮೇಡಂ ಅದೂ ಬೋರ್ ನೀರು, ಅದಕ್ಕೆ ನೀವೇನೂ ಯೋಚ್ನೆ ಮಾಡಬೇಡಿ ಆ ಮೇಲೆ ನಿಮಗೆ ಬರೋದು ಕ್ರಿಸ್ಟಲ್ ಕ್ಲಿಯರ್ ನೀರು. ಅದಕ್ಕೂ ಬೋರ್ ವಾಟರ್ ಬೇಡ ಅಂದ್ರೆ ಇದ್ದೇ ಇದೆಯಲ್ಲ ಬಿಸಿಲರಿ ವಾಟರ್ ಎಂದ. ಎಲ್ಲರೂ ಸ್ಮಿತಾಳತ್ತ, ಆಕೆಯ ಪ್ರಶ್ನೆಯಿಂದ ಸಮಯ ವ್ಯರ್ಥವಾಯಿತು ಎಂಬಂತೆ ನೋಡಿ, ಬಸ್ ಕಡೆ ನಡೆದರು.
ಹವಾನಿಯಂತ್ರಿತ ತಣ್ಣನೆಯ ಬಸ್ಸಿನಲ್ಲೂ ಸ್ಮಿತಾಳ ತಲೆಯಲ್ಲಿ `ಆ ನೀರೇಕೆ ಕಂದು? ಅದಕ್ಕೆ ಒಂಥರಾ ವಾಸನೆಯಿದ್ದಂತಿತ್ತು~ ಎಂಬ ಪ್ರಶ್ನೆಗಳು ಕೊರೆಯುತ್ತಿದ್ದು ತಲೆ ಬಿಸಿ ಮಾಡಿದವು.
ನಿಜ, ನೀರು ಸಿಕ್ಕರಷ್ಟೇ ಸಾಲದು, ಅದು ಬಳಸಲು ಕುಡಿಯಲು ಯೋಗ್ಯವಾಗಿರಬೇಕು ಎಂದು ಯೋಚಿಸುವುದು ಸರಿಯೇ.
ನಾರಿ ನಗರದವಳೇ ಆಗಿರಲಿ, ಹಳ್ಳಿಯವಳೇ ಆಗಿರಲಿ, ದೂರದ ಕೆರೆಯಿಂದ ತಲೆಯ ಮೇಲೆ ಕೊಡ ಹೊತ್ತು ತರಲಿ, ಇಲ್ಲವೇ ಅಡುಗೆ ಮನೆಯ ಟ್ಯಾಪ್‌ನಿಂದ ಕುಡಿಯಲು ಮಕ್ಕಳಿಗೆ ಕೊಡಲಿ, ನೀರು ಆಕೆಯ ಜವಾಬ್ದಾರಿ. ಇಲ್ಲಿ ಸ್ಮಿತಾಳ ಯೋಚನೆಯೂ ವ್ಯರ್ಥವಲ್ಲ. ನಗರೀಕರಣದ ಭರಾಟೆಯಲ್ಲಿ ಅಪಾರ್ಟ್‌ಮೆಂಟುಗಳು ತಲೆ ಎತ್ತುತ್ತಿರುವ ಇಂದಿನ ದಿನಗಳಲ್ಲಿ ಮೇಲ್ನೋಟಕ್ಕೆ ನೀರು ಲಭ್ಯವಿದೆ ಎಂದೆನಿಸಿದರೂ ಅದು ಸುರಕ್ಷಿತವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಫ್ಲೋರೈಡ್, ಆರ್ಸೆನಿಕ್
ಈ ಬಾರಿಯ ವಿಶ್ವಜಲ ದಿನದ (ಮಾರ್ಚ್ 22) ಧ್ಯೇಯ ವಾಕ್ಯವೂ ಸಹ ನೀರು ಮತ್ತು ಆಹಾರದ ಸುರಕ್ಷತೆ ಎನ್ನುವುದಾಗಿದೆ. ಊರ ಹೊರವಲಯದ ಅಪಾರ್ಟ್‌ಮೆಂಟುಗಳು, ಭವ್ಯ ಕಟ್ಟಡಗಳು ತಮ್ಮದೇ ಆದ ಕೊಳವೆ ಬಾವಿಗಳನ್ನು ತೋಡಿ ನೀರನ್ನು ಒದಗಿಸುತ್ತಿವೆ.
ಆದರೆ ಆ ಪ್ರದೇಶದಲ್ಲಿ ಯಾವುದೋ ಕಾರ್ಖಾನೆಯ ತ್ಯಾಜ್ಯಗಳು, ಹೂಳಲ್ಪಟ್ಟಿದ್ದರೆ ಅದು ನೆಲದಾಳಕ್ಕೆ ಇಂಗಿ ಅಂತರ್ಜಲವನ್ನು ಸೇರಿ ನೀರನ್ನು ವಿಷಮಯವಾಗಿಸಬಹುದು, ಅಂತೆಯೇ ಅತಿ ಆಳವಾಗಿ ತೋಡಿದ ಕೊಳವೆ ಬಾವಿಗಳಿಂದ ಬರುವ ನೀರಿನಲ್ಲಿ ಫ್ಲೋರೈಡ್ ಅಥವಾ ಆರ್ಸೆನಿಕ್ ಸೇರಿರಬಹುದು. ಹಾಗಾಗಿ ಮನೆ ಕೊಳ್ಳುವ ಮೊದಲು ಅಲ್ಲಿಯ ನೀರಿನ ಮೂಲವನ್ನು ತಿಳಿಯುವುದು ಅವಶ್ಯ. ಆದರೆ ಮಹಿಳೆ ಕೇವಲ ತನ್ನ ಮನೆಯ ನೀರಿನ ಸುರಕ್ಷತೆಯನ್ನು ಮಾತ್ರ ಕಾಯ್ದುಕೊಂಡರೆ ಸಾಲದು.
ನಮ್ಮ ಸಂಸ್ಕೃತಿಯಲ್ಲಿ ನೀರು ಮತ್ತು ನಾರಿಯ ನಡುವಿನ ಸಂಬಂಧ ಹಾಸುಹೊಕ್ಕಾಗಿದೆ. ನವ ವಧು ಗಂಡನ ಮನೆ ಪ್ರವೇಶಿಸುವಾಗ, ಗೃಹ ಪ್ರವೇಶಗಳ ಸಂದರ್ಭದಲ್ಲಿ, ಮನೆಯೊಡತಿ ತುಂಬಿದ ಬಿಂದಿಗೆಯೊಂದಿಗೆ ಮನೆ ಪ್ರವೇಶ ಮಾಡುತ್ತಾಳೆ, ಅಂದರೆ ನೀರು ಸುಖ, ಸಮೃದ್ಧಿಯ ಸಂಕೇತ. ಅದನ್ನುಳಿಸಲು ನೀರನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇಂದು ನಾರಿಗಿದೆ.
ಆಧುನಿಕ ಜೀವನ ಶೈಲಿಯಲ್ಲಿ ನಾವು ಬಳಸುವ ವಾಷಿಂಗ್ ಮೆಶಿನ್‌ಗಳು, ಟಾಯ್‌ಲೆಟ್ ಫ್ಲಶ್‌ಗಳು, ಸ್ನಾನದ ಸ್ಪ್ರೇಯರ್‌ಗಳು ವ್ಯರ್ಥ ಮಾಡುವ ನೀರಿನ ಅರಿವು ನಮಗಿರಬೇಕಾದದ್ದು ಅನಿವಾರ್ಯ. ಕೈಗೆಟುಕುವ ಅಳತೆಯಲ್ಲಿ, ನೀರಿನ ಟ್ಯಾಪ್ ಇದೆ, ಬಂದ ನೀರಿನ ಬಿಲ್ಲನ್ನು ತುಂಬುವ ಆರ್ಥಿಕ ಸಾಮರ್ಥ್ಯವಿದೆ ಎಂದು ನೀರನ್ನು ಯಥೇಚ್ಛವಾಗಿ ಬಳಸುತ್ತಾ ಹೋದಲ್ಲಿ ಅದು ಬರಿದಾದ ನಂತರ ನಮ್ಮ ಹಣ ನಮಗೆ ಜೀವಜಲವನ್ನು ಕೊಡಲಾರದು ಎನ್ನುವ ಅರಿವು ಇಂದು ಅವಶ್ಯಕ.
ಒಂದು ಲೀಟರ್ ಬಳಸುವ ಕಡೆ ನಮ್ಮ ಫ್ಲಶ್ ಹತ್ತು ಲೀಟರ್ ನೀರು ಸುರಿಯುತ್ತದೆ. ಎರಡು ಬಕೆಟ್ ನೀರಿಗೆ ಬದಲಾಗಿ ವಾಷಿಂಗ್ ಮೆಷಿನ್ ಎಂಟು ಬಕೆಟ್ ನೀರನ್ನು ಬಳಸುತ್ತದೆ. ಹಾಗೆಂದರೆ ಈ ಅನುಕೂಲಗಳನ್ನು ನಾವು ತ್ಯಜಿಸಬೇಕೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಖಂಡಿತಾ ಇಲ್ಲ.
ಪ್ರತಿ ಬಾರಿಯೂ ಫ್ಲಶ್ ಬಳಸದೆಯೇ ಮಗ್‌ನಿಂದ ನೀರು ಹಾಕಬಹುದು. ವಾಷಿಂಗ್ ಮೆಷಿನ್‌ನಿಂದ ಹೊರಬರುವ ನೀರನ್ನು ಬಕೆಟ್‌ನಲ್ಲಿ ಸಂಗ್ರಹಿಸಿ ನೆಲ, ಕಾರು, ಬಟ್ಟಲು, ಟಾಯ್ಲೆಟ್ ತೊಳೆಯಲು ಬಳಸಬಹುದು. ತರಕಾರಿ ಸೊಪ್ಪು ತೊಳೆದ ನೀರನ್ನು ಹೂಗಿಡಗಳಿಗೆ ಹಾಕಬಹುದು. ಹೇಳುತ್ತಾ ಹೋದಂತೆ ಇದ್ಯಾವುದೂ ನಮಗೆ ಹೊಸದಲ್ಲ ನಮ್ಮ ತಾಯಿ, ಇಲ್ಲ ಅವರ ತಾಯಿ ಇದನ್ನು ಮಾಡುತ್ತಿದ್ದರು ಎಂದೆನಿಸುವುದು ಸಹಜ.
ಆದರೆ ನಾವದನ್ನು ಮಾಡುತ್ತಿದ್ದೇವೆಯೇ ಎಂದು ಅವಲೋಕಿಸಬೇಕಾದ ದಿನ ಇದು. ನಾವೊಂದು ಸಂಸ್ಕೃತಿಯನ್ನು ಜಲ ಸಂಸ್ಕೃತಿಯನ್ನು ನಿರ್ಮಿಸಬೇಕಾಗಿದೆ. ನೀರಿನ ಮಿತ ಬಳಕೆಯ ಈ ಜ್ಞಾನವನ್ನು ನಗರದ ನಮ್ಮ ಮಕ್ಕಳಿಗೆ ಕೊಡಬೇಕಾಗಿದೆ ಅಂದಾಗ ಮಾತ್ರ ಮುಂದೊಮ್ಮೆ ನಮ್ಮದೇ ಪೀಳಿಗೆ ನಮ್ಮನ್ನು ಹೀಗೇಕೆ ಮಾಡಿದಿರಿ? ಎಂದು ಪ್ರಶ್ನಿಸುವುದನ್ನು ತಡೆಯಬಹುದಾಗಿದೆ.
ಈಗಾಗಲೇ ನಮಗೆ ನೀರಿನ ಕೊರತೆ ಇದೆ ಅದು ಬರವಾಗುವ ಮುನ್ನ ಎಚ್ಚೆತ್ತುಕೊಳ್ಳೋಣ. ನಮ್ಮ ಹಳ್ಳಿಯ ಮಹಿಳೆಯರು ಮಳೆ ನೀರು ಸಂಗ್ರಹಿಸಿದ್ದಾರೆ, ಕೆರೆಗಳನ್ನು ಪುನರ್‌ನವೀಕರಿಸಿದ್ದಾರೆ ನಗರದ ನೀರೆಯರು ಇಂದು ಈ ಕಾರ್ಯಕ್ಕೆ ಇಳಿಯಬೇಕಾಗಿದೆ.
ನಲ್ಲಿಯಿಂದ ಬರುವ ಪ್ರತಿ ನೀರ ಹನಿಯನ್ನು ಜತನವಾಗಿರಿಸಿ. ನಿಮ್ಮ ಟ್ಯಾಪ್‌ಗಳು ಸೋರುತ್ತಿದ್ದರೆ ರಿಪೇರಿ ಮಾಡಿಸಿ, ನೀರಿನ ಸಮರ್ಪಕ ಬಳಕೆಯನ್ನು ಮಕ್ಕಳಿಗೆ ಕಲಿಸಿ, ನೀವು ಬಳಸುವ ನೀರು ಸುರಕ್ಷಿತವೇ ಪರೀಕ್ಷಿಸಿ, ಬಳಸುವ ನೀರನ್ನು ಮಿತವಾಗಿ ಬಳಸಿ, ಮರುಬಳಸಿ, ಮಳೆ ನೀರನ್ನು ಸಂಗ್ರಹಿಸಿ. ಇದು ಜಲ ಸಂಸ್ಕೃತಿ ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.