ADVERTISEMENT

ಮೂಗನ್ನು ಸೋಂಕು ಮುಕ್ತಗೊಳಿಸುವುದು ಹೇಗೆ?

ಕೊರೊನಾ ಒಂದಿಷ್ಟು ತಿಳಿಯೋಣ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 18:56 IST
Last Updated 9 ನವೆಂಬರ್ 2020, 18:56 IST
ಕೊರೊನಾ ವೈರಸ್‌ ಸೋಂಕು–ಪ್ರಾತಿನಿಧಿಕ ಚಿತ್ರ
ಕೊರೊನಾ ವೈರಸ್‌ ಸೋಂಕು–ಪ್ರಾತಿನಿಧಿಕ ಚಿತ್ರ   
""

ಕೋವಿಡ್-19 ವೈರಸ್ ದೇಹವನ್ನು ಪ್ರವೇಶಿಸಲು ಮೂಗು ಮತ್ತು ಗಂಟಲು ಮುಖ್ಯ ದ್ವಾರಗಳಾಗಿವೆ. ವೈರಸ್ ದೇಹವನ್ನು ಪ್ರವೇಶಿಸಿದ ನಂತರ ಜೀವಕೋಶಗಳನ್ನು ಪ್ರವೇಶಿಸಲು ಕೆಲ ಸಮಯ ಬೇಕಾಗುತ್ತದೆ ಮತ್ತು ವ್ಯಕ್ತಿಗಳ ರೋಗ ನಿರೋಧಕ ಶಕ್ತಿಯ ಮೇಲೆ ಸೋಂಕು ಅವಲಂಬಿತವಾಗಿರುತ್ತದೆ. ಹೀಗಾಗಿ ತಕ್ಷಣ ಮೂಗನ್ನು ಆ್ಯಂಟಿಸೆಪ್ಟಿಕ್‌ ಸೊಲ್ಯುಷನ್‌ನಿಂದ ಸ್ವಚ್ಛಗೊಳಿಸಿದರೆ ವೈರಸ್‌ ಒಳಗಡೆ ಪ್ರವೇಶಿಸುವುದನ್ನು ತಡೆಯಬಹುದು.

ಅಯೋಡಿನ್‌ ಅಂಶವಿರುವ ಆ್ಯಂಟಿಸೆಪ್ಟಿಕ್‌ಗಳನ್ನು ಈಗಾಗಲೇ ಸೈನಸ್‌ ಸಮಸ್ಯೆಗೆ ಬಳಸಲಾಗುತ್ತದೆ. ಹಾಗೆಯೇ ಇದು ಸಾರ್ಸ್‌ ಕೋವ್‌–2 ವೈರಸ್‌ ಅನ್ನೂ ನಿಷ್ಕ್ರಿಯಗೊಳಿಸುತ್ತದೆ ಎಂಬುದು ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ. ಇಂತಹ ಕೆಲವು ಆ್ಯಂಟಿಸೆಪ್ಟಿಕ್‌ಗಳು ಕೋವಿಡ್‌–19 ಸಂದರ್ಭದಲ್ಲಿ ಜನಪ್ರಿಯವಾಗಿವೆ. ಇದನ್ನು ಸೋಂಕು ನಿಯಂತ್ರಣದಲ್ಲಿ ಬಳಸಬಹುದು ಎಂಬುದರ ಬಗ್ಗೆ ಜನರಲ್ಲೂ ಅರಿವು ಮೂಡುತ್ತಿದೆ. ಕೆಲವರು ಈ ಆ್ಯಂಟಿಸೆಪ್ಟಿಕ್‌ ಸಿಂಪಡಿಸಿದ ಹತ್ತಿಯನ್ನು ಮೂಗಿನ ಬಳಿ ಇಟ್ಟುಕೊಳ್ಳುವುದು ಕೊರೊನಾ ಸೋಂಕು ಶುರುವಾದ ಕೆಲವು ದಿನಗಳಲ್ಲೇ ಕಂಡು ಬಂದಿತ್ತು. ಈ ರಾಸಾಯನಿಕವು ವೈರಸ್‌ ಪ್ರವೇಶಿಸುವ ಮೂಗಿನ ಬಳಿ ಸ್ವಲ್ಪಮಟ್ಟಿನ ರಕ್ಷಣೆ ಕೊಡಬಹುದು. ಹಾಗೆಯೇ ವೈರಸ್‌ ಅನ್ನು ನಿಷ್ಕ್ರಿಯಗೊಳಿಸಬಹುದು.

ಇತ್ತೀಚಿನ ವರದಿಗಳ ಪ್ರಕಾರ ಪ್ರೊವೈಡಿನ್ ಅಯೋಡಿನ್ ಮತ್ತು ಹೈಪೆಟೋನಿಕ್ ಸಲೈನ್ (ಉಪ್ಪು ನೀರು) ನಂತಹ ಏಜೆಂಟ್‌ಗಳೊಂದಿಗೆ ಮೂಗು ಸ್ವಚ್ಛಗೊಳಿಸುವುದು ಅತ್ಯಂತ ಉಪಯುಕ್ತ. ಇದರ ಜೊತೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಆರೋಗ್ಯ ಕಾರ್ಯಕರ್ತರಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ತಪ್ಪಿಸಲು ನೆರವಾಗುತ್ತದೆ ಎನ್ನುತ್ತಾರೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ಕನ್ಸಲ್ಟೆಂಟ್‌, ಹೆಡ್‌ ಮತ್ತು ನೆಕ್‌ ಸರ್ಜನ್‌ ಡಾ. ಶ್ರೀನಿವಾಸ್‌ ಕೆ.

ADVERTISEMENT

ಅಯೋಡಿನ್ ಸೊಲ್ಯುಷನ್ ಕೋವಿಡ್-19ಗೆ ಕಾರಣವಾಗುವ ವೈರಸ್ ಅನ್ನು ನಿಷ್ಕ್ರಿಯಗೊಳಿಸಲು ನೆರವಾಗುತ್ತದೆ. ಇದು ವೈರಸ್ ತಗುಲಿದ ಕೇವಲ 15 ಸೆಕೆಂಡ್‌ಗಳಲ್ಲಿ ಅವುಗಳನ್ನು ನಿಷ್ಕ್ರಿಯಗೊಳಿಸುವುದು ಮತ್ತು ಸೋಂಕು ಹೆಚ್ಚಾಗುವುದನ್ನು ತಡೆಯುತ್ತದೆ. ಇನ್ನು ಕೆಲವು ವಿಜ್ಞಾನಿಗಳು ಹೇಳುವಂತೆ ಅಯೋಡಿನ್ ಸೊಲ್ಯುಷನ್, ವೈರಸ್ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡುವ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಇನ್ನು ಜಲನೇತಿ ಕೂಡ ಪ್ರಯೋಜನವನ್ನು ನೀಡುತ್ತದೆ. ಉಪ್ಪಿನ ನೀರಿನಿಂದ ಮೂಗನ್ನು ಶುದ್ಧೀಕರಿಸುವ ಪ್ರಕ್ರಿಯೆ ಇದಾಗಿದೆ. ವೈರಸ್‌ ತಗುಲಿದ ತಕ್ಷಣ ಜಲನೇತಿಯನ್ನು ಮಾಡಿಕೊಂಡರೆ ಸೋಂಕು ಉಂಟಾಗುವುದನ್ನು ತಡೆಯುತ್ತದೆ.

ಡಾ.ಶ್ರೀನಿವಾಸ್‌ ಕೆ.

ಕೆಲವು ನಿಮಿಷಗಳವರೆಗೆ ಮಾಸ್ಕ್ ಧರಿಸುವುದನ್ನು ಮರೆತಿದ್ದರೆ ಮತ್ತು ಯಾವುದೇ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಅನುಮಾನವಿದ್ದರೆ ಜಲನೇತಿ ಮಾಡಬೇಕು ಅಥವಾ ಪ್ರೊವೈಡಿನ್ ಅಯೋಡಿನ್ ದ್ರಾವಣದಿಂದ ಮೂಗನ್ನು ಸ್ವಚ್ಛಗೊಳಿಸಬೇಕು ಮತ್ತು ಬಾಯನ್ನು ಮುಕ್ಕಳಿಸಬೇಕು. ಇದರಿಂದ ಸೋಂಕು ತಗಲುವುದನ್ನು ತಡೆಯಬಹುದಾಗಿದೆ. ವೈರಸ್‌ಗೆ ಎಕ್ಸ್‌ಪೋಸ್‌ ಆದ 15 ನಿಮಿಷಗಳೊಳಗೆ ಜಲನೇತಿಯನ್ನು ಮಾಡಬೇಕು.

ಆದರೆ ಕೆಲವು ಆ್ಯಂಟಿಸೆಪ್ಟಿಕ್‌ಗಳಲ್ಲಿರುವ ರಾಸಾಯನಿಕಗಳು ದೀರ್ಘಾವಧಿಯಲ್ಲಿ ಅಡ್ಡ ಪರಿಣಾಮ ಉಂಟು ಮಾಡುವ ಸಂಭವವಿರುವುದರಿಂದ ವೈದ್ಯರ ಸಲಹೆ ಮೇರೆಗೆ ಇದನ್ನು ಬಳಸಿದರೆ ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.