ADVERTISEMENT

ಚಾಮುಂಡಿ ಬೆಟ್ಟ ಹತ್ತುತ್ತ, ಕೆರೆಯಲ್ಲಿ ಈಜುತ್ತ... ಅಜಿತ್ ತಾಂಡೂರ್

ಸ್ಮಿತಾ ಶಿರೂರ
Published 25 ನವೆಂಬರ್ 2018, 19:45 IST
Last Updated 25 ನವೆಂಬರ್ 2018, 19:45 IST
   

ಇಲ್ಲೊಂದು ಗೆಳೆಯರ ಗುಂಪು. ಇವರೆಲ್ಲರಿಗೂ ಬೆಳಗು ಆರಂಭವಾಗುವುದೇ ಓಟದಿಂದ. ಐದು ಕಿ.ಮೀ, 10 ಕಿ.ಮೀ... ಒಮ್ಮೊಮ್ಮೆ 15 ಕಿ.ಮೀ ದಾಟುವುದೂ ಇದೆ. ಬುಧವಾರ ಮೈಸೂರಿನ ಮಾನಸಗಂಗೋತ್ರಿಯ ಆವರಣದಲ್ಲಿ ಓಡಿದರೆ, ಶುಕ್ರವಾರ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ, ಭಾನುವಾರ ಚಾಮುಂಡಿಬೆಟ್ಟದ 1,000 ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು ಅಥವಾ ಬೆಟ್ಟದ ಸುತ್ತಲೂ ಓಡುವುದು.

ವಿದೇಶಗಳಲ್ಲಿ ಜನಪ್ರಿಯವೆನಿಸಿದ ‘ಲಾಂಗ್ ಡಿಸ್ಟನ್ಸ್’ ಓಟದ ರುಚಿಯನ್ನು ಮೈಸೂರಿಗರಿಗೆ ನೀಡಿ ಖ್ಯಾತಗೊಳಿಸಿದವರು ಅಜಿತ್ ತಾಂಡೂರ್. ಈಚೆಗೆ ನಡೆದ ‘ಬೆಂಗಳೂರು ಮ್ಯಾರಥಾನ್’ನಲ್ಲಿ ದ್ವಿತೀಯ ಸ್ಥಾನ ಗಳಿಸಿದ ಉದ್ಯಮಿ ಅಜಿತ್ ಈ ಓಟವನ್ನು ಆರಂಭಿಸಿದ್ದು 48ನೇ ವಯಸ್ಸಿನಲ್ಲಿ. ಒಮ್ಮೆ ದೂರ ಓಟ ಹಾಗೂ ಸೈಕ್ಲಿಂಗ್‌ನ ಮಹತ್ವವನ್ನು ಕಂಡುಕೊಂಡ ಇವರು ತಮ್ಮ ಸ್ನೇಹಿತರನ್ನೂ ಕರೆದೊಯ್ಯತೊಡಗಿದರು. ಪಾಂಡವಪುರ ತಾಲ್ಲೂಕಿನ ತೊಣ್ಣೂರು ಕೆರೆಯಲ್ಲಿ ಓಪನ್ ವಾಟರ್ ಸ್ವಿಮಿಂಗ್‌ಗೆ ಒಮ್ಮೆ 30 ಮಂದಿ ಗೆಳೆಯರ ಬಳಗ ಹೋಯಿತು. ಅಲ್ಲಿಂದ ಆ ವಿಶಾಲವಾದ ಕೆರೆಯ ಈಜು ಸಹ ಈ ಬಳಗದ ಚಟುವಟಿಕೆಗಳ ಅವಿಭಾಜ್ಯ ಅಂಗವಾಗಿದೆ.

ದಿನವೂ ಓಟ, ವೀಕೆಂಡ್‌ನಲ್ಲಿ ಸ್ವಿಮಿಂಗ್‌, ಸೈಕ್ಲಿಂಗ್‌ ನಡೆಸುವ ಈ ಗೆಳೆಯರು 2012ರಲ್ಲಿ ‘ಎಂಡ್ಯುರೊ ಗ್ರೂಪ್’ ಆರಂಭಿಸಿ ವರ್ಷಕ್ಕೆ ಮೂರು ಪ್ರಮುಖ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುತ್ತಿದ್ದಾರೆ. ಅನಿಲ್ ಆಲೂರ್, ವಿಜಯ್, ಅಭಿಲಾಷ್ ಕಶ್ಯಪ್, ಪ್ರಜ್ವಲ್ ಪ್ರಸಾದ್ ಹಾಗೂ ನವೀನ್ ಈ ಬಳಗದ ಇನ್ನಿತರ ಸದಸ್ಯರು. ಇವರ ಜೊತೆ ನಿಯಮಿತವಾಗಿ ಓಡುವವರ ಸಂಖ್ಯೆ 50 ದಾಟಿದೆ. ಸರ್ಕಾರಿ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು, ವೈದ್ಯರು, ಐಟಿ ಕ್ಷೇತ್ರದವರು, ವಕೀಲರು, ಪತ್ರಕರ್ತರು ಸೇರಿದಂತೆ ಎಲ್ಲ ಕ್ಷೇತ್ರದವರೂ ವಯಸ್ಸಿನ ಭೇದವಿಲ್ಲದೇ ಬೆಳಗಿನ ಓಟದಲ್ಲಿ ಜೊತೆಯಾಗುತ್ತಾರೆ. ಹೊಸ ಸದಸ್ಯರು ಸಲಹೆ–ಸೂಚನೆಗಳನ್ನು ಪಡೆದು ನಿಯಮಿತ ಓಟದಲ್ಲಿ ಪಾಲ್ಗೊಳ್ಳುತ್ತಾರೆ.

ADVERTISEMENT

2009ರಿಂದ ಮೈಸೂರ್‌ರನ್ನರ್ಸ್‌ ಹೆಸರಿನಲ್ಲಿ ‘ಲಾಂಗ್ ಡಿಸ್ಟನ್ಸ್’ ಓಟವನ್ನು ಇದೇ ಗೆಳೆಯರ ಗುಂಪು ಆಯೋಜಿಸಲು ಆರಂಭಿಸಿತ್ತು. ಈಗ ‘ಎಂಡ್ಯುರೊ ಗ್ರೂಪ್’ ವತಿಯಿಂದ ಪ್ರತಿ ವರ್ಷ 3 ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಆಗಸ್ಟ್‌ನಲ್ಲಿ ‘ತೊಣ್ಣೂರು ಸ್ವಿಮಾಥಾನ್’, ಸೆಪ್ಟೆಂಬರ್‌ನಲ್ಲಿ ‘ಟ್ರೈ ತೊಣ್ಣೂರ್’ ಹಾಗೂ ನವೆಂಬರ್‌ನಲ್ಲಿ ‘ಚಾಮುಂಡಿ ಹಿಲ್‌ ಚಾಲೇಂಜ್’ ನಡೆಸಲಾಗುತ್ತಿದೆ.

‘ತೊಣ್ಣೂರು ಸ್ವಿಮಾಥಾನ್’ನಲ್ಲಿ 1.5 ಕಿ.ಮೀ ಈಜು, 40 ಕಿ.ಮೀ ಸೈಕ್ಲಿಂಗ್ ಹಾಗೂ 10 ಕಿ.ಮೀ ಓಟ ಇರುತ್ತದೆ. ‘ಟ್ರೈತೊಣ್ಣೂರ್’ ದೇಶದಲ್ಲಿ ನಡೆಯುವ ಕೆಲವೇ ‘ಓಪನ್ ವಾಟರ್’ ಈಜು ಸ್ಪರ್ಧೆಗಳಲ್ಲಿ ಒಂದು. ‘ಚಾಮುಂಡಿ ಹಿಲ್‌ ಚಾಲೆಂಜ್’ನಲ್ಲಿ 6.5 ಕಿ.ಮೀನಷ್ಟು ರಸ್ತೆ, 500 ಮೀಟರ್‌ನಷ್ಟು ಮೆಟ್ಟಿಲುಗಳು, 3.5 ಕಿ.ಮೀನಷ್ಟು ಅರಣ್ಯದ ಹಾದಿ ಇರುತ್ತದೆ. 2012ರಲ್ಲಿ ಇದು ಆರಂಭವಾದಾಗ ಪಾಲ್ಗೊಂಡ ಓಟಗಾರರು 200. ಈ ವರ್ಷದ ಚಾಲೆಂಜ್‌ನಲ್ಲಿ ಪಾಲ್ಗೊಂಡವರು 450 ಮಂದಿ! ಗೋವಾದಿಂದ 15, ಚೆನ್ನೈನ 15 ಸ್ಪರ್ಧಿಗಳು ಬಂದಿದ್ದರು. ಹೈದರಾಬಾದ್, ಪುಣೆ, ದೆಹಲಿಯಿಂದಲೂ ಪ್ರತಿವರ್ಷ ಸ್ಪರ್ಧಿಗಳು ಬರುತ್ತಿದ್ದಾರೆ.

‘ಯಾವುದೇ ವಿಧದ ಕಸರತ್ತು ಆರೋಗ್ಯಕ್ಕೆ ಉತ್ತಮ. ಫಿಟ್‌ನೆಸ್‌ ಹಾಗೂ ಉಲ್ಲಾಸದಿಂದಿರಲು ನಾನು ಕಂಡುಕೊಂಡ ಉತ್ತಮ ಮಾರ್ಗವಿದು. ನನ್ನ ಖುಷಿಯನ್ನೇ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದೇನೆ. ಪ್ರತಿ ವರ್ಷ ನೂರಾರು ಹೊಸಬರು ಸ್ಪರ್ಧಿಸಲು ಇಚ್ಛಿಸಿ ಬರುತ್ತಾರೆ. ಎಲ್ಲರೂ ತರಬೇತಿ ಹೊಂದಿದವರಾಗಿರುವುದಿಲ್ಲ. ಕೆಲವರಿಗೆ ದಿನವೂ ಓಡಿ ಅಭ್ಯಾಸವೂ ಇರುವುದಿಲ್ಲ. ಆದರೆ, ನಮ್ಮಿಂದ ಮಾರ್ಗದರ್ಶನ ಪಡೆದು ಮರು ವರ್ಷ ಪ್ರಶಸ್ತಿ ಗಳಿಸಿದವರೂ ಇದ್ದಾರೆ’ ಎಂದು ಅಜಿತ್‌ ವಿವರಿಸಿದರು.

**

2008ರಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ 21 ಕೀ.ಮೀ ದೂರದ ‘ಮಿಡ್‌ನೈಟ್‌ ಮ್ಯಾರಥಾನ್’ನಲ್ಲಿ ಪಾಲ್ಗೊಂಡ ಅಜಿತ್ ತಾಂಡೂರ್‌ ಅವರಿಗೆ ಅಲ್ಲಿಂದ ಓಟದ ಆಸಕ್ತಿ ಬೆಳೆಯಿತು. ನಿರಂತರವಾಗಿ ಹಾಫ್ ಮ್ಯಾರಥಾನ್, ಫುಲ್ ಮ್ಯಾರಥಾನ್‌ಗಳಲ್ಲಿ ಪಾಲ್ಗೊಳ್ಳತೊಡಗಿದರು. 2016ರಲ್ಲಿ ಮಂಡ್ಯದಿಂದ ಮೈಸೂರಿನವರೆಗೆ 50 ಕಿ.ಮೀ ಓಡಿದರು. ಅದರ ನಂತರ ಬೆಂಗಳೂರಿನಲ್ಲಿ 82 ಕಿ.ಮೀ ದೂರದ ಸ್ಟೇಡಿಯಂ ರನ್ ಪೂರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.