ADVERTISEMENT

‘ಸಮಚಿತ್ತವೇ ಉಲ್ಲಾಸದ ಗು‌ಟ್ಟು’

ಸುಮಲತಾ ಎನ್, ಪದ್ಮನಾಭ ಭಟ್ಟ
Published 14 ನವೆಂಬರ್ 2017, 19:30 IST
Last Updated 14 ನವೆಂಬರ್ 2017, 19:30 IST
ಅರುಂಧತಿ ನಾಗ್
ಅರುಂಧತಿ ನಾಗ್   

ಮಾಡಲು ಇಷ್ಟವಿಲ್ಲದ ಕೆಲಸವನ್ನು ಮಾಡಲೇಬೇಕಾದ ಅನಿವಾರ್ಯ ಬಂದಾಗ ಅದು ಒತ್ತಡ ಎನಿಸುತ್ತದೆ. ಇಂಥ ಸಂದರ್ಭ ಜೀವನದಲ್ಲಿ ಬೇಕಾದಷ್ಟು ಬಾರಿ ಬರುತ್ತದೆ.

ಶಂಕರ್ ನಾಗ್ ಇದ್ದಾಗ ಅವರನ್ನು ಕೇಳಿಕೊಂಡು ಸಾಕಷ್ಟು ಫೋನ್ ಕರೆಗಳು ಬರುತ್ತಿದ್ದವು. ಅವನ್ನು ರಿಸೀವ್ ಮಾಡುವುದೇ ಒತ್ತಡ ಎನಿಸಿಬಿಡುತ್ತಿತ್ತು. ಜೊತೆಗೆ ಬ್ಯಾಂಕ್‌ಗೆ ಹೋಗುವುದರಿಂದ ಹಿಡಿದು ಹಣಕಾಸಿಗೆ ಸಂಬಂಧಪಟ್ಟ ಏನೇ ವಿಷಯ ಇದ್ದರೂ ಅದು ಒತ್ತಡ ಎನಿಸುತ್ತಿತ್ತು. ಆ ಕೆಲಸಗಳು ನನಗೆ ಇಷ್ಟವಿರಲಿಲ್ಲ.

ಆದರೆ ಜೀವನ ಹೇಗೆ ಎಂದರೆ, ಯಾವುದು ನಮಗೆ ಇಷ್ಟವಿರುವುದಿಲ್ಲವೋ ಅದೇ ಧುತ್ತೆಂದು ಎದುರು ನಿಂತಿರುತ್ತದೆ. ಅದನ್ನು ಎದುರಿಸಲೇಬೇಕಾದ ಅನಿವಾರ್ಯವೂ ಹುಟ್ಟಿಕೊಂಡಿರುತ್ತದೆ. ಶಂಕರ್ ಯಾವಾಗಲೂ ಹೇಳುತ್ತಿದ್ದರು: ‘ಯಾವುದಕ್ಕಾದರೂ ಸರಿ, ‘‘ಇದನ್ನು ದ್ವೇಷಿಸುತ್ತೇನೆ ಎನ್ನಬೇಡ’’, ಅದನ್ನೇ ಮಾಡುವ ಅನಿವಾರ್ಯತೆ ಒಂದಲ್ಲಾ ಒಂದು ಬಾರಿ ಬರುತ್ತದೆ. ಆಗ ತುಂಬಾ ಬೇಜಾರಾಗುತ್ತದೆ. ಐ ಹೇಟ್ ಇಟ್ ಎಂದು ಯಾವುದಕ್ಕೂ ಹೇಳಬೇಡ’ ಎಂದು. ಅದು ನಿಜ. ಯಾವುದಕ್ಕೂ ‘ಇದು ಆಗುವುದಿಲ್ಲ’ ಎನ್ನಬಾರದೆಂದು ನಾನು ನನ್ನ ಜೀವನದಿಂದಲೇ ಕಲಿತೆ.

ADVERTISEMENT

ನಮ್ಮ ಸುತ್ತಮುತ್ತಲ ವಾತಾವರಣ ನಮಗೆ ತಕ್ಕಂತೆ ಇದ್ದರೆ ಅಲ್ಲಿ ಒತ್ತಡ ಎಂಬ ಮಾತೇ ಬರುವುದಿಲ್ಲ. ಕಡಿಮೆ ಜ್ಞಾನವಿರುವವರ ಜೊತೆ ಕೆಲಸ ಮಾಡಬಹುದು, ಆದರೆ ಆಸಕ್ತಿಯಿಲ್ಲದವರ ಜೊತೆ ಕೆಲಸ ಮಾಡಲು ಸಾಧ್ಯವಿಲ್ಲ. ಅಂಥವರೊಂದಿಗೆ ಕೆಲಸ ಮಾಡಬೇಕಿರುವುದೇ ಸವಾಲು. ನಾವು ನಮ್ಮ ಕಡೆಯಿಂದ ಎಲ್ಲಾ ರೀತಿಯಿಂದ ಪ್ರಯತ್ನ ಪಟ್ಟರೂ ಆ ಕಡೆಯಿಂದ ಒಂದು ಹಿಡಿ ಪ್ರಯತ್ನವೂ ಇಲ್ಲದಿದ್ದರೆ ಒತ್ತಡ ಬಂದೇ ಬರುತ್ತದೆ. ಅಂಥ ಸಂದರ್ಭದಲ್ಲಿ ಸ್ವಿಚ್ ಆಫ್ ಆಗುವ ತಂತ್ರವನ್ನೂ ಕಲಿತಿರಬೇಕು.

ಎಲ್ಲರಿಗೂ ಜೀವನದಲ್ಲಿ ಒತ್ತಡ ತರುವ ಸಂಗತಿಗಳು ಬಂದೇ ಬರುತ್ತವೆ. ಅದನ್ನು ಎದುರಿಸಬೇಕು. ಒಬ್ಬರೇ ಕುಳಿತು ನಿರ್ಧಾರ ತೆಗೆದುಕೊಳ್ಳುವಷ್ಟು ದೃಢ ಮನಸ್ಸು ಮಾಡಬೇಕು.

ಕೊಲೆ ಅಥವಾ ಆತ್ಮಹತ್ಯೆ ಒಂದು ಕ್ಷಣದಲ್ಲಿ ಆಗುವಂಥ ಕ್ರಿಯೆ. ಆದರೆ ಆ ಸಂದರ್ಭ ದಾಟಿಬಿಟ್ಟರೆ ಮತ್ತೆಂದೂ ಆ ಮನಸ್ಸು ಬರುವುದಿಲ್ಲ ಎಂದು ಹೇಳುವುದನ್ನು ಕೇಳಿರುತ್ತೇವೆ. ಹಾಗೆ ಒತ್ತಡ ಕೂಡ. ಅದನ್ನು ಒಮ್ಮೆ ದಾಟಿಬಿಟ್ಟರೆ ಗೆಲ್ಲುತ್ತೀರಿ. ಇಲ್ಲವೇ ಬೀಳುತ್ತೀರ. ‘ಇಲ್ಲ, ನಾನು ಬೀಳುವುದಿಲ್ಲ’ ಎಂದು ನಮಗೆ ನಾವೇ ಹೇಳಿಕೊಳ್ಳಬೇಕು.

ನಾನು ಒತ್ತಡದ ಪರಿಸ್ಥಿತಿಗಳಲ್ಲಿ ನನ್ನೊಂದಿಗೆ ಮಾತನಾಡಿಕೊಳ್ಳುತ್ತೇನೆ. ‘ಸ್ವಲ್ಪ ತಾಳು, ಇದು ಒಳ್ಳೆಯದಲ್ಲ, ಇನ್ನು ಸ್ವಲ್ಪ ಸಮಯ ತೆಗೆದುಕೊಳ್ಳೋಣ. ಎಲ್ಲವೂ ಸರಿಹೋಗುತ್ತದೆ’ ಎಂದು ನನಗೆ ನಾನೇ ಸಮಾಧಾನ ಹೇಳಿಕೊಳ್ಳುತ್ತೇನೆ.

ನನಗೆ ತೊಂದರೆ ಕೊಡುವ, ಚಿತ್ತ ಕೆಡಿಸುವ ಯಾವುದೇ ವಿಷಯ, ವ್ಯಕ್ತಿಗಳಿದ್ದರೆ ಆ ದಿಕ್ಕಿನಲ್ಲಿ ಮತ್ತೆಂದೂ ಹೋಗುವುದಿಲ್ಲ. ಆಗ ಒತ್ತಡದಿಂದ ಅರ್ಧ ಪಾರಾದಂತೆ. ನನ್ನ ವೃತ್ತಿಬದುಕಿನಲ್ಲಿ ಅದೃಷ್ಟವಶಾತ್ ಅಂಥ ಪರಿಸ್ಥಿತಿಗಳು ಹೆಚ್ಚೇನೂ ಎದುರಾಗಿಲ್ಲ. ಸುಮಾರು ಹದಿನೈದು ವರ್ಷಗಳ ಹಿಂದೆ ಈ ರೀತಿಯ ಸನ್ನಿವೇಶ ಎದುರಾಗಿತ್ತು. ಆದರೆ ಮಾತು ಕೊಟ್ಟಿದ್ದರಿಂದ ಕೆಲಸ ಮಾಡಿ ಮುಗಿಸಿ ಹೊರಗೆ ಬಂದೆ.

ಆಗೆಲ್ಲ ಹಣಕಾಸಿನ ಒತ್ತಡವೂ ಸಾಕಷ್ಟು ಇತ್ತು. ಹಣ ಇಲ್ಲದೇ ಕಷ್ಟ ಅನುಭವಿಸಿದ ದಿನಗಳೂ ಇದ್ದವು. ಆದರೆ ಎದುರಿಸುವುದು ಅನಿವಾರ್ಯ ಎಂದಾದಾಗ ಅದರಿಂದ ತಪ್ಪಿಸಿಕೊಂಡು, ಕಷ್ಟ ಬೇಡ ಎನ್ನುವುದರಲ್ಲಿ ಅರ್ಥವೇ ಇಲ್ಲ. ನಾನು ಬೆಳಿಗ್ಗೆ ಏಳುವುದೇ ಬೇಡ ಎಂದು ಅಂದುಕೊಂಡ ದಿನಗಳೂ ಇವೆ. ಆ ರೀತಿ ಒತ್ತಡಗಳಿದ್ದವು. ಅವೆಲ್ಲವೂ ಸಮಯದ ಪ್ರಶ್ನೆ. ಈಗ ಆ ಅನುಭವಗಳು ನನ್ನ ಬಗಲಲ್ಲಿವೆ.

ಪ್ರತಿಯೊಬ್ಬರ ಜೀವನದಲ್ಲೂ ‘ನಾವು ಈ ಜಾಗದಲ್ಲಿ ಇರುತ್ತೇವೆ’ ಎಂದುಕೊಂಡೇ ಇರದ ಒಂದು ಸಂದರ್ಭ ಬಂದೇ ಬರುತ್ತದೆ. ಅದನ್ನು ನಿಭಾಯಿಸುವ ಕಲೆಯನ್ನೂ ಜೀವನ ಕಲಿಸಿಕೊಡುತ್ತದೆ.

ತುಂಬಾ ಒತ್ತಡದ ಸಮಯದಲ್ಲಿ ನಾನು ಶಾಂತವಾಗಿರಲು ಬಯಸುತ್ತೇನೆ. ಒತ್ತಡವಿದ್ದರೆ ಎಷ್ಟೋ ಜನರಿಗೆ ನಿದ್ದೆ ಬರುವುದಿಲ್ಲ. ಆದರೆ ನಾನು ತುಂಬಾ ಚೆನ್ನಾಗಿ ನಿದ್ದೆ ಮಾಡಿಬಿಡುತ್ತೇನೆ. ಪರಿಸ್ಥಿತಿ ನಿಯಂತ್ರಣ ಮೀರಿದಾಗ, ಏನೂ ಮಾಡಲು ಆಗುತ್ತಿಲ್ಲ ಎನ್ನಿಸಿದಾಗ ಚೆನ್ನಾಗಿ ನಿದ್ದೆ ಮಾಡಿಬಿಡುತ್ತಿದ್ದೆ. ಕಂಪ್ಯೂಟರ್ ಶಟ್ ಡೌನ್ ಆಗುವ ಥರ. ನಿದ್ದೆ ಮಾಡಿ, ಮನಸ್ಸು ತಿಳಿಯಾದ ಮೇಲೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ನಿದ್ದೆ ತಪ್ಪಿಸುತ್ತದೆ.

ನನಗೆ ಡಿಸ್ಟ್ರೆಸ್ ಎಂದರೆ ಸಂಗೀತ ಕೇಳುವುದು. ಶಾಲಾ–ಕಾಲೇಜು ದಿನಗಳಲ್ಲಿ ಡಿಸ್ಟ್ರೆಸ್‌ಗೆಂದು ಚಿತ್ರಕಲೆ ಜೊತೆಗಿತ್ತು. ಆಮೇಲೆ ನಾಟಕದ ನಂಟು. ನಾಟಕ ಎನ್ನುವುದು ಸುಂದರ ಥೆರಪಿ. ಮದುವೆಗೆ ಮುನ್ನ ತಿಂಗಳಿಗೆ ಸುಮಾರು 40 ಶೋ ಇರುತ್ತಿತ್ತು. ಅದೇ ದಿನನಿತ್ಯದ ಥೆರಪಿಯಾಗಿತ್ತು. ಈಗಲೂ...

ಈಗ ಒತ್ತಡ ಎನ್ನಿಸಿದರೆ ತೋಟಕ್ಕೆ ಹೋಗಿ ಸುಮ್ಮನೆ ಹೂಗಳನ್ನು, ಚಿಟ್ಟೆಗಳನ್ನು ನೋಡುತ್ತಾ ಕೂತು ಬಿಡುತ್ತೇನೆ. ಮೆಲುವಾದ ಸಂಗೀತ ಕೇಳುತ್ತೇನೆ. ಕೆಲವರು ಈಗಿನ ಜೀವನಶೈಲಿಯೇ ಒತ್ತಡ ತರುತ್ತದೆ ಎನ್ನುತ್ತಾರೆ. ನಮ್ಮ ಜೀವನಶೈಲಿ ಹೀಗಿರಬೇಕೆಂದು ನಿರ್ಧರಿಸುವುದು ನಾವು. ಹಾಗಾಗಿ ಒತ್ತಡದಲ್ಲಿ ನಮ್ಮ ಪಾತ್ರವೂ ಇರುತ್ತದೆ.

ಈಗಂತೂ ‘ಬೇಕು’ಗಳ ಪಟ್ಟಿ ಮುಗಿಯುವುದೇ ಇಲ್ಲ. ಸ್ವಲ್ಪ ಇದ್ದರೆ ಹೆಚ್ಚು ಬೇಕು, ಹೆಚ್ಚು ಇದ್ದರೆ ಇನ್ನೂ ಹೆಚ್ಚು ಬೇಕು. ಎಲ್ಲರಿಗೂ ಅತಿಯೇ ಬೇಕು. ಇದ್ದುದರಲ್ಲೇ ತೃಪ್ತಿ ಪಟ್ಟುಕೊಳ್ಳುವ ಮನೋಭಾವ ಕಾಣೆಯಾಗಿದೆ. ಇರುವುದರಲ್ಲಿ ಸಮಾಧಾನ ಇಲ್ಲ. ಆಸೆ ಇರಬಾರದು ಎಂದಲ್ಲ. ಆದರೆ ಅದೊಂದೇ ಎಲ್ಲವೂ ಆಗಿಬಿಡಬೇಕಿಲ್ಲ. ‘ಸಾಕು’ ಎನ್ನುವುದನ್ನೂ ಕಲಿಯಬೇಕು. ಆಗ ಒತ್ತಡದ ಪ್ರಮಾಣವೂ ತಗ್ಗುತ್ತದೆ.

ಈಗಂತೂ ಓಡುವುದೇ ಜೀವನ. ಓಡುತ್ತಾ ಓಡುತ್ತಾ ಏಕೆ ಓಡುತ್ತಿದ್ದೇವೆ ಎಂಬುದೇ ಮರೆತುಹೋಗಿರುತ್ತದೆ. ವರ್ಕ್ ಹಾಗೂ ವ್ಯಾಲ್ಯೂ - ಎರಡರ ನಡುವಿನ ವ್ಯತ್ಯಾಸ ತೆಳುವಾಗುತ್ತಿದೆ.

ನನ್ನ ಪ್ರಕಾರ ಒತ್ತಡವನ್ನು ದೂರವಿಡುವ ಮತ್ತೂ ಒಂದು ಪರಿಣಾಮಕಾರಿ ವಿಧಾನ ಎಂದರೆ ಹವ್ಯಾಸ. ಪ್ರತಿಯೊಬ್ಬರಿಗೂ ಏನಾದರೊಂದು ಹವ್ಯಾಸ ಜೊತೆಗಿರಲೇಬೇಕು. ಪೇಂಟಿಂಗ್, ಹಾಡು ಕೇಳುವುದು, ನೃತ್ಯ – ಏನೇ ಇರಬಹುದು. ಹಾಗೆಂದು ಕಲೆಯನ್ನು ಕಲಿಯಲೇಬೇಕು ಎಂದೇನಿಲ್ಲ. ಕುತೂಹಲವಿರುವ ಕಲಾಸ್ವಾದಕರಾಗಬಹುದಲ್ಲ. ಒಳ್ಳೆಯ ಸಿನಿಮಾ, ಇತಿಹಾಸ, ಭಾಷೆ – ಎಷ್ಟೊಂದು ವಿಷಯಗಳಿವೆ ಹವ್ಯಾಸಕ್ಕೆ!

ಆಸಕ್ತಿ, ಕಲಿಯುವ ಪ್ರೀತಿ ಇದ್ದರೆ ವ್ಯಕ್ತಿತ್ವಕ್ಕೆ ಗರಿ. ಎಲ್ಲೇ ಹೋದರೂ ನಾನು ಹೇಳುತ್ತಿರುತ್ತೇನೆ, ‘ಮಗುವಿಗೆ ನಾವು ಕೊಡುವ ದೊಡ್ಡ ಉಡುಗೊರೆ ಅಂದರೆ ಹವ್ಯಾಸಕ್ಕೆ ಪ್ರೇರೇಪಿಸುವುದು’ ಎಂದು. ಕಲೆಯಿಂದ ಹೃದಯದ ಭಾಷೆ ತಿಳಿಯುತ್ತದೆ. ಆಗ ಮನಸ್ಸನ್ನು ಶಾಂತಗೊಳಿಸುವ ಕಲೆಯೂ ಒಲಿಯುತ್ತದೆ. ಯಾವುದಾದರೂ ಕೆಲಸವಿರಲಿ, ಶ್ರದ್ಧೆ ಇರಬೇಕು. ಆಗ ಯಾವುದೂ ನಮ್ಮನ್ನು ಕದಲಿಸುವುದಿಲ್ಲ. ಎಂಥ ಸಮಸ್ಯೆಯನ್ನು ಸಮಚಿತ್ತದಿಂದ ಸ್ವೀಕರಿಸುವುದರಲ್ಲೇ ಇರುವುದು ಒತ್ತಡ ನಿರ್ವಹಣೆಯ ಗುಟ್ಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.