ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ | ಕೋವಿಡೋತ್ತರ ಆರೈಕೆ: ಮಕ್ಕಳು, ವೃದ್ಧರಿಂದ ದೂರವಿರಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 21:13 IST
Last Updated 17 ನವೆಂಬರ್ 2020, 21:13 IST
ಡಾ.ಮಯೂರ ಕದಂ
ಡಾ.ಮಯೂರ ಕದಂ   

ಒಂದು ಬಾರಿ ಕೋವಿಡ್ ಬಂದು ಹೋದರೆ ಮತ್ತೆ ಅದು ಬರದಂತೆ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಎರಡನೇ ಬಾರಿಗೆ ಸೋಂಕು ಬಾಧಿಸಿದರೆ ಶ್ವಾಸಕೋಶಕ್ಕೆ ತೀವ್ರವಾದ ಹಾನಿ ಮಾಡಬಲ್ಲದು.

ರೋಗ ಪ್ರತಿರೋಧಕ ಶಕ್ತಿ ಉತ್ತಮವಾಗಿದ್ದರೆ ಮೊದಲ ಬಾರಿಗೆ ಕೋವಿಡ್ ಬಂದಾಗ ಶ್ವಾಸಕೋಶದ ಆರೋಗ್ಯದಲ್ಲಿ ಏರುಪೇರು ಆಗಿರುವುದಿಲ್ಲ. ಆದರೆ, ಎರಡನೇ ಸಲ ಸೋಂಕು ಕಾಣಿಸಿಕೊಂಡರೆ ಅದು ದುರ್ಬಲವಾಗಬಹುದು.‌ ನಂತರ ದೇಹದ ಇತರ ಭಾಗಗಳ‌ ಮೇಲೂ ಆಗುತ್ತದೆ. ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಮೂತ್ರಪಿಂಡದ ಮೇಲೂ‌ ಪರಿಣಾಮ ಆಗಬಹುದು. ಹೀಗಾಗಿ ಕೋವಿಡೋತ್ತರದ 10 ದಿನಗಳ ಆರೈಕೆಯೂ ಬಹುಮುಖ್ಯ ಕಾಲಘಟ್ಟವಾಗಿದೆ.

‘ಸೋಂಕುಮುಕ್ತ ವ್ಯಕ್ತಿಗೆ ನೀಡಿದ ಔಷಧಗಳು ಬಹಳ ದಿನಗಳವರೆಗೆ ದೇಹದಲ್ಲಿ ಪರಿಣಾಮ ಉಂಟು ಮಾಡುತ್ತವೆ. ಸೋಂಕಿತರಿಗೆ ಈ ಮೊದಲು ಹೈಡ್ರೋಕ್ಲೋರೊಕ್ವಿನ್ ಮಾತ್ರೆಗಳನ್ನು ನೀಡಲಾಗುತ್ತಿತ್ತು. ಇತ್ತೀಚಿನ ಅಧ್ಯಯನಗಳು ಪರ್ಯಾಯ ಮಾತ್ರೆಗಳನ್ನು ನೀಡಬಹುದು ಎಂದು ಶಿಫಾರಸು ಮಾಡಿವೆ. ಇಂಥ ಪ್ರಯೋಗದ ವೇಳೆ ಮಾತ್ರೆಗಳ ಅಡ್ಡ ಪರಿಣಾಮ ತಳ್ಳಿಹಾಕಲಾಗದು. ಅದ್ದರಿಂದ ಕೋವಿಡ್ ಬಂದು ಹೋದರೂ ಕನಿಷ್ಠ 10ರಿಂದ 12 ದಿನ ವಿಶೇಷ ಕಾಳಜಿ ಅಗತ್ಯ’ ಎನ್ನುತ್ತಾರೆ ಧಾರವಾಡ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ಞ ಡಾ.ಮಯೂರ ಕದಂ.

ADVERTISEMENT

ಗುಣಮುಖರಾಗಿ ಮನೆಗೆ ಮರಳಿದ ನಂತರವೂ ಕುಟುಂಬ ಸದಸ್ಯರಿಂದ ಅಂತರ ಕಾಯ್ದುಕೊಳ್ಳುವುದು,‌ ಮಾಸ್ಕ್ ಧರಿಸುವುದನ್ನು ಮುಂದುವರಿಸಬೇಕು.‌ ಮನೆಯಲ್ಲಿ‌ ಮಕ್ಕಳು, ವೃದ್ಧರಿದ್ದರೆ ಅವರಿಂದ ದೂರ ಉಳಿಯಬೇಕು.

ಚಳಿಗಾಲದ ಈ ಮೂರು ತಿಂಗಳು‌ ಭಾರತದ ಪಾಲಿಗೆ ನಿರ್ಣಾಯಕವಾಗಲಿವೆ ಎಂದೇ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಅವಧಿಯಲ್ಲಿ‌ ಚಿಕ್ಕಮಕ್ಕಳು ಹಾಗೂ ವೃದ್ಧರು ಶೀತಸಂಬಂಧಿ ಕಾಯಿಲೆಗೆ‌ ಒಳಗಾಗದಂತೆ ತಡೆಯಬೇಕಾಗಿದೆ. ಪ್ರತಿ ಚಳಿಗಾಲದಲ್ಲಿ ನೆಗಡಿಯಂತಹ ಸಾಂಕ್ರಾಮಿಕ ರೋಗಗಳು ಸಾಮಾನ್ಯ.‌ ಈ ಬಾರಿಯ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ನೆಗಡಿ ಕೊರೊನಾ ಸೋಂಕಿನಿಂದಲೂ ಬಂದಿರುವ ಸಾಧ್ಯತೆ ಇರುತ್ತದೆ. ಮಕ್ಕಳಿಗೆ, ವೃದ್ಧರಿಗೆ ಶ್ವಾಸಕೋಶ, ಮೂಗು, ಗಂಟಲಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ತಪಾಸಣೆ ಮಾಡಿಸಿಕೊಳ್ಳಬೇಕು.

‘ಇನ್ನಷ್ಟು ವರ್ಷ ಕೋವಿಡ್‌ ಇದ್ದೇ ಇರುತ್ತದೆ. ಆದರೆ, ಅದರ ತೀವ್ರತೆ ದೇಹದ ಮೇಲೆ ಕಡಿಮೆ ಆಗುವಂತೆ ನೋಡಿಕೊಳ್ಳಬೇಕು. ಎರಡನೇ ಬಾರಿ ಬರುವ ಸೋಂಕು ಗಂಭೀರ ಪರಿಣಾಮ ಬೀರಬಹುದು’ ಎಂದು ಎಚ್ಚರಿಸುತ್ತಾರೆ ಡಾ.ಮಯೂರ ಕದಂ.

ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ಹಾಗೂ ತುರ್ತು ಪ್ರಕರಣಗಳಲ್ಲಿ ‌ಮಾತ್ರ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ಪಾಸಿಟಿವ್ ಬಂದರೆ ರೋಗಿಯ ಆರೋಗ್ಯ ಸ್ಥಿತಿ‌ ಗಮನಿಸಿ ಶಸ್ತ್ರಚಿಕಿತ್ಸೆ ಮಾಡುತ್ತೇವೆ. ಹೀಗಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾದವರು ಆತಂಕಕ್ಕೆ ಒಳಗಾಗಬೇಕಿಲ್ಲ. ವೈದ್ಯರ ಸಲಹೆಯಂತೆ ನಡೆದುಕೊಳ್ಳಬೇಕು.

***********

-ಎರಡನೇ ಬಾರಿಗೆ ಕೋವಿಡ್‌ ಬರುವುದಿಲ್ಲ ಎಂಬ ವಿಶ್ವಾಸ ಬೇಡ

-ರೋಗ ಪ್ರತಿರೋಧಕ ಶಕ್ತಿ ಕ್ಷೀಣಿಸಿದರೆ ಮತ್ತೆ ಸೋಂಕು ಕಾಡಬಹುದು

-ಶ್ವಾಸಕೋಶದ ತೊಂದರೆ ಇದ್ದವರಿಗೆ ಎರಡನೇ ಕೋವಿಡ್‌ ಬಂದರೆ ಅಪಾಯ ಹೆಚ್ಚು

-ಶ್ವಾಸಕೋಶ ದುರ್ಬಲವಾಗಿದ್ದರೆ ಔಷಧಿಗಳಿಂದ ಅಡ್ಡಪರಿಣಾಮ ಆಗಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.