ADVERTISEMENT

ಹೃದಯದ ಆರೋಗ್ಯಕ್ಕಿರಲಿ ಉತ್ತಮ ಜೀವನಶೈಲಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 19:30 IST
Last Updated 27 ಸೆಪ್ಟೆಂಬರ್ 2019, 19:30 IST
ಹೃದಯ
ಹೃದಯ   

ಕಳೆದ ಎರಡು ಮೂರು ದಶಕಗಳಲ್ಲಿ ಹೃದ್ರೋಗಗಳ ಬಗ್ಗೆ ಅರಿವು ಮೂಡುತ್ತಿದ್ದು, ಅದನ್ನು ಕೂಲಂಕಷವಾಗಿ ಅರ್ಥೈಸಿಕೊಳ್ಳುವ ರೀತಿಯಲ್ಲೂ ಸುಧಾರಣೆಯಾಗಿದೆ. ಇದು ಹೃದಯ ಸಂಬಂಧಿ ಕಾಯಿಲೆಯ ನಿರ್ವಹಣೆಯ ಮೇಲೆ ಕೂಡ ಸಕಾರಾತ್ಮಕ ಪರಿಣಾಮ ಬೀರಿದೆ ಎನ್ನಬಹುದು.

ನವಜಾತ ಶಿಶುಗಳಲ್ಲಿ ಮತ್ತು ಮಕ್ಕಳಲ್ಲಿ ಕಂಡುಬರುವ ಹೃದಯ ಕಾಯಿಲೆಗಳನ್ನೇ ತೆಗೆದುಕೊಂಡರೆ ಇದು ವಯಸ್ಕರಲ್ಲಿ ಕಂಡುಬರುವ ಹೃದ್ರೋಗಕ್ಕಿಂತ ಸಂಪೂರ್ಣ ಭಿನ್ನ. ನವಜಾತ ಶಿಶುಗಳಲ್ಲಿ ಮತ್ತು ಮಕ್ಕಳಲ್ಲಿ ಕಂಡುಬರುವ ಹೃದ್ರೋಗವನ್ನು ವಿಸ್ತೃತವಾಗಿ ಜನ್ಮಜಾತ (ಭ್ರೂಣಾವಸ್ಥೆಯ ಹಂತದಲ್ಲೇ ಉಂಟಾಗುವ ದೋಷ) ಹೃದ್ರೋಗ ಮತ್ತು ಹುಟ್ಟಿನ ಬಳಿಕ ಉಂಟಾದ ಸಮಸ್ಯೆ ಎಂದು ಎರಡು ಬಗೆಯಲ್ಲಿ ವರ್ಗೀಕರಿಸಬಹುದು. ಹೃದಯದ ಇಮೇಜಿಂಗ್ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಕಾರಕ ಬದಲಾವಣೆಗಳಿಂದಾಗಿ (ಉದಾಹರಣೆಗೆ ಭ್ರೂಣ ಹಂತದ ಎಕೊಕಾರ್ಡಿಯೋಗ್ರಫಿ) ಮತ್ತು ಪರಿಣತರ ಲಭ್ಯತೆಯ ಕಾರಣದಿಂದ ಗರ್ಭಾವಸ್ಥೆಯಲ್ಲೇ ಜನ್ಮಜಾತ ಹೃದ್ರೋಗವನ್ನು ಪತ್ತೆ ಮಾಡುವುದು ಮತ್ತು ಹೆರಿಗೆ ಬಳಿಕ ಸೂಕ್ತ ಚಿಕಿತ್ಸೆ ನೀಡುವುದು ಈಗ ಸಾಧ್ಯವಿದೆ.

ಜನ್ಮಜಾತ ಹೃದಯದ ಸಮಸ್ಯೆ

ADVERTISEMENT

ಜನ್ಮಜಾತವಾಗಿ ಬರುವ ಹೃದಯ ರೋಗಗಳಿಗೆ ಬಹುತೇಕ ವಂಶವಾಹಿ ಕಾರಣ. ಅಂತೆಯೇ ಕೆಲವೊಮ್ಮೆ ಪ್ರಸವ ಅವಧಿಯ ಮಧುಮೇಹ ಕೂಡಾ ಇಂತಹ ಅಪಾಯದ ಸಾಧ್ಯತೆಯನ್ನು ತಂದೊಡ್ಡಬಹುದು. ಜನ್ಮಜಾತ ಹೃದ್ರೋಗ ಹೊಂದಿರುವ ಬಹುತೇಕ ನವಜಾತ ಶಿಶುಗಳಲ್ಲಿ ಉಸಿರಾಟದ ತೊಂದರೆ, ತಾಯಿಯ ಎದೆ ಹಾಲು ಸೇವನೆ ಸರಿಯಾಗಿ ಮಾಡದೇ ಇರುವುದು, ಬೆಳವಣಿಗೆ ಕುಂಠಿತ, ಸಯನೋಸಿಸ್ (ರಕ್ತದಲ್ಲಿ ಆಮ್ಲಜನಕದ ಕೊರತೆ; ಇದರ ಪರಿಣಾಮವಾಗಿ ತುಟಿಗಳು ಮತ್ತು ಉಗುರಿನ ಬುಡ ನೀಲಿಯಾಗುತ್ತವೆ), ನಿತ್ರಾಣ ಮತ್ತು ಚಟುವಟಿಕೆಗಳು ಕುಂಠಿತವಾಗುವುದು ಮತ್ತಿತರ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದರ ಪರಿಣಾಮವಾಗಿ ಶಾಲಾ ಚಟುವಟಿಕೆಗಳಿಗೂ ತೊಂದರೆಯಾಗುತ್ತದೆ. ಪ್ರಸ್ತುತ ಜನ್ಮಜಾತ ಹೃದ್ರೋಗವನ್ನು ಶೀಘ್ರ ಪತ್ತೆ ಮಾಡುವುದರಿಂದ ಮತ್ತು ಕ್ಲಿನಿಕಲ್ ಸೇವಾ ಕ್ಷೇತ್ರಗಳಲ್ಲಿ ಆಗಿರುವ ಸುಧಾರಣೆಗಳಿಂದ (ಉದಾಹರಣೆಗೆ ಹೃದಯದ ಒಳಗೆ ಇರುವ ರಂಧ್ರಗಳನ್ನು ಬೈಪಾಸ್ ಶಸ್ತ್ರಚಿಕಿತ್ಸೆ ಇಲ್ಲದೇ ಕೆಲವು ಸಾಧನಗಳ ಸಹಾಯದಿಂದ ಮುಚ್ಚುವುದು) ಬಹುತೇಕ ಜನ್ಮಜಾತ ಹೃದಯ ಸಮಸ್ಯೆಗಳನ್ನು ಪರಿಹರಿಸಬಹುದು. ಇದರಿಂದಾಗಿ ಅಸ್ವಸ್ಥತೆ ಮತ್ತು ಸಾವಿನ ಪ್ರಮಾಣವನ್ನು ಕೂಡಾ ಕಡಿಮೆ ಮಾಡಬಹುದು.

ಮಕ್ಕಳ ಹೃದ್ರೋಗಕ್ಕೆ ತದ್ವಿರುದ್ಧವಾಗಿ ವಯಸ್ಕರಲ್ಲಿ ಮುಖ್ಯವಾಗಿ ಹೃದಯದ ಸ್ನಾಯು ಮತ್ತು ಮಾಂಸಖಂಡಗಳಿಗೆ ರಕ್ತದ ಹರಿವಿನಲ್ಲಿ ಕೊರತೆಯಾಗಿ ಹೃದ್ರೋಗ ಶುರುವಾಗುತ್ತದೆ. ಇದಕ್ಕೆ ಉದಾಹರಣೆಯೆಂದರೆ, ಅಲ್ಪಪ್ರಮಾಣದ ಅಥವಾ ತೀವ್ರತರ ಎದೆನೋವು, ಎದೆ ಭಾರವಾಗುವಿಕೆ, ತೀವ್ರವಾಗಿ ಬೆವರುವುದು, ತಲೆ ಸುತ್ತು ಬರುವುದು ಮುಂತಾದ ಲಕ್ಷಣಗಳೊಂದಿಗೆ ದಿಢೀರನೇ ಹೃದಯಾಘಾತವಾಗುವುದು. ಆದರೆ ಮಧುಮೇಹ ಇರುವವರಲ್ಲಿ ಈ ರೋಗಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ.

ಸಾವಿಗೆ ಪ್ರಮುಖ ಕಾರಣ

ಈ ಶತಮಾನದ ಆರಂಭದಲ್ಲಿ, ಭಾರತದಲ್ಲಿ ಹೃದ್ರೋಗವು ಸಾವಿಗೆ ಪ್ರಮುಖ ಕಾರಣ ಎನಿಸಿಗೊಂಡಿದೆ. ಇದಕ್ಕೆ ಮುಖ್ಯ ಕಾರಣವೆಂದರೆ, ಮಧುಮೇಹ, ಬೊಜ್ಜು, ಹೈಪರ್‌ಟೆನ್ಷನ್; ಇವೆಲ್ಲದರ ಜತೆಗೆ ವಂಶವಾಹಿ ಅಂಶಗಳು ಕೂಡಾ ಪ್ರಮುಖ ಪಾತ್ರ ವಹಿಸುತ್ತವೆ. ಭಾರತದಲ್ಲಿ ಸುಮಾರು ಏಳು ಕೋಟಿ ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ, ನಾಲ್ಕು ಕೋಟಿ ಮಂದಿ ಮಧುಮೇಹ ಪೂರ್ವ ಲಕ್ಷಣಗಳನ್ನು ಹೊಂದಿದ್ದಾರೆ ಎನ್ನುತ್ತವೆ ಸರ್ಕಾರದ ಅಂಕಿ ಅಂಶಗಳು. ಹೃದ್ರೋಗವು ಪ್ರಮುಖವಾಗಿ ಅತ್ಯಂತ ಉತ್ಪಾದಕ ವಯಸ್ಸಿನ ಜನರ ಮೇಲೆ (ಉದಾಹರಣೆಗೆ 25-55 ವರ್ಷ) ಹೆಚ್ಚಿನ ಪರಿಣಾಮ ಬೀರುತ್ತದೆ.

ಇತ್ತೀಚಿನ ಎರಡು ಅಧ್ಯಯನಗಳ ಪ್ರಕಾರ ಭಾರತದಲ್ಲಿ ಸುಮಾರು 20 ಕೋಟಿ ಮಂದಿ ಹೈಪರ್ ಟೆನ್ಷನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಆರೋಗ್ಯಕರ ಆಹಾರ ಪದ್ಧತಿ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದು ಹೃದಯದ ಕಾಯಿಲೆಯ ವಿರುದ್ಧದ ಅತ್ಯುತ್ತಮ ಅಸ್ತ್ರಗಳು. ನಾವು ಸರಿಯಾದ ಆಹಾರ ಸೇವಿಸಿದಲ್ಲಿ ಅದು ಕೊಲೆಸ್ಟ್ರಾಲ್ ಅಂಶ ಕಡಿಮೆ ಮಾಡುತ್ತದೆ; ರಕ್ತದ ಅಧಿಕ ಒತ್ತಡ ಹಾಗೂ ರಕ್ತದ ಸಕ್ಕರೆ ಮಟ್ಟವನ್ನು ಕೂಡಾ ನಿಯಂತ್ರಿಸುತ್ತದೆ. ಜತೆಗೆ ಆರೋಗ್ಯಕರ ದೇಹತೂಕವನ್ನು ನಿರ್ವಹಿಸುತ್ತದೆ. ನಾವು ಒಟ್ಟಾರೆ ತಿನ್ನುವ ವಿಧಾನದ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಊಟದಲ್ಲಿ ಸೂಕ್ತ ತಿನಸುಗಳು ಸೂಕ್ತ ಪ್ರಮಾಣದಲ್ಲಿ ಇರಬೇಕು (ಇಡಿಯ ಕಾಳಿನಿಂದ ಸಿದ್ಧಪಡಿಸಿದ ಗೋಧಿಹಿಟ್ಟು ಅಥವಾ ಪಾಲಿಶ್ ಮಾಡದ ಕಚ್ಛಾ ಅಕ್ಕಿ, ಹಲವು ಬೇಳೆ ಕಾಳುಗಳು, ಬಣ್ಣಯುಕ್ತ ತಾಜಾ ಹಣ್ಣು ಮತ್ತು ತರಕಾರಿಗಳು, ಕಡಿಮೆ ಕೊಬ್ಬಿನ ಅಂಶ ಇರುವ ಹಾಲು ಮತ್ತು ಮೊಸರು, ಕಚ್ಛಾ ಬೀಜಗಳಾದ ಕಡಲೆಬೀಜ, ಗೋಡಂಬಿ, ಬಾದಾಮಿ, ಮೊಟ್ಟೆಯ ಬಿಳಿಭಾಗ ಮತ್ತು ಮೀನು).

ಹುರಿದ, ಪ್ಯಾಕ್ ಮಾಡಿದ ಮತ್ತು ಸಂಸ್ಕರಿತ ಆಹಾರ ಹಾಗೂ ಕೆಂಪು ಮಾಂಸ ಬಳಕೆಯನ್ನು ಕಡಿಮೆ ಮಾಡಬೇಕು. ಲಭ್ಯವಿರುವ ಪ್ರಕಟಿತ ವೈದ್ಯಕೀಯ ಲೇಖನಗಳ ಪ್ರಕಾರ ಜನಸಾಮಾನ್ಯರಲ್ಲಿ ತುಪ್ಪದ ಸಾಮಾನ್ಯ ಬಳಕೆಯು ಯಾವುದೇ ಹಾನಿಕಾರಕ ಪರಿಣಾಮವನ್ನು ಬೀರುವುದಿಲ್ಲ. ಪ್ರಾಚೀನ ಭಾರತದಲ್ಲಿ ತುಪ್ಪವನ್ನು ಅಡುಗೆ ಎಣ್ಣೆಯಾಗಿ ಬಳಸುವುದಕ್ಕೆ ಆದ್ಯತೆ ನೀಡುತ್ತಿದ್ದರು. ಸಾವಿರಾರು ವರ್ಷಗಳಿಂದ ಇದನ್ನು ವೈದ್ಯಕೀಯ ಶಾಸ್ತ್ರದಲ್ಲೂ ಬಳಸಲಾಗುತ್ತಿತ್ತು. ತುಪ್ಪವು ಕಿರು-ಸರಪಣಿಯ ಕೊಬ್ಬಿನ ಆಮ್ಲವನ್ನು ಹೊಂದಿದ್ದು, ಇದು ಕಣಗಳ ಸೂಕ್ಷ್ಮಾಣುಗಳನ್ನು ಬಲಿಷ್ಠಗೊಳಿಸಲು ಸಹಕಾರಿ. ಜೊತೆಗೆ ಇದನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು. ನಮ್ಮ ಆಹಾರದಲ್ಲಿ ಸೇರಿರುವ ಕೊಲೆಸ್ಟ್ರಾಲ್ ಅಂಶವನ್ನು ವಿರೇಚನಗೊಳಿಸುವಲ್ಲಿ ಮತ್ತು ಜೀರ್ಣಾಂಗ ವ್ಯೂಹದಿಂದ ಆಮ್ಲದ ಅಂಶವನ್ನು ಕಿತ್ತುಹಾಕಲು ಕೂಡಾ ಇದು ಸಹಕಾರಿ. ಈ ಎರಡೂ ಅಂಶಗಳು ಹೃದ್ರೋಗ ಹೊಂದಿರುವ ಜನರಿಗೆ ಅತ್ಯಂತ ಪ್ರಯೋಜನಕಾರಿ.

ಹೃದಯ ಸಮಸ್ಯೆ ತಪ್ಪಿಸಲು ಪೋಷಕರಿಗೆ ಸಲಹೆ

ವೇಗದ ಬದುಕು ಹಾಗೂ ಯುವ ಜೋಡಿಗಳ ಮಾರ್ಪಾಡಾದ ಜೀವನಶೈಲಿ ಬೆಳೆಯುವ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವಂತಹ ಅಂಶಗಳು. (ಉದಾಹರಣೆಗೆ ದಿನದ ಅತ್ಯಂತ ಪ್ರಮುಖ ಆಹಾರ ಎನಿಸಿದ ಬೆಳಿಗ್ಗಿನ ಉಪಾಹಾರವನ್ನು ತಪ್ಪಿಸಿಕೊಳ್ಳುವುದು, ದೈನಂದಿನ ವ್ಯಾಯಾಮಕ್ಕೆ ಸಮಯಾವಕಾಶದ ಕೊರತೆ ಇತ್ಯಾದಿ). ಸುಲಭವಾಗಿ ಹಾಗೂ ತಕ್ಷಣವೇ ಸಿಗುವ ಅಹಾರವು ಸಮತೋಲಿತ ಆಹಾರ ಆಗಿರುವುದು ಕಡಿಮೆ. ಉದಾಹರಣೆಗೆ ಹತ್ತು ಹಲವು ವಿತರಣಾ ಆ್ಯಪ್‌ಗಳು ಅನುಕೂಲಕರ ಸ್ವರೂಪದ್ದಾಗಿದ್ದರೂ ಇವು ಮಧುಮೇಹ ಹಾಗೂ ಬೊಜ್ಜು ಹರಡುವ ವಾಹಕಗಳಾಗಬಹುದು. ಇದು ಹೃದಯ ರೋಗಕ್ಕೆ ಮತ್ತು ಸಾವಿಗೆ ಕೂಡ ಕಾರಣವಾಗಬಹುದು. ಭಾರತದ ಪ್ರಮುಖ ಕಾಲೇಜು ಆಸ್ಪತ್ರೆಯಲ್ಲಿ ನಡೆಸಿದ ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಅರ್ಧಕ್ಕಿಂತ ಹೆಚ್ಚಿನ ತರಬೇತಿ ಹಂತದ ವೈದ್ಯರು (25–35 ವರ್ಷ ವಯಸ್ಸಿನವರು) ಮಧುಮೇಹ ಅಥವಾ ಮಧುಮೇಹ ಪೂರ್ವ ರೋಗಲಕ್ಷಣಗಳಿಂದ ಬಳಲುತ್ತಿದ್ದಾರೆ.

ನಿಯಮಿತ ವ್ಯಾಯಾಮ

ನಿಯಮಿತವಾದ ವ್ಯಾಯಾಮ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ, ರಕ್ತದ ಒತ್ತಡ ನಿಯಂತ್ರಿಸುತ್ತದೆ, ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ, ದೇಹತೂಕವನ್ನು ಸಮಪ್ರಮಾಣದಲ್ಲಿ ನಿರ್ವಹಿಸುತ್ತದೆ. ಏರೋಬಿಕ್ ವ್ಯಾಯಾಮಗಳಾದ ಬಿರುಸಿನ ನಡಿಗೆ, ಓಟ, ಈಜುವುದು ಹಾಗೂ ಸೈಕಲ್ ತುಳಿಯುವುದು ರಕ್ತದ ಪರಿಚಲನೆಯನ್ನು ಸುಧಾರಿಸುತ್ತವೆ ಹಾಗೂ ರಕ್ತದ ಒತ್ತಡವನ್ನು ನಿಯಂತ್ರಿಸುತ್ತವೆ. ರಕ್ತದ ಸಕ್ಕರೆ ಅಂಶ ಕೂಡ ಇದರಿಂದ ನಿಯಂತ್ರಣಕ್ಕೆ ಬರುತ್ತದೆ. ವಾರಕ್ಕೆ ಕನಿಷ್ಠ 150 ನಿಮಿಷಗಳ ಸಾಧಾರಣ ಪ್ರಮಾಣದ ಚಟುವಟಿಕೆಗಳನ್ನು ಶಿಫಾರಸು ಮಾಡಲಾಗಿದೆ. ಪ್ರಾಣಾಯಾಮವನ್ನು ಒಳಗೊಂಡ ಯೋಗ ಮತ್ತು ಧ್ಯಾನ ಕೂಡ ಎಲ್ಲಾ ವಯಸ್ಸಿನ ಜನರಿಗೆ ಪ್ರಯೋಜನಕಾರಿ.

(ಲೇಖಕರು ಮಕ್ಕಳ ಹೃದ್ರೋಗ ಮತ್ತು ಹೃದಯ ಕಸಿ ಸಲಹಾ ತಜ್ಞರು, ನಾರಾಯಣ ಹೆಲ್ತ್, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.