ADVERTISEMENT

ನಂಬಿಕೆ ತಲೆಕೆಳಗಾಗಿಸುವ ಕಿಶಿನ್ ಬಿಲಗಲಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 19:45 IST
Last Updated 26 ಜನವರಿ 2020, 19:45 IST
ಕಿಶಿನ್ 
ಕಿಶಿನ್    

ಬಲಶಾಲಿ ಸ್ಪರ್ಧಿ ಎಂದೇ ಮನೆ ಮಾತಾಗಿದ್ದ ನೃತ್ಯಪಟು ಕಿಶಿನ್‌ ಬಿಲಗಲಿ ಅವರು ಫಿನಾಲೆಗೆ ಎರಡು ವಾರಗಳಿರುವಾಗಲೇ ಬಿಗ್‌ ಬಾಸ್‌ ಮನೆಯಿಂದ ಹೊರಬಿದ್ದರು. ಮೂಲತಃ ಚಿಕ್ಕಮಗಳೂರಿನವರಾದ ಅವರುಮನೆಯಲ್ಲಿ ಇದ್ದಷ್ಟು ಕಾಲ ಸದಾ ಪುಟಿಯುವ ಉತ್ಸಾಹದಂತೆ ಇದ್ದು, ಕ್ರೀಡಾ ಮನೋಭಾವದಿಂದಲೇ ಕಸರತ್ತುಗಳಲ್ಲಿತೊಡಗಿಸಿಕೊಂಡಿದ್ದರು.

ಹಿಂದಿ ರಿಯಾಲಿಟಿ ಶೋ ‘ಡಾನ್ಸ್‌ ದಿವಾನೆ’ಯ ವಿನ್ನರ್‌ ಆಗಿಯೂ ರಾಜ್ಯದಾಚೆಗೂ ಹೆಸರು ಗಳಿಸಿದ್ದಾರೆ. ಜತೆಗೆ ಮಾಧುರಿ ದೀಕ್ಷಿತ್‌ ಅವರಿಂದ ಶಭಾಶ್‌ಗಿರಿ ಪಡೆದು ಸೈ ಅನಿಸಿಕೊಂಡ ನೃತ್ಯಪಟು. ನೃತ್ಯ ಕೊಟ್ಟ ಅವಕಾಶವೇ ಬಿಗ್‌ಬಾಸ್‌ ವೇದಿಕೆಯವರೆಗೆ ಅವರನ್ನು ತಂದು ನಿಲ್ಲಿಸಿದೆ.

ನಿಮ್ಮ ಉತ್ಸಾಹ ಮತ್ತು ದೇಹ ದಾರ್ಢ್ಯತೆಯ ಹಿಂದಿರುವ ಗುಟ್ಟೇನು ಎಂದು ಕೇಳಿದರೆ, ‘ ಅದೇ ನನ್ನ ವ್ಯಕ್ತಿತ್ವ. ಮೊದಲಿನಿಂದಲೂ ವ್ಯಾಯಾಮಶಾಲೆಗೆ ಹೋಗಿ, ಒಂದಷ್ಟು ಸಲಕರಣೆಗಳನ್ನು ಇಟ್ಟುಕೊಂಡು ಅದರೊಂದಿಗೆ ಗುದ್ದಾಡುವುದೆಂದರೆಲ್ಲ ಆಗಿ ಬರುವುದಿಲ್ಲ. ನನ್ನ ದೇಹ ಫಿಟ್‌ ಆಗಿರೊದಕ್ಕೆ ನಾನು ಪ್ರತಿ ಕ್ಷಣವು ಪ್ರೀತಿಸುವ ನೃತ್ಯವೇ ಕಾರಣ’ ಎಂದು ಹೇಳಲು ಅವರು ಮರೆಯುವುದಿಲ್ಲ.

ADVERTISEMENT

‘ಇನ್ನು ತಿನ್ನುವ ವಿಚಾರದಲ್ಲಿ ಯಾವುದೇ ಕಟ್ಟುನಿಟ್ಟನ್ನು ಪಾಲಿಸುವುದಿಲ್ಲ. ನಾನೊಬ್ಬ ತಿಂಡಿಪೋತ. ಆದರೆ, ದೇಹದ ಆಕಾರವನ್ನು ಕಂಡವರು ಮೂರು ಹೊತ್ತು ವ್ಯಾಯಾಮ ಶಾಲೆಯಲ್ಲಿಯೇ ಇರುತ್ತಾನೆ ಎಂದು ಭಾವಿಸಿರಬಹುದು. ಅಥವಾ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಕೊಂಡಿರಬಹುದು ಎಂದು ಅಂದುಕೊಂಡಿರಬಹುದು. ಆದರೆ, ನನಗೆ ಕ್ರೀಡೆಯೆಂದರೂ ಇಷ್ಟವಿಲ್ಲ. ನನ್ನ ಪ್ರಕಾರ ಸಲಕರಣೆಗಳನ್ನು ಇಟ್ಟುಕೊಂಡು ಮಾಡುವುದಷ್ಟೇ ವ್ಯಾಯಾಮವಲ್ಲ’ ಎಂದು ಹೇಳುತ್ತಾರೆ.

‘ಆಹಾರ ಪಥ್ಯ ಎಲ್ಲ ಮಾಡಿದ್ದು ತುಂಬಾ ಕಡಿಮೆ. ಹಾಲು, ತುಪ್ಪ ಇರುವ ಖಾದ್ಯಗಳೆಂದರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತೇನೆ’ ಎನ್ನುವ ಅವರು, ‘ ಫಿಟ್‌ನೆಸ್‌’ ಕುರಿತು ಇರುವ ನಂಬಿಕೆಗಳನ್ನು ತಲೆಕೆಳಗಾಗಿಸುತ್ತಾರೆ.

‘ಬರೀ ಸಲಕರಣೆಗಳನ್ನು ಇಟ್ಟುಕೊಂಡು ವ್ಯಾಯಾಮ ಮಾಡುವುದೆಂದರೆ ಬೋರ್‌. ಹಾಗಾಗಿಯೇ ನಾನು ನನ್ನದೇ ಕಲ್ಪನೆಯ ‘ಟ್ರೈಸ್ಟ್‌; ಎನ್ನುವ ಫಿಟ್‌ನೆಸ್‌ ಸ್ಟುಡಿಯೋವೊಂದನ್ನು ಸೇಂಟ್‌ ಮಾರ್ಕ್ಸ್‌ ರಸ್ತೆಯಲ್ಲಿ ತೆರೆದಿದ್ದೇನೆ. ಇಲ್ಲಿ ಯಾವುದೇ ತರಹದ ವ್ಯಾಯಾಮ ಸಲಕರಣೆಗಳು ಇಲ್ಲ. ಆದರೆ, ತರಬೇತುದಾರರು ಇರುತ್ತಾರೆ. ಗುಂಪಾಗಿ ವ್ಯಾಯಾಮ ಹೇಳಿಕೊಡಲಾಗುತ್ತದೆ’ ಎಂದು ಮಾಹಿತಿ ಒದಗಿಸಿದರು.

‘ಏರಿಯಲ್‌ ಯೋಗ, ಹಗ್ಗದ ಮೂಲಕ ವರ್ಕ್‌ಔಟ್‌ ಹೀಗೆ ವಿಭಿನ್ನ ಪರಿಕಲ್ಪನೆಯ ವ್ಯಾಯಾಮಗಳು ನನ್ನ ಸ್ಟುಡಿಯೋದಲ್ಲಿರುತ್ತದೆ. ಜತೆಗೆ ವ್ಯಾಯಾಮದ ಆರಂಭಿಕ ಪಟ್ಟುಗಳನ್ನು ಹೇಳಿಕೊಡಲಾಗುವುದು’ ಎಂದು ತಿಳಿಸುತ್ತಾರೆ.

ಎಂಟು ವರ್ಷದ ಹುಡುಗನಾಗಿದ್ದಗಿಂದ ನೃತ್ಯ ಅಭ್ಯಾಸ ಮಾಡುತ್ತಿದ್ದೇನೆ. ಇದು ಅಮ್ಮನ ಕನಸು. ಆದರೆ, ನನ್ನೊಳಗೆ ಅವಕಾಶ ಸಿಗದ ದೊಡ್ಡ ನಟ ಇದ್ದಾನೆಯೆಂದೇ ಅನಿಸುತ್ತದೆ. ಆ ನಟನಿಗೆ ಒಳ್ಳೆಯ ಅವಕಾಶ ಸಿಗಲಿ ಎಂದು ಸದಾ ಪ್ರಾರ್ಥಿಸುತ್ತೇನೆ. ಬಿಗ್‌ಬಾಸ್‌ನಿಂದ ಹೊರ ಬಂದ ಮೇಲೆ ಸಿಕ್ಕ ಪ್ರೀತಿ ನೋಡಿದರೆ, ನಿಜಕ್ಕೂ ವಿನ್ನರ್‌ ಆದಷ್ಟೆ ಖುಷಿಯಾಗುತ್ತದೆ ಎನ್ನುವ ಅವರು, ಬಿಗ್‌ಬಾಸ್‌ ದನಿಯನ್ನು ಮಿಸ್‌ ಮಾಡಿಕೊಳ್ಳುತ್ತಾ ಇದ್ದೀನಿ. ಶೈನ್‌ ಶೆಟ್ಟಿ ಗೆಲ್ಲಬಹುದು ಎಂಬ ಅಭಿಪ್ರಾಯ ಅವರದ್ದು.

ಬಿಗ್‌ಬಾಸ್‌ ಎನ್ನುವುದು ಒಂದೊಳ್ಳೆಯ ಪಯಣ. ಇನ್ನಷ್ಟು ತೀವ್ರವಾಗಿ ಬದುಕಲು ಹೇಳಿಕೊಟ್ಟಿದೆ. ತಪ್ಪು, ಸರಿಗಳ ಬಗ್ಗೆ ಅರ್ಥ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಫೈನಲ್‌ವರೆಗೆ ಎಲ್ಲರೂ ಹೋಗಲು ಆಗುವುದಿಲ್ಲ. ಒಬ್ಬರಿಗೆ ಮಾತ್ರ ಗೆಲ್ಲುವ ಅವಕಾಶ ಇರುವುದರಿಂದ ಹೊರಬಿದ್ದಿರುವುದಕ್ಕೆ ಯಾವುದೇ ಬೇಸರವಿಲ್ಲ ಎಂದು ತಾತ್ವಿಕತೆಯನ್ನು ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.