ಆಹಾರದ ಕ್ಯಾಲರಿ ಮತ್ತು ಬೊಜ್ಜನ್ನು ಸರಳ ಸೂತ್ರವಾಗಿ ನೋಡುತ್ತಿದ್ದೆವು. ಹೆಚ್ಚು ತಿಂದರೆ ಖರ್ಚು ಮಾಡದ ಶಕ್ತಿ ಬೊಜ್ಜಾಗಿ ಪರಿಣಮಿಸುತ್ತದೆ. ಸುಮಾರು ಎಂಟು ಸಾವಿರ ಕ್ಯಾಲರಿ ಹೆಚ್ಚಾದರೆ ಒಂದು ಕೆಜಿ ತೂಕ ಹೆಚ್ಚಾಗುತ್ತದೆ ಎಂದು. ಆದರೆ ಇಂದು ಇದು ಅತ್ಯಂತ ಸರಳೀಕೃತವಾದ ಅಸತ್ಯ ಎಂದು ತಿಳಿದುಬಂದಿದೆ.
ಮಾರ್ಕ್ ಟ್ವೈನ್ ‘To eat is human; to digest is divine’ ಎಂದಿದ್ದ. ಒಂದು ರೀತಿಯಲ್ಲಿ ರಸ-ರುಚಿಯ ಅನುಭವ ಮಾತ್ರ ನಿಮ್ಮದಾಗಿರಲಿ, ಉಳಿದದ್ದಕ್ಕೆ ತಲೆಕೆಡಿಸಿಕೊಳ್ಳದಿರಿ ಎನ್ನುವ ಅರ್ಥ.
ಇನ್ನೊಬ್ಬ ತತ್ವಶಾಸ್ತ್ರಜ್ಞ ಜಾರ್ಜ್ ಸಂತಯಾನ ‘ವ್ಯಾಯಾಮವೆನ್ನುವುದು ಕೆಲಸವಿಲ್ಲದ ತಿಂಡಿಪೋತರು ಮತ್ತು ಸೋಮಾರಿಗಳು ಹುಟ್ಟುಹಾಕಿದ ಮೂಢನಂಬಿಕೆ’ ಎಂದು ಮೂದಲಿಸುತ್ತಾನೆ. ನಮ್ಮಲ್ಲಿ ಲಾಲ್‌ಭಾಗ್‌ನಲ್ಲಿ ಒಂದು ಗಂಟೆ ಓಡಾಡಿ ಮ್ಯಾಯಾಮ ಮಾಡಿ ಪಕ್ಕದಲ್ಲೇ ಇರುವ ಎಂಟಿಆರ್‌ಗೆ ಹೋಗಿ ಬಜ್ಜಿ ಬೋಂಡ ತಿನ್ನುವುದಾಗಿದೆ.
ಅನೇಕ ಕಡೆ ಕೆಳಗಡೆ ಕೆಎಫ್‌ಸಿ, ಅಲ್ಲಿಯೇ ಮೇಲುಗಡೆ ಜಿಮ್‌ಗಳನ್ನು ಕಾಣಬಹುದಾಗಿದೆ. ಲಘುಪೇಯ ತಯಾರು ಮಾಡುವ ಕೋಕ್ ಮತ್ತು ಪೆಪ್ಸಿ ಕಂಪನಿಯವರ ವಾದ ನಮ್ಮ ಪಾನೀಯಗಳಲ್ಲಿ ಯಾವುದೇ ದೋಷವಿಲ್ಲ, ನೀವು ಎರಡು ಕಿಲೋಮೀಟರ್ ಓಡಬೇಕಷ್ಟೇ. ನೀವು ಸೋಮಾರಿಗಳಾಗಿ ನಮ್ಮ ಆಹಾರವನ್ನು ದೂಷಣೆಮಾಡಬೇಡಿ ಎಂದು.
ಜಂಕ್ ಫುಡ್ ಅನ್ನು ತಿಂದಿದ್ದರಿಂದ ಬೊಜ್ಜು ಕರಗಿಸಲು ವ್ಯಾವಾಮ ಮಾಡುವುದೋ ಅಥವಾ ಜಂಕ್ ಫುಡ್ ತಿನ್ನುವುದಕ್ಕಾಗಿಯೇ ವ್ಯಾಯಾಮ ಮಾಡುವುದೋ ಎನ್ನುವ ಕಾರ್ಯಕಾರಣ ಸಂಬಂಧ ಹೇಗೆ ನೋಡಿದರೂ ಸರಿ ಎಂದು ತೋರುತ್ತದೆ.
ನಮ್ಮಲ್ಲಿ ಯೋಗವೆಂದರೆ ‘ಸ್ಥಿರಸುಖಂ ಆಸನಂ’ ಎನ್ನುವುದುಂಟು. ಆದರೆ ಇಂದು ಯೋಗಪ್ರಕ್ರಿಯೆಯನ್ನು ಗಮನಿಸಿದರೆ ಸಂಪೂರ್ಣವಾಗಿ ಭೌತಿಕ ಮತ್ತು ದೇಹದಂಡನೆಯ ಅಸ್ತ್ರವಾಗಿ ಮಾತ್ರ ಉಳಿದಿದೆ. ಹೇಗೆಂದರೆ ಆಯುರ್ವೇದವೆಂದರೆ ಬಾಡಿ ಮಸಾಜ್ ಎನ್ನುವಂತೆ.
ಇದುವರೆಗೆ ನಾವು ಆಹಾರದ ಕ್ಯಾಲರಿ ಮತ್ತು ಬೊಜ್ಜನ್ನು ಸರಳ ಸೂತ್ರವಾಗಿ ನೋಡುತ್ತಿದ್ದೆವು. ಹೆಚ್ಚು ತಿಂದರೆ ಖರ್ಚು ಮಾಡದ ಶಕ್ತಿ ಬೊಜ್ಜಾಗಿ ಪರಿಣಮಿಸುತ್ತದೆ. ಸುಮಾರು ಎಂಟು ಸಾವಿರ ಕ್ಯಾಲರಿ ಹೆಚ್ಚಾದರೆ ಒಂದು ಕೆಜಿ ತೂಕ ಹೆಚ್ಚಾಗುತ್ತದೆ ಎಂದು.
ಆದರೆ ಇಂದು ಇದು ಅತ್ಯಂತ ಸರಳೀಕೃತವಾದ ಅಸತ್ಯ ಎಂದು ತಿಳಿದುಬಂದಿದೆ. ಹರ್ಮನ್ ಪಾಂಡ್ಸರ್ ತನ್ನ ಅನೇಕ ವರ್ಷಗಳ ಸಂಶೋಧನೆಯನ್ನು ತನ್ನ ‘ಬರ್ನ್’ ಎಂಬ ಪುಸ್ತಕದಲ್ಲಿ ದಾಖಲಿಸಿರುವುದು ಹೀಗೆ: ‘ಆಫ್ರಿಕಾದ ಹಡ್ಸಾ ಬುಡಕಟ್ಟು ಜನಾಂಗದವರು ನಗರಗಳಲ್ಲಿ ಕಚೇರಿಗಳಲ್ಲಿ ಕೆಲಸ ಮಾಡುವವರಿಗಿಂತ ಸುಮಾರು ಐದರಿಂದ ಹತ್ತು ಪಟ್ಟು ಹೆಚ್ಚು ಶಿಕಾರಿ ಮಾಡುತ್ತಾ ಆಹಾರ ಹುಡುಕುತ್ತಾ ದೇಹವನ್ನು ದಂಡಿಸುತ್ತಾರೆ.
ಆದರೆ ಅವರ ಶಕ್ತಿಯ ಬಳಕೆ ಕಚೇರಿ ಕೆಲಸ ಮಾಡುವವರಿಗಿಂತ ವ್ಯತ್ಯಾಸ ಕಂಡುಬರುವುದಿಲ್ಲ’. ಇದು ನಮ್ಮ ಸಾಮಾನ್ಯಜ್ಞಾನಕ್ಕೆ ಮತ್ತು ಇದುವರೆಗೂ ನಾವು ತಿಳಿದ ವೈಜ್ಞಾನಿಕ ಮಾಹಿತಿಗೆ ಸಂಪೂರ್ಣವಾಗಿ ತದ್ವಿರುದ್ಧವಾಗಿದೆ. ಹಾಗಾಗಿ ಅವನು ತನ್ನ ಪುಸ್ತಕದ ಶೀರ್ಶಿಕೆಯನ್ನು ‘ಬರ್ನ್: ದಿ ಮಿಸ್ ಅಂಡರ್‌ಸ್ಟುಡ್ ಸೈನ್ಸ್ ಆಫ್ ಮೆಟಬಾಲಿಸಂ’, ಅಂದರೆ ’ಪಚನಕ್ರಿಯೆಯ ಪರಿಚಯದ ಪ್ರಮಾದ’ ಎನ್ನಬಹುದು.
ಆತ ಈ ಬುಡಕಟ್ಟು ಜನಾಂಗದವರ ಹಿಂದೆಬಿದ್ದು ಅವರ ಉಸಿರಿನಲ್ಲಿರುವ ಇಂಗಾಲದ ಡೈಆಕ್ಸೈಡ್ ವಿಶ್ಲೇಷಣೆ ಮಾಡುವುದರ ಮೂಲಕ ದೇಹದ ಒಟ್ಟು ಶಕ್ತಿಯ ಬಳಕೆಯನ್ನು ತಿಳಿದುಕೊಳ್ಳುವುದಾಯಿತು. ಇದಕ್ಕೆ ಇಂದು ವಿಜ್ಞಾನದಲ್ಲಿ ಡಬ್ಲಿ ಲೇಬಲ್ಡ್ ವಾಟರ್ ಅಥವಾ ಕೋಲ್ಡ್ ಐಸೋಟೋಪ್‌ಗಳನ್ನು ಬಳಸಿ ಉಸಿರಿನಲ್ಲಿಯೇ ದೇಹ ಬಳಸಿದ ಶಕ್ತಿಯನ್ನು ಅಳೆಯಬಹುದು. ಹಾಗಾದರೆ ಅಷ್ಟು ಹೆಚ್ಚು ಹೆಲಸ ಮಾಡಿದರೂ ಶಕ್ತಿ ಏಕೆ ಬಳಕೆಯಾಗಲಿಲ್ಲ?
ನಾವು ಅನೇಕ ಆಸ್ಪತ್ರೆಗಳಲ್ಲಿ ಮತ್ತು ಪಠ್ಯಪುಸ್ತಕಗಳಲ್ಲಿ ನಾವು ಇಷ್ಟು ಓಡಿದರೆ ಇಂತಹ ಕೆಲಸ ಮಾಡಿದರೆ ಇಷ್ಟು ಶಕ್ತಿ ಎಂದೆಲ್ಲಾ ಕಂಡಿದ್ದೆವಲ್ಲಾ? ಅಥವಾ ನಮ್ಮ ಫಿಟ್‌ನೆಸ್ ವಾಚ್‌ಗಳು ಮತ್ತು ಗ್ಯಾಜೆಟ್‌ಗಳು ತೋರಿಸುವ ಮಾಹಿತಿ ತಪ್ಪಾಗಿದೆಯಾ? ಈ ಪ್ರಶ್ನೆಗಳು ಸಹಜವಾಗಿಯೇ ಬರುವಂತವು. ಪಾಂಡ್ಸರ್‌ನ ಸಂಶೋಧನೆ ಪ್ರಕಾರ ದೇಹ ತನ್ನ ಶಕ್ತಿಯ ಬಳಕೆಯನ್ನು ತನ್ನದೇ ಆದ ರೀತಿಯಲ್ಲಿ ನಿರ್ವಹಿಸತ್ತದೆ. ಹೆಚ್ಚು ವ್ಯಾವಾಮ ಮಾಡಿದಂತೆಲ್ಲಾ ದೇಹ ತನ್ನದೇ ದಾರಿಯನ್ನು ಬಳಸಿ ಶಕ್ತಿಯನ್ನು ಉಳಿಸುವ ಪ್ರಯತ್ನಕ್ಕೆ ಇಳಿಯುತ್ತದೆ. ಅಲ್ಲದೆ ತಿಂದ ಆಹಾರ ಪರಿಪೂರ್ಣವಾಗಿದ್ದು, ನಾರು ಬೇರಿನಿಂದ ಕೂಡಿದ್ದರೆ ಸಂಸ್ಕರಣೆ ಕಡಮೆಯಾಗಿದ್ದಲ್ಲಿ ಆಹಾರದ ಪಚನಕ್ರಿಯೆಗೇ ಹೆಚ್ಚು ಶಕ್ತಿ ವ್ಯಯವಾಗುತ್ತದೆ.
ಈ ರೀತಿ ಆಹಾರ ಪ್ರಕೃತಿದತ್ತವಾಗಿ ಇಡಿತನವನ್ನು ಬಿಡದಿದ್ದರೆ ವ್ಯಾಯಾಮದ ಮೂಲಕ ಖರ್ಚುಮಾಡುವ ಶಕ್ತಿಯನ್ನು ಸುಮಾರಷ್ಟು ಜೀರ್ಣಿಸುವುದಕ್ಕೇ ಬಳಕೆಯಾದರೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಂತಾಗುತ್ತದೆ. ಬಾಳೆದಿಂಡಿನಂತಹ ಆಹಾರವನ್ನು ಜೀರ್ಣಿಸಲು ಖರ್ಚಾಗುವ ಶಕ್ತಿ ಸುಮಾರಷ್ಟು ಅದು ಕೊಡುವ ಶಕ್ತಿಯಷ್ಟೇ ಆಗಬಹುದು. ಅಂತಹ ಆಹಾರಗಳಿಂದ ಬೊಜ್ಜು ಬರುವ ಸಾಧ್ಯತೆಯೇ ಇಲ್ಲ. ಇದು ಬಾಳೆದಿಂಡನ್ನೇ ತಿನ್ನಿರಿ ಎನ್ನುವ ಡಯಟ್ ಸಲಹೆ ಅಲ್ಲ. ಜೀವನಶೈಲಿಯಲ್ಲಿಯೇ ನಿತ್ಯದ ಕೆಲಸಗಳಲ್ಲಿಯೇ ವ್ಯಾಯಾಮ ಹಾಸುಹೊಕ್ಕಾಗಿದ್ದಲ್ಲಿ ಅತ್ಯಂತ ಉತ್ತಮ.
ದೇಹದ ದುಡಿಮೆಯಲ್ಲಿರುವ ಆರೋಗ್ಯಕ್ಕೆ ಪೂರಕವಾದ ಹಲವು ಅಂಶಗಳನ್ನು ಅಲ್ಲಗಳೆಯುವಂತಿಲ್ಲ. ಅದರಲ್ಲಿಯೂ ಸರಳ ಸುಲಭ ಯೋಗಾಭ್ಯಾಸಗಳನ್ನು ಯಂತ್ರತಂತ್ರಗಳ ಬಳಕೆ ಇಲ್ಲದೆ ಸುಲಭವಾಗಿ ಮಾಡಬಹುದಾಗಿದೆ. Man proposes, God disposes ಎನ್ನುವುದನ್ನು ನಮ್ಮ ಆಹಾರ ಬಳಕೆ ಮತ್ತು ಶಕ್ತಿಯ ವ್ಯಯಕ್ಕೂ ಒಂದು ರೀತಿಯಲ್ಲಿ ಸಂಬಂಧಿಸಬಹುದು. ಬುದ್ಧ ಹೇಳಿದಂತೆ, ನೆಲದ ಮೇಲೆ ಮಲಗಿರುವವನು ಕೆಳಕ್ಕೆ ಬೀಳನು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.