ADVERTISEMENT

ಸಂಘರ್ಷ ನಿವಾರಿಸಿ

ಸ್ವಸ್ಥ ಬದುಕು

ಪ್ರಜಾವಾಣಿ ವಿಶೇಷ
Published 5 ಜುಲೈ 2013, 19:59 IST
Last Updated 5 ಜುಲೈ 2013, 19:59 IST

ಮ್ಮ ಸಮಾಜದಲ್ಲಿ ಇಷ್ಟೊಂದು ಸಂಘರ್ಷ ಏಕಿದೆ ಎಂದು ಶಿಷ್ಯನೊಬ್ಬ ಗುರುವನ್ನು ಪ್ರಶ್ನಿಸಿದ. ಆ ಗುರು ಪ್ರಶ್ನೆಗಳ ಮೂಲಕವೇ ಶಿಷ್ಯನಿಗೆ ಉತ್ತರಿಸಿದರು. ನಿನ್ನ ಮುಖದಲ್ಲಿ ಸಿಡುಕು ಇರುವಾಗ ಸಿಹಿಯಾದ ಶಬ್ದಗಳಿಂದ ಏನು ಪ್ರಯೋಜನ ಎಂದು ಬೆಳಿಗ್ಗೆ ಪ್ರಶ್ನಿಸಿದರು. ನಿನ್ನ ಮನಸ್ಸು ಹಾಗೂ ಹೃದಯದಲ್ಲಿ ಸಿಡುಕು ಇರುವಾಗ ನಗು ಮುಖದಿಂದ ಏನು ಪ್ರಯೋಜನ ಎಂದು ಸಂಜೆ ಪ್ರಶ್ನಿಸಿದರು.

ಕಲಿಸುವ ಉದ್ದೇಶದಿಂದ ಅಲ್ಲ, ಜಾಗೃತಿ ಮೂಡಿಸುವ ಉದ್ದೇಶದಿಂದ ಆ ಗುರು ಹೀಗೆ ಹೇಳಿದ್ದರು. ಮಲಗಿರುವ ನಮ್ಮ ಅಂತರಂಗವನ್ನು ಮುಟ್ಟಲು ಮಹಾನ್ ಗುರುಗಳು ಇಂತಹ ಮಾರ್ಗ ಅನುಸರಿಸುತ್ತಾರೆ. ಆ ಒಳ ಮನಸ್ಸು ಜಾಗೃತಗೊಂಡಾಗ ನಾವು ಬದಲಾಗಿರುತ್ತೇವೆ.
ಸಾಮಾನ್ಯವಾಗಿ ನಾವು ಸಂಘರ್ಷವನ್ನು ಬಾಹ್ಯವಾಗಿ ಪರಿಹರಿಸಿಕೊಳ್ಳಲು ಯತ್ನಿಸುತ್ತೇವೆ. ನಾನು, ನೀನು ಅಥವಾ ನಾವು, ಅವರು ಎಂಬ ಮಟ್ಟದಲ್ಲಿ ಈ ಪರಿಹಾರ ಇರುತ್ತದೆ.

ಆದರೆ, ಇದರಿಂದ ನಿಜವಾದ ಸಂಘರ್ಷ ಕೊನೆಯಾಗುವುದಿಲ್ಲ. ನಾವಾಗ ಚೌಕಾಸಿಗೆ ಇಳಿಯುತ್ತೇವೆ. ವ್ಯಾವಹಾರಿಕವಾಗಿ ಯೋಚಿಸುತ್ತೇವೆ. ವಾದಿಸುತ್ತೇವೆ. ಒತ್ತಡ ಹೇರುತ್ತೇವೆ. ಕ್ಷಮೆ ನಿರೀಕ್ಷಿಸುತ್ತೇವೆ. ಅಂತಿಮವಾಗಿ ಯಾರೂ ಸಂತಸದಿಂದ ಇರುವುದಿಲ್ಲ. ನಮ್ಮ ಮುಖದಲ್ಲಿ ನಗು ಇರಬಹುದು. ಆದರೆ, ಮನಸ್ಸಿನಲ್ಲಿ ಅತೃಪ್ತಿ ಕುದಿಯುತ್ತಿರುತ್ತದೆ. ಹೃದಯದಲ್ಲಿ ಕಹಿ ಉಳಿದು ಬಿಡುತ್ತದೆ.

ನಿಜವಾದ ಸಂಘರ್ಷ ಇಬ್ಬರು ವ್ಯಕ್ತಿಗಳ ನಡುವೆ ಅಲ್ಲ, ಪ್ರತಿ ವ್ಯಕ್ತಿಯ ಅಂತರಂಗದಲ್ಲಿ ಇರುತ್ತದೆ.  ಪ್ರತಿ ವ್ಯಕ್ತಿಗೂ ಇರುವುದಕ್ಕಿಂತ ಮತ್ತೇನೋ ಬೇಕು ಅನಿಸುತ್ತಿರುತ್ತದೆ. ತೃಪ್ತಿ ಇರುವುದಿಲ್ಲ. ಇದು ಎಲ್ಲ ಸಂಘರ್ಷಗಳನ್ನೂ ಹುಟ್ಟುಹಾಕುತ್ತದೆ. `ನಾನು ಈಗಷ್ಟೇ ಬಾಳೆಹಣ್ಣು ತಿಂದಿರುತ್ತೇನೆ. ಸಣ್ಣ ಬಾಯಿಯ ಬಾಟಲಿಯಲ್ಲಿ ಮತ್ತೊಂದು ಬಾಳೆಹಣ್ಣು ನಮಗೆ ಕಾಣುತ್ತದೆ. ಅದು ಬೇಕು ಎಂದು ನನಗೆ ಅನಿಸುತ್ತದೆ. ನಾನು ಕೈಯನ್ನು ಅದರಲ್ಲಿ ಹಾಕುತ್ತೇನೆ.

ಮುಷ್ಠಿಯಲ್ಲಿ ಬಾಳೆಹಣ್ಣು ಇರುವುದರಿಂದ ಬಾಟಲಿಯಿಂದ ಕೈ ಹೊರಕ್ಕೆ ತೆರೆಯಲು ಆಗುವುದಿಲ್ಲ. ಆ ಸಮಯಕ್ಕೆ ಕುಟುಂಬದ ಮತ್ತೊಬ್ಬ ಸದಸ್ಯ ಅಲ್ಲಿಗೆ ಬರುತ್ತಾನೆ. ಆತನೂ ಆಗಷ್ಟೇ ಬಾಳೆಹಣ್ಣು ತಿಂದಿರುತ್ತಾನೆ. ಬಾಟಲಿಯೊಳಗೆ ಬಾಳೆಹಣ್ಣು ನೋಡಿದಾಗ ಅದು ನನಗೆ ಬೇಕು ಎಂದು ಆತ ಹೇಳುತ್ತಾನೆ. ಅದು ನನ್ನದು ಎಂದು ನಾನು ವಾದಿಸುತ್ತೇನೆ' ಇಬ್ಬರ ಅಂತರಂಗದೊಳಗಿನ ಸಂಘರ್ಷ ಹೀಗೆ ಬಾಹ್ಯ ಸಂಘರ್ಷವಾಗಿ ಮಾರ್ಪಡುತ್ತದೆ.

ಪ್ರತಿ ವ್ಯಕ್ತಿಯೂ ಮನಸ್ಸು ಮತ್ತು ಹೃದಯದಿಂದ ಸಿಡುಕನ್ನು ತೆಗೆದು ಹಾಕಬೇಕು. ಬಾಳೆಹಣ್ಣು ಮುಖ್ಯವಲ್ಲ. ಹೃದಯ ಮತ್ತು ಮನಸ್ಸು ಮುಖ್ಯ. ಬಾಳೆಹಣ್ಣು ರೋಗ ಹುಟ್ಟುಹಾಕುವುದಿಲ್ಲ. ಅಂತರಂಗದ ಒಳಗೆ ಇರುವ ಸಿಡುಕು ರೋಗಕ್ಕೆ ಕಾರಣವಾಗುತ್ತದೆ. ಸಿಟ್ಟು, ಅಸೂಯೆ, ದುಃಖ, ವಿಷಾದ, ಸ್ವಾರ್ಥ, ಮುಂಗೋಪ, ಹಳಹಳಿಕೆ, ತಪ್ಪಿತಸ್ಥ ಭಾವನೆ, ಸುಳ್ಳು, ಪೊಳ್ಳು ಅಹಂಕಾರ, ಮೇಲರಿಮೆ, ಕೀಳರಿಮೆ, ಆತ್ಮಾನುಕಂಪ ಇತ್ಯಾದಿ ನಮ್ಮಳಗಿನ ಸಂಘರ್ಷಗಳನ್ನು ನಾವು ಮೊದಲು ನಿವಾರಿಸಿಕೊಳ್ಳಬೇಕು.

ADVERTISEMENT

ಇದರ ಬದಲಾಗಿ ಶಾಂತಿ, ಪ್ರೀತಿ, ಸಂತಸ, ವಿನಮ್ರತೆ, ಕರುಣೆ, ಸಹಾನುಭೂತಿ, ಸತ್ಯ, ನಂಬಿಕೆ, ಉದಾರ ಭಾವ, ಪ್ರಶಾಂತ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಪ್ರತಿ ಬಾರಿಯೂ ನಕಾರಾತ್ಮಕ ಭಾವದ ನಿದ್ದೆಗೆ ಇಳಿದಾಗಲೆಲ್ಲ, ಸಂರ್ಘರ್ಷದೊಳಗೆ ಸಿಲುಕಿದಾಗಲೆಲ್ಲ ನಾವು ಎಚ್ಚೆತ್ತುಕೊಳ್ಳಬೇಕು. ಸಿಡುಕುವುದನ್ನು ನಿಲ್ಲಿಸು ಎಂದು ಮನಸ್ಸಿಗೆ ಆದೇಶ ನೀಡಬೇಕು. ಪ್ರತಿ ದಿನವೂ `ಧ್ಯಾನ'ದ ಔಷಧವನ್ನು ಮನಸ್ಸಿಗೆ ನೀಡಬೇಕು.

ದಿನಕ್ಕೆ ಹತ್ತು ನಿಮಿಷಗಳ ಕಾಲ ಧ್ಯಾನ ಮಾಡಿದರೂ ಸಾಕು. ಈ ಹತ್ತು ನಿಮಿಷ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ನೀವು ಏನೇ ಮಾಡಿದರೂ ಎಲ್ಲಿಗೆ ಹೋದರೂ ಈ ಮನಃಸ್ಥಿತಿಯಲ್ಲಿ ಇರಿ.

* ಯಾವಾಗಲೂ ವಿಶಾಲವಾಗಿ ಯೋಚಿಸಿ. ನನ್ನ ಬಳಿ ಸಾಕಷ್ಟಿದೆ. ನಾನು ಕೇಳುವುದು ಏನನ್ನೂ ಇಲ್ಲ. ನಾನು ಕೇವಲ ಹಂಚಿಕೊಳ್ಳುತ್ತೇನೆ ಅಂದುಕೊಳ್ಳಿ.
*ಸಂಘರ್ಷದಿಂದ ಹುಟ್ಟುವ ಮನೋಭಾವ ಬದಲಿಸಿಕೊಳ್ಳಿ. ಶಾಂತಿಯ ಬಗ್ಗೆ, ಒಳ್ಳೆತನದ ಬಗ್ಗೆ ಯೋಚಿಸಿ.
*ಸಂಘರ್ಷ ಮತ್ತು ಸ್ಪರ್ಧೆಯಿಂದ ಹೊರತಾದ ವ್ಯಕ್ತಿಯಾಗಿ. ಘನತೆಯಿಂದ ವರ್ತಿಸಿ. ಸ್ಪರ್ಧೆ ಇದ್ದಾಗ ಮೌನವಾಗಿ ಹಿಂದಕ್ಕೆ ಸರಿಯಿರಿ.

`ನಾನು ಈ ಭೂಮಿಯ ಮೇಲೆ ಸ್ವರ್ಗ ಸೃಷ್ಟಿಸುತ್ತಿದ್ದೇನೆಯೇ' ಎಂದು ದಿನವೂ ಪ್ರಶ್ನಿಸಿಕೊಳ್ಳಿ. ಆಗ ನಿಮ್ಮ ಮೌಲ್ಯಗಳು, ಸಿದ್ಧಾಂತಗಳು, ನಿಮ್ಮ ಆದ್ಯತೆಗಳಿಗೆ ತಾಜಾ ಇಬ್ಬನಿಯಂತೆ ಜಾಗ ಸಿಗುತ್ತದೆ. ನಿಮ್ಮಳಗಿನ ಸಿಡುಕು ಮಾಯವಾಗುತ್ತದೆ. ನಿಮ್ಮ ಮಂದಹಾಸ ನೈಜವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.