ADVERTISEMENT

ಬಾಯಿ ದುರ್ವಾಸನೆಗೆ ಪರಿಹಾರವೇನು?

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 19:30 IST
Last Updated 18 ಮಾರ್ಚ್ 2011, 19:30 IST

ಬಾಯಿ ಎಂಬುದು ನಮ್ಮ ದೇಹದ ಹೆಬ್ಬಾಗಿಲಿದ್ದಂತೆ. ಯಾವುದೇ ಆಹಾರ ಪದಾರ್ಥವಾದರೂ ಇದರ ಮೂಲಕವೇ ದೇಹದೊಳಗೆ ಹೋಗಬೇಕು. ದೈಹಿಕ ಆರೋಗ್ಯ ಸ್ಥಿತಿಯನ್ನು ಬಾಯಿ ನೋಡಿಯೆ ತಿಳಿಯಬಹುದಾಗಿದೆ. ದೇಹದ ಯಾವುದೇ ಅಂಗಗಳಲ್ಲಿ ಆಗಬಹುದಾದ ಬದಲಾವಣೆಯನ್ನು ರೋಗಸ್ಥಿತಿಯನ್ನು ಬಾಯಿಯ ಲಕ್ಷಣಗಳನ್ನು ಗಮನಿಸಿಯೇ ತಿಳಿಯಬಹುದು.

ಶೇಕಡ 80 ರಷ್ಟು ಜನರಿಗೆ ತಮ್ಮ ಬಾಯಿಂದ ದುರ್ವಾಸನೆ ಬರುವುದು ತಿಳಿಯುವುದಿಲ್ಲ. ಆದರೆ ಅವರೊಂದಿಗೆ ಮುಖತಃ ಮಾತನಾಡುವ ವ್ಯಕ್ತಿಗಳಿಗೆ ಇದರ ಅರಿವು ಬರುತ್ತದೆ. ಹೇಳಿದರೆ ಎಲ್ಲಿ  ಬೇಜಾರು ಮಾಡಿಕೊಳ್ಳುವವರೋ ಎಂಬ ಭಯದಲ್ಲಿ  ಬಹಳಷ್ಟು ಸಾರಿ ಸುಮ್ಮನಿರುತ್ತಾರೆ. ವಾಸನೆ ಬರುವ ವ್ಯಕ್ತಿಗಳಿಗೂ  ಇದರ ಬಗ್ಗೆ ಗೊತ್ತಾಗುವುದೇ ಎಲ್ಲ. ಈ ದುರ್ವಾಸನೆ ಬರಲು ಕಾರಣಗಳೇನು? ನಿಯಂತ್ರಿಸುವ ಬಗೆ ಹೇಗೆ ತಿಳಿಯೋಣ.

ದುರ್ವಾಸನೆಯನ್ನು ವೈದ್ಯಕೀಯ ಭಾಷೆಯಲ್ಲಿ  ‘ಹೆಲಿಟೋಸಿಸ್’ ಎನ್ನಲಾಗುತ್ತದೆ. ಭಾರತೀಯರಲ್ಲಿ  ಶೇಕಡ 75 ರಷ್ಟು ಜನರಿಗೆ ಈ ಸಮಸ್ಯೆ ಇದೆ. ಎಷ್ಟು ಚೆನ್ನಾಗಿ ಹಲ್ಲು ಉಜ್ಜಿದರೂ ಬಾಯಲ್ಲಿ ವಾಸನೆ ಬಹಳಷ್ಟು ಜನರಿಗೆ ಬರುತ್ತಿರುತ್ತದೆ.

ನಿಜಕ್ಕೂ ಇದೊಂದು ಸಣ್ಣ ಸಮಸ್ಯೆಯಾದರೂ ಯಾತನೆ ಮಾತ್ರ ಬಹಳಷ್ಟು ದೊಡ್ಡದು. ನಾಲ್ಕಾರೂ ಜನರ ಮಧ್ಯೆ ಬೆರೆಯುವ ವ್ಯಕ್ತಿಗಳಿಗೆ ಈ ರೀತಿಯಾದರೆ ನಿಜಕ್ಕೂ ಮುಜುಗರ ಆಗಿಯೇ ಆಗುತ್ತದೆ. ಪಾನ್, ಗುಟ್ಕಾ, ಮದ್ಯಪಾನ, ಧೂಮಪಾನ ಮುಂತಾದ ಯಾವ ಚಟ ಇರದ ವ್ಯಕ್ತಿಗಳಲ್ಲೂ ಈ ಸಮಸ್ಯೆ ಇದೆ.


ಕಾರಣಗಳೇನು?
* ಮುಖ್ಯವಾಗಿ ಸರಿಯಾದ ಸಮಯಕ್ಕೆ ಬ್ರಷ್ ಮಾಡದಿರುವುದು.
*8-10 ಗಂಟೆಗಳ ಕಾಲ ಉಪವಾಸ ಇರುವುದು.
*ಲಾಲಾರಸದ ಸ್ರವಿಸುವಿಕೆ ಕಡಿಮೆ ಇರುವುದು.
*   ಸತತವಾಗಿ ಮಾತನಾಡುವುದು.
*3-4 ಗಂಟೆಗಳವರೆಗೂ ನೀರು ಸೇವಿಸದಿರುವುದು.
*ಧೂಮಪಾನ, ಮದ್ಯಪಾನ, ಪಾನ್ ಗುಟ್ಕಾ, ತಂಬಾಕು ಸೇವನೆ
*ಹುಳುಕು ಹಲ್ಲುಗಳು
*ವಸಡಿನಲ್ಲಿ ರಕ್ತಸ್ರಾವ, ಹಲ್ಲಿನ  ಸುತ್ತ ಕಟ್ಟಿರುವ ಕೊಳೆ, ಗಾರೆ.
*ಗ್ಯಾಸ್ಟ್ರಿಕ್ ಸಮಸ್ಯೆ, ಕರುಳಿನ ಸೋಂಕು, ಶ್ವಾಸಮಾರ್ಗದ ಸೋಂಕು, ಸತತ ಔಷಧ ಸೇವನೆ, ಮಧುಮೇಹ.
*ಬೆರಳಿನಿಂದ ಹಲ್ಲು ಉಜ್ಜುವುದು, ರಂಗೋಲೆ ಹಿಟ್ಟು, ಇದ್ದಿಲು ಪುಡಿಗಳಿಂದ ಹಲ್ಲುಜ್ಜುವುದು

ಬಾಯಿ  ದುರ್ವಾಸನೆಗೆ ಕಾರಣ ಹಲವಾರಿದ್ದರೂ ಮುಖ್ಯವಾಗಿ ಕಾರಣ ಎಂದರೆ ಬಾಯಿ  ಸ್ವಚ್ಛತೆಯ ತೀವ್ರ ಕೊರತೆ. ನಾವು ತಿನ್ನುವ ಪ್ರತಿ ಆಹಾರ ಕಣಗಳು ಉಸಿರಿನ ವಾಸನೆಗೆ ಕಾರಣವಾಗುತ್ತವೆ. ಮುಖ್ಯವಾಗಿ ಹಲ್ಲಿನ ಸ್ವಚ್ಛತೆಯಷ್ಟೆ ನಾಲಿಗೆಯನ್ನೂ ಸ್ವಚ್ಛ ಮಾಡಬೇಕು. ಬಹಳಷ್ಟು ಜನರಿಗೆ ಇದರ ಬಗ್ಗೆ ತಿಳಿವಳಿಕೆ ಇಲ್ಲ. ನಾಲಿಗೆ ಮತ್ತು ಹಲ್ಲಿನ ಮೇಲ್ಪದರದಲ್ಲಿ  ಜೊಲ್ಲು ಮತ್ತು ಆಹಾರ ಕಣದ ಮಿಶ್ರಣದ ಉಳಿಕೆಯಿಂದ ಬ್ಯಾಕ್ಟೀರಿಯದಂತಹ ಜೀವಕಣಗಳು ಬಿಳಿಯ ಪದರವನ್ನು ಸೃಷ್ಟಿಸುತ್ತವೆ. ಇದನ್ನು  ‘ಪ್ಲ್ಯಾಕ್’ ಎನ್ನುತ್ತೇವೆ. ಈ ಪ್ಲ್ಯಾಕ್‌ನ ಪದರ ಹೆಚ್ಚಾದಷ್ಟೂ ತೊಂದರೆ. ಲಾಲಾರಸದ ಕೊರತೆ ಇದ್ದಾಗ ಇದು ಮತ್ತಷ್ಟು ವೇಗವಾಗಿ ಹಲ್ಲುಗಳ ಮಧ್ಯೆ ಸಂಗ್ರಹವಾಗಿ ಗಂಧಕಾಂಶ (ಸಲ್ಫರ್) ಅನಿಲ ಬಿಡುಗಡೆಯಾಗಿ ದುರ್ವಾಸನೆಗೆ ಕಾರಣವಾಗುತ್ತದೆ.

ADVERTISEMENT

 ದುರ್ವಾಸನೆಯ ವಿಧಗಳು
*ಕೆಟ್ಟುಹೋದ ಕೊಳೆತ ಹಣ್ಣಿನ ವಾಸನೆ -ಮಧುಮೇಹಿಗಳಲ್ಲಿ
*ಕೊಳೆತ ಮೊಟ್ಟೆ ವಾಸನೆ  -ಸರಿಯಾಗಿ ಸ್ವಚ್ಛತೆ ಇರದಿದ್ದಲ್ಲಿ
*ಕೊಳೆತ ಮೀನಿನ ವಾಸನೆ -ಕಿಡ್ನಿ ಸೋಂಕಿತರಲ್ಲಿ
*ಸತ್ತ ಇಲಿಯ ವಾಸನೆ -ಶ್ವಾಸ ಮಾರ್ಗದ ಸೋಂಕು
*ಮಲದ ವಾಸನೆ  -ದೀರ್ಘಕಾಲದ ದುರ್ವಾಸನೆ

ದುರ್ವಾಸನೆ ತಡೆಯುವ ಮಾರ್ಗ
*ನಿಯಮಿತವಾಗಿ ದಂತ ವೈದ್ಯರಿಂದ ಕ್ರಮಬದ್ಧವಾಗಿ ಹಲ್ಲಿನ  ಸ್ವಚ್ಛತೆ ಮಾಡಿಸಿಕೊಳ್ಳುವುದು.
*ದಿನಕ್ಕೆರಡು ಬಾರಿ ಹಲ್ಲು, ನಾಲಿಗೆ ಸ್ವಚ್ಛತೆ
* ದಂತ ದಾರದಿಂದ ಹಲ್ಲಿನ ಸ್ವಚ್ಛತೆ.
*ಜೊಲ್ಲು ರಸದ ಕೊರತೆಗೆ  ಚಿಕಿತ್ಸೆ
*ಕಾಫಿ, ಟೀ, ಸೇವನೆ ನಂತರ ಬಾಯನ್ನು ನೀರಿನಿಂದ ಮುಕ್ಕಳಿಸಬೇಕು.
*ಆಗಾಗ ನೀರು ಕುಡಿಯುತ್ತಿರಬೇಕು.
*ಮೂರು ತಿಂಗಳಿಗೊಮ್ಮೆ ಟೂಥ್ ಬ್ರಷ್ ಬದಲಿಸಬೇಕು.
*ಗ್ಯಾಸ್ಟ್ರಿಕ್ ಸಮಸ್ಯೆಗೆ ವೈದ್ಯರಿಂದ ಪರಿಹಾರ ಪಡೆಯಬೇಕು.
*ನಾಲಿಗೆಯನ್ನು ಬೆರಳಿನಿಂದ, ಬ್ರಷ್‌ನಿಂದ ಸ್ವಚ್ಛಗೊಳಿಸಬೇಕು
*ಚಟಗಳಿಗೆ ವಿದಾಯ ಹೇಳಬೇಕು.
*ಈರುಳ್ಳಿ, ಬೆಳ್ಳುಳ್ಳಿಯಂತಹ ವಸ್ತುಗಳನ್ನು ಹಸಿಯಾಗಿ ಸೇವಿಸಿದಲ್ಲಿ ಹಲ್ಲುಜ್ಜಬೇಕು.
*ಊಟದ ನಂತರ ಏಲಕ್ಕಿಚೂರು, ಲವಂಗ, ತುಳಸಿ ಎಲೆ ತಿನ್ನಬೇಕು.

ಬಾಯಿ ದುರ್ವಾಸನೆ ಪರೀಕ್ಷೆ:
*ನಿಮ್ಮ ಕೈ ಅಥವಾ ಒಂದು ಬಟ್ಟೆ ನಿಮ್ಮ ಬಾಯಿ  ಮುಂದೆ ಇಟ್ಟು ಜೋರಾಗಿ ಉಸಿರಾಡಿ
*ನಿಮ್ಮ ಕೈಹಿಂಭಾಗಕ್ಕೆ (ಅಂಗೈ ಹಿಂಬದಿ) ಜೊಲ್ಲು ಹಚ್ಚಿ, 1-2 ನಿಮಿಷ ಬಿಟ್ಟು ನಂತರ ಮೂಸಿನೋಡಿ.
*ವಾಸನೆ ಬಂದರೆ ದುರ್ವಾಸನೆ ಇದೆ ಎಂದು ಅರ್ಥ.


ಈ ರೀತಿ ಮಾಡದಿರಿ:
*ಅಡಿಕೆ ಚೀಟಿ, ಮಿಂಟ್, ಮೌತ್‌ವಾಶ್, ಬಳಸದಿರಿ, ಬಳಸಿದರೂ ಅದರ ಪರಿಹಾರ ತಾತ್ಕಾಲಿಕವಷ್ಟೆ.
*ಹಳದಿ ಹಲ್ಲುಗಳಿಗೂ ವಾಸನೆಗೂ ಸಂಬಂಧವಿಲ್ಲ, ಬಿಳಿಯ ಹಲ್ಲುಗಳೇ ಕೊಳೆ ಕಟ್ಟಿಕೊಂಡು ಹಳದಿಯಾಗಿರುತ್ತದೆ. ಇದಕ್ಕೆ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು.
*ದುರ್ವಾಸನೆಗೆ ಸ್ವಯಂ ಚಿಕಿತ್ಸೆ ಮಾಡದಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.