ADVERTISEMENT

ಮಕ್ಕಳ ಫಿಟ್‌ನೆಸ್‌:ಇರಲಿ ಕಾಳಜಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 19:30 IST
Last Updated 11 ಆಗಸ್ಟ್ 2019, 19:30 IST
   

ಪ್ರತಿ ಮೂವರು ಮಕ್ಕಳಲ್ಲಿ ಒಂದು ಮಗು ಮಾತ್ರ ಆರೋಗ್ಯದಿಂದ, ಖುಷಿಯಿಂದ ನಿತ್ಯ ಯಾವುದಾದರೂ ಒಂದು ಚಟುವಟಿಕೆಯಲ್ಲಿ ನಿರತವಾಗಿರುತ್ತದೆ ಎಂದು ವರದಿಯೊಂದು ಹೇಳುತ್ತದೆ. ಎಚ್ಚರವಾಗಿರುವ ಒಟ್ಟು ಕಾಲಾವಧಿಯಲ್ಲಿ ಶೇ 30ರಷ್ಟು ಸಮಯದಲ್ಲಾದರೂ ಯಾವುದಾದರೂ ಒಂದು ಆಟಗಳಲ್ಲಿ ಅಥವಾ ದೈಹಿಕ ಶಿಕ್ಷಣ ತರಬೇತಿಯಲ್ಲಿ ತೊಡಗಿದ್ದರೆ ಅದನ್ನು ಚಟುವಟಿಕೆಯಿಂದ ಕೂಡಿದ ಜೀವನ ಶೈಲಿ ಎಂದು ಪರಿಗಣಿಸಲಾಗುತ್ತದೆ.

ಡಿಜಿಟಲ್ ಯುಗದ ಪ್ರಭಾವದಿಂದಾಗಿ ಪುಟ್ಟ ಮಕ್ಕಳು ಮತ್ತು ಹದಿಹರೆಯದವರು ದಿನದಲ್ಲಿ ಏಳು ಗಂಟೆಯಾದರೂ ಟಿ.ವಿ ನೋಡುವುದರಲ್ಲಿ, ಮೊಬೈಲ್‌ ಅಥವಾ ಯಾವುದಾದರೂ ಒಂದು ವಿದ್ಯುನ್ಮಾನ ಉಪಕರಣ ಬಳಸುವುದರಲ್ಲಿ ಮಗ್ನರಾಗಿರುತ್ತಾರೆ ಎಂದೂ ಕೆಲವು ವರದಿಗಳು ತಿಳಿಸಿವೆ.

ದೈಹಿಕ ಶ್ರಮ ಬೇಡುವ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದ ಹಲವು ಮಕ್ಕಳು ಚಿಕ್ಕಂದಿನಲ್ಲೇ ಬೊಜ್ಜು, ಸ್ಥೂಲಕಾಯದಂತಹ ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ. ಶೇ 70ರಷ್ಟುಹದಿಹರೆಯದವರು ಕೂಡ ವಯಸ್ಕ ಹಂತ ತಲುಪುವ ಹೊತ್ತಿಗೆ ಇಂತಹ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಇದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಈ ಎಲ್ಲ ಅಂಶಗಳು ಚಿಕ್ಕಂದಿನಿಂದಲೇ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುವ ಅನಿವಾರ್ಯತೆಯನ್ನು ಸೂಚಿಸುತ್ತಿವೆ. ಮಕ್ಕಳ ಫಿಟ್‌ನೆಸ್‌ ಹೆಚ್ಚಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ತಜ್ಞರ ಕಿವಿಮಾತು

ಮಕ್ಕಳು ಸಾಮಾನ್ಯವಾಗಿ ಅವರನ್ನು ಹೆಚ್ಚು ಮುದ್ದು ಮಾಡುವವರ ಮಾತು ಕೇಳುವುದಿಲ್ಲ. ಆದ್ದರಿಂದ ಆರೋಗ್ಯದ ಕುರಿತು ಅವರಿಗೆ ಮನದಟ್ಟು ಮಾಡುವ ತಜ್ಞರಿಗೆ ತೋರಿಸಿ ಅವರಿಂದಲೇ ಶಿಕ್ಷಣ ಕೊಡಿಸಬೇಕು. ತಜ್ಞ ವೈದ್ಯರ ಬಳಿ ತೋರಿಸಿದರೆ ಮಗುವಿನ ದೈಹಿಕ ಸ್ಥಿತಿಗೆ ತಕ್ಕಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚಿಸುತ್ತಾರೆ. ಎಂತಹ ವ್ಯಾಯಾಮಗಳಲ್ಲಿ ತೊಡಗಿಸಿದರೆ ಸೂಕ್ತ, ಎಂತಹ ಆಹಾರ ಸೇವಿಸಬೇಕು ಎಂಬ ಮಾಹಿತಿಯನ್ನೂ ನೀಡುತ್ತಾರೆ.

ಖುಷಿ ನೀಡುವ ಆಟ

ಮಕ್ಕಳಿಗೆ ಆಟಗಳೆಂದರೆ ಎಂದಿಗೂ ಇಷ್ಟವೇ. ಆದರೆ ಕೆಲವು ಮಕ್ಕಳಿಗೆ ಕೆಲವು ಆಟಗಳಲ್ಲಿ ಆಸಕ್ತಿ ಇರುವುದಿಲ್ಲ. ಆದ್ದರಿಂದ ಅವರಿಗೆ ಖುಷಿ ನೀಡುವ ಆಟ ಯಾವುದೆಂದು ಮನಗಂಡು ಅದರಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿ. ಮಗು ಸಂತೋಷದಿಂದ ಆಟಗಳಲ್ಲಿ ಭಾಗವಹಿಸಿದರೆ ದೈಹಿಕವಾಗಿ ಅಷ್ಟೇ ಅಲ್ಲದೇ, ಮಾನಸಿಕವಾಗಿಯೂ ಫಿಟ್ ಆಗಿ ಇರುತ್ತದೆ.

ವಯಸ್ಸಿಗೆ ತಕ್ಕಂತೆ

ಆಟಗಳಲ್ಲಿ ತೊಡಗಿಸಿಕೊಳ್ಳಲೇಬೇಕು ಎಂದು ವಯಸ್ಸಿಗೆ ಮೀರಿದ ಕೆಲಸವನ್ನು ಮಕ್ಕಳ ಕೈಯಲ್ಲಿ ಮಾಡಿಸಿದರೂ ಅಪಾಯವೇ. ಅದು ಅವರಿಗೆ ಒತ್ತಡ ಎನಿಸಿ, ದೈಹಿಕವಾಗಿ ಅಷ್ಟೇ ಅಲ್ಲದೇ, ಮಾನಸಿಕ ಆರೋಗ್ಯದ ಮೇಲೂ ಪ್ರಭಾವ ಬೀರಬಹುದು. ಆದ್ದರಿಂದ ತಜ್ಞರ ಸಲಹೆ ಪಡೆದು ವಯಸ್ಸಿಗೆ ತಕ್ಕಂತಹ ಆಟಗಳಲ್ಲಿ ಮಾತ್ರ ತೊಡಗಿಸಿಬೇಕು. ಉದಾಹರಣೆಗೆ ಏಳು ಅಥವಾ ಎಂಟು ವರ್ಷದ ಮಗು, ಭಾರ ಎತ್ತುವ ವ್ಯಾಯಾಮ ಅಥವಾ ನಿತ್ಯ 5 ಕಿ.ಮೀ ಓಡುವ ಚಟುವಟಿಕೆಗಳನ್ನು ಮಾಡುವುದು ಕಷ್ಟ. ಈ ವಯಸ್ಸಿನ ಮಕ್ಕಳಿಗೆ ಸೈಕಲ್ ರೈಡಿಂಗ್ (ಸೈಕ್ಲಿಂಗ್‌), ಫುಟ್‌ಬಾಲ್‌ ಹಾಗೂ ಈಜಿನಂತಹ ಚಟುವಟಿಕೆಗಳು ಸೂಕ್ತವಾಗಿರುತ್ತವೆ.

ಆಟಿಕೆಗಳು ಉತ್ತಮವಾಗಿರಲಿ

ಮಕ್ಕಳು ಆಟಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಪ್ರೇರೇಪಿಸುವುದೇ ಉತ್ತಮ ಆಟಿಕೆಗಳು. ಹೀಗಾಗಿ ಅವರಿಗೆ ಉತ್ತಮ ಮತ್ತು ಸುರಕ್ಷಿತ ಆಟಿಕೆಗಳನ್ನು ಕೊಡಿಸಬೇಕು. ಅವುಗಳನ್ನು ಬಳಸುವಾಗ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವುದು ಕೂಡ ಮುಖ್ಯ.

ಟಿವಿಗಳಿಂದ ಸಾಧ್ಯವಾದಷ್ಟು ದೂರವಿರಿಸಿ

ಮಕ್ಕಳು ಹೆಚ್ಚು ಸಮಯ, ಟಿ.ವಿ, ಮೊಬೈಲ್‌ ಮತ್ತು ವಿದ್ಯುನ್ಮಾನ ಉಪಕರಣಗಳಲ್ಲಿ ಬಳಕೆಯಲ್ಲಿ ನಿರತವಾಗಿದ್ದರೆ, ಕೂಡಲೇ ಎಚ್ಚರ ವಹಿಸಿ. ಅದು ಗೀಳಾಗುವ ಮುನ್ನ ಅವರ ಮನಸ್ಸು ಬದಲಾಯಿಸಿ, ಆಟಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು.ನಿತ್ಯ 1ರಿಂದ 2 ಗಂಟೆ ಟಿ.ವಿ ನೋಡಿದರೆ ಸಾಕು ಎಂದು ಹೇಳುತ್ತದೆ ಅಮೆರಿಕದ ಮಕ್ಕಳ ಆಯೋಗ (ದಿ ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್‌).

ಯೋಜನಾ ಬದ್ಧವಾಗಿರಲಿ

ದೈಹಿಕ ಆರೋಗ್ಯದ ಕಡೆಗೆ ನೀಡಬೇಕಾದ ಕಾಳಜಿ ಅವರ ಓದಿನ ಕಡೆಗೂ ನೀಡಬೇಕಾಗುತ್ತದೆ. ಅವರ ಶೈಕ್ಷಣಿಕ ಪ್ರಗತಿಗೆ ಯಾವುದೇ ಸಮಸ್ಯೆಯಾಗದಂತೆ ಯೋಜನೆ ರೂಪಿಸಿ ಆಟಗಳಲ್ಲಿ ತೊಡಗಿಸಿಕೊಳ್ಳಲು ನೆರವು ನೀಡಿ. ಇದರ ಜತೆಗೆ ಮಕ್ಕಳು ವ್ಯಾಯಾಮ ಮಾಡಲು ಆಯ್ಕೆಮಾಡಿಕೊಂಡ ಸ್ಥಳ, ಬಳಸುವ ವಸ್ತು–ಉಪಕರಣಗಳು ಸುರಕ್ಷಿತವಾಗಿವೆಯೇ ಎಂಬುದನ್ನು ಪರಿಶೀಲಿಸಿ. ಜತೆಗೆ ವ್ಯಾಯಾಮ ಮಾಡುವಾಗ ಉಡುವ ಬಟ್ಟೆ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕು.

ಪೋಷಕರು ಕೂಡ ಆರೋಗ್ಯ ಕಾಪಾಡಿಕೊಂಡು ಅವರಿಗೆ ಮಾದರಿಯಾಗಬೇಕು. ಸಾಧ್ಯವಾದರೆ ಮಕ್ಕಳೊಂದಿಗೆ ಆಡುತ್ತಿರಬೇಕು. ಮಕ್ಕಳು ಆಡುವುದಕ್ಕೆ ಇಷ್ಟ ಪಡದೇ ಇದ್ದರೆ, ಅವರನ್ನು ನೃತ್ಯ ಕಲಿಯುವುದಕ್ಕೆ ಪ್ರೇರೇಪಿಸಬೇಕು. ಎಲ್ಲ ಬಗೆಯ ನೃತ್ಯಾಭ್ಯಾಸವೂ ದೇಹವನ್ನು ಫಿಟ್‌ ಆಗಿ ಇಟ್ಟುಕೊಳ್ಳಲು ನೆರವಾಗುತ್ತದೆ.

ಮಕ್ಕಳು ನಿರಂತರವಾಗಿ ವ್ಯಾಯಾಮದಲ್ಲಿ ತೊಡಗಿಸಿಕೊಂಡಿದ್ದರೆ, ಅವರ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆಯೂ ಗಮನಿಸುತ್ತಿರಬೇಕು. ಯಾವುದೇ ವ್ಯಾಯಾಮ ಮಕ್ಕಳ ಆರೋಗ್ಯದ ಮೇಲೆ ಪ್ರಭಾವ ಬೀರಬಾರದು. ಒಂದು ವೇಳೆ ಪರಿಣಾಮ ಬೀರಿದರೆ ವ್ಯಾಯಾಮಗಳಿಂದ ಮಗು ವಿಮುಖವಾಗುತ್ತದೆ. ಮುಖ್ಯವಾಗಿ ಗಣನೀಯ ಪ್ರಮಾಣದಲ್ಲಿ ತೂಕ ಕಳೆದುಕೊಂಡರೆ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.