ADVERTISEMENT

ಸಿಟ್ಟೇ ನನಗೆ ಶತ್ರು

ಏನಾದ್ರೂ ಕೇಳ್ಬೋದು

ಸುನೀತಾ ರಾವ್
Published 19 ಜುಲೈ 2019, 19:30 IST
Last Updated 19 ಜುಲೈ 2019, 19:30 IST
angry
angry   

ನನಗೆ 28 ವರ್ಷ. ನನಗೆ ಕೆಲವೊಂದು ದೈಹಿಕ ಸಮಸ್ಯೆಗಳಿವೆ. ಕೆಲವೊಮ್ಮೆ ವಿಪರೀತ ಸಿಟ್ಟು ಬರುತ್ತದೆ. ಸಿಟ್ಟು ಬಂದಾಗ ನನ್ನ ಕೈ ಬಾಯಿ ಎರಡಕ್ಕೂ ನಿಯಂತ್ರಣವಿರುವುದಿಲ್ಲ. ಮನೆಯಲ್ಲಿ ಇರುವವರಿಗೆ ಕೆಟ್ಟದಾಗಿ ಬೈಯುವುದು, ದೇವರ ಹೆಸರಿನಲ್ಲಿ ಶಾಪ ಹಾಕುವುದು, ಸಾಯುತ್ತೇನೆ ಎಂದು ಹೆದರಿಸುವುದು ಮಾಡುತ್ತೇನೆ. ಅದೇ ಸಿಟ್ಟು ಕಳೆದ ಮೇಲೆ ಅವರನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ಮನೆಯವರಿಗೆ ಕೆಟ್ಟದಾಗಲೀ ಎಂದು ನಾನೇ ಶಾಪ ಹಾಕುತ್ತೇನಲ್ಲಾ, ನನಗೇಕೆ ಇಷ್ಟೊಂದು ಸಿಟ್ಟು ಎಂದು ಆಮೇಲೆ ಅನ್ನಿಸುತ್ತದೆ. ನನ್ನ ವರ್ತನೆ ಸರಿ ಹೊಂದಲು ಏನು ಮಾಡಬೇಕು?

ರಜನಿ, ದಾವಣಗೆರೆ

ಈಗ ನಿಮಗೆ ನಿಮ್ಮ ಸಮಸ್ಯೆಯ ಬಗ್ಗೆ ಅರಿವಾಗಿದೆ. ನೀವಾಗಿಯೇ ನಿಮ್ಮನ್ನು ಬದಲಾಯಿಸಿಕೊಳ್ಳಿ. ನೀವು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿರಬೇಕು ಎಂದರೆ ನಿಮಗೆ ಕಠಿಣ ದೈಹಿಕ ಹಾಗೂ ಮಾನಸಿಕ ಶ್ರಮ ತುಂಬಾ ಮುಖ್ಯ. ನಿಮ್ಮ ಮನಸ್ಸು ಶಾಂತವಾಗಲು ಪ್ರತಿದಿನ ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿ. ನಿಮ್ಮನ್ನು ಯಾವ ಅಂಶ ಪ್ರಚೋದಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಅದನ್ನು ನಿರ್ಲಕ್ಷ್ಯ ಮಾಡಿ. ಆ ರೀತಿ ಮಾಡುವುದರಿಂದ ನಿಮ್ಮ ಸಿಟ್ಟನ್ನು ಕಡಿಮೆ ಮಾಡಿಕೊಳ್ಳಬಹುದು. ಸ್ವ ಸಹಾಯಕ್ಕೆ ನೆರವಾಗುವ ಕೆಲವು ಪುಸ್ತಕಗಳನ್ನು ಓದಿ. ಮಂತ್ರಗಳನ್ನು ಪಠಿಸುವುದರಿಂದಲೂ ನಿಮಗೆ ಸಹಾಯವಾಗಬಹುದು. ಈ ಎಲ್ಲವನ್ನೂ ಮಾಡಿದ ಮೇಲೂ ನಿಮ್ಮ ವರ್ತನೆ ಹಾಗೇ ಇದ್ದರೆ ನೀವು ಮಾನಸಿಕ ತಜ್ಞರನ್ನು ಭೇಟಿ ಮಾಡುವುದು ಉತ್ತಮ. ಅದರಿಂದ ನಿಮಗೆ ಸಹಾಯವಾಗಬಹುದು.

ADVERTISEMENT

ನನಗೆ 39 ವರ್ಷ. ಮದುವೆಯಾಗಿ 12 ವರ್ಷವಾಗಿದೆ. 6ನೇ ತರಗತಿ ಓದುವ ಮಗನಿದ್ದಾನೆ. ಕಳೆದ ವರ್ಷ ನಮ್ಮ ದಾಂಪತ್ಯದಲ್ಲಿ ವೈಮನಸ್ಸು ಉಂಟಾಗಿ ನನ್ನ ಹೆಂಡತಿ ನನ್ನ ಜೊತೆ ಬದುಕಲು ಇಷ್ಟ ಪಡುತ್ತಿಲ್ಲ. ನಮ್ಮಿಬ್ಬರ ನಡುವಿನ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮನೆಯ ಹಿರಿಯರು ಅನೇಕ ಬಾರಿ ಅವಳಿಗೆ ಸಾಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ನನಗೆ ಜೀವನದ ಬಗ್ಗೆ ಹತಾಶೆಯಾಗುತ್ತಿದೆ. ಅವಳಿಗೆ ವಿಚ್ಛೇದನ ನೀಡುವುದೋ ಅಥವಾ ಈ ಸಮಸ್ಯೆಯೊಂದಿಗೆ ಅವಳ ಜೊತೆ ಬದುಕುವುದೋ ತಿಳಿಯುತ್ತಿಲ್ಲ. ಅವಳನ್ನು ಆಪ್ತಸಮಾಲೋಚಕರ ಬಳಿ ಕರೆದುಕೊಂಡು ಹೋಗೋಣ ಎಂದರೆ ಅಲ್ಲಿಗೂ ಬರುತ್ತಿಲ್ಲ. ನನಗೆ ಒಂಟಿ ಎನ್ನಿಸುತ್ತಿದೆ.

ಹೆಸರು, ಊರು ಬೇಡ

ಸಂಸಾರದಲ್ಲಿ ಸಮಯ, ಆರೋಗ್ಯಕರ ಸಂವಹನ, ಕಾಳಜಿ, ಪ್ರೀತಿ ಹಾಗೂ ಒಬ್ಬರಿಗೊಬ್ಬರು ಗೌರವ ನೀಡುವುದರಿಂದ ಬಾಂಧವ್ಯ ವೃದ್ಧಿಯಾಗುತ್ತದೆ. ನಿಮ್ಮ ಪತ್ನಿಯೊಂದಿಗೆ ಪ್ರೀತಿ, ಕಾಳಜಿಯಿಂದ ಮಾತನಾಡಿ. ಅಹಂಕಾರವನ್ನು ಬಿಟ್ಟು ಅವರೊಂದಿಗೆ ಮಾತನಾಡಿ. ನಿಮ್ಮ ಮಕ್ಕಳ ಬಗ್ಗೆ ಯೋಚಿಸಿ. ಅವರನ್ನು ಮರಳಿ ಕರೆ ತನ್ನಿ. ಸಂಬಂಧದಲ್ಲಿ ಪಾರದರ್ಶಕತೆ ಇರಲಿ. ಹಾಗಿದ್ದಾಗ ತಪ್ಪುಗ್ರಹಿಕೆಗೆ ಜಾಗವಿರುವುದಿಲ್ಲ. ಅವರ ತಂದೆ–ತಾಯಿಗಳ ಜೊತೆ ಮಾತನಾಡಿ. ನಿಮ್ಮ ಕುಟುಂಬವನ್ನು ನೀವು ಕಾಳಜಿ ಹಾಗೂ ಪ್ರೀತಿಯಿಂದ ನೋಡಿಕೊಳ್ಳುತ್ತೀರಿ ಎಂದು ಅವರಿಗೆ ಭರವಸೆ ನೀಡಿ.

ನಾನು ಒಂದು ಹುಡುಗನನ್ನು 9 ವರ್ಷದಿಂದ ಪ್ರೀತಿ ಮಾಡುತ್ತಿದ್ದೇನೆ. ಅವನು ನನ್ನನ್ನು ಪ್ರೀತಿಸುತ್ತಿದ್ದ. ಆದರೆ ಇತ್ತೀಚಿಗೆ ಅವನ ನಡವಳಿಕೆ ಬದಲಾಗಿದೆ. ಮೊದಲಿನಷ್ಟು ಫೋನ್, ಮೆಸೇಜ್ ಮಾಡುತ್ತಿಲ್ಲ. ಈಗೀಗ ಮೆಸೇಜ್, ಕಾಲ್ ಮಾಡುವುದು ಬೇಡ ಎನ್ನುತ್ತಾನೆ. ಆದರೆ ಅವನು ಯಾವಾಗಲೂ ಆನ್‌ಲೈನ್‌ ಇರುತ್ತಾನೆ, ಅವನ ಪೋನ್ ಸದಾ ಬ್ಯುಸಿ ಬರುತ್ತದೆ. ಯಾರ ಕಾಲ್ ಕೇಳಿದರೆ ಅಣ್ಣ ಮಾಡಿದ್ದ ಎನ್ನುತ್ತಾನೆ. ಯಾವಾಗಲೂ ಅಣ್ಣ ಯಾಕೆ ಕಾಲ್ ಮಾಡುತ್ತಾನೆ ಎಂಬುದು ನನ್ನ ಚಿಂತೆ. ಇಷ್ಟು ವರ್ಷ ಚೆನ್ನಾಗಿದ್ದ ನಮ್ಮಿಬ್ಬರ ಮಧ್ಯೆ ಈಗ ಯಾರು ಬಂದಿರಬಹುದು ಎಂಬ ಚಿಂತೆ ಕಾಡುತ್ತಿದೆ. ಇದರಿಂದ ಸದಾ ಕೋಪ, ಜಗಳ. ಆನ್‌ಲೈನ್ ಯಾಕೆ ಕೇಳಿದರೆ ಯಾರೋ ಹೈಸ್ಕೂಲ್ ಫ್ರೆಂಡ್ಸ್ ಮೆಸೇಜ್ ಮಾಡ್ತಾರೆ ಅಂತಾನೆ, ಯಾರು ಅವರ ನಂಬರ್ ಕೊಡು ಎಂದರೆ ಕೊಡುವುದಿಲ್ಲ. ಅವನು ಯಾಕೆ ಹೀಗೆ ಬದಲಾಗಿದ್ದಾನೆ ತಿಳಿಯುತ್ತಿಲ್ಲ. ಇದರಿಂದ ಯೋಚಿಸಿ ಯೋಚಿಸಿ ಸಾಯಬೇಕು ಎನ್ನಿಸುತ್ತಿದೆ. ನನ್ನ ಜೀವನ ಹಾಳಾಗುತ್ತಿದೆ ಎನ್ನಿಸುತ್ತಿದೆ. ನಾನು ಏನು ಮಾಡಲಿ.

ಹೆಸರು, ಊರು ಬೇಡ

ನೀವು ಇಲ್ಲಿ ನಿಮ್ಮ ವಯಸ್ಸು, ವಿದ್ಯಾಭ್ಯಾಸ ಹಾಗೂ ಕೆಲಸದ ಬಗ್ಗೆ ತಿಳಿಸಿಲ್ಲ. ಜೀವನ ಎನ್ನುವುದು ಮದುವೆ ಹಾಗೂ ಪ್ರೀತಿಯ ಮೇಲೆ ನಿಂತಿಲ್ಲ. ಪ್ರೇಮ ವಿಫಲವಾದ ತಕ್ಷಣ ಪ‍್ರಪಂಚವೇ ಮುಗಿಯಿತು ಎಂಬ ಅರ್ಥವಲ್ಲ. ಮೊದಲು ನಿಮ್ಮ ಓದು ಹಾಗೂ ಜೀವನದ ಗುರಿಯ ಮೇಲೆ ಗಮನಹರಿಸಿ. ಯಾವಾಗ ನೀವು ಸ್ವತಂತ್ರರಾಗುತ್ತೀರೋ ಆಗ ನಿಮಗೆ ಜೀವನ ಹಾಗೂ ಸಂಬಂಧಗಳ ಬಗ್ಗೆ ಸ್ವಷ್ಟತೆ ಮೂಡುತ್ತದೆ. ನಿಮ್ಮ ಆಂತರಿಕ ಶಕ್ತಿಯೊಂದಿಗೆ ಕೆಲಸ ಮಾಡಿ. ಯೋಗ ತರಗತಿಗೆ ಸೇರಿ ಹಾಗೂ ಪ್ರತಿದಿನ ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿ. ಆಗ ನಿಮ್ಮ ಮನಸ್ಸು ಶಾಂತವಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನಿಮ್ಮ ಮನಸ್ಸಿನಲ್ಲಿ ಸ್ಪಷ್ಟತೆ ಮೂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.