ADVERTISEMENT

ತಲೆಗೂದಲು ಬೆಳವಣಿಗೆಗೆ ಈರುಳ್ಳಿ ರಸ, ಲೋಳೆಸರ

ಡಾ.ಬ್ರಹ್ಮಾನಂದ ನಾಯಕ
Published 2 ಅಕ್ಟೋಬರ್ 2020, 19:30 IST
Last Updated 2 ಅಕ್ಟೋಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೂದಲು, ತ್ವಚೆ, ತೂಕ ಇಳಿಕೆ– ಈ ಮೂರು ವಿಷಯಗಳು ಯಾವತ್ತೂ ಚರ್ಚೆಯಲ್ಲಿರುವಂಥವು. ಕೂದಲು ಉದುರುವುದು ಹಿಂದೆ ವಯಸ್ಸಾಗುವುದರ ಸಂಕೇತವಾಗಿತ್ತು. ಆದರೆ ಈಗ ಹದಿಹರೆಯದಲ್ಲೇ ಶುರುವಾಗಿ 40 ತಲುಪುವುದರೊಳಗೇ ತಲೆಬುರುಡೆ ಬೋಳಾಗಿರುತ್ತದೆ.

ಇದಕ್ಕೆ ಕಾರಣಗಳು ಹಲವಾರು. ಔಷಧ ಸೇವನೆ, ಒತ್ತಡ, ಪೌಷ್ಟಿಕಾಂಶ ಹಾಗೂ ನಿದ್ರೆಯ ಕೊರತೆ, ಕೂದಲಿಗೆ ಅತಿಯಾದ ಶಾಂಪೂ, ಬಣ್ಣದ ಬಳಕೆ, ಅನುವಂಶೀಯತೆ, ವಿಕಿರಣ ಚಿಕಿತ್ಸೆ.. ಇವು ಕೆಲವು ಕಾರಣಗಳು. ಆದರೆ ತಲೆಗೂದಲು ಪೂರ್ತಿ ಉದುರುವವರೆಗೆ ಸುಮ್ಮನಿರುವುದಕ್ಕಿಂತ ಮೊದಲೇ ಕಾಳಜಿ ವಹಿಸುವುದು ಸೂಕ್ತ. ತಲೆಬುರುಡೆಗೆ ನಿತ್ಯ ಎರಡು– ಮೂರು ಸಲ ಮಸಾಜ್ ಬೇಕು. ಮರದ ಹೆಣಿಗೆಯಿಂದ ಬಾಚುವುದರಿಂದ ಕೂದಲಿನ ಬುಡಕ್ಕೆ ಹೆಚ್ಚು ರಕ್ತ ಸಂಚಾರವಾಗಿ ಕೂದಲಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆ.

ಲೋಳೆಸರದಲ್ಲಿರುವ ಪ್ರೊಟಿಯೊಲಿಟಿಕ್ ಕಿಣ್ವ ಬುರುಡೆಯಲ್ಲಿನ ಕೋಶಗಳಿಗೆ ಶಕ್ತಿ ನೀಡಿ ತಲೆಗೂದಲಿನ ಬೆಳವಣಿಗೆಗೆ ಒತ್ತು ನೀಡುತ್ತದೆ. ಜೊತೆಗೆ ಹೊಟ್ಟು ಹಾಗೂ ತುರಿಕೆಯನ್ನು ಕಡಿಮೆ ಮಾಡುತ್ತದೆ.

ADVERTISEMENT

ಒಂದು ಕಪ್‌ ಲೋಳೆಸರಕ್ಕೆ ಎರಡು ಟೇಬಲ್‌ ಚಮಚ ಹರಳೆಣ್ಣೆ ಹಾಕಿ. ಇದನ್ನು ತಲೆಬುರುಡೆಗೆ ಹಾಗೂ ಕೂದಲಿಗೆ ಹಚ್ಚಿ 1–2 ತಾಸು ಬಿಟ್ಟು ತೊಳೆಯಿರಿ. ಇದು ತಲೆಗೂದಲಿಗೆ ಅತ್ಯುತ್ತಮ ಮಾಸ್ಕ್‌. ಸಮ ಪ್ರಮಾಣದಲ್ಲಿ ಲೋಳೆಸರ ಹಾಗೂ ಈರುಳ್ಳಿ ರಸ ಮಿಶ್ರ ಮಾಡಿ ತಲೆಬುರುಡೆಗೆ ಹಚ್ಚಿ. 45 ನಿಮಿಷಗಳ ನಂತರ ತೊಳೆಯಿರಿ. ವಾರಕ್ಕೆ ಎರಡು ಬಾರಿ ಮಾಡಿದರೆ ಕೂದಲು ಉದುರಿದ ಜಾಗದಲ್ಲಿ ಹೊಸ ಕೂದಲು ಹುಟ್ಟಲು ಶುರುವಾಗುತ್ತದೆ.

ಅರ್ಧ ಕಪ್‌ ಲೋಳೆಸರಕ್ಕೆ ಗ್ರೀನ್‌ ಟೀ ಸೇರಿಸಿ. ಇದನ್ನು ತಲೆಬುರುಡೆಗೆ ಮಸಾಜ್‌ ಮಾಡಿ 10–15 ನಿಮಿಷ ಬಿಟ್ಟು ತೊಳೆದರೆ ಕೂದಲು ಉದುರುವುದು ನಿಲ್ಲುತ್ತದೆ.

ಈರುಳ್ಳಿಯಲ್ಲಿ ಖನಿಜಾಂಶಗಳು ಹಾಗೂ ಸಲ್ಫರ್ ಜಾಸ್ತಿ. ಇದು ಕೂದಲು ಸೀಳು ಬಿಡುವುದು ಹಾಗೂ ತೆಳುವಾಗುವುದನ್ನು ನಿಲ್ಲಿಸುತ್ತದೆ. ಹಾಗೆಯೇ ತಲೆಬುರುಡೆಗೆ ಸೋಂಕಾಗುವುದು ಮತ್ತು ಹೊಟ್ಟಾಗುವುದನ್ನು ತಡೆಯುತ್ತದೆ.

ಈರುಳ್ಳಿ ರಸ ತಯಾರಿಸುವುದು ಹೇಗೆ?

ಒಂದೆರಡು ಈರುಳ್ಳಿ ತೆಗೆದುಕೊಂಡು ಮಿಕ್ಸಿಯಲ್ಲಿ ರುಬ್ಬಿ. ಇದನ್ನು ಮಸ್ಲಿನ್‌ ಬಟ್ಟೆಯಲ್ಲಿ ಸೋಸಿ. ಈ ರಸದಿಂದ ತಲೆಬುರುಡೆಗೆ ವೃತ್ತಾಕಾರದಲ್ಲಿ ಮಸಾಜ್‌ ಮಾಡಿ. ಒಂದು ತಾಸು ಬಿಟ್ಟು ಶಾಂಪೂವಿನಿಂದ ತೊಳೆಯಿರಿ. ವಾರಕ್ಕೊಮ್ಮೆ ಮಾಡುತ್ತ ಹೋದರೆ ಒಳ್ಳೆಯ ಫಲಿತಾಂಶ ಲಭ್ಯ.

ಮೊಟ್ಟೆ ಮತ್ತು ಲೋಳೆಸರ

ಎರಡು ಮೊಟ್ಟೆಗಳ ಬಿಳಿ ಭಾಗ ತೆಗೆದುಕೊಂಡು ಅದಕ್ಕೆ ಎರಡು ಟೇಬಲ್‌ ಚಮಚ ಲೋಳೆಸರದ ಜೆಲ್‌ ಮಿಶ್ರ ಮಾಡಿ. ಅದನ್ನು ತಲೆಕೂದಲಿನ ಬುಡಕ್ಕೆ ಹಚ್ಚಿ. ಒಂದು ತಾಸು ಬಿಟ್ಟು ತೊಳೆಯಿರಿ. ವಾರಕ್ಕೆ ಎರಡು ಬಾರಿ ಮಾಡುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.

ಮದರಂಗಿ ಪುಡಿಯನ್ನು ನೀರು ಅಥವಾ ಚಹಾ ಡಿಕಾಕ್ಷನ್‌ನಲ್ಲಿ ರಾತ್ರಿ ನೆನೆ ಹಾಕಿ. ಬೆಳಿಗ್ಗೆ ಅದಕ್ಕೆ ಮೊಟ್ಟೆಯನ್ನು ಸೇರಿಸಿ ಕಲೆಸಿ. ತಲೆಗೂದಲಿಗೆ ಹಚ್ಚಿ ಒಂದ ತಾಸು ಬಿಟ್ಟು ತೊಳೆಯಿರಿ.

ಇದೇ ರೀತಿ ಮೊಟ್ಟೆಯ ಬಿಳಿ ಭಾಗಕ್ಕೆ 2 ಟೀ ಚಮಚ ಕೊಬ್ಬರಿ ಎಣ್ಣೆ ಸೇರಿಸಿ ಹಚ್ಚಿಕೊಳ್ಳಬಹುದು. ಹಾಗೆಯೇ ಮೊಟ್ಟೆ, ಬಾಳೆಹಣ್ಣು ಹಾಗೂ ಆಲಿವ್‌ ಎಣ್ಣೆ ಮಿಶ್ರಣವನ್ನು ಲೇಪಿಸಿಕೊಳ್ಳಬಹುದು.

(ಲೇಖಕ: ಆಯುರ್ವೇದ ವೈದ್ಯ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.