ADVERTISEMENT

ಬಕ್ಕತಲೆ ಡಾಕ್ಟ್ರಿಂದ ಕೇಶರಾಶಿಗೆ ಚಿಕಿತ್ಸೆ!

ಡಾ.ಸತೀಶ್ ಪ್ರಸಾದ್ ಎಚ್.ಜೆ
Published 11 ಜನವರಿ 2013, 19:59 IST
Last Updated 11 ಜನವರಿ 2013, 19:59 IST
ಬಕ್ಕತಲೆ ಡಾಕ್ಟ್ರಿಂದ ಕೇಶರಾಶಿಗೆ ಚಿಕಿತ್ಸೆ!
ಬಕ್ಕತಲೆ ಡಾಕ್ಟ್ರಿಂದ ಕೇಶರಾಶಿಗೆ ಚಿಕಿತ್ಸೆ!   

`ಯಾಕೋ ಮೈಗೆ ಹುಷಾರಿಲ್ಲ ಡಾಕ್ಟ್ರೆ' ಅಂತಾನೋ ಅಥವಾ `ಮೈಯಲ್ಲಿ ಚೆನ್ನಾಗಿಲ್ಲ' ಅಂತಾನೋ ಬರುವವರೊಡನೆ ಒಡನಾಡುವ ವೃತ್ತಿಯಲ್ಲಿ ಎಂತಾ ಹಾಸ್ಯ? ಬರೀ ತಲೆನೋವು, ಮೈಕೈ ನೋವು, ನೆಗಡಿ, ಕೆಮ್ಮು, ವಾಂತಿ, ಭೇದಿ ಅನ್ನೋ ಶಬ್ದಗಳೇ ಬೆಳಗಿನಿಂದ ರಾತ್ರಿವರೆಗೂ ಕಿವಿಗೆ ಬೀಳುತ್ತಿರುತ್ತವೆ ಎನ್ನುವವರೇ ಬಹಳ ಜನರಾದರೂ, ನಮ್ಮ ವೃತ್ತಿಯಲ್ಲೂ ಹಾಸ್ಯ ಹಾಸುಹೊಕ್ಕಾಗಿದೆ.

ಮಾರಣಾಂತಿಕವಾದ ರೋಗದಿಂದ ಬಳಲುತ್ತಿದ್ದರೂ ಸಾವಿನೊಡನೆ ಗುದ್ದಾಡುತ್ತಾ ತಾವೂ ನಗುತ್ತಾ, ವೈದ್ಯರನ್ನೂ ನಗಿಸುವವರು ಕೆಲವರು. ಆದರೆ, ಯಾವುದೇ ಗಂಭೀರ ಕಾಯಿಲೆ ಇಲ್ಲದಿದ್ದರೂ ನನಗೇನೋ ಆಗಿದೆ ಎಂದು ಭಯಭೀತರಾಗಿ ಮನೆಮಂದಿಯನ್ನೆಲ್ಲಾ ಹೆದರಿಸುವವರು ಹಲವರು. ಹೀಗೆ ವಿಭಿನ್ನ ಗುಣ ಸ್ವಭಾವಗಳ ಜನರೊಡನೆ ಒಡನಾಡುವ ನನ್ನ ವೃತ್ತಿಬಾಂಧವರಿಗೆ ಆಗಾಗ ಕೆಲವಾದರೂ ಹಾಸ್ಯ ಪ್ರಸಂಗಗಳು ಎದುರಾಗುತ್ತಲೇ ಇರುತ್ತವೆ.

ಒಮ್ಮೆ ಅಜ್ಜಿಯೊಬ್ಬರು ಕೆಮ್ಮಿನ ಚಿಕಿತ್ಸೆಗಾಗಿ ಮೊಮ್ಮಗಳೊಂದಿಗೆ ನನ್ನ ಬಳಿ ಬಂದರು. ಅವರನ್ನು ಪರೀಕ್ಷಿಸಿ ಕೆಮ್ಮು ಮತ್ತು ಕಫಕ್ಕೆ ಕೆಲವು ಮಾತ್ರೆ ಮತ್ತು ಸಿರಪ್ ಅನ್ನು ಬರೆದುಕೊಟ್ಟೆ. ಕೆಲವು ಸಮಯದ ನಂತರ ಮೊಮ್ಮಗಳೊಂದಿಗೆ ವಾಪಸು ಬಂದ ಅಜ್ಜಮ್ಮ, `ನೋಡಪ್ಪ ಯಾವ ಮೆಡಿಕಲ್ ಶಾಪ್‌ನೋರೂ ಸಕ್ಕರೆ ಕೊಡ್ತಾ ಇಲ್ಲ. ಸಕ್ಕರೆ ಕೊಡೋದಾದ್ರೆ ಒಂದಲ್ಲ ಎರಡು ಬಾಟ್ಲಿ ಸಿರಪ್ ತಕೋತೀನಿ ಅಂದ್ರೂ ಕೇಳ್ತಿಲ್ಲ' ಎನ್ನತೊಡಗಿದರು. ನನಗೆ ಆಕೆಯ ಸಮಸ್ಯೆ ಅರ್ಥ ಆಗ್ಲಿಲ್ಲ.

`ಅಜ್ಜಿ ಯಾವ ಮೆಡಿಕಲ್ ಶಾಪ್‌ನಲ್ಲೂ ಸಕ್ಕರೆ ಮಾರಲ್ಲ, ಅದೂ ಅಲ್ಲದೆ ಶುಗರ್ ಇರೋ ನಿಮ್ಗೆ ಸಕ್ರೆ ಯಾಕೆ ಬೇಕು?' ಅಂದೆ. `ಅಲ್ಲಪ್ಪ ನಾನೇನೋ ಸಕ್ಕರೆ ತಿನ್ನೋ ಹಾಗಿಲ್ಲ ಸರಿ, ಆದ್ರೆ ನನ್ನ ಮನೆಮಂದಿ ಎಲ್ಲಾ ತಿನ್ನಬಹುದಲ್ಲ?' ಎನ್ನುತ್ತಾ ಮುಂದುವರಿದು, `ಏನೊ ನನ್ನ ಮಗು ಇರೋ ಹೊತ್ಗೆ ಆಯ್ತು.

ನಾನೊಬ್ಳೆ ಬಂದಿದ್ರೆ ಮೋಸ ಹೋಗ್ತಿದ್ದೆ, ಶುಗರ್ ಫ್ರೀ ಅಂತ ಬರೆದಿದ್ರೂ ಕೊಡದೆ ಸತಾಯಿಸ್ತಿದ್ದಾರೆ ನೋಡಿ' ಅಂದಾಗಲೇ ಆಕೆಯ ಸಮಸ್ಯೆ ನನಗರ್ಥವಾದದ್ದು. ಆಕೆ ಮಧುಮೇಹದಿಂದ ಬಳಲುತ್ತಿದ್ದ ಕಾರಣ ಸಕ್ಕರೆ ಅಂಶ ಇಲ್ಲದ ಸಿರಪ್ ಅನ್ನು ಬರೆದುಕೊಟ್ಟಿದ್ದೆ. ಆ ಔಷಧದ ಬಾಟಲಿಯ ಮೇಲೆ `ಶುಗರ್ ಫ್ರೀ' ಎಂದು ದೊಡ್ಡದಾಗಿ ಮುದ್ರಿಸಲಾಗಿತ್ತು. ಆಕೆಯ ಕಾನ್ವೆಂಟ್ ಮೊಮ್ಮಗಳು ಅದನ್ನು ಅಜ್ಜಿಗೆ ಕನ್ನಡದಲ್ಲಿ ಅನುವಾದಿಸಿ ಹೇಳಿದ್ದಳು!

ಪರಿಚಿತರೊಬ್ಬರ ಮಗ ತನ್ನ ಸಹಪಾಠಿಯೊಬ್ಬನನ್ನು ನನ್ನ ಬಳಿ ಚಿಕಿತ್ಸೆಗಾಗಿ ಕರೆತಂದ. ಉದ್ದವಾದ ಕೇಶರಾಶಿಯನ್ನು ನೀಟಾಗಿ ಬಾಚಿ ರಬ್ಬರ್ ಬ್ಯಾಂಡ್ ಹಾಕಿಕೊಂಡು ಒಳಬಂದ ತರುಣ ನನ್ನನ್ನು ನೋಡುತ್ತಲೇ ನಗಲು ಆರಂಭಿಸಿದ. ಮುಖ ಗಂಟಿಕ್ಕಿಕೊಂಡು, ಇಲ್ಲ ನೋವಿನಿಂದ ನರಳುತ್ತಲೋ ಒಳಬರುವವರೇ ಹೆಚ್ಚಾಗಿರುವಾಗ, ನಗು ನಗುತ್ತಲೇ ಇದ್ದ ಅವನಿಗೆ ಕಾರಣ ಕೇಳಿದರೆ, ಗೆಳೆಯನನ್ನೊಮ್ಮೆ ನನ್ನನ್ನೊಮ್ಮೆ ನೋಡುತ್ತಾ ಮತ್ತೂ ನಗುತ್ತಲೇ ಇದ್ದ.

`ನೀನು ಕಾರಣ ಹೇಳದಿದ್ರೂ ಪರವಾಗಿಲ್ಲ ನಿನ್ನ ಸಮಸ್ಯೆ ಏನಂತನಾದ್ರೂ ಹೇಳೋ ಮಾರಾಯ' ಎಂದಾಗ ಬಾಯ್ಬಿಟ್ಟ. ಆಗ ಅವನ ನಗುವಿನ ಕಾರಣವೂ ತಾನೇ ತಾನಾಗಿ ಸ್ಪಷ್ಟವಾಯಿತು! ಅವನು ನನ್ನ ಬಳಿ ಬಂದದ್ದು ಒಂದು ವಾರದಿಂದ ಉದುರಲು ಆರಂಭಿಸಿದ್ದ ತನ್ನ ನೀಳವಾದ ಕೇಶರಾಶಿಗೆ ಚಿಕಿತ್ಸೆ ಪಡೆಯಲು ಮತ್ತು ನನ್ನದು ಬಕ್ಕತಲೆ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT