ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ: ಕೋವಿಡ್‌ನಿಂದ ಮಿದುಳಿಗೂ ಹಾನಿ ಸಂಭವ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 18:45 IST
Last Updated 20 ಅಕ್ಟೋಬರ್ 2020, 18:45 IST
ಎನ್‌.ಕೆ. ವೆಂಕಟರಮಣ
ಎನ್‌.ಕೆ. ವೆಂಕಟರಮಣ   

ಕೊರೊನಾ ಸೋಂಕಿನಿಂದ‌ ವ್ಯಕ್ತಿಯ ಮಿದುಳಿಗೂ ಹಾನಿಯಾಗುತ್ತಿದ್ದು, ಕೋವಿಡ್ ಪೀಡಿತರು ‘ಬ್ರೇನ್‌ ಸ್ಟ್ರೋಕ್’ ಒಳಗಾಗುವ ಅಪಾಯವಿದೆ ಎಂಬುದು ತಜ್ಞ ವೈದ್ಯರ ಅಭಿಪ್ರಾಯ.

‘ಸೋಂಕಿನ ಯಾವುದೇ ಲಕ್ಷಣ ಕಾಣಿಸಿಕೊಳ್ಳದವರ ಮೇಲೂ ಕೋವಿಡ್ ತೀವ್ರತರ ಪರಿಣಾಮ ಬೀರುತ್ತಿದೆ. ಕೋವಿಡ್‌ನಿಂದ ಲಕ್ಷಾಂತರ ಜನ ಗುಣಮುಖರಾಗಿದ್ದರೂ ದೀರ್ಘಾವಧಿಯಲ್ಲಿ ಸೋಂಕಿನ ಪರಿಣಾಮಗಳ ಬಗ್ಗೆ ಅಧ್ಯಯನ ‌ಮಾಡಬೇಕಾದ ಅಗತ್ಯವಿದೆ’ ಎನ್ನುತ್ತಾರೆ ಇಂಟರ್ ನ್ಯಾಷನಲ್‌ ಫೆಡರೇಷನ್‌ ಆಫ್ ನ್ಯೂರೊ ಎಂಡೊಸ್ಕೋಪಿಯ ಕಾರ್ಯಕಾರಿ‌ ಮಂಡಳಿಯ ಸದಸ್ಯ ಡಾ.ಎನ್.ಕೆ.‌ ವೆಂಕಟರಮಣ.

ಕೋವಿಡ್‌ನಿಂದ ಉಸಿರಾಟದ ಸಮಸ್ಯೆ ಹೆಚ್ಚುತ್ತದೆಯಲ್ಲದೆ, ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತದೆ. ಮಿದುಳಿಗೆ ರಕ್ತ ಸರಬರಾಜಾಗುವ ಪ್ರಕ್ರಿಯೆಯಲ್ಲಿಯೂ ಅಡೆ-ತಡೆ ಉಂಟಾಗಿ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯವೂ ಇದೆ. ಇತ್ತೀಚಿನ ಪ್ರಕರಣಗಳು ಇದಕ್ಕೆ ಪುಷ್ಟಿ ಒದಗಿಸಿವೆ ಎನ್ನುತ್ತಾರೆ ಅವರು.

ADVERTISEMENT

ಚೀನಾ, ಇಟಲಿಯಲ್ಲಿ ಮಿದುಳಿನ ಪಾರ್ಶ್ವವಾಯುವಿಗೆ ತುತ್ತಾದವರಲ್ಲಿ ಶೇ 5.9ರಷ್ಟು ಮಂದಿ ಕೋವಿಡ್‌ನಿಂದ ಬಳಲುತ್ತಿದ್ದರು ಎಂದು ಅವರು ಹೇಳುತ್ತಾರೆ.

ಸೋಂಕು ತಗುಲಿದ ದಿನದಿಂದ ಸರಾಸರಿ‌ 12 ದಿನಗಳಲ್ಲಿ ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಸೋಂಕು ತಗುಲಿದ ಎಲ್ಲರ ಮಿದುಳಿಗೂ ಹಾ‌ನಿಯಾಗುತ್ತದೆ ಎಂದೇನಿಲ್ಲ. ಆದರೆ ಮಧುಮೇಹ, ಅಧಿಕ ರಕ್ತದೊತ್ತಡದ ಸಮಸ್ಯೆ ಮತ್ತು ನರಮಂಡಲಕ್ಕೆ ಸಂಬಂಧಿಸಿದ ಇನ್ನಿತರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಈ ಅಪಾಯ ಹೆಚ್ಚು ಎಂದು ಅವರು ವಿಶ್ಲೇಷಿಸುತ್ತಾರೆ.

ಸೋಂಕಿನಿಂದ‌ ರಕ್ತನಾಳಗಳಿಗೆ ಹಾ‌ನಿಯಾದಾಗ ರಕ್ತ ಹೆಪ್ಪುಗಟ್ಟುತ್ತದೆ. ಈ ರೀತಿ ಹೆಪ್ಪುಗಟ್ಟಿದ ರಕ್ತದ ಅಂಶಗಳು ಮೆದುಳಿಗೆ ತಲುಪಿದಾಗ ಮಿದುಳಿನ ಕಾರ್ಯವು ಕ್ರಮೇಣ ಕುಂಠಿತಗೊಳ್ಳುತ್ತಾ ಬರುತ್ತದೆ. ಇದರಿಂದ ಮಿದುಳಿಗೆ ಬೇಕಾದ ಅಗತ್ಯ ಪ್ರಮಾಣದ ಆಮ್ಲಜನಕ ಲಭ್ಯವಾಗದೇ ಪಾರ್ಶ್ವವಾಯು ಸಮಸ್ಯೆ ಉಂಟಾಗುತ್ತದೆ ಎಂದು ವಿವರಿಸುತ್ತಾರೆ ಅವರು.

ಸಿ.ಟಿ ಸ್ಕ್ಯಾನ್ ಸಹಕಾರಿ: ರೋಗಿಗಳನ್ನು ಸಿ.ಟಿ ಸ್ಕ್ಯಾನ್‌ಗೆ ಒಳಪಡಿಸಿದಾಗ ಸೋಂಕಿತರು ಮಿದುಳಿನ ಪಾರ್ಶ್ವವಾಯುವಿಗೆ ತುತ್ತಾಗಿರುವುದು ಪತ್ತೆಯಾಗಿದೆ.

ಕೈ-ಕಾಲು ಮರಗಟ್ಟುವುದು, ಮಾತನಾಡಲು ತೊಂದರೆ, ಸ್ಪರ್ಶ ಜ್ಞಾನ ಇಲ್ಲದಿರುವುದು, ಪದೇ ಪದೇ ತಲೆನೋವು, ದೃಷ್ಟಿ ಮಂಜಾಗುವಂತಹ ಲಕ್ಷಣಗಳು ಕಾಣಿಸಿಕೊಂಡರೆ ಬೇಗ ತಪಾಸಣೆಗೆ ಒಳಗಾಗುವುದು ಉತ್ತಮ ಎಂದು ವೆಂಕಟರಮಣ ಸಲಹೆ‌ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.