ADVERTISEMENT

ಭಂಗುವಿಗೊಂದು ಛೂ ಮಂತರ್!

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 19:30 IST
Last Updated 12 ಅಕ್ಟೋಬರ್ 2012, 19:30 IST
ಭಂಗುವಿಗೊಂದು ಛೂ ಮಂತರ್!
ಭಂಗುವಿಗೊಂದು ಛೂ ಮಂತರ್!   

`ಎಂದು ನಿನ್ನ ನೋಡುವೆ, ಎಂದು ನಿನ್ನ ಸೇರುವೆ ಅಂತ ಖುಷಿಯಾಗಿ ಡಾ. ರಾಜ್‌ಕುಮಾರ್ ಅವರ ಸ್ಟೈಲ್‌ನಲ್ಲಿ ಹಾಡ್ಕೊಂಡು ಬರ‌್ತಾ ಇರೋ ನನ್ನ ಭಾವಿ ಪತಿಗೆ ಹೇಗಮ್ಮಾ ಮುಖ ತೋರಿಸ್ಲಿ, ನನ್ನ ಮುಖ ನೋಡಿ ಬೇಜಾರಾಗಿ ಮತ್ತೆ ನನ್ನ ನೋಡೋಕೆ ಬರ‌್ದೆ ಹೋದ್ರೆ, ಈ ಮದ್ವೇನೇ ಬೇಡ ಅಂತ ಅಂದುಬಿಟ್ರೆ. ಛೇ ನಾನು ಎಲ್ಲಾದ್ರೂ ಹೋರಟ್ಹೋಗ್ತೀನಿ ಅಷ್ಟೆ~ ಅಂತ ಮುಖ ಮುಚ್ಕೊಂಡು ಒಂದೇ ಉಸಿರಿನಲ್ಲಿ ಅಳ್ತಾ ಇದ್ಲು ಪ್ರಿಯಾ.

ಅವ್ಳ ಅಮ್ಮ ಅಂತೂ ಗೊತ್ತಿರೋ ಡಾಕ್ಟ್ರನ್ನೆಲ್ಲ ನೋಡಿ, ಕೇಳಿ, ಹಚ್ಚಿ ಏನು ಮಾಡಿದ್ರೂ ಮಗಳ ಮುಖದ ಮೇಲಿದ್ದ `ಭಂಗು~ ಮಾತ್ರ ಯಾವ ಭಂಗವೂ ಬರದಂತೆ ರಾರಾಜಿಸ್ತಾ ಇತ್ತು. ಆಶ್ಚರ‌್ಯ ಅಂದರೆ ಕ್ರಮೇಣ ಅದು ವಾಸಿಯೂ ಆಯ್ತು, ಮುಂದೆ ಅವ್ಳ ಮದುವೇನೂ ಆಯ್ತು. ಈಗ ಅವ್ಳ ಸುಖವಾಗಿದ್ದಾಳೆ!

ಅರೆ ಇದೇನಿದು ಈಗಿನ ಕಾಲದಲ್ಲೂ ಯಾವುದೋ ರಾಜಕುಮಾರನ  ಕಥೆ ಹೇಳುತ್ತಿದ್ದೀರಾ, ಭಂಗು (ಹೈಪರ್ ಪಿಗ್ಮೆಂಟೇಷನ್) ಹೇಗೆ ಹೋಯ್ತು ಅನ್ನೋದನ್ನ ಗೋಪ್ಯವಾಗಿ ಇಟ್ಟಿದ್ದೀರ, ಹಾಗಾದ್ರೆ ಈ ಕಥೆ ಯಾಕೋ ಸರಿ ಇಲ್ಲ ಅಂತ ನಿಮಗೆ ಅನ್ನಿಸ್ತಿರಬಹುದು ಅಲ್ವಾ? ಖಂಡಿತಾ ಇಲ್ಲ ರೀ, ಇದು ಕಥೆನೂ ಅಲ್ಲ, ಜಾಹೀರಾತಿನ ತುಣುಕೂ ಅಲ್ಲ. ನಮಗೆ, ನಿಮಗೆ ಎಲ್ಲರಿಗೂ ಕಾಟ ಕೊಡುತ್ತಿರಬಹುದಾದ ಭಂಗುವಿನ ಸ್ವರೂಪ ಇದು. ಹಾಗಿದ್ರೆ ಬನ್ನಿ, ಭಂಗುವಿನ ಬಗ್ಗೆ ತಿಳಿದುಕೊಳ್ಳೋಣ.

ಏನಿದು ಭಂಗು?
ಮುಖದ ಕೆನ್ನೆ, ಹಣೆ, ಕೆಲವು ಬಾರಿ ಮೂಗು ಅಥವಾ ಗದ್ದದ ಮೇಲೆ ಕಂದು ಬಣ್ಣದ ಮಚ್ಚೆ, ಒಂದೊಂದು ಬಾರಿ ಪತಂಗದ ಆಕಾರದಲ್ಲೂ ಕಂಡುಬರಬಹುದಾದ ಚರ್ಮವ್ಯಾಧಿ ಇದು. ದೇಹದಲ್ಲಿ ಮೆಲನಿನ್ ಪ್ರಮಾಣ ಹೆಚ್ಚಾದರೂ ಅಪಾಯ, ಕಡಿಮೆ ಆದರೂ ಅಪಾಯ. ಅದರ ಫಲವಾಗಿ ಇದು ಕಾಣಿಸಿಕೊಳ್ಳುತ್ತದೆ.

ನಾವು ಕಾಣುವ ಜಗತ್ತಿನ ಅನೇಕ ವಿಸ್ಮಯಗಳಲ್ಲಿ ಮನುಷ್ಯನ ದೇಹದ ಬಣ್ಣವೂ ಒಂದು. ಬಿಳಿ ಬಣ್ಣ, ಗೋಧಿ ಬಣ್ಣ, ನಸುಗೆಂಪು, ಕಪ್ಪು... ಹೀಗೆ ಒಂದೊಂದು ದೇಶದ ಜನರ ಮೈಬಣ್ಣ ಒಂದೊಂದು ತೆರನಾಗಿರುತ್ತದೆ. ನಮ್ಮ  ಶ್ರೀಕೃಷ್ಣನದಂತೂ ಮೈಪೂರ್ತಿ ನೀಲಿ! ಆದರೆ ವಿಶ್ವದ ಎಲ್ಲ ಜನರ ಮೈಬಣ್ಣವೂ ನಿರ್ಧಾರವಾಗುವುದು ಮೆಲನೋಸೈಟ್ ಎಂಬ ಕೋಶದಿಂದ ಉತ್ಪತ್ತಿಯಾಗುವ `ಮೆಲನಿನ್~ ಎಂಬ ರಾಸಾಯನಿಕದ ಮೇಲೆ. ಕೆಲ ವರ್ಣತಂತುಗಳು ಕೂಡ ದೇಹದ ಬಣ್ಣ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಛೂ ಮಂತರ್ ಹೇಗೆ?
1. ಅಪೌಷ್ಟಿಕತೆ ಇದ್ದರೆ ಅದನ್ನು ಸರಿಪಡಿಸಿಕೊಳ್ಳಲು ಗಮನ ಕೊಡಬೇಕು. ಅದರಲ್ಲೂ ಸತ್ವಭರಿತ ವಿಟಮಿನ್ ಬಿ 9 ಇರುವ ಆಹಾರವಾದ ಜೋಳ, ಸಜ್ಜೆ, ಹಾಲು, ಕುರಿ ಮತ್ತು ಆಡಿನ ಲಿವರ್, ಮೊಟ್ಟೆಯ ಹಳದಿ ಭಾಗ, ಜಿಂಕ್ ಅಂಶ ಹೆಚ್ಚಾಗಿರುವ ಕಡಲೆ, ಸೋಯಾ, ಪಾಲಕ್, ಆಲೂಗಡ್ಡೆ, ಬೆಂಡೆಕಾಯಿ ನಿಮ್ಮ ಆಹಾರದಲ್ಲಿ ಹೆಚ್ಚಾಗಿರುವಂತೆ ನೋಡಿಕೊಳ್ಳಿ

2. ದಿನಕ್ಕೆ 6-8 ಲೋಟ ನೀರು ಕುಡಿಯಿರಿ

3. ಹೆಚ್ಚು ಕಾಫಿ, ಟೀ ಸೇವನೆ ಬೇಡ. ಹೆಚ್ಚು ಎಳನೀರು ಸೇವಿಸುವುದರಿಂದ ಭಂಗುವಿನಿಂದ ದೂರ ಇರಬಹುದು.

4. ಹಸಿ ಆಲೂಗಡ್ಡೆಯನ್ನು ಮುಖಕ್ಕೆ ನಿಯಮಿತವಾಗಿ ಹಚ್ಚುತ್ತಾ ಬಂದರೆ ತಕ್ಕಮಟ್ಟಿಗೆ ಗುಣ ಕಾಣಬಹುದು

5. ಒಂದು ಚಮಚ ಬೆಣ್ಣೆ, ಒಂದು ಚಮಚ ಬೆಲ್ಲದ ಮಿಶ್ರಣವನ್ನು ಭಂಗುವಿನ ಜಾಗಕ್ಕೆ ಹಚ್ಚುವುದರಿಂದಲೂ ಒಳ್ಳೆಯ ಫಲಿತಾಂಶ ಕಾಣಬಹುದು.

6. ಇದಕ್ಕೆ ಆಯುರ್ವೇದದಲ್ಲಿ ಉತ್ತಮವಾದ ಪರಿಹಾರವಿದೆ. ಕುಂಕುಮಾದಿಲೇಪನ ಭಂಗುವಿಗಿರುವ ಒಂದು ದಿವ್ಯ ಔಷಧಿ.                       

ಯಾವ ಕಾರಣಕ್ಕೆ ಬರುತ್ತದೆ?

ADVERTISEMENT

- ದೀರ್ಘಕಾಲದ ಚಿಕಿತ್ಸೆಗೆ ಒಳಪಟ್ಟು, ಸುಧೀರ್ಘ ಔಷಧ ಬಳಕೆ ಮಾಡುತ್ತಿರುವಿರಾದರೆ
- ಅತಿಯಾಗಿ ಸೂರ್ಯ ಕಿರಣಗಳಿಗೆ ಮೈ ಒಡ್ಡಿದಾಗ
- ಹೆಚ್ಚು ರಾಸಾಯನಿಕಯುಕ್ತ  ಕ್ರೀಂ, ಸೋಪ್ ಬಳಸುತ್ತಿದ್ದರೆ
- ಹಾರ್ಮೋನಿನ ವೈಪರೀತ್ಯ ಉಂಟಾದಾಗ
- ಪೋಷಕಾಂಶಗಳ ಕೊರತೆ, ಅದರಲ್ಲೂ ವಿಟಮಿನ್ ಬಿ 12, ಬಿ 9, ವಿಟಮಿನ್ ಸಿ, ಜಿಂಕ್ ಕೊರತೆ.
-ಕೆಲವು ಬಾರಿ ಬ್ಯೂಟಿಪಾರ್ಲರ್‌ಗಳಲ್ಲಿ ಬಳಸುವ ಕಳಪೆ ಗುಣಮಟ್ಟದ ಕ್ರೀಮ್‌ಗಳಿಂದಲೂ ಭಂಗು ಕಾಣಿಸಿಕೊಳ್ಳಬಹುದು
-ಕಲುಷಿತ ವಾತಾವರಣವೂ ಕಾರಣವಾಗಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.