ADVERTISEMENT

ಕೂದಲು: ಕೊಂಚ ಕಾಳಜಿ ಇರಲಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 19:30 IST
Last Updated 21 ಜೂನ್ 2019, 19:30 IST
   

ಹೆಣ್ಣಿರಲಿ, ಗಂಡಿರಲಿ ಕೂದಲು ಎಂದರೆ ಕೊಂಚ ಕಾಳಜಿ ಜಾಸ್ತಿ. ಕೂದಲು ಉದ್ದವಿರಲಿ, ಗಿಡ್ಡವಿರಲಿ, ದಪ್ಪಗಿರಲಿ ಅಥವಾ ತೆಳ್ಳಗಿರಲಿ ಕೂದಲಿನ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಆದರೆ ಈ ಕಾಪಾಡಿಕೊಳ್ಳುವ ಹಂತದಲ್ಲಿಎಲ್ಲಿ ಎಡವುತ್ತಾರೆ ಎಂಬುದು ಅವರ ಅರಿವಿಗೆ ಬರುವುದಿಲ್ಲ.

ಕೂದಲಿಗೆ ಯಾವ ಯಾವ ಕಾರಣಗಳಿಂದ ತೊಂದರೆ ಉಂಟಾಗುತ್ತದೆ, ಅವುಗಳನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಕುರಿತ ಒಂದು ನೋಟ ಇಲ್ಲಿದೆ.

ಅತಿಯಾದ ಔಷಧಿ ಬಳಕೆ

ADVERTISEMENT

‌ಅನಾರೋಗ್ಯದ ಕಾರಣದಿಂದ ಅಥವಾ ಇನ್ನಾವುದೋ ಕಾರಣದಿಂದ ಪ್ರತಿನಿತ್ಯ ಮಾತ್ರೆಗಳನ್ನು ಸೇವಿಸುವವರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇದು ಕೂದಲ ಬೆಳವಣಿಗೆಗೂ ತೊಂದರೆ ಉಂಟು ಮಾಡುತ್ತದೆ. ಅದರಲ್ಲೂ ಸಂತಾನ ನಿಯಂತ್ರಣಕ್ಕೆ ಸೇವಿಸುವ ಮಾತ್ರೆಗಳು ಹೆಚ್ಚು ಹೆಚ್ಚು ಕೂದಲಿನ ಸಮಸ್ಯೆಯನ್ನು ಉಂಟುಮಾಡುತ್ತವೆ.

ಹೀಗೆ ಮಾಡಿ: ಪದೇ ಪದೇ ಕೂದಲು ಉದುರುತ್ತಿದ್ದರೆ ಕೂದಲು ಉದುರುವುದಕ್ಕೆ ಕಾರಣ ಏನು ಎಂಬುದನ್ನು ತಿಳಿದುಕೊಳ್ಳಿ. ವೈದ್ಯರ ಬಳಿ ಪರೀಕ್ಷಿಸಿಕೊಳ್ಳಿ. ಚರ್ಮ ಮತ್ತು ಕೇಶ ತಜ್ಞರ ಸಲಹೆ ಕೇಳಿ ಅದನ್ನು ಪಾಲಿಸಿ.‌

ಜೀವನಶೈಲಿ

ಅತಿಯಾದ ಒತ್ತಡ ಉಂಟು ಮಾಡುವ ಘಟನೆ ಅಥವಾ ವಿಚಾರಗಳು ಮನೆ ಮಾಡಿದ್ದರೆ, ಅವು ಕೂದಲಿನ ಸಮಸ್ಯೆಗೆ ಕಾರಣವಾಗಬಹುದು. ಗರ್ಭಾವಸ್ಥೆಯ ಸಮಯದಲ್ಲಿ, ದೇಹದ ತೂಕದ ಇಳಿಕೆಯಿಂದ ಹಾಗೂ ಶಸ್ತ್ರಚಿಕಿತ್ಸೆಯಿಂದಲೂ ಕೂದಲು ನಷ್ಟವಾಗುತ್ತದೆ. ಆದರೆ ಅದರ ಪರಿಣಾಮಗಳು ತಕ್ಷಣವೇ ಕಂಡುಬರುವುದಿಲ್ಲ. ಕೆಲವು ತಿಂಗಳ ನಂತರ ಕಾಣಿಸಿಕೊಳ್ಳುತ್ತದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿದ್ದರೆ ದೇಹವು ನಿಃಶಕ್ತಿಯಿಂದ ಬಳಲಿ ಕೂದಲು ಶಕ್ತಿ ಕಳೆದುಕೊಂಡು ಉದುರುತ್ತದೆ.

ಹೀಗೆ ಮಾಡಿ: ಅತಿಯಾಗಿ ಆಲೋಚನೆ ಮಾಡುವುದು, ಒತ್ತಡ ತಂದುಕೊಳ್ಳುವುದು, ಕೆಲವು ಘಟನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗುವುದು ಹಾಗೂ ಊಟದಲ್ಲಿ ನಿರ್ಲಕ್ಷ ಸರಿಯಲ್ಲ. ಇವುಗಳು ಕೂದಲಿಗೆ ಮಾತ್ರ ಸಮಸ್ಯೆ ತರುವುದಲ್ಲದೆ ಇಡೀ ದೇಹಕ್ಕೂ ಹಾನಿ ಉಂಟುಮಾಡುತ್ತವೆ. ಹೀಗಾಗಿ ಆದಷ್ಟು ಇವುಗಳಿಂದ ದೂರವಿರಬೇಕು.

ತಲೆ ತುರಿಕೆ

ತಲೆ ಕೆರೆತ ಉಂಟಾದಾಗ ಅತಿಯಾಗಿ ಕೆರೆದುಕೊಳ್ಳುವುದು ಹಾಗೂ ಉಗುರುಗಳಿಂದ ಬುರುಡೆಗೆ ಆಗುವ ಗಾಯಗಳು ಕೂಡ ಕೂದಲಿಗೆ ಹಾನಿ ಮಾಡುತ್ತವೆ. ಇದು ನಿಮ್ಮ ಕೂದಲಿನ ಪೋಷಣೆಯ ಮೇಲೆ ನಿರ್ಧಾರವಾಗುತ್ತದೆ. ಯಾವ ಕ್ರಮಗಳಲ್ಲಿ ಕೂದಲು ರಕ್ಷಣೆಗೆ ಒತ್ತುಕೊಡುತ್ತಿರಿ ಎಂಬುದು ಮುಖ್ಯ.

ಹೀಗೆ ಮಾಡಿ: ತಲೆ ತುರಿಕೆ ಹೆಚ್ಚಿದ್ದರೆ, ಟೀ ಟ್ರೀ ಎಣ್ಣೆಯನ್ನು ಹೊಂದಿರುವ ಶಾಂಪೂ ಬಳಸಿ. ಮನೆಯಲ್ಲೇ ಮಾಡಿದ ಉತ್ಪನ್ನಗಳು ಸಹಾಯ ಮಾಡದಿದ್ದರೆ, ತಜ್ಞ ವೈದ್ಯರ ಸಲಹೆ ಪಡೆಯಿರಿ. ಅಗತ್ಯ ಶಾಂಪೂ ಶಿಫಾರಸು ಮಾಡುತ್ತಾರೆ.

ತಲೆಸ್ನಾನ ಮಾಡಿದ ನಂತರ ಸಾಮಾನ್ಯವಾಗಿಒದ್ದೆ ಕೂದಲನ್ನು ಟವೆಲ್‌ನಿಂದ ಒರಟಾಗಿ ಉಜ್ಜುತ್ತಾರೆ. ಇನ್ನೂ ಕೆಲವರು ಟವೆಲ್‌ನಿಂದ ಕೂದಲು ಬಡಿಯುತ್ತಾರೆ. ಇದರಿಂದ ಕೂದಲಿನ ಬೇರಿಗೆ ಹಾನಿಯಾಗುತ್ತದೆ. ಇನ್ನು ಕೆಲವರು ಒದ್ದೆ ಕೂದಲನ್ನು ಜಡೆ ಕಟ್ಟಿಕೊಳ್ಳುತ್ತಾರೆ. ಇದು ಕೇಶವನ್ನು ಬಲಹೀನ ಮಾಡುತ್ತದೆ. ತಲೆ ಬೆವರುವುದರಿಂದ ದೂಳು ಸೇರಿ ತಲೆಗೂದಲಿನಲ್ಲಿ ಹೊಟ್ಟು ಹೆಚ್ಚಾಗುತ್ತದೆ. ಬುಡ ಸಡಿಲವಾಗಿ ಕೂದಲು ಉದುರಬಹುದು.

ಹೀಗೆ ಮಾಡಿ: ಹೆಚ್ಚು ಒರಟಾಗಿ ಕೂದಲನ್ನು ಉಜ್ಜುವುದು ಒಳಿತಲ್ಲ. ಸಾಧ್ಯವಾದಷ್ಟು ಮೃದುವಾಗಿ ಉಜ್ಜುವುದು ಉತ್ತಮ.ಒದ್ದೆ ಕೂದಲನ್ನು ಗಾಳಿಗೆ ಒಣಗಿಸುವುದು ಆರೋಗ್ಯಕರ. ಹೊಟ್ಟು ನಿವಾರಣೆಗೆ ಸೂಕ್ತವಾದ ಶಾಂಪೂ ಬಳಸಿ. ಪರಿಹಾರ ಕಾಣದಿದ್ದರೆ ವೈದ್ಯರ ಸಲಹೆ ಪಡೆಯಿರಿ.

ಮಾಲಿನ್ಯ

ಮಾಲಿನ್ಯದಿಂದ ಕೂಡಿದ ಪರಿಸರವೂ ಕೇಶ ಸೌಂದರ್ಯವನ್ನು ಹಾಳುಗೆಡವುತ್ತದೆ. ಆರ್ಸೆನಿಕ್, ನೈಟ್ರೋಜನ್‌, ಹೈಡ್ರೋಜನ್, ಹೈಡ್ರೋಕಾರ್ಬನ್‌ನಂತಹ ಅಂಶಗಳು ತಲೆಗೂದಲಿನ ಚರ್ಮದ ರಂಧ್ರಗಳಲ್ಲಿ ಶೇಖರಣೆಯಾಗಿ ಕೂದಲಿನ ಬುಡವನ್ನು ದುರ್ಬಲಗೊಳ್ಳುವಂತೆ ಮಾಡುತ್ತವೆ.

ಹೀಗೆ ಮಾಡಿ: ದೂಳು ತುಂಬಿದ ವಾತಾವರಣದಿಂದ ದೂರವಿರಿ. ಅನಿವಾರ್ಯ ಸಂದರ್ಭದಲ್ಲಿ ತಲೆಗೆ ಟೋಪಿ ಧರಿಸಿ ರಕ್ಷಿಸಿಕೊಳ್ಳಿ. ಹೆಚ್ಚು ಸಮಯ ಟೋಪಿ ಧರಿಸುವುದು ಕೂಡ ಸುರಕ್ಷಿತವಲ್ಲ.

ನೀರಿನ ಗುಣಮಟ್ಟ

ಹೊಸ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿನ ನೀರಿನಲ್ಲಿ ಸ್ನಾನ ಮಾಡಿದಾಗ ಆ ನೀರಿನಲ್ಲಿನ ಹಾನಿಕಾರಕ ಅಂಶಗಳು ಕೂದಲನ್ನು ರೋಗಕ್ಕೆ ತುತ್ತಾಗುವಂತೆ ಮಾಡುತ್ತವೆ.ಕ್ಯಾಲ್ಸಿಯಂ, ತಾಮ್ರದಂತಹ ಮಾಲಿನ್ಯಕಾರಕಗಳು ಕೂದಲಿನ ತೇವಾಂಶವನ್ನು ತೆಗೆದು ಹಾಕುತ್ತವೆ. ಇದರಿಂದ ಕೂದಲಿನ ಬೇರು ಸಡಿಲವಾಗುತ್ತದೆ. ಸಾರ್ಜಜನಿಕ ಈಜುಗೊಳದಲ್ಲಿ ಸ್ವಚ್ಛತೆ ಇಲ್ಲದಿದ್ದರೆ ಅಲ್ಲಿ ಈಜುವುದರಿಂದ ಕೇಶ ಉದುರುವ ಸಾಧ್ಯತೆಗಳು ಹೆಚ್ಚು.

ಹೀಗೆ ಮಾಡಿ: ಬೇರೆ ಸ್ಥಳಕ್ಕೆ ತೆರಳಿದಾಗ ತಲೆ ಸ್ನಾನ ಮಾಡುವಾಗ ನೀರಿನ ಬಗ್ಗೆ ಗಮನವಿರಲಿ. ಈಜುಗೊಳದಲ್ಲಿ ಈಜುವ ಮುನ್ನ ಸ್ವಚ್ಛತೆಯನ್ನು ಗಮನಿಸಿ, ತಲೆಗೆ ಎಣ್ಣೆ ಹಚ್ಚಿಕೊಂಡು ಸ್ವಿಮ್ಮಿಂಗ್‌ ಕ್ಯಾಪ್‌ ಧರಿಸಿ ಈಜಿ.

ಸೂರ್ಯನ ಕಿರಣ ನೇರವಾಗಿ ಕೂದಲಿಗೆ ತಾಗದಂತೆ ನೋಡಿಕೊಳ್ಳಿ: ಅತಿ ನೇರಳೆ ಕಿರಣಗಳುಕೂದಲಿಗೆ ನೇರವಾಗಿ ತಾಗುವುದರಿಂದ ಕೂದಲು ಒರಟಾಗಿ ತೇವ ರಹಿತವಾಗುತ್ತದೆ.

ಕಡಿಮೆ ನಿದ್ದೆ

ತಲೆ ಕೂದಲು ಉದುರಲು ನಿದ್ದೆಯೂ ಕಾರಣ. ಕೆಲಸದ ಒತ್ತಡ, ಕುಟುಂಬ ಸಮಸ್ಯೆ ಹೀಗೆ ಅನೇಕ ಕಾರಣಗಳಿಂದ ಅನೇಕರು ಕೇವಲ 4– 5 ಗಂಟೆ ನಿದ್ದೆ ಮಾಡುತ್ತಾರೆ. ಇದು ಆರೋಗ್ಯದ ಜೊತೆಗೆ ಕೂದಲಿನ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಕೂದಲ ಬೆಳವಣಿಗೆ ಕುಂಠಿತವಾಗುತ್ತದೆ. ಕೂದಲು ಉದುರುತ್ತಿದೆ ಎಂದಾಗ ಔಷಧಿಯ ಮೊರೆ ಹೋಗುವುದು ಸಾಮಾನ್ಯ. ಆದರೆ ಇದರಿಂದ ಕೆಲ ದಿನಗಳ ಕಾಲ ಉದುರುವುದು ನಿಂತರೂ ಮತ್ತೆ ಹೆಚ್ಚು ಹೆಚ್ಚು ಉದುರಲು ಆರಂಭಿಸುತ್ತದೆ. ಹೀಗಾಗಿ ನಿದ್ದೆಗೆಡುವುದರಿಂದ ನಮ್ಮ ಕೂದಲಿಗೆ ನಾವೇ ಕತ್ತರಿ ಹಾಕಿಕೊಂಡಂತೆ.

ಹೀಗೆ ಮಾಡಿ: ಆರೋಗ್ಯವಂತ ಮನುಷ್ಯ ದಿನಕ್ಕೆ 8 ಗಂಟೆ ನಿದ್ದೆ ಮಾಡಬೇಕು. ಸಮ ಪ್ರಮಾಣದ ನಿದ್ದೆಯಿಂದ ಕೂದಲು ಸದೃಢವಾಗಿ ಬೆಳೆಯುತ್ತದೆ. ನಿದ್ದೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲದೇ ಇದ್ದರೂ ಕೂದಲು ಉದುರುತ್ತಿದೆ ಎಂದರೆ ಅದಕ್ಕೆ ಕಾರಣವೇನು ಎಂಬುದನ್ನು ವೈದ್ಯರಿಂದ ತಿಳಿದುಕೊಳ್ಳಿ.

ಕಡಿಮೆ ನಿದ್ದೆ

ತಲೆ ಕೂದಲು ಉದುರಲು ನಿದ್ದೆಯೂ ಕಾರಣ. ಕೆಲಸದ ಒತ್ತಡ, ಕುಟುಂಬ ಸಮಸ್ಯೆ ಹೀಗೆ ಅನೇಕ ಕಾರಣಗಳಿಂದ ಅನೇಕರು ಕೇವಲ 4 ರಿಂದ 5 ಗಂಟೆ ನಿದ್ದೆ ಮಾಡುತ್ತಾರೆ. ಇದು ಆರೋಗ್ಯದ ಜೊತೆಗೆ ಕೂದಲ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಕೂದಲ ಬೆಳೆವಣಿಗೆ ಕುಂಠಿತವಾಗುತ್ತದೆ. ಕೂದಲು ಉದುರುತ್ತಿದೆ ಎಂದಾಗ ಔಷಧಿಗಳ ಮೊರೆ ಹೋಗುವುದು ಸಾಮಾನ್ಯ. ಆದರೆ ಇದರಿಂದ ಕೆಲ ದಿನಗಳ ಕಾಲ ಉದುರುವುದು ನಿಂತರೂ ಮತ್ತೆ ಹೆಚ್ಚು ಹೆಚ್ಚು ಉದುರಲು ಆರಂಭಿಸುತ್ತದೆ. ಹಾಗಾಗಿ ನಿದ್ದೆಗೆಡುವುದರಿಂದ ನಮ್ಮ ಕೂದಲಿಗೆ ನಾವೇ ಕತ್ತರಿ ಹಾಕಿಕೊಂಡಂತೆ.

ಹೀಗೆ ಮಾಡಿ: ಆರೋಗ್ಯವಂತ ಮನುಷ್ಯ ದಿನಕ್ಕೆ 8 ಗಂಟೆ ನಿದ್ದೆ ಮಾಡಬೇಕು. ಸಮ ಪ್ರಮಾಣದ ನಿದ್ದೆಯಿಂದ ಕೂದಲು ಸದೃಢವಾಗಿ ಬೆಳೆಯುತ್ತದೆ. ನಿದ್ದೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲದೇ ಇದ್ದರೂ ಕೂದಲು ಉದುರುತ್ತಿದೆ ಎಂದರೆ ಅದಕ್ಕೆ ಕಾರಣ ಎಂಬುದನ್ನು ವೈದ್ಯರಿಂದ ತಿಳಿದುಕೊಳ್ಳಿ.

ಕೂದಲ ರಕ್ಷಣೆಗೆ ಇದೆ ’ಹೇರ್‌ಪ್ಯಾಕ್‌’

ಕೂದಲ ಆರೋಗ್ಯ ಕಾಪಾಡಲು ಅನೇಕ ಗಿಡಮೂಲಿಕೆ ಔಷಧಿಗಳಿವೆ. ಮನೆಯಲ್ಲಿಯೇ ಸಿಗುವ ಕೆಲ ಪದಾರ್ಥಗಳಿಂದಲೂ ಕೂದಲಿನ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ಅಂತಹವುಗಳಲ್ಲಿ ಕೆಲವು ಇಲ್ಲಿವೆ.

ಮೆಂತ್ಯಕಾಳು: ಮೆಂತ್ಯಕಾಳನ್ನು ನೀರಿನಲ್ಲಿ ನೆನೆಸಿ ಚೆನ್ನಾಗಿ ರುಬ್ಬಿ ಮೊಸರನ್ನು ಸೇರಿಸಿ ಪೇಸ್ಟ್ ಮಾಡಿ ಕೂದಲ ಬುಡಕ್ಕೆ ಹಚ್ಚುವುದರಿಂದ ಕೂದಲ ಬುಡ ಗಟ್ಟಿಯಾಗುವುದಲ್ಲದೇ ಕೂದಲು ನಯವಾಗುತ್ತದೆ.

ದಾಸವಾಳ: ದಾಸವಾಳ ಸೊಪ್ಪು ಹಾಗೂ ಹೂವಿನ ದಳಗಳನ್ನು ಸೇರಿಸಿ ರುಬ್ಬಿ ಕೂದಲಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ಕೂದಲು ನಯವಾಗುತ್ತದೆ.

ಒಂದೇಲಗ ಹಾಗೂ ಕರಿಬೇವು: ಕರಿಬೇವಿನ ಎಲೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ತೆಂಗಿನಣ್ಣೆ ಹಾಗೂ ಒಂದೇಲಗ ಗಿಡದ ಬೇರಿನೊಂದಿಗೆ ಸೇರಿ ಕುದಿಸಿ, ಸೋಸಿ 3 ದಿನಕ್ಕೊಮ್ಮೆ ಹಚ್ಚಿಕೊಂಡರೆ ಕೂದಲು ಉದುರುವುದು ನಿಲ್ಲುತ್ತದೆ.

ಈರುಳ್ಳಿ ರಸ: ಈರುಳ್ಳಿಯನ್ನು ಮಿಕ್ಸಿಯಲ್ಲಿ ರುಬ್ಬಿ ರಸವನ್ನು ಹಿಂಡಿ ಅದನ್ನು ಕೂದಲ ಬುಡಕ್ಕೆ ಹಚ್ಚಿಕೊಂಡರೆ ಕೂದಲು ಉದುರುವುದು ನಿಲ್ಲುತ್ತದೆ.

ಮೊಸರು ಹಾಗೂ ಲೋಳೆಸರ: ಮೊಸರಿನಲ್ಲಿ ಲೋಳೆಸರದ ತಿರುಳನ್ನು ಸೇರಿಸಿ ಪ್ಯಾಕ್ ತಯಾರಿಸಿ ಕೂದಲಿಗೆ ಹಚ್ಚುವುದರಿಂದ ಕೂದಲು ನಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.