ADVERTISEMENT

ರಚನಾತ್ಮಕವಾಗಿ ಸೇಡು ತೀರಿಸಿಕೊಳ್ಳಿ

ಅಂತರ್ಯುದ್ಧ

ವಿ.ಬಾಲಕೃಷ್ಣನ್
Published 4 ಅಕ್ಟೋಬರ್ 2013, 19:30 IST
Last Updated 4 ಅಕ್ಟೋಬರ್ 2013, 19:30 IST
ರಚನಾತ್ಮಕವಾಗಿ ಸೇಡು ತೀರಿಸಿಕೊಳ್ಳಿ
ರಚನಾತ್ಮಕವಾಗಿ ಸೇಡು ತೀರಿಸಿಕೊಳ್ಳಿ   

ಗ್ರೀಸ್ ದೇಶದ ದೊರೆ ಅಲೆಕ್ಸಾಂಡರ್ ಪ್ರಪಂಚವನ್ನೆಲ್ಲ ಗೆಲ್ಲಬೇಕೆಂದು ದಂಡೆತ್ತಿ ಹೊರಟ. ಒಂದೊಂದೇ ದೇಶವನ್ನು ಗೆದ್ದು ಭಾರತಕ್ಕೆ ಕಾಲಿಟ್ಟು, ಇಲ್ಲೂ ಅನೇಕ ರಾಜ್ಯಗಳನ್ನು ಗೆದ್ದ. ಹಿಂದಿರುಗುವಾಗ ಅವನ ಗುರುಗಳು ಹೇಳಿದ ಮಾತು ನೆನಪಿಗೆ ಬಂತು. ಅವರು ‘ಅಲೆಕ್ಸಾಂಡರ್, ಭಾರತದಲ್ಲಿ ಅನೇಕ ಬುದ್ಧರು, ಅಂದರೆ ಜ್ಞಾನೋದಯವಾಗಿರುವ ವ್ಯಕ್ತಿಗಳು ಇದ್ದಾರಂತೆ. ಅಂತಹ ಒಬ್ಬ ವ್ಯಕ್ತಿಯನ್ನು ನನಗಾಗಿ ಕರೆದುಕೊಂಡು ಬಾ’ ಎಂದಿದ್ದರು. ಅಂತಹ ವ್ಯಕ್ತಿಗಾಗಿ ಅಲೆಕ್ಸಾಂಡರ್ ಊರೂರು ಅಲೆಯ ತೊಡಗಿದ.

ಒಂದು ಹಳ್ಳಿಯಲ್ಲಿ ಮರದ ಕೆಳಗೆ ಧ್ಯಾನ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕಂಡ. ಆತನೇ ಬುದ್ಧ ಎಂದು ಅಲೆಕ್ಸಾಂಡರ್‌ಗೆ ಅರಿವಾಯಿತು. ಅವನು ಹೋಗಿ ಹೇಳಿದ, ‘ಬುದ್ಧರೇ, ನಾನು ಗ್ರೀಸ್ ದೊರೆ. ಅನೇಕ ದೇಶಗಳನ್ನು ಗೆದ್ದು ಈಗ ಭಾರತವನ್ನೂ ಗೆದ್ದಿದ್ದೇನೆ. ಇಲ್ಲಿ ಅನೇಕ ಬುದ್ಧರು ಇರುವರೆಂದೂ, ಅಂತಹ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಬರಬೇಕೆಂದು ನಮ್ಮ ಗುರುಗಳು ಹೇಳಿದ್ದಾರೆ. ದಯವಿಟ್ಟು, ನೀವು ನನ್ನ ಜೊತೆ ಬನ್ನಿ’ ಎಂದ.

ಆ ವ್ಯಕ್ತಿ ಹೇಳಿದ ‘ನಾನು ನಿನ್ನ ದೇಶಕ್ಕೆ ಬರಲಾರೆ. ದಯವಿಟ್ಟು ನನಗೆ ತೊಂದರೆ ಕೊಡಬೇಡ’. ಮತ್ತೆ ಅಲೆಕ್ಸಾಂಡರ್, ‘ನಿಮಗೆ ಎಷ್ಟು ಬೇಕಾದರೂ ರಾಜ್ಯವನ್ನು, ಸಂಪತ್ತನ್ನು ಕೊಡುತ್ತೇನೆ. ಆದರೆ ನೀವು ನನ್ನ ಜೊತೆ ಬರಲೇಬೇಕು’ ಎಂದ. ಆ ವ್ಯಕ್ತಿ ಒಪ್ಪಲಿಲ್ಲ. ಅಲೆಕ್ಸಾಂಡರ್‌ಗೆ ಸಿಟ್ಟು ಬಂತು. ತನ್ನ ಕತ್ತಿಯನ್ನು ಹಿರಿದು ‘ಈಗ ನೀವು ನನ್ನ ಜೊತೆ ಬರಲು ಒಪ್ಪದಿದ್ದರೆ, ನಿಮ್ಮ ತಲೆಯನ್ನು ಕತ್ತರಿಸುತ್ತೇನೆ’ ಎಂದ. ಅದಕ್ಕೆ ಆ ವ್ಯಕ್ತಿ ‘ನೀನು ನನ್ನ ದೇಹವನ್ನು ಕತ್ತರಿಸಬಹುದು.

ಆದರೆ ನನ್ನ ಆತ್ಮವನ್ನು ಸ್ಪರ್ಶಿಸಲಾರೆ. ನೀನೊಬ್ಬ ಗುಲಾಮ’ ಎಂದ. ಇದನ್ನು ಕೇಳಿ ಅಲೆಕ್ಸಾಂಡರ್‌ಗೆ ಸಿಟ್ಟು ಹೆಚ್ಚಾಯಿತು. ಅವಮಾನವೂ ಆಯಿತು. ಮತ್ತೆ ಆ ವ್ಯಕ್ತಿಗೆ ಹೇಳಿದ,  ‘ಪ್ರಪಂಚವನ್ನು ಗೆದ್ದಿರುವ ಮಹಾವೀರ ನಾನು. ನನ್ನನ್ನು ಗುಲಾಮ ಎನ್ನಲು ನಿಮಗೆಷ್ಟು ಧೈರ್ಯ?’. ಆ ವ್ಯಕ್ತಿ ಹೇಳಿದ, ‘ನೀನು ಪ್ರಪಂಚ­ವನ್ನು ಗೆದ್ದಿರುವೆ. ಆದರೆ ಕೋಪವನ್ನು ಗೆಲ್ಲಲು ನಿನಗೆ ಸಾಧ್ಯ­ವಾಗಿಲ್ಲ. ನನ್ನ ಕೋಪ ನನ್ನ ಹತೋಟಿಯಲ್ಲಿದೆ. ನಿನ್ನ ಕೋಪ ನಿನ್ನನ್ನು ನಿಯಂತ್ರಿಸುತ್ತಿದೆ. ನೀನು ಕೋಪದ ಗುಲಾಮ’.

ಹೌದು! ನೀವೂ ಕೋಪದ ಗುಲಾಮರು. ಯಾವಾಗ, ಎಲ್ಲಿ, ಹೇಗೆ, ಎಷ್ಟು ಸಣ್ಣ ವಿಷಯಕ್ಕೆ ನಿಮಗೆ ಕೋಪ ಬರುವುದೋ ನಿಮಗೇ ತಿಳಿಯದು. ‘ನಾನು ಸಂತೋಷವಾಗಿರುತ್ತೇನೆ. ಆದರೆ ಒಮ್ಮೊಮ್ಮೆ ಮಾತ್ರ ಕೋಪ ಬರುತ್ತದೆ’ ಎನ್ನುವಿರಾ? ಹಾಗಾದರೆ ನೀವು ಸಂತೋಷದಿಂದ ಇರುವ ಗುಲಾಮರು!
* * *
ಶ್ರೀಮಂತ ವ್ಯಕ್ತಿಯ ಒಬ್ಬನೇ ಮಗ ಹೆಚ್ಚು ಅಂಕ­ಗಳನ್ನು ಪಡೆದು ಪದವೀಧರನಾದ. ಪದವಿ ಪ್ರದಾನ ಸಮಾ­ರಂಭಕ್ಕೆ ಹೋಗುವ ಮೊದಲು ತಂದೆಗೆ ಹೇಳಿದ, ‘ಅಪ್ಪಾ, ನನಗೆ  ಸ್ಪೋರ್ಟ್ಸ್ ಕಾರು ಬೇಕು. ಸಮಾರಂಭದಿಂದ ಬರು­ವಷ್ಟ­­ರಲ್ಲಿ ಅದು ನನಗಾಗಿ ಕಾಯು­ತ್ತಿರಬೇಕು’. ಅವನು ಹಿಂದಿರು­ಗಿದ ಮೇಲೆ ತಂದೆ ಬೈಬಲ್‌ನ್ನು ಅವನ ಕೈಗಿತ್ತು ಆಶೀರ್ವದಿಸಿದರು. ಅವನ ಸಿಟ್ಟು ನೆತ್ತಿಗೇರಿತು. ಕಾರಿನ ಬದಲು ಬೈಬಲ್‌ ಕೊಟ್ಟ ತಂದೆಯ ಮೇಲೆ ಕೂಗಾಡಿದ. ಅವರಿಗೆ ಮಾತ­ನಾಡಲು ಅವಕಾಶವನ್ನೇ ಕೊಡದೆ ಮನೆ ಬಿಟ್ಟು ಹೊರಟು ಹೋದ.

ಐದು ವರ್ಷ ಬೇರೆಡೆ ಕೆಲಸ ಮಾಡಿ ಸಾಕಷ್ಟು ಹಣ ಸಂಪಾದಿಸಿದ. ಅಷ್ಟರಲ್ಲಿ ಅವನ ಕೋಪ ಇಳಿದಿತ್ತು. ತಂದೆಯನ್ನು ಕಾಣಲು ಹೋದ. ಅವರು ತೀರಿ ಹೋಗಿದ್ದ ವಿಷಯ ತಿಳಿಯಿತು. ಮನೆಯಲ್ಲಿ ಆ ಬೈಬಲ್ ಸಿಕ್ಕಿತು. ತೆರೆದು ನೋಡಿದ. ಅದರಲ್ಲಿ ಕಾರಿನ ಕೀ ಮತ್ತು ಪದವಿ ಸಮಾ­ರಂಭದಂದು ಖರೀದಿಸಿದ ಕಾರಿನ ರಸೀತಿ ಸಿಕ್ಕಿತು. ಶೆಡ್‌ಗೆ ಹೋಗಿ ನೋಡಿದ. ಅವನಿಗೆ ಇಷ್ಟವಾದ ಕಾರು ಅಲ್ಲಿತ್ತು.

ಅದೇ ರೀತಿ ನೀವೂ ಕೋಪದ ಗುಲಾಮರು. ಎಷ್ಟೋ ಜನ ತಂದೆ-ತಾಯಿ, ನೆಂಟರಿಷ್ಟರು, ಸಹೋದರ–ಸಹೋದರಿಯರ ಜೊತೆ ಮಾತನಾಡುವುದಿಲ್ಲ. ನೀವು ಎಣಿಸುತ್ತಾ ಹೋದರೆ ಸ್ನೇಹಿತರಿಗಿಂತ ಶತ್ರುಗಳ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಹಾಗಾದರೆ ನೀವು ಹೇಗೆ ಅಭಿವೃದ್ಧಿ ಹೊಂದುವಿರಿ?
* * *
ಮನೆಯಲ್ಲಿ ಕಾಫಿಗೆ ಸ್ವಲ್ಪ ಸಕ್ಕರೆ ಹೆಚ್ಚಾಗಿದೆ. ಆಗ, ‘ಏನಿದು ಇಷ್ಟೊಂದು ಸಕ್ಕರೆ? ಇಷ್ಟು ವರ್ಷಗಳಾದರೂ ಇನ್ನೂ ಕಾಫಿ ಮಾಡಲು ಬರುವುದಿಲ್ಲ. ನಿಮ್ಮ ತಾಯಿ ನಿನಗೆ ಕಲಿಸಲಿಲ್ಲವೇ?’ ಎಂದು ಕೂಗಾಡುವುದಕ್ಕೆ ಬದಲು ‘ಏನೇ ಕಾಫಿಯಲ್ಲಿ ನಿನ್ನ ಬೆರಳು ಹಾಕಿದ್ದೆಯಾ? ಕಾಫಿ ತುಂಬಾ ಸಿಹಿಯಾಗಿದೆ. ನಾಳೆಯಿಂದ ಬೆರಳು ಹಾಕಬೇಡ. ಚಮಚದಿಂದ ಮಾತ್ರ ಕಲಕು’ ಎಂದರೆ ಕೋಪವಿಲ್ಲದೆ ಸಮಸ್ಯೆ ಪರಿಹಾರ!

ಒಬ್ಬ ತಂದೆ ಮಗನ ಮೇಲೆ ಆಗಾಗ ಸಿಟ್ಟು ಮಾಡಿ­ಕೊಂಡು, ಬೈದು, ಹೊಡೆದು ಮಾಡುತ್ತಿದ್ದ. ಒಮ್ಮೆ ತಂದೆಗೆ ತಪ್ಪಿನ ಅರಿವಾಗಿ ಮಗನನ್ನು ಕೇಳಿದ ‘ನಾನು ನಿನಗೆ ಬಹಳ ನೋವು ಮಾಡಿದರೂ ನೀನು ಹೇಗೆ ಸುಮ್ಮನಿರುತ್ತೀಯೆ?’ ಅದಕ್ಕೆ ಮಗ ಹೇಳಿದ, ‘ನೀನು ಹಾಗೆ ಮಾಡಿದಾಗೆಲ್ಲ ಟಾಯ್ಲೆಟ್ ಸ್ವಚ್ಛಗೊಳಿಸುವ ಮೂಲಕ ನಿನ್ನ ಮೇಲೆ ಸೇಡು ತೀರಿಸಿ­ಕೊಳ್ಳುತ್ತೇನೆ’. ‘ಅದು ಹೇಗೆ’ ತಂದೆ ಕೇಳಿದ. ‘ನಿನ್ನ ಹಲ್ಲುಜ್ಜುವ ಬ್ರಷ್‌ನಿಂದ ನಾನು ಟಾಯ್ಲೆಟ್ ಉಜ್ಜುತ್ತೇನೆ’ ಎಂದ ಮಗ!

ಕೋಪ ಮಾಡಿಕೊಳ್ಳಲೇ ಬಾರದೆಂದು ನಾನು ಹೇಳುವು­ದಿಲ್ಲ. ಆದರೆ ರಚನಾತ್ಮಕವಾಗಿ ಅದನ್ನು ವ್ಯಕ್ತಪಡಿಸಿ. ಸಿಟ್ಟನ್ನು ಒಳಗೇ ಅದುಮಿ ಇಟ್ಟುಕೊಳ್ಳಬಾರದು. ಏಕೆಂದರೆ ಅದು ಆ್ಯಸಿಡ್‌ನಂತೆ. ಹೀಗಾಗಿ ಇತರರಿಗೆ ನೋವಾಗದಂತೆ ಅದನ್ನು ಹೊರಹಾಕಬೇಕು ಅಥವಾ ಕೋಪದಿಂದ ಅನಾಹುತ ಮಾಡುವ ಬದಲು ರಚನಾತ್ಮಕವಾಗಿ ಸೇಡು ತೀರಿಸಿಕೊಳ್ಳ­ಬೇಕು. ಉದಾ: ಒಬ್ಬ ವ್ಯಕ್ತಿ ಹೆಂಡತಿಯನ್ನು ಅತಿಯಾಗಿ ಬೈಯುತ್ತಿದ್ದ. ಒಂದು ದಿನ ಅವನು ಪ್ಯಾಂಟ್ ಹಾಕಿಕೊಳ್ಳು­ತ್ತಿದ್ದಾಗ ಕಾಲು ತೂರಿಸಲಾಗದೆ ಕೆಳಗೆ ಬಿದ್ದ. ಇದೇಕೆ ಎಂದು ಪರೀಕ್ಷಿಸಿದಾಗ ತಳಭಾಗದಲ್ಲಿ ಹೊಲಿಗೆ ಹಾಕಲಾಗಿತ್ತು. ಗಂಡ ಬೈಯತೊಡಗಿದ. ಆದರೆ ಹೆಂಡತಿ ಮೌನವಾಗಿ ನಕ್ಕಳು. ಹೀಗೆ ನವೀನ ರೀತಿಯಲ್ಲಿ ಸೇಡು ತೀರಿಸಿಕೊಂಡಿದ್ದಳು.

ಒಬ್ಬ ದಿನಾ ಕುಡಿದು ಬಂದು ಹೆಂಡತಿಯನ್ನು  ಹೊಡೆಯು­ತ್ತಿದ್ದ. ರೋಸಿಹೋದ ಆಕೆ ಹೊಸ ಉಪಾಯ ಮಾಡಿದಳು. ಅವನು ಹೊಡೆಯು­ತ್ತಿದ್ದಾಗ ಒಂದು ಚಾಕುವನ್ನು ಹಿಡಿದು ನಿಂತಳು. ತನ್ನನ್ನು ಚುಚ್ಚಲು ತಂದಿದ್ದಾಳೆಂದು ಅವನು ಭಾವಿಸಿದ. ಆದರೆ ಅವಳು ಹೇಳಿ­ದಳು ‘ಎಷ್ಟು ಹೊಡೆದರೂ ನಾನು ಈಗೇನೂ ಮಾಡುವುದಿಲ್ಲ. ನೀನು ನಿದ್ದೆ ಮಾಡಿದ ನಂತರ ಚುಚ್ಚುತ್ತೇನೆ’. ಆ ರಾತ್ರಿ ಅವನು ನಿದ್ದೆ ಮಾಡಲಿಲ್ಲ, ಮುಂದೆಂದೂ ಕುಡಿಯಲೂ ಇಲ್ಲ! l

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.