ADVERTISEMENT

ಸ್ಪಂದನ: ಮಧುಮೇಹಿಗಳಿಗೆ ಮಕ್ಕಳಾಗುವುದಿಲ್ಲವೇ?

ಡಾ.ವೀಣಾ ಎಸ್‌ ಭಟ್ಟ‌
Published 14 ಜನವರಿ 2022, 19:30 IST
Last Updated 14 ಜನವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನನಗೆ 36 ವರ್ಷ. 5 ವರ್ಷದ ಮಗಳಿದ್ದಾಳೆ. ನನಗೂ ನನ್ನ ಪತಿಗೂ ಮತ್ತೊಂದು ಮಗು ಬೇಕೆನಿಸಿದೆ. ಆದರೆ ಈಗ ಶುಗರ್ ಬಂದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮಧುಮೇಹವಿದ್ದರೆ ಮಗು ಮಾಡಿಕೊಳ್ಳಲು ತೊಂದರೆಯೇ ?

ವಿದ್ಯಾ, ತುಮಕೂರು

ನಿಮಗೆ ಈಗ ಮಧುಮೇಹ ಆರಂಭವಾಗಿದ್ದರೆ ಅದು ಟೈಪ್–2 ಮಧುಮೇಹ ಇರಬಹುದು. ಅದಕ್ಕೆ ನೀವು ಈಗಾಗಲೇ ತಜ್ಞವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೆ ಅದನ್ನ ಮುಂದುವರೆಸಿ. ಮಧುಮೇಹ ನಿಯಂತ್ರಣದಲ್ಲಿಡುವಾಗ ಔಷಧದ ಜೊತೆಗೆ ಆಹಾರ ಮತ್ತು ವ್ಯಾಯಾಮವೂ ಕೂಡಾ ಬಹಳ ಮುಖ್ಯವಾಗುತ್ತದೆ. ನೀವು ನೆನಪಿಡಬೇಕಾದ ಮುಖ್ಯ ಸಂಗತಿ ಏನೆಂದರೆ ಮಧುಮೇಹ ನಿಯಂತ್ರಣದಲ್ಲಿದ್ದರೆ, ನೀವು ಆರೋಗ್ಯವಂತ ಮಗುವನ್ನು ಪಡೆಯಬಹುದು. ಗರ್ಭಧಾರಣೆಗೆ 6 ವಾರಗಳ ಮೊದಲೇ ದಿನಾಲೂ 5ಮಿಲಿಗ್ರಾಂ ಫೋಲಿಕ್‌ ಆ್ಯಸಿಡ್‌ ಮಾತ್ರೆಗಳನ್ನು ತೆಗೆದುಕೊಳ್ಳಲು ಮರೆಯಬೇಡಿ. ತೂಕ ಹೆಚ್ಚಿದ್ದರೆ ಕಡಿಮೆ ಮಾಡಿಕೊಂಡು ಸಮತೂಕ ಹೊಂದಲು ಪ್ರಯತ್ನಿಸಿ. ಮಧುಮೇಹ ನಿಯಂತ್ರಣದಲ್ಲಿ ಇಲ್ಲದಿದ್ದಾಗ ಮಾತ್ರ ನಿಮಗೂ ಹುಟ್ಟುವ ಮಗುವಿಗೆ ತೊಂದರೆ ಆಗಬಹುದು. ಆದ್ದರಿಂದ ಯಾವಾಗಲೂ ರಕ್ತದಲ್ಲಿ ಸಕ್ಕರೆ ಮಟ್ಟ ಕಾಪಾಡಿಕೊಳ್ಳಲು ಪ್ರಯತ್ನಿಸಿ ತಜ್ಞರ ಸಹಾಯ ಪಡೆದುಕೊಳ್ಳಿ.

ADVERTISEMENT

ಮುಟ್ಟಾದಾಗ ಲೈಂಗಿಕ ಕ್ರಿಯೆ ಮಾಡಿದರೆ ಗರ್ಭ ಧರಿಸುವ ಸಾಧ್ಯತೆ ಇದೆಯೇ?

ಹೆಸರು, ಊರು ತಿಳಿಸಿಲ್ಲ

ಮುಟ್ಟಿನ ಸಮಯದಲ್ಲಿ ಲೈಂಗಿಕಕ್ರಿಯೆ ನಡೆಸಿದಾಗ ಗರ್ಭಧಾರಣೆಯಾಗುವ ಸಂಭವ ಕಡಿಮೆ. ಈ ಹಿಂದಿನ ಸಂಚಿಕೆಗಳಲ್ಲಿ ಋತುಫಲಪ್ರದ ದಿನಗಳ ಬಗ್ಗೆ ತಿಳಿಸಿರುತ್ತೇನೆ. ಆದರೆ ನೆನೆಪಿಡಬೇಕಾದ ಸಂಗತಿ ಏನೆಂದರೆ ಕೆಲವೊಮ್ಮೆ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುವಾಗ ಸ್ವಲ್ಪ ಮುಟ್ಟು ಕಾಣಿಸಿಕೊಳ್ಳಬಹುದು. ಇದು ಒಬ್ಬೊಬ್ಬರಲ್ಲಿ ಒಂದೊಂದು ರೀತಿಯಾಗಿದ್ದು ಈ ಸಮಯದಲ್ಲಿ ಲೈಂಗಿಕ ಸಂಪರ್ಕವಾದರೆ ಗರ್ಭಧಾರಣೆಯಾಗಬಹುದು. ಹಾಗಾಗಿ ಋತುಚಕ್ರದ ಎಲ್ಲಾ ಸಂದರ್ಭಗಳಲ್ಲೂ ಮಗು ಬೇಡವೆಂದಿದ್ದರೆ ಕಾಂಡೊಮ್ ಇನ್ನಿತರ ಸಂತಾನ ನಿಯಂತ್ರಣ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು.

ನನಗೆ ವಯಸ್ಸು 20. ತಿಂಗಳಿಗೆ 3 ಬಾರಿ ಮುಟ್ಟು ಆಗುತ್ತೇನೆ. ಯಾಕೆ ಈ ರೀತಿ ಆಗುತ್ತದೆ. ಒಮ್ಮೊಮ್ಮೆ ಎರಡು ತಿಂಗಳಾದರೂ ಆಗುವುದಿಲ್ಲ. ಈಗ ತಿಂಗಳಿಗೆ 3 ಬಾರಿ ಆಗುತ್ತದೆ ದಯವಿಟ್ಟು ಸೂಕ್ತ ಸಲಹೆ ನೀಡಿ.

ಹೆಸರು, ಊರು ತಿಳಿಸಿಲ್ಲ

ನಿಮಗೆ ಮದುವೆಯಾಗಿದೆಯೇ? ಮಕ್ಕಳಾಗಿದೆಯೇ? ಈ ಬಗ್ಗೆ ಏನೂ ತಿಳಿಸಿಲ್ಲ. ತಿಂಗಳಿಗೆ ಎರಡು ಮೂರುಬಾರಿ ಮುಟ್ಟಾದರೆ, ಅಂಡಾಶಯದ ನೀರುಗುಳ್ಳೆಗಳೇನಾದರೂ ಇದ್ದರೆ ಹೀಗೆ ಆಗಬಹುದು ಅಥವಾ ಗರ್ಭಕೋಶಕ್ಕೆನಾದರೂ ಸೋಂಕಾಗಿದ್ದರೂ ಈ ರೀತಿ ತೊಂದರೆ ಆಗಬಹುದು.

*******

ಸ್ಪಂದನ... ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳಿದ್ದರೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ವೀಣಾ ಎಸ್‌. ಭಟ್‌ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.in ಗೆ ಕಳಿಸಬಹುದು.

ಡಾ. ವೀಣಾ ಎಸ್‌. ಭಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.