ADVERTISEMENT

ಎದೆಹಾಲು ದಾನ ಹೇಗೆ?

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 22:02 IST
Last Updated 19 ಸೆಪ್ಟೆಂಬರ್ 2025, 22:02 IST
<div class="paragraphs"><p>ಜ್ವಾಲಾ ಗುಟ್ಟಾ</p></div>

ಜ್ವಾಲಾ ಗುಟ್ಟಾ

   

ಎದೆಹಾಲು ಅಮೃತಕ್ಕೆ ಸಮಾನ ಎನ್ನುವ ಮಾತಿದೆ. ಮಗುವಿಗೆ ಆರು ತಿಂಗಳು ಕಡ್ಡಾಯವಾಗಿ ಎದೆಹಾಲನ್ನಷ್ಟೇ ಉಣಿಸಬೇಕು ಎನ್ನುತ್ತದೆ ವೈದ್ಯಲೋಕ. ತಮಿಳುನಾಡಿನ 33 ವರ್ಷದ ಮಹಿಳೆ ಎಂ. ಸೆಲ್ವ ಬೃಂದಾ 22 ತಿಂಗಳುಗಳಲ್ಲಿ 300 ಲೀಟರ್‌ ಎದೆಹಾಲು ದಾನ ಮಾಡುವ ಮೂಲಕ ಇದೇ ವರ್ಷದ ಜೂನ್‌ ತಿಂಗಳಿನಲ್ಲಿ ದಾಖಲೆ ಬರೆದಿದ್ದರು. ಅವಧಿಪೂರ್ವ ಜನನ ಮತ್ತು ತೀವ್ರ ಅನಾರೋಗ್ಯಕ್ಕೆ ಒಳಗಾದ ನೂರಾರು ಮಕ್ಕಳ ಜೀವ ಉಳಿಸಲು ಈ ಹಾಲು ಅಮೃತದಂತೆ ಒದಗಿಬಂದಿತ್ತು. ಇದೀಗ ಬ್ಯಾಂಡ್ಮಿಂಟನ್‌ ಆಟಗಾರ್ತಿ ಜ್ವಾಲಾ ಗುಟ್ಟಾ ಅವರು ಏಪ್ರಿಲ್‌ನಲ್ಲಿ ಮಗುವಿಗೆ ಜನ್ಮನೀಡಿದ್ದು, ಅಲ್ಲಿಂದ ಇಲ್ಲಿಯವರೆಗೆ ಸುಮಾರು 30 ಲೀಟರ್‌ನಷ್ಟು ಎದೆಹಾಲನ್ನು ದಾನ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಎದೆಹಾಲಿನ ದಾನದ ಮಹತ್ವದ ಬಗ್ಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಮಕ್ಕಳತಜ್ಞ ಡಾ. ವಸಂತ್‌ ಡಿ.ಎಲ್‌. ಅವರೊಂದಿಗೆ ‘ಭೂಮಿಕಾ’ ನಡೆಸಿದ ಮಾತುಕತೆ ಇಲ್ಲಿದೆ: 

ಯಾರೆಲ್ಲ ಎದೆಹಾಲು ದಾನ ಮಾಡಬಹುದು?
ಸಹಜ ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆಯಾದ ಎಲ್ಲ ತಾಯಂದಿರೂ ತಮ್ಮ ಮಗುವಿಗೆ ಅಗತ್ಯವಿರುವಷ್ಟು ಹಾಲನ್ನು ಉಣಿಸಿ, ನಂತರ ಉಳಿದದ್ದನ್ನು ದಾನ ಮಾಡಬಹುದು. ಕೆಲವೊಮ್ಮೆ ಹುಟ್ಟಿದ ಮಗು ಐಸಿಯುನಲ್ಲಿ ಇದ್ದಾಗ ಅದಕ್ಕೆ ಹಾಲುಣಿಸಲು ತಾಯಿಗೆ ಅವಕಾಶ ಇರುವುದಿಲ್ಲ, ಇನ್ನು ಕೆಲವರು ಹುಟ್ಟಿದ ಕೆಲವೇ ಗಂಟೆಗಳಲ್ಲಿ ಅಥವಾ ದಿನಗಳಲ್ಲಿ ಮಗುವನ್ನು ಕಳೆದುಕೊಂಡಿರುತ್ತಾರೆ. ಅಂತಹ ತಾಯಂದಿರು ಸಹ ಎದೆಹಾಲನ್ನು ದಾನ ಮಾಡಬಹುದು.‌

ADVERTISEMENT

ಸಾಮಾನ್ಯ ಮಹಿಳೆಯು ಎದೆಹಾಲನ್ನು ದಾನ ಮಾಡಬೇಕೆಂದರೆ ಯಾವ ಪ್ರಕ್ರಿಯೆಯನ್ನು ಅನುಸರಿಸಬೇಕು?
ದಾನ ಮಾಡಲು ಇಚ್ಛಿಸುವವರಿಗೆ ಮೊದಲು ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ಎಚ್‌ಐವಿ, ಏಡ್ಸ್‌, ಟಿ.ಬಿ.ಯಂಥ ಗಂಭೀರ ಕಾಯಿಲೆಗಳು ಇರಬಾರದು. ಬಿ.ಪಿ., ಮಧುಮೇಹ ಇರುವ ತಾಯಂದಿರು ಎದೆಹಾಲನ್ನು ದಾನ ಮಾಡಬಹುದು. ಆದರೆ, ಕೆಲವು ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರು ಮಾಡುವಂತಿಲ್ಲ. ಉದಾಹರಣೆಗೆ, ಕ್ಯಾನ್ಸರ್‌ ನಿರ್ಮೂಲನಾ ಔಷಧಿ.

ಯಾವ ಹಂತದಲ್ಲಿ ದಾನ ಮಾಡಬಹುದು?
ನಿರ್ದಿಷ್ಟ ಸಮಯ ಅಂತಿಲ್ಲ. ಹೆರಿಗೆಯಾಗಿ ಮೂರು ದಿನಗಳವರೆಗೆ, ಆರಂಭದಲ್ಲಿ ಬರುವ ಕೊಬ್ಬಿನಾಂಶ ಹೇರಳವಾಗಿರುವ ಹಾಲನ್ನು ತಮ್ಮ ಮಗುವಿಗೆ ನೀಡಬೇಕು. ಕೆಲವೊಮ್ಮೆ ತಮ್ಮ ಮಗು ಐಸಿಯುನಲ್ಲಿ ಇದ್ದು, ಅದಕ್ಕೆ ಹಾಲುಣಿಸಲು ಅವಕಾಶ ಇಲ್ಲದಿದ್ದರೆ, ಕೊಬ್ಬಿನಾಂಶವಿರುವ ಈ ಹಾಲನ್ನೂ ದಾನ ಮಾಡಲು ಅವಕಾಶವಿದೆ.

ದಾನದ ಪ್ರಕ್ರಿಯೆ ಹೇಗಿರುತ್ತದೆ?
ಬಳ್ಳಾರಿ, ವಿಜಯಪುರ, ಬೆಂಗಳೂರು, ಹಾಸನ, ಮಂಗಳೂರು, ಶಿವಮೊಗ್ಗ, ಕಲಬುರಗಿ, ಹುಬ್ಬಳ್ಳಿ ಸೇರಿದಂತೆ ಕೆಲವೆಡೆ ಸರ್ಕಾರಿ ಒಡೆತನದಲ್ಲಿರುವ ಎದೆಹಾಲಿನ ಬ್ಯಾಂಕ್‌ಗಳಿವೆ. ಇದಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಎದೆಹಾಲಿನ ಬ್ಯಾಂಕ್‌ಗಳಿವೆ. ಸಮೀಪದ ಎದೆಹಾಲಿನ ಬ್ಯಾಂಕ್‌ಗೆ ಹೋಗಿ, ತಪಾಸಣೆಗೆ ಒಳಗಾಗಿ, ನಂತರ ನಿಗದಿತ ಅರ್ಜಿ ತುಂಬಬೇಕು. ಬ್ಯಾಂಕಿಗೆ ಬಂದು ಅಲ್ಲಿಯೇ ದಾನ ಮಾಡಬೇಕು. ಬ್ರೆಸ್ಟ್‌ಪಂಪಿಂಗ್‌, ಸ್ಟರಿಲೈಸ್‌ ಮಷೀನ್‌ ಬಳಸಿ ಹಾಲು ಪಡೆಯಲಾಗುತ್ತದೆ. ಇದು ಸ್ವಯಂಪ್ರೇರಿತ ದಾನವಾಗಿರುತ್ತದೆ. ಹಾಗಾಗಿ, ಯಾವುದೇ ರೀತಿಯ ಪ್ರೋತ್ಸಾಹಧನ ನೀಡುವುದಿಲ್ಲ. ಸುರಕ್ಷತೆಯ ದೃಷ್ಟಿಯಿಂದ, ಒಮ್ಮೆ ಪಂಪ್ ಆದ ಹಾಲನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಅಗತ್ಯವಿರುವುದರಿಂದ, ಮನೆಯಲ್ಲಿಯೇ ಪಂಪ್‌ ಮಾಡಿದ ಹಾಲನ್ನು ತೆಗೆದುಕೊಳ್ಳಲು ಸರ್ಕಾರಿ ಒಡೆತನದ ಎದೆಹಾಲಿನ ಬ್ಯಾಂಕುಗಳಲ್ಲಿ ಅವಕಾಶವಿಲ್ಲ. ಸಾಮಾನ್ಯವಾಗಿ ದಿನವೊಂದಕ್ಕೆ ತಾಯಿಗೆ 500ರಿಂದ 700 ಎಂಎಲ್‌ ಹಾಲು ಉತ್ಪತ್ತಿಯಾಗುತ್ತದೆ. ಪ್ರತಿ ಎರಡು ಗಂಟೆಗಳಿಗೊಮ್ಮೆ ಎದೆಹಾಲನ್ನು ದಾನ ಮಾಡಬಹುದು. 


ಯಾವ ಮಕ್ಕಳಿಗೆ ಈ ಹಾಲು ಉತ್ತಮ ಆಯ್ಕೆ?
ನವಜಾತ ಶಿಶುವಿಗೆ ಬಹಳ ಸುಲಭವಾಗಿ ಜೀರ್ಣವಾಗುವ ರೀತಿಯಲ್ಲಿಯೇ ಎದೆಹಾಲು ಉತ್ಪತ್ತಿ ಆಗಿರುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವ ಮಗುವಿಗೆ ಅದರದೇ ತಾಯಿಯ ಹಾಲನ್ನು ಪೂರೈಸಲು ಆದ್ಯತೆ ನೀಡಲಾಗುತ್ತದೆ. ಆದರೆ, ತಾಯಿಗೂ ಅನಾರೋಗ್ಯವಿದ್ದರೆ ದಾನಿಯ ಹಾಲನ್ನು ನೀಡಲಾಗುತ್ತದೆ. ಉಸಿರಾಟದ ತೊಂದರೆ, ಮೂರ್ಛೆ ರೋಗ, ಇತರೆ ಸೋಂಕಿನ ಕಾರಣಕ್ಕೆ ಐಸಿಯುಗೆ ದಾಖಲಾಗಿರುವ ಮಕ್ಕಳಿಗೆ ಆದ್ಯತೆ ಮೇರೆಗೆ ದಾನಿಯ ಹಾಲನ್ನು ಪೂರೈಸಲಾಗುತ್ತದೆ. ತಾಯಿಗೆ ಹಾಲು ಉತ್ಪತ್ತಿಯಾಗದಿರುವಾಗ, ನವಜಾತ ಶಿಶು 1 ಕೆ.ಜಿಗಿಂತ ಕಡಿಮೆ ತೂಕವಿದ್ದಾಗ, 28 ವಾರಕ್ಕಿಂತ ಮುಂಚೆ ಹುಟ್ಟಿದ್ದಾಗ, ಅತಿಯಾದ ಕಡಿಮೆ ತೂಕದಿಂದ ಶಿಶುವಿನ ಕರುಳು ಬೆಳವಣಿಗೆ ಕಂಡಿರದಿದ್ದಾಗ... ಇಂಥ ಪ್ರಕರಣಗಳಲ್ಲಿ ನವಜಾತ ಶಿಶುವಿಗೆ ಹಸುವಿನ ಅಥವಾ ಇತರ ಬಗೆಯ ಹಾಲನ್ನು ಜೀರ್ಣಿಸಿಕೊಳ್ಳಲು ಆಗುವುದಿಲ್ಲ. ಅಂಥ ಮಕ್ಕಳಿಗೆ ದಾನಿಯ ಹಾಲು ಬೇಕಾಗುತ್ತದೆ. ತಾಯಿ ಇಲ್ಲದ ಮಗುವಿಗೂ  ಬ್ಯಾಂಕ್‌ನಲ್ಲಿರುವ ಎದೆಹಾಲನ್ನು ಒದಗಿಸುವ ವ್ಯವಸ್ಥೆ ಮಾಡಲಾಗುತ್ತದೆ. 

ಈವರೆಗೆ ನಿಮ್ಮಲ್ಲಿ ಎಷ್ಟು ಪ್ರಮಾಣದ ಹಾಲು ಪಡೆಯಲಾಗಿದೆ?


ಶಿವಮೊಗ್ಗದಲ್ಲಿ 2024ರ ಮೇ ತಿಂಗಳಲ್ಲಿ ಎದೆಹಾಲಿನ ಕೇಂದ್ರ ಆರಂಭವಾಯಿತು. ಈವರೆಗೆ 250 ಲೀಟರ್‌ ಹಾಲನ್ನು ದಾನಿಗಳಿಂದ ಪಡೆಯಲಾಗಿದೆ. ಸುಮಾರು ಒಂದೂವರೆ ಸಾವಿರ ಮಕ್ಕಳಿಗೆ ಇದರಿಂದ ಅನುಕೂಲವಾಗಿದೆ. 

Dr. vasant

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.