ADVERTISEMENT

ಮಕ್ಕಳಿಗೆ ನಿಜವಾಗಲೂ ಪ್ರೇತಬಾಧೆ ಆಗುತ್ತದೆಯೇ? ಅಕ್ಷರ ದಾಮ್ಲೆ ಅವರ ಅಂತರಂಗ ಅಂಕಣ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2025, 21:54 IST
Last Updated 4 ಏಪ್ರಿಲ್ 2025, 21:54 IST
<div class="paragraphs"><p>ಪ್ರೇತಬಾಧೆ</p></div>

ಪ್ರೇತಬಾಧೆ

   

ಪ್ರಶ್ನೆ: ಸರ್,  ನನಗೆ ಬಾಲ್ಯದಿಂದಲೂ ವಿಚಿತ್ರವಾದ ಸಮಸ್ಯೆಯೊಂದು ಕಾಡುತ್ತಿದೆ. ವರ್ಷದಲ್ಲಿ ಒಮ್ಮೆಯಾದರೂ ಈ ರೀತಿಯ ಅನುಭವ ಆಗುತ್ತಲೇ ಇರುತ್ತದೆ. ಗಾಢ ನಿದ್ರೆಯಲ್ಲಿದ್ದಾಗ ಒಮ್ಮಿದೊಂಮ್ಮೆಲೆ ನನ್ನ ಕೂದಲನ್ನು ಯಾರೋ ಜಗ್ಗಿದ ಹಾಗೆ ಆಗುತ್ತದೆ. ಕೆಲವೊಮ್ಮೆ ಯಾರೋ ನನ್ನ ಎದೆಯ ಮೇಲೆ ಅಕ್ಷರಶಃ ಕುಳಿತು ಕತ್ತು ಹಿಸುಕುತ್ತಿರುವಂತೆ, ಆ ಕ್ಷಣ ದೇಹವೆಲ್ಲ ಗಟ್ಟಿಯಾಗಿ ಉಸಿರಾಡಲು ಸಾಧ್ಯವೇ ಆಗದಂಥಾಗುತ್ತದೆ. ಅದರ ತೀವ್ರತೆ ಎಷ್ಟಿರುತ್ತದೆಯೆಂದರೆ ಜೋರಾಗಿ ಕೂಗಿಕೊಳ್ಳಲು ಆಗದೇ, ಮಲಗಿದವಳು ಏಳಲು ಆಗದೇ ಒದ್ದಾಡುವಂತೆ ಆಗುತ್ತದೆ. ಹೀಗೆ ಆಗುವಾಗ  ಕೆಲವೊಮ್ಮೆ ಹಿತವಾದ ದನಿಯೊಂದು ಕೇಳಿಸಿದರೆ, ಇನ್ನು ಕೆಲವೊಮ್ಮೆ ಕರ್ಕಶವಾದ ಹೆಣ್ಣಿನ ದನಿ ರೋಧಿಸಿದಂತೆ ಕೇಳಿಸುತ್ತದೆ. ನನಗೆ ಅಗೋಚರ ಶಕ್ತಿಗಳ ಮೇಲೆ ನಂಬಿಕೆ ಇಲ್ಲ. ಹೀಗಿದ್ದೂ, ಪ್ರೇತಬಾಧೆಯೆಂದು ಹಲವು ಪೂಜೆ–ಪುನಸ್ಕಾರಗಳನ್ನು ಮನೆಯವರ ಅಣತಿಯಂತೆ ಮಾಡಲಾಯಿತು. ಆದರೂ ಈ ರೀತಿಯ ಅನುಭವ ಆಗುತ್ತಲೇ ಇದೆ. ಇದನ್ನು ತಿಳಿದುಕೊಳ್ಳುವುದಕ್ಕಾಗಿಯೇ ಮನಃಶಾಸ್ತ್ರಕ್ಕೆ ಸಂಬಂಧಪಟ್ಟ ಕೋರ್ಸ್‌ ತೆಗೆದುಕೊಂಡಿದ್ದೇನೆ.  ಇದು ನನ್ನ ಸುಪ್ತಪ್ರಜ್ಞೆಯಲ್ಲಿ ಉಳಿದ ಯಾವುದೋ ಗಾಯವಿರಬಹುದಾ ಎಂದು ಕೆದಕಲು ತುಂಬಾ ಶ್ರಮಪಟ್ಟಿದ್ದೇನೆ. ಆದರೆ, ಸೋತಿದ್ದೇನೆ.  ನನ್ನ ಬಾಲ್ಯ ಸೊಗಸಾಗಿತ್ತು. ಅಪ್ಪ, ಅಮ್ಮ, ನಾನು ಮತ್ತು ತಮ್ಮನಿರುವ ಪುಟ್ಟ ಪ್ರೀತಿಯ ಕುಟುಂಬ.ನನ್ನದು ತೃಪ್ತ ಮನಸ್ಸು. ಹಿಂಜರಿಕೆ, ಹತಾಶೆಗಳಿಲ್ಲದ ಸರಳ ಬದುಕು. ಆದರೆ ಹೀಗೆಕೆ ಆಗುತ್ತಿದೆ? ಇದಕ್ಕೆ ಕಾರಣ ಏನಿರಬಹುದು ಎಂದು ಅರ್ಥ ಮಾಡಿಕೊಳ್ಳಲು, ನನ್ನನ್ನು ನಾನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಇದಕ್ಕೆ ಸಂಬಂಧಪಟ್ಟ ಹಾಗೆ ಮನೋವೈದ್ಯರ ಬಳಿಯೂ ಹೋಗಿದ್ದೇನೆ. ಆದರೆ, ಅವರು ಕೊಟ್ಟ ಮಾತ್ರೆ, ಥೆರಪಿಗಳು ಇಂಥ ಭಯಾನಕ ಅನುಭವ ಆದ ಮೇಲೆ ತುಸು ಉಪಯೋಗಕ್ಕೆ ಬಂದವೇ ಹೊರತು, ಈ ಅನುಭವವೇ ಆಗದಂತೆ ತಡೆಯಲು ಸಾಧ್ಯವಾಗಿಲ್ಲ. ಈ ಅನುಭವದಿಂದಾಗಿ ಒಬ್ಬಳೇ ಇರಲು ಹೆದರಿಕೆಯಾಗುತ್ತದೆ. ಇಂಥ ಅನುಭವಗಳು ಯಾಕಾಗುತ್ತವೆ?

ಉತ್ತರ: ಈ ಪ್ರಶ್ನೆಗೆ ನಾನು ಆನುಭಾವಿಕ ನೆಲೆಯಲ್ಲಿ ಉತ್ತರ ಕೊಡಬಹುದಷ್ಟೇ ವಿನಃ ವೈಜ್ಞಾನಿಕವಾಗಿ ಉತ್ತರಿಸುವುದು ಕಷ್ಟ. ಆತ್ಮಗಳು ಇವೆಯೋ, ಇದ್ದರೆ ಅವು ನಮಗೆ ತೊಂದರೆ ಕೊಡುತ್ತವೆಯೋ ಹೀಗೆ ಅನೇಕ ಪ್ರಶ್ನೆಗಳು ನನ್ನ ಮನಸ್ಸಿನಲ್ಲೂ ಕಾಡಿದಂತಹವೇ. ಇತರರಲ್ಲಿ ಕೇಳಿದಾಗ ಅವರು ಕೊಟ್ಟ ಉತ್ತರಗಳ ಆಧಾರ ಮೇಲೆ ನಾನು ನಿಮಗೆ ಇಲ್ಲಿ ಉತ್ತರಿಸುತ್ತಿದ್ದೇನೆ. ಇದನ್ನು ಒಂದಷ್ಟು ಜನ ಒಪ್ಪಿಕೊಳ್ಳಬಹುದು. ಇನ್ನೊಂದಷ್ಟು ಜನ ಒಪ್ಪದೇ ಇರಬಹುದು. ಅದು ಅವರವರವ ಅನುಭವಕ್ಕೆ ಬಿಟ್ಟದ್ದು.

ADVERTISEMENT

ದೇವರಿದ್ದಾನೋ ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕುವುದು ಎಷ್ಟು ಕಷ್ಟವೋ ಅಷ್ಟೇ ಕಷ್ಟ ಪ್ರೇತಗಳು ಅಥವಾ ಆತ್ಮಗಳು ಇವೆಯೋ ಎಂಬುವುದನ್ನು ಉತ್ತರಿಸುವುದು. ಆದರೆ ಅನೇಕರ ಜೀವನದಲ್ಲಿ ಅಗೋಚರ ಶಕ್ತಿಯ ಅನುಭವ ಆದ ದಾಖಲೆಗಳು ಇವೆ. ಉದಾಹರಣೆಗೆ, ಹೋಟೇಲೊಂದರ ಒಂದು ರೂಮಿನಲ್ಲಿ ಉಳಿದುಕೊಂಡವರಿಗೆ ಮಧ್ಯರಾತ್ರಿ ಒಬ್ಬ ಹೆಂಗಸಿನ ಆತ್ಮ ಇದ್ದಂತಹ ಅನುಭವಗಳಾಗಿತ್ತು. ವಿಚಾರಿಸಿದಾಗ, ಅದೇ ರೂಮಿನಲ್ಲಿ ಒಬ್ಬಾಕೆ ಹಿಂದೊಂದು ದಿನ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪದೇ ಪದೇ ಇತರರಿಗೂ ಅಂತಹ ಅನುಭವಗಳಾದಾಗ ಬಹುಷಃ ಆಕೆಯ ಆತ್ಮ ಅಲ್ಲಿ ಇನ್ನೂ ಇದೆಯೋ ಎಂಬ ಸಂಶಯ ಮೂಡಿತು. ಆಮೇಲೆ ಕೆಲವು ಪೂಜೆ, ಮಂತ್ರ - ತಂತ್ರಗಳ ನಂತರ ಅದನ್ನು ತೆಗೆಯಲಾಯಿತು ಮತ್ತು ಆಮೇಲೆ ಅಲ್ಲಿ ಸಮಸ್ಯೆ ಆಗಲಿಲ್ಲ. ಇದನ್ನು ಆಧುನಿಕ ಮನೋವಿಜ್ಞಾನಿಗಳು ಭ್ರಮೆ ಅಥವಾ ಭ್ರಾಂತಿ ಎನ್ನಬಹುದು. ಅಥವಾ ಕಾಕತಾಳೀಯ ಎನ್ನಬಹುದು. ಆದರೆ ಅದನ್ನು ನಿಜವಾಗಿ ಕಂಡವರಿಗೆ ಅದು ಸತ್ಯವೇ ಆಗಿರುತ್ತದೆ.

ಶಮನಿಸಂ ಎನ್ನುವಂತಹ ಪದ್ಧತಿಯಲ್ಲಿ ವೃತ್ತಿಪರರು ಆತ್ಮಗಳ ಜೊತೆ ಸಂವಹಿಸುತ್ತಾರೆ. ಮತ್ತು ಅವುಗಳ ಪ್ರಭಾವವನ್ನು ತೆಗೆಯುತ್ತಾರೆ. ಹಾಗೆಯೇ ನಮ್ಮ ಭಾರತೀಯ ಪದ್ಧತಿಯಲ್ಲೂ ಮಂತ್ರ- ತಂತ್ರಗಳನ್ನು ಮಾಡುವವರು ಇದ್ದಾರೆ. ಇವುಗಳ ಮಾರ್ಗಗಳು ಬೇರೆ ಬೇರೆಯಾದರೂ ಅವುಗಳ ಪರಿಣಾಮಗಳು ಸುಮಾರಾಗಿ ಒಂದೇ ರೀತಿಯದ್ದಾಗಿರಬಹುದು.

ನಿಮಗೆ ಆಗುತ್ತಿರುವಂತಹ ಅನುಭವಗಳನ್ನು ಗಮನಿಸಿದಾಗ, ಇದು ಮನಃಶ್ಶಾಸ್ತ್ರೀಯ ಸಮಸ್ಯೆಗಿಂತ ಭಿನ್ನವಾಗಿ ಕಾಣಿಸುತ್ತದೆ. ಬಹುಷಃ ನೀವು ನಿಮ್ಮ ಮಲಗುವ ಜಾಗವನ್ನು ಬದಲಾಯಿಸಿ ನೋಡಿ. ಅಥವಾ ನೀವು ಮಲಗುವ ಜಾಗದಲ್ಲಿ ಇನ್ಯಾರಾದರೂ ಮನೆಯ ಮಂದಿ ಮಲಗಿ ಅವರಿಗೂ ಈ ರೀತಿಯ ಅನುಭವ ಆಗುತ್ತದೆಯೋ ಅಥವಾ ನಿಮಗೆ ಮಾತ್ರವೋ ಎಂಬುದನ್ನು ಗಮನಿಸಿ. ಮತ್ತು ಇಂತಹ ಸಮಸ್ಯೆಗಳನ್ನು ಸರಿಪಡಿಸುವಂತಹ ವೃತ್ತಿಪರರ ಬಳಿ ಸಹಾಯವನ್ನು ಪಡೆಯಿರಿ. ಇಂತಹ ಸಮಸ್ಯೆಗಳಿಗೆ ಕೌನ್ಸೆಲಿಂಗ್ ಆಗಲೀ ಅಥವಾ ಸೈಕೊಥೆರಪಿ ಆಗಲೀ ಪ್ರಯೋಜನವಾಗಲಿಕ್ಕಿಲ್ಲ. ಯಾಕೆಂದರೆ, ಇದು ಮನಸ್ಸಿಗೆ ಸಂಬಂಧ ಪಟ್ಟಂತಹ ಸಮಸ್ಯೆ ಎಂದು ನನಗೆ ಅನ್ನಿಸುತ್ತಿಲ್ಲ. ನೀವು ಈಗ ಮನಃಶ್ಶಾಸ್ತ್ರವನ್ನು ಕಲಿತಿರುವ ಕಾರಣ ನೀವು ನನ್ನ ಅಭಿಪ್ರಾಯಕ್ಕೆ ಸಹಮತಿಯನ್ನು ಕೊಡುತ್ತೀರೆಂದು ಭಾವಿಸುತ್ತೇನೆ. ಒಳ್ಳೆಯದಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.