ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ: ಉದ್ಯಾನದಲ್ಲಿ ಇರಲಿ ಎಚ್ಚರ

ಡಾ.ಚಿದಂಬರ
Published 18 ಅಕ್ಟೋಬರ್ 2020, 20:29 IST
Last Updated 18 ಅಕ್ಟೋಬರ್ 2020, 20:29 IST
ಡಾ.ಚಿದಂಬರ
ಡಾ.ಚಿದಂಬರ   

ಮೈಸೂರು: ಕೊರೊನಾ ಸೋಂಕು ಸುಲಭವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಕಾರಣ, ಉದ್ಯಾನಗಳಲ್ಲಿ ವಾಯು ವಿಹಾರಕ್ಕೆ ಬರುವವರು ಅತಿಯಾದ ಎಚ್ಚರ ವಹಿಸಬೇಕು ಎನ್ನುತ್ತಾರೆ ಮೈಸೂರು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಚಿದಂಬರ.

ನೀವು ಒಬ್ಬರೇ ಪಾರ್ಕ್‌ಗೆ ಬಂದರೆ ಮತ್ತು ಅಲ್ಲಿ ಹೆಚ್ಚು ಜನರು ಇಲ್ಲದಿದ್ದರೆ ಆರಾಮವಾಗಿ ಓಡಾಡಿ. ಆದರೆ 3–4 ಮಂದಿ ಜತೆಯಾಗಿ ಬಂದರೆ, ಅಂತರ ಕಾಯ್ದುಕೊಳ್ಳಬೇಕು. ಜನರು ಗುಂಪು ಸೇರುವ ಕಡೆಗಳಲ್ಲಿ ಯಾವೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕೋ ಅವುಗಳನ್ನು ಉದ್ಯಾನದಲ್ಲೂ ಅನುಸರಿಸಬೇಕು.

‘ಮಾಸ್ಕ್‌ ಧರಿಸಲು ಮರೆಯಬೇಡಿ. ವಾಕಿಂಗ್‌ ಮಾಡುವಾಗ ಉಸಿರಾಡಲು ಕಷ್ಟವಾಗುತ್ತದೆ ಎಂದು ಮಾಸ್ಕ್‌ ಕೆಳಗೆ ಸರಿಸಬೇಡಿ’ ಎಂಬುದು ಅವರ ಸಲಹೆ.

ADVERTISEMENT

ಸಾಮಾನ್ಯವಾಗಿ ಬೆಳಿಗ್ಗೆ ಹಾಗೂ ಸಂಜೆಯ ವೇಳೆ ಪಾರ್ಕ್‌ಗಳಲ್ಲಿ ಹೆಚ್ಚಿನ ಜನರು ಸೇರುತ್ತಾರೆ. ಬೆಳಿಗ್ಗೆ ಇಬ್ಬನಿ ಇರುತ್ತದೆ, ತಂಗಾಳಿಯೂ ಬೀಸುತ್ತಿರುತ್ತದೆ. ಈ ವೇಳೆ ಕೆಲವರಿಗೆ ಸೀನು, ಕೆಮ್ಮು ಬರುವ ಸಾಧ್ಯತೆ ಅಧಿಕ. ಆದ್ದರಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ.

ಉದ್ಯಾನದ ಬೆಂಚ್‌ಗಳಲ್ಲಿ ಕುಳಿತುಕೊಳ್ಳುವಾಗ ಎಚ್ಚರವಹಿಸಬೇಕು. ಒಬ್ಬರೇ ಇದ್ದರೆ ಕುಳಿತುಕೊಂಡರೆ ಅಡ್ಡಿ ಇಲ್ಲ. ಅದೇ ಬೆಂಚ್‌ನಲ್ಲಿ ಇನ್ನೊಬ್ಬರು ಬಂದು ಕುಳಿತರೆ ಅಂತರ ಕಾಯ್ದುಕೊಳ್ಳಬೇಕು. ಆಗದಿದ್ದಲ್ಲಿ ಅಲ್ಲಿಂದ ಎದ್ದು ಹೋಗಬೇಕು ಅಥವಾ ಅವರಿಗೆ ತಿಳಿಹೇಳಬೇಕು ಎನ್ನುತ್ತಾರೆ ಡಾ.ಚಿದಂಬರ.

ಮಧುಮೇಹಿಗಳು, ಹೃದಯ ಸಂಬಂಧಿ ಕಾಯಿಲೆ ಇರುವವರು ಸೇರಿದಂತೆ ವಿವಿಧ ರೀತಿಯ ಅನಾರೋಗ್ಯದಿಂದ ಬಳಲುತ್ತಿರುವವರು ಉದ್ಯಾನಕ್ಕೆ ಬರುತ್ತಾರೆ. ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಅವರಿಗೆ ನಡೆದಾಡುವುದು ಅನಿವಾರ್ಯ. ಒಂದೆಡೆ ಆರೋಗ್ಯ ಕಾಪಾಡಲು ನಡಿಗೆ, ಇನ್ನೊಂದೆಡೆ ಕೊರೊನಾ ತಗುಲದಂತೆ ಎಚ್ಚರ ವಹಿಸಬೇಕಾದ ಸವಾಲು. ಇವೆರಡರ ನಡುವೆ ಸಮತೋಲನ ಸಾಧಿಸಿ ಜೀವನ ಮುಂದುವರಿಸಬೇಕಿದೆ.

ಮಾರ್ಚ್‌ನಲ್ಲಿ, ನಾವು ಜನರಿಗೆ ಏನೆಲ್ಲಾ ಮುನ್ನೆಚ್ಚರಿಕೆಗಳನ್ನು ಹೇಳುತ್ತಿದ್ದೆವೋ ಅದನ್ನು ಈಗಲೂ ಹೇಳುತ್ತಲೇ ಇದ್ದೇವೆ. ಕೊರೊನಾ ಬಂದು ಏಳು ತಿಂಗಳು ಕಳೆದರೂ ಅದರ ಗಂಭೀರತೆ ಅರ್ಥವಾಗಿಲ್ಲ. ಬೇಜವಾಬ್ದಾರಿಯ ಕಾರಣ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ ಎಂದು ಅವರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.