ADVERTISEMENT

Ear Care | ಕಿವಿಗಳ ರಕ್ಷಣೆ: ಒಂದು ಕಿವಿಮಾತು

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 0:24 IST
Last Updated 1 ಜುಲೈ 2025, 0:24 IST
<div class="paragraphs"><p>ಕಿವಿಯ ರಕ್ಷಣೆ</p></div>

ಕಿವಿಯ ರಕ್ಷಣೆ

   

– ಐಸ್ಟಾಕ್ ಚಿತ್ರ

ನಮ್ಮ ಜ್ಞಾನೇಂದ್ರಿಯಗಳಲ್ಲಿ ಕಿವಿಯೂ ಒಂದು. ನಮ್ಮ ಸುತ್ತಮುತ್ತಲಿನ ಶಬ್ದದ ತಿಳಿವಳಿಕೆ ಬರುವುದು ಕಿವಿಯ ಮೂಲಕವೇ. ಪ್ರಮುಖವಾದ ವಾತಸ್ಥಾನಗಳಲ್ಲಿ ಇದೂ ಒಂದು. ಇದು ಶ್ರವಣಕ್ಕೂ, ಶರೀರದ ಸಮತೋಲನಕ್ಕೂ ಕಾರಣವಾಗುವ ಪ್ರಮುಖವಾದ ಅಂಗ.

ADVERTISEMENT

ಕಿವಿಯನ್ನು ಹೊರಗಿವಿ (ಕರ್ಣ), ಒಳಗಿವಿ ಮತ್ತು ಇವೆರಡರ ಮಧ್ಯದ ನಡುಗಿವಿ ಎಂದು ವಿಭಾಗಿಸಬಹುದು. ತಲೆಯ ಪಕ್ಕದಲ್ಲಿ ಅಂಟಿಕೊಂಡಂತೆ ಕಾಣುವ ಕಿವಿಯ ಹಾಲೆ ಮತ್ತು ಒಳಗೆ ಹೋಗುವ ಶ್ರವಣನಾಳ ಎರಡೂ ಸೇರಿ ಹೊರಗಿವಿ ಎನ್ನಿಸಿಕೊಳ್ಳುತ್ತವೆ. ನಡುಗಿವಿಯನ್ನು ಒಂದು ಎಲುಬಿನ ಕೊಠಡಿ ಎಂದು ಹೇಳಬಹುದು. ಒಂದು ಕಡೆ ಕರ್ಣಪೊರೆ ಇದೆ. ಈ ಪೊರೆಯ ಒಳಭಾಗಕ್ಕೆ ನಡುಗಿವಿಯಲ್ಲಿ ಮೂರು ಪುಟಾಣಿ ಮೂಳೆಗಳು ಮಣಿಗಳಂತೆ ಕೂಡಿಕೊಂಡಿವೆ. ಧ್ವನಿತರಂಗಗಳು ಕರ್ಣಪೊರೆಗೆ ಅಪ್ಪಳಿಸಿದಾಗ ಇದು ಕಂಪಿಸಿ, ಆ ತರಂಗಗಳನ್ನು ಈ ಮೂರು ಪುಟಾಣಿ ಮೂಳೆಗಳ ಮೂಲಕ ದ್ರವ ತುಂಬಿರುವ ಒಳಗಿವಿಗೆ ಹಾಯಿಸುತ್ತದೆ. ಧ್ವನಿ ತರಂಗಗಳು ಒಳಗಿವಿಯ ದ್ರವದಲ್ಲಿ ಅಲೆಗಳನ್ನು ಉಂಟುಮಾಡಿ ಶ್ರವಣನರದ ಮೂಲಕ ಧ್ವನಿಯನ್ನು ಮಿದುಳಿಗೆ ಕೊಂಡೊಯ್ದು ಮುಟ್ಟಿಸುತ್ತದೆ. ಒಳಗಿವಿ ಮೆದುಳಿಗೆ ಸಂಪರ್ಕಿಸುವ ಭಾಗ. ಇವುಗಳಲ್ಲಿ ಯಾವುದೇ ಭಾಗಕ್ಕೆ ತೊಂದರೆಯಾದರೂ ಕಿವಿಯ ರೋಗಗಳು ಎಂದೆನಿಸಿಕೊಳ್ಳುತ್ತವೆ.

ಕಿವಿಯಲ್ಲಿ ರೋಗಗಳು ಉತ್ಪತ್ತಿಯಾಗಲು ಅನೇಕ ಕಾರಣಗಳಿರುತ್ತವೆ. ಕೆಲವು ಶಾರೀರಿಕ ಕಾರಣಗಳಾದರೆ ಕೆಲವು ಬಾಹ್ಯಕಾರಣಗಳು. ಪ್ರಪ್ರಥಮವಾಗಿ ಕಿವಿಯ ಶಬ್ದಗ್ರಹಣ ಸಾಮರ್ಥ್ಯವನ್ನು ವ್ಯತ್ಯಾಸಗೊಳಿಸುವುದು ಶಬ್ದದ ದುರುಪಯೋಗ, ಶಬ್ದಮಾಲಿನ್ಯ. ಶಬ್ದವನ್ನು ಕೇಳುವ ವಿಧಾನಗಳಲ್ಲಿ ಆಗುವ ವ್ಯತ್ಯಾಸ. ಸಾಮಾನ್ಯವಾಗಿ 60-70 ಡೆಸಿಬೆಲ್ ಪ್ರಮಾಣದ ಸಬ್ದವು ಕಿವಿಗೆ ತೊಂದರೆಯನ್ನು ಉಂಟುಮಾಡುವುದಿಲ್ಲ. 85 ಡೆಸಿಬಲ್‌ಗಳಿಗಿಂತ ಹೆಚ್ಚಿನ ಪ್ರಮಾಣದ ಶಬ್ದವನ್ನು ನಿರಂತರವಾಗಿ ಕೇಳುವುದು ಕಿವಿಯ ನೋವನ್ನು ತರಿಸುವುದರ ಜೊತೆಗೆ ಕಿವಿಯ ಶಬ್ದಗ್ರಹಣ ಸಾಮರ್ಥ್ಯವನ್ನೂ ನಿಧಾನವಾಗಿ ಕಡಿಮೆಮಾಡುತ್ತಾ ಹೋಗುತ್ತದೆ. ನಿರಂತರವಾಗಿ ಅತಿಕಡಿಮೆ ಡೆಲಿಬಲ್‌ನ ಶಬ್ದವನ್ನು ಕೇಳುವುದೂ ಕಿವುಡುತನಕ್ಕೆ, ಮಂಕುತನಕ್ಕೆ. ವಿವೇಚನಾ ರಾಹಿತ್ಯಕ್ಕೆ ಕಾರಣವಾಗಬಹುದು. ಇನ್ನು ಹೆಡ್ ಫೊನ್‌ಗಳ ನಿರಂತರ ಉಪಯೋಗವೂ ಕಿವಿಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇವನ್ನು ಆಯುರ್ವೇದವು ಶಬ್ದದ ಅತಿಯೋಗ, ಹೀನಯೋಗ, ಮಿಥ್ಯಾಯೋಗವೆಂದು ಪರಿಗಣಿಸುತ್ತದೆ.

ಕಿವಿಯಲ್ಲಿ ಶಂಖನಾದದಂತೆ, ಗುಂಯ್ ಶಬ್ದ, ಸಮುದ್ರ ಭೋರ್ಗರೆದಂತೆ ಶಬ್ದ – ಇಂಥ ಶಬ್ದಗಳು ಸದಾಕಾಲ ರಿಂಗಣಿಸುವುದು ಒಂದು ರೋಗವೇ. ಇದು ಕೇವಲ ಶಬ್ದೇಂದ್ರಿಯ ವಿಕೃತಿಯೇ ಅಗಿರಬೇಕಿಲ್ಲ. ಅಜೀರ್ಣ ಮುಂತಾದ ದೀರ್ಘಕಾಲೀನ ಸಮಸ್ಯೆಗಳಿಂದಲೂ, ರಕ್ತಹೀನತೆ ಮುಂತಾದ ಕಾರಣಗಳಿಂದಲೂ ಆಗಿರಬಹುದು. ಕಾರಣವನ್ನು ಅರಿತು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವುದು ಅತ್ಯಾವಶ್ಯಕ.

ಶಬ್ದಗ್ರಹಣಕ್ಕೆ ಸಂಬಂಧಿಸಿದಂತೆ ಅಲ್ಲದೆ ನಮ್ಮ ದೇಹದಲ್ಲಾಗುವ ಆಂತರಿಕ ವಿಕೃತಿಗಳಿಂದಲೂ ಕಿವಿಯ ವಿವಿಧ ಭಾಗಗಳಲ್ಲಿ ಬೇರೆ ಬೇರೆ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹೊರಕಿವಿಯ ಕಿವಿಯ ಚರ್ಮಕ್ಕೆ ಸಂಬಂಧಿಸಿ, ಅಥವಾ ಕಿವಿಯ ಹಾಲೆಯ ಒಳಗಿರುವ ಮೃದ್ವಸ್ಥಿಯಲ್ಲಿ ಕಾಣುವ ವಿಕೃತಿಯಿಂದಲೂ ತೊಂದರೆಗಳು ಉತ್ಪನ್ನವಾಗಿರಬಹುದು. ಇವು ಕಿವಿಯ ಚರ್ಮದ ಸೋಂಕು, ಅಥವಾ ಅಭಿಘಾತದಿಂದ, ಭಾರವಾದ ಕಿವಿಯ ಆಭರಣಗಳನ್ನು ಧರಿಸುವುದರಿಂದ, ಕೆಲವು ಕೃತಕ ಆಭರಣಗಳ ಅಲರ್ಜಿಗಳಿಂದ, ಅನೇಕ ತೊಂದರೆಗಳು ಕಾಣಿಸಿಕೊಳ್ಳಬಹುದು. ಇವು ಶ್ರವಣನಾಳಕ್ಕೂ ಹರಡಬಹುದು. ಆದ್ದರಿಂದ ಕಿವಿಯ ಹಾಲೆಯ ಶುಭ್ರತೆ, ಅದರಲ್ಲೂ ಕಿವಿಯ ಹಿಂಭಾಗವನ್ನು ಶುಭ್ರವಾಗಿಟ್ಟುಕೊಳ್ಳಬೇಕು. ಹೀಗೆ ಸೋಂಕು ಒಳಗಿವಿಯವರೆಗೂ ಹರಡುವುದು ಕಿವುಡುತನಕ್ಕೂ ಕಾರಣವಾಗಬಹುದು. ಆದ್ದರಿಂದ ಆಯುರ್ವೇದವು ಕಿವಿಗೆ ನಿತ್ಯಾಭ್ಯಂಗ ಮಾಡಬೇಕೆಂದು ತಿಳಿಸುತ್ತದೆ.

ಶ್ರವಣನಾಳದಲ್ಲಿ ಗುಗ್ಗೆ ಕಟ್ಟುವುದು, ಗುಗ್ಗೆಯನ್ನು ಶುಭ್ರಗೊಳಿಸದೇ ಇರುವುದರಿಂದ ಗುಗ್ಗಯೂ ಸೋಂಕಿಗೆ ಕಾರಣವಾಗಬಹುದು. ಅಥವಾ ಗುಗ್ಗೆಯ ಒಣಗುವಿಕೆಯೂ ಕಿವಿನೋವು, ಉರಿ, ನೆವೆಗಳನ್ನು ಉತ್ಪತ್ತಿ ಮಾಡಬಹುದು. ಇದು ಕಿವಿಯ ಒಳಭಾಗದ ಕಿವಿಯ ಪೊರೆಗೂ ತೊಂದರೆಯನ್ನು ಉಂಟುಮಾಡಬಹುದು. ಗುಗ್ಗೆ, ಕಡ್ಡಿ, ಹೇರ್‍ಪಿನ್, ಸೇಫ್ಟಿಪಿನ್, ಬೆಂಕಿಕಡ್ಡಿಯಂಥವನ್ನು ಕಿವಿಯ ಒಳಗೆ ಹಾಕುವುದರಿಂದ ಪೊರೆಗೆ ಅಪಾಯ ಸಂಭವಿಸಬಹುದು. ಮಕ್ಕಳು ಆಡುವಾಗ ಕಡ್ಡಿ ತೂರಿಸಿ ಪೊರೆಗೆ ಚುಚ್ಚಿಕೊಳ್ಳಬಹುದು. ಬಲವಾಗಿ ಪೆಟ್ಟು ಬಿದ್ದಾಗ ಶ್ರವಣನಾಳದಲ್ಲಿರುವ ಗಾಳಿ ಪೊರೆಗೆ ಅಪ್ಪಳಿಸಿ ಅಘಾತವಾಗಬಹುದು. ಭಾರೀ ಸದ್ದಿನ ಧ್ವನಿತರಂಗಳಿಂದಲೂ ಪೊರೆ ಒಡೆಯುವುದು ಸಾಧ್ಯ. ಶ್ರವಣನಾಳದಲ್ಲಿರುವ ಗಾಳಿಯನ್ನು ಅಕಸ್ಮಾತ್ತಾಗಿ ಹೊರಗೆ ಸೆಳೆದಾಗಲೂ ಇದೇ ರೀತಿಯ ಅಪಾಯ ಸಂಭವಿಸಬಹುದು. ನಡುಗಿವಿಯ ಚಾವಣಿಯಲ್ಲಿ ಹಾಯುವ ‘ಪೀಟ್ರಸ್’ ಎಲುಬಿನ ಭಾಗ ಏಟಿನಿಂದ ಒಡೆದರೆ ಪೊರೆಯ ಮೇಲ್ಭಾಗ ಹರಿಯಬಹುದು.

ಯಾವುದೇ ಸೋಂಕಿನಿದಲೂ ಕಿವಿಯ ಪೊರೆಗೆ ತೊಂದರೆ ಉಂಟಾಗಬಹುದು. ಆಗ ಕಿವಿ ಸೋರುವುದು, ಉರಿ, ನೋವು ಮುಂತಾದ ಅನೇಕ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಹೀಗೆ ಯಾವುದೇ ಕಾರಣದಿಂದಾಗಲೀ ಪೊರೆ ಒಡೆದರೆ ತತ್‍ಕ್ಷಣ ಕಿವಿಗೆ ಹತ್ತಿಯನ್ನು ತುರುಕಿ, ವ್ಯಕ್ತಿ ವಿಶ್ರಾಂತಿಯನ್ನು ಪಡೆಯಬೇಕು. ಪಿಚಕಾರಿಯಂಥವನ್ನು ಕಿವಿಯ ಒಳಗೆ ಹಾಕುವಂಥವನ್ನು ಮಾಡಬಾರದು.  ಆದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಯನ್ನು ಪಡೆಯಬೇಕು.

ಇನ್ನು ಕಿವಿ, ಮೂಗು, ಕಣ್ಣು, ಗಂಟಲಿಗೆ ಸಂಪರ್ಕ ಕಲ್ಪಿಸುವ ನಾಳವೆಂದರೆ ‘ಈಸ್ಟೇಷಿಯನ್ ನಾಳ’. ಇದರ ಮೂಲಕ ಶಿರಸ್ಸಿನ ಇತರೆ ಭಾಗಗಳಲ್ಲಿ ಉತ್ಪನ್ನವಾಗುವ ತೊಂದರೆಗಳೂ ಕಿವಿಯ ರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಸೂಕ್ತವಾಗಿ ಗಮನಿಸಿ ಚಿಕಿತ್ಸೆಯನ್ನು ಪಡೆಯಬೇಕು.

ತಲೆ ತಿರುಗುವಿಕೆ; ಇದು ಸಾಮಾನ್ಯವಾಗಿ ಆಹಾರದ ಕೊರತೆ ಇದ್ದಲ್ಲಿ, ರಕ್ತ ಕಡಿಮೆ ಇದ್ದಲ್ಲಿ, ತಲೆಯಲ್ಲಿ ರಕ್ತದ ಒತ್ತಡ ಹೆಚ್ಚಿದಾಗ ಕಂಡು ಬರುತ್ತದೆ. ಆದರೆ ಇದಕ್ಕೆ ಮತ್ತೊಂದು ಮುಖ್ಯ ಕಾರಣ ಕಿವಿಯಲ್ಲಿರುವ ಅತಿ ಚಿಕ್ಕದಾದ ಮೂರು ಮೂಳೆಗಳಲ್ಲಿ ಆಗುವ ಸಮತೋಲನದ ವ್ಯತ್ಯಾಸ.

ಹೀಗೆ ಶರೀರದಲ್ಲಾಗುವ ಬದಲಾವಣೆಗಳು ಕಿವಿಯ ಆರೋಗ್ಯದ ಮೇಲೂ, ಕಿವಿಯ ಆರೋಗ್ಯವೂ ಶಿರಸ್ಸಿನ ಆರೋಗ್ಯದ ಮೇಲೂ ಪರಸ್ಪರ ಅವಲಂಬಿತವಾಗಿರುತ್ತವೆ. ಆದ್ದರಿಂದ ಅತಿಮುಖ್ಯವಾದ ಅಂಗವಾದ ಕಿವಿಯ ರಕ್ಷಣೆ ಅತ್ಯಾವಶ್ಯಕ. ಇದಕ್ಕಾಗಿ ಅಯುರ್ವೇದವು ನಿತ್ಯವೂ ಕಿವಿಗೆ ಎಣ್ಣೆ ಹಚ್ಚುವುದನ್ನು ಅತ್ಯಾವಶ್ಯಕ ಎಂಬ ಕಿವಿಮಾತನ್ನು ಹೇಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.