ADVERTISEMENT

ಬೊಜ್ಜು ಬೊಜ್ಜೆಂದೇಕೆ ಕೊರಗುವಿರಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 19:30 IST
Last Updated 12 ಅಕ್ಟೋಬರ್ 2012, 19:30 IST

ಒಂದೆಡೆ ಹೆಚ್ಚು ಶ್ರಮವಿಲ್ಲದೆ ಎಲ್ಲ ಕೆಲಸಗಳನ್ನೂ ನಮಗೆ ಮಾಡಿಕೊಡುವ ಯಂತ್ರಗಳು, ಇನ್ನೊಂದು ಕಡೆ ನಾವು ತೆಗೆದುಕೊಳ್ಳುತ್ತಿರುವ  ಕೊಬ್ಬಿನಂಶದ ಆಹಾರ. ಇದರ ಪರಿಣಾಮವೇ ಬೊಜ್ಜು.

ಬೊಜ್ಜು ರಕ್ತದೊತ್ತಡ, ಮಧುಮೇಹ, ಹೃದ್ರೋಗ, ಪಾರ್ಶ್ವವಾಯು, ಕ್ಯಾನ್ಸರ್ ಮುಂತಾದ ದೈಹಿಕ ಹಾಗೂ ಮಾನಸಿಕ ತೊಂದರೆಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ಬೊಜ್ಜುಳ್ಳವರನ್ನು ಭಾವಿ ರೋಗಿಗಳೆಂದೇ ಪರಿಗಣಿಸಲಾಗುತ್ತಿದೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಬಹಳಷ್ಟು ಮಂದಿ ಪ್ರಯತ್ನ ಪಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಜಾಹೀರಾತುಗಳು ಅಂತಹವರನ್ನು ಸೆಳೆಯುತ್ತಾ ಅವರ ಜೇಬನ್ನು ಖಾಲಿ ಮಾಡುತ್ತಿವೆ. ಆದರೆ ಬೊಜ್ಜನ್ನು ಮಾತ್ರ ಹಾಗೇ  ಬೆಳೆಸುತ್ತಿವೆ.

ವೈಜ್ಞಾನಿಕವಾಗಿ ಹೇಳುವುದಾದರೆ ಬೊಜ್ಜು ಇಳಿಸಲು ತುಂಬಾ ಕಷ್ಟಪಡಬೇಕಿಲ್ಲ. ಖಚಿತ ಫಲ ದೊರೆಯಲು ವೈಜ್ಞಾನಿಕ ಆಹಾರ ಪದ್ಧತಿಯನ್ನು ಅನುಸರಿಸಿದರೆ ಸಾಕು.

ಹೀಗಿರಲಿ ನಿಮ್ಮ ಆಹಾರ
1. ಬೆಳಗಿನ ಉಪಾಹಾರಕ್ಕೆ 15 ನಿಮಿಷ ಮೊದಲು ಒಂದು ಲೋಟ ನೀರು ಕುಡಿಯಬೇಕು.

2. ಉಪಾಹಾರದಲ್ಲಿ ಸಾಕಷ್ಟು ಹಣ್ಣು ತಿನ್ನಬೇಕು. ಆದರೆ ಹೆಚ್ಚು ಕ್ಯಾಲೊರಿ ನೀಡುವ ಹಣ್ಣುಗಳಾದ ಬಾಳೆ, ಸಪೋಟ, ಮಾವು ಮತ್ತು ದ್ರಾಕ್ಷಿಗಳನ್ನು ತಿನ್ನಬಾರದು.

3. ಹಣ್ಣುಗಳ ಜೊತೆ ಇಡ್ಲಿ, ಎಣ್ಣೆ ಕಡಿಮೆ ಹಾಕಿದ ದೋಸೆ, ಉಪ್ಪಿಟ್ಟು, ಅವಲಕ್ಕಿ ಯಾವುದನ್ನಾದರೂ ಹೊಟ್ಟೆ ಭಾರವಾಗದ ರೀತಿಯಲ್ಲಿ ತಿನ್ನಬಹುದು. ನಂತರ ಒಂದು ಕಪ್ ಕಾಫಿ ಅಥವಾ ಟೀ ಕುಡಿಯಬಹುದು. (ಸಕ್ಕರೆ ರಹಿತ ಅಥವಾ ಕಡಿಮೆ)

4. 11 ಗಂಟೆಗೆ ಒಂದು ಹಣ್ಣು ಅಥವಾ ಒಂದು ಮಾರಿ ಬಿಸ್ಕೆಟ್, ಹಸಿ ಮೊಳಕೆ ಕಾಳು ಅಥವಾ ಸಲಾಡ್‌ಗಳನ್ನು ತಿನ್ನಬೇಕು. ಮಜ್ಜಿಗೆ ಅಥವಾ ಗ್ರೀನ್ ಟೀ, ಸಕ್ಕರೆ ಕಡಿಮೆ ಇರುವ ಹಣ್ಣಿನ ಜ್ಯೂಸ್ ಕುಡಿಯಬೇಕು.

5. ಮಧ್ಯಾಹ್ನದ ಊಟ: ಊಟಕ್ಕೆ 15 ನಿಮಿಷ ಮೊದಲು ನೀರು ಕುಡಿಯಬೇಕು. ಊಟವನ್ನು ಸಲಾಡ್‌ಗಳಿಂದ ಪ್ರಾರಂಭಿಸಿ. ಅವು ನಿಮ್ಮ ಹೊಟ್ಟೆಯನ್ನು ಕಡಿಮೆ ಕ್ಯಾಲೊರಿಯಿಂದ ತುಂಬಿಸುತ್ತವೆ. ನಾರಿನ ಅಂಶವನ್ನೂ ಒದಗಿಸುತ್ತವೆ.

6. ಊಟಕ್ಕೆ ಮೊದಲು ಕ್ರೀಂ ರಹಿತ ಸೂಪುಗಳನ್ನು ಕುಡಿಯಬಹುದು. ಸೂಪುಗಳು ಕಡಿಮೆ ಕ್ಯಾಲೊರಿ ಉಳ್ಳವುಗಳು ಮತ್ತು ಹೊಟ್ಟೆ ಹಸಿವನ್ನು ಹಿಂಗಿಸುತ್ತವೆ.

7. ನಿಮ್ಮ ಊಟದ ತಟ್ಟೆಯನ್ನು 4 ಭಾಗವನ್ನಾಗಿ ಊಹೆ ಮಾಡಿಕೊಳ್ಳಿ. ಇದರ ಎರಡು ಭಾಗವು ಚಪಾತಿ/ ಅನ್ನ/ ರೊಟ್ಟಿ/ ಅಥವಾ ಮುದ್ದೆ, ಇನ್ನುಳಿದ ಎರಡು ಭಾಗವು ಹಣ್ಣು, ಪಲ್ಯ ಮತ್ತು ಬೇಳೆಕಾಳುಗಳಿಂದ ತುಂಬಿರಬೇಕು.

8. ಒಂದೇ ಚಪಾತಿ ಅಥವಾ ರೊಟ್ಟಿ ತಿನ್ನಿ, ತುಂಬಾ ಹಸಿವಾಗಿದ್ದರೆ ಮಾತ್ರ ಎರಡು ತಿನ್ನಬಹುದು. ಎರಡಕ್ಕಿಂತ ಹೆಚ್ಚು ತಿನ್ನಬಾರದು. ಏಕೆಂದರೆ ಒಣ ಚಪಾತಿ 100 ಕ್ಯಾಲೊರಿ ನೀಡುತ್ತದೆ.

9. ಸಾಯಂಕಾಲ: ಉಪಾಹಾರಕ್ಕೆ ಹಣ್ಣು, ಮುಸುಕಿನ ಜೋಳದ ಅರಳು (ಕಾರ್ನ್ ಫ್ಲೇಕ್ಸ್), ಮಂಡಕ್ಕಿ ಜೊತೆ ಈರುಳ್ಳಿ, ಸೌತೇಕಾಯಿ ತಿನ್ನ  ಬಹುದು.

10. ಕಾಫಿ ಅಥವಾ ಟೀ, ಹಣ್ಣಿನ ರಸ ಯಾವುದಾದರೊಂದನ್ನು ಸೇವಿಸಬೇಕು.

11. ರಾತ್ರಿ ಊಟ: ತಟ್ಟೆ ತುಂಬಾ ಬೇಯಿಸಿದ ತರಕಾರಿಗಳನ್ನು ಅವುಗಳ ಸೂಪ್ ಸಹಿತ ತೆಗೆದುಕೊಳ್ಳಬಹುದು. ಚಪಾತಿ ಅಥವಾ ಅನ್ನ ಊಟ ಮಾಡಬಹುದು. ಆದರೆ ಹೊಟ್ಟೆ ಶೇ 60ರಷ್ಟು ತುಂಬುವಷ್ಟು ಮಾತ್ರ ಊಟ ಮಾಡಬೇಕು. ನಂತರ ನೀರು ಕುಡಿಯಬೇಕು. ಇದೆಲ್ಲದರ ನಂತರವೂ ಹೊಟ್ಟೆಯಲ್ಲಿ ಸ್ವಲ್ಪ ಖಾಲಿ ಜಾಗ ಇರಬೇಕು. ಕಡಿಮೆ ಊಟದಿಂದ ನಿದ್ರೆ ಬರುವುದಿಲ್ಲ ಎಂದು ತಿಳಿಯಬಾರದು. ಕಾಲಕ್ರಮೇಣ ಕಡಿಮೆ ಊಟಕ್ಕೆ ಉತ್ತಮ ನಿದ್ರೆ ಬರುತ್ತದೆ.

ಮುಖ್ಯವಾದ ಸೂಚನೆಗಳು
ಸಾವಲ್ ಪದ್ಧತಿ: (ಸೈನ್ಸ್ ಅಂಡ್ ಆರ್ಟ್ ಆಫ್ ಲಿವಿಂಗ್) ಅಂದರೆ ಎಣ್ಣೆ ಇಲ್ಲದೆ ಸ್ವಾದಿಷ್ಟವಾಗಿ ಅಡುಗೆ ಮಾಡುವ ವಿಧಾನ ಅಳವಡಿಸಿಕೊಳ್ಳಬೇಕು.

ಪ್ಲೆಚರಿಸರಿ ಪದ್ಧತಿ: ಅಂದರೆ ಆಹಾರವನ್ನು ಚೆನ್ನಾಗಿ ಅಗಿದು, ಅದು ಹಾಲಿನಂತೆ ದ್ರವವಾಗುವ ರೀತಿಗೆ ತಂದು ನಂತರ ನುಂಗಬೇಕು. ಜಿಗಿಯುವ ಕ್ರಿಯೆಯಿಂದ ಹೆಚ್ಚು ಕ್ಯಾಲೊರಿ ವ್ಯಯವಾಗಿ ತೂಕ ಕಡಿಮೆಯಾಗಲು ಅನುಕೂಲವಾಗುತ್ತದೆ.

ಆಯಾಸವಾಗಿದ್ದಾಗ, ಕೋಪದಲ್ಲಿದ್ದಾಗ ಮತ್ತು ತೊಂದರೆಗೆ ಒಳಗಾದಾಗ ಊಟ ಮಾಡಬಾರದು. ಊಟದ ಸಮಯದಲ್ಲಿ ಆಲೋಚನೆ ಮಾಡುವುದನ್ನು ಅಥವಾ ಮನಸ್ಸಿಗೆ ಬೇಸರವನ್ನುಂಟು ಮಾಡುವ ಮಾತುಗಳನ್ನು ಆಡಬಾರದು. ಅಕ್ಕಿ, ರಾಗಿ, ಗೋಧಿ ಮುಂತಾದ ಧಾನ್ಯಗಳನ್ನು ಹೆಚ್ಚು ಪಾಲಿಶ್ ಮಾಡದೇ ತಿನ್ನಬೇಕು. ಕೆಲವೊಮ್ಮೆ ಗೋಧಿ ಹಿಟ್ಟಿಗೆ ತೌಡನ್ನು ಸೇರಿಸಿ ಉಪಯೋಗಿಸಿದರೆ ಒಳ್ಳೆಯದು.

ADVERTISEMENT


ದಿನನಿತ್ಯ ಮೊಳಕೆ ಕಾಳುಗಳ ಜೊತೆಗೆ ತರಕಾರಿಯನ್ನು ಸಣ್ಣಗೆ ಕತ್ತರಿಸಿ ನಿಂಬೆ ರಸ ಹಿಂಡಿಕೊಂಡು ಸೇವಿಸಬೇಕು.


ದ್ವಿದಳ ಧಾನ್ಯಗಳನ್ನು ಯಾವಾಗಲೂ ತರಕಾರಿಯೊಂದಿಗೆ ಬೇಯಿಸಿ ಆಹಾರ ಪದಾರ್ಥ ತಯಾರಿಸಬೇಕು. ದ್ವಿದಳ ಧಾನ್ಯಗಳು ಹೆಚ್ಚು ಕ್ಯಾಲೊರಿಯನ್ನು ನೀಡುತ್ತವೆ.

ಮೆದುಳಿನಲ್ಲಿರುವ ಹಸಿವಿನ ನಿಯಂತ್ರಣ ಕೇಂದ್ರವನ್ನು ಹತೋಟಿಯಲ್ಲಿಡಲು ಪ್ರತಿನಿತ್ಯ ಧ್ಯಾನ, ಯೋಗ ಮಾಡಬೇಕು. ಧ್ಯಾನವು ನಿಗ್ರಹ ಶಕ್ತಿ ಹೆಚ್ಚಿಸಿ ಆಹಾರ ನಿಯಮಗಳನ್ನು ಅನುಸರಿಸಲು ಸಹಾಯ ಮಾಡುತ್ತದೆ. ಹಣ್ಣನ್ನು ಜ್ಯೂಸ್‌ಗಿಂತ ಹಾಗೇ ಸಿಪ್ಪೆ ಸಮೇತ ತಿನ್ನುವುದು ಲೇಸು. ಸಕ್ಕರೆ ರಹಿತ ಕಾಫಿ, ಟೀ, ಹಣ್ಣಿನ ಜ್ಯೂಸ್ ಸೇವಿಸಬೇಕು. 1 ಟೀ ಸ್ಪೂನ್ ಸಕ್ಕರೆ 20 ಕ್ಯಾಲೊರಿ ಹೆಚ್ಚಿಸುತ್ತದೆ. ಇದರಿಂದ ವರ್ಷಕ್ಕೆ 1 ಕೆ.ಜಿ ತೂಕ ಹೆಚ್ಚಾಗುತ್ತದೆ.

ಚಪಾತಿಯ ಮೇಲೆ ಎಣ್ಣೆ ಅಥವಾ ತುಪ್ಪವನ್ನು ಸವರಬಾರದು. ಪ್ರತಿ ಸ್ಪೂನ್ ಎಣ್ಣೆ ಅಥವಾ ತುಪ್ಪ 50 ಕ್ಯಾಲೊರಿ ನೀಡುತ್ತದೆ. ಕೆನೆ ತೆಗೆದ ಹಾಲು ಅಥವಾ ಟೋನ್ಡ್ ಮಿಲ್ಕನ್ನು ಉಪಯೋಗಿಸಬಹುದು.

ಮಾಂಸಾಹಾರವನ್ನು ತ್ಯಜಿಸುವುದು ಲೇಸು. ತಿನ್ನಲೇಬೇಕೆಂದರೆ ಚರ್ಮ ತೆಗೆದ ಕೋಳಿ, ಬೇಯಿಸಿದ ಮೊಟ್ಟೆಯ ಬಿಳಿಭಾಗ ಅಥವಾ ಮೀನನ್ನು ತಿನ್ನಬಹುದು.

ವಯಸ್ಸು ಹೆಚ್ಚಾದಂತೆ ಸೇವಿಸುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡಬೇಕು. ಕೋವಾ, ಸಿಹಿ ತಿನಿಸುಗಳು, ಕೊಬ್ಬರಿ, ಬೆಣ್ಣೆ, ತುಪ್ಪ, ಸಕ್ಕರೆ, ಡಾಲ್ಡಾ, ಕರಿದ ಪದಾರ್ಥಗಳನ್ನು ಬೊಜ್ಜುಳ್ಳವರು ತಿನ್ನಲೇಬಾರದು. ಕೇಕ್, ಪಿಜ್ಜಾ, ಬರ್ಗರ್, ಐಸ್‌ಕ್ರೀಂ, ಸಮೋಸ, ಚಾಕೊಲೇಟ್ ಸಹ ನಿಷಿದ್ಧ.

ತಂಪು ಪಾನೀಯಗಳು, ಎನರ್ಜಿ ಡ್ರಿಂಕ್‌ಗಳು, ಘನೀಕರಿಸಿದ ಹಾಲು, ಕೃತಕ ಪಾನೀಯಗಳನ್ನು ವರ್ಜಿಸಲೇಬೇಕು. ಬಾದಾಮಿ, ಗೋಡಂಬಿ, ದ್ರಾಕ್ಷಿ, ಪಿಸ್ತಾ ಮುಂತಾದ ಒಣ ಹಣ್ಣುಗಳನ್ನು ತಿನ್ನಲೇಬಾರದು. ತೂಕ ಇಳಿಸಲೇಬೇಕೆಂದು ಕಠಿಣ ಉಪವಾಸ ಮಾಡಬಾರದು. ಯಾಕೆಂದರೆ ಹಸಿದಿದ್ದು ನಂತರ ತಿಂದರೆ ತಿನ್ನುವ ಇಚ್ಛೆ ಜಾಸ್ತಿಯಾಗಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತೇವೆ.

ಈ ಎಲ್ಲ ವಿಧಾನಗಳನ್ನೂ ಅನುಸರಿಸುವುದರಿಂದ ನಿಶ್ಚಿತವಾಗಿ ತೂಕ ಇಳಿಕೆಯಾಗುತ್ತದೆ. ಆದರೆ ತೂಕವನ್ನು ತ್ವರಿತವಾಗಿ ಇಳಿಸಲು ಹೋಗಬಾರದು. ತಿಂಗಳಿಗೆ ಒಂದು ಕೆ.ಜಿ.ಯಷ್ಟು ಮಾತ್ರ ಇಳಿಸುವುದು ಸೂಕ್ತ. ತೂಕ ಇಳಿಸುವುದಕ್ಕೆ ಉಪವಾಸವೇ ಸಾಧನ ಅಲ್ಲ. ಇದು ಉತ್ತಮ ಆಹಾರ ವಿಧಾನ ಮತ್ತು ದೈಹಿಕ ಚಟುವಟಿಕೆಯ ಮೂಲಕ ಸಹನೆಯಿಂದ ಸಾಧಿಸಬೇಕಾದ ಕಾರ್ಯ.
                                               

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.