ADVERTISEMENT

ಏನಾದ್ರೂ ಕೇಳ್ಬೋದು: ಮನೋವಿಕಾರಕ್ಕೆ ಪರಿಹಾರವೇನು?

ನಡಹಳ್ಳಿ ವಂಸತ್‌
Published 2 ಡಿಸೆಂಬರ್ 2023, 0:30 IST
Last Updated 2 ಡಿಸೆಂಬರ್ 2023, 0:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನನ್ನ ಹೆಂಡತಿಗೆ 44 ವರ್ಷ. ಹುಣ್ಣಿಮೆ ಮತ್ತು ಅಮಾವಾಸ್ಯೆಯ ಸಮಯದಲ್ಲಿ ಅವಳಲ್ಲಿ ಹಿಂಸೆ ಕೆರಳುತ್ತದೆ. ಅವಳು ತುಂಬಾ ದಂಗೆಕೋರಳಾಗಿದ್ದಾಳೆ. ತನ್ನ ಸುತ್ತಲಿನ ಯಾರ ಮಾತನ್ನೂ ಕೇಳುವುದಿಲ್ಲ, ವಾಸ್ತವವಾಗಿ ಸಲಹೆಗೆ ವಿರುದ್ಧವಾಗಿ ವರ್ತಿಸುತ್ತಾಳೆ. ಅವಳು ಎಲ್ಲರನ್ನು ತೀವ್ರವಾಗಿ ನಿಯಂತ್ರಿಸುತ್ತಾಳೆ. ಮನೋವೈದ್ಯಕೀಯ ಚಿಕಿತ್ಸೆ ಮತ್ತು ಸಮಾಲೋಚನೆ ಯಾವುದೇ ಸಹಾಯವಾಗಲಿಲ್ಲ. ಮನೆಯಲ್ಲಿ ಯಾವಾಗಲೂ ಎಲ್ಲರನ್ನೂ ನಿಂದಿಸುತ್ತಿರುತ್ತಾಳೆ. ನನ್ನ ಹದಿಹರೆಯದ ಮಗಳು ಮಾನಸಿಕ ಆಘಾತದಿಂದ ಹೊರಬರಲು ಸಾಧ್ಯವಾಗದೆ ಆತ್ಮಹತ್ಯೆಗೆ ಯತ್ನಿಸಿದಳು. ಮಕ್ಕಳ ಭವಿಷ್ಯ ಮತ್ತು ಸಾಮಾಜಿಕ ಕಳಂಕಕ್ಕೆ ಹೆದರಿ ವಿಚ್ಛೇದನ ಪಡೆಯಲು ಹಿಂಜರಿಯುತ್ತಿದ್ದೇನೆ. ಹಿಂಸಿಸುವ ಹೆಂಡತಿಯನ್ನು ಹೇಗೆ ಸಹಿಸಿಕೊಳ್ಳಬೇಕು?.

-ಹೆಸರು ಊರು ತಿಳಿಸಿಲ್ಲ.

ADVERTISEMENT

ಪತ್ನಿಯ ಮಾನಸಿಕ ಸಮಸ್ಯೆಯಿಂದಾಗಿ ನಿಮ್ಮ ಇಡೀ ಕುಟುಂಬ ಅಸಹನೀಯ ಪರಿಸ್ಥಿತಿಗಳನ್ನು ಎದುರಿಸುತ್ತದೆ. ನಿಮ್ಮೆಲ್ಲಾ ಪ್ರಾಮಾಣಿಕ ಪ್ರಯತ್ನಗಳಿಂದ ಯಾವುದೇ ಬದಲಾವಣೆ ಸಾಧ್ಯವಾಗುತ್ತಿಲ್ಲ. ನಿಮ್ಮ ಬೇಸರ ಹತಾಶೆ ಹೆಚ್ಚಾಗುತ್ತಿದೆ. ಈ ಎಲ್ಲದರ ದುಷ್ಪರಿಣಾಮಗಳನ್ನು ಮಕ್ಕಳೂ ಎದುರಿಸುತ್ತಿದ್ದಾರೆ.

ನಿಮ್ಮ ಸಮಸ್ಯೆಗೆ ಎರಡು ಮುಖಗಳಿವೆ. ಮೊದಲನೆಯದು ಹೆಂಡತಿಯ ಮಾನಸಿಕ ಸಮಸ್ಯೆ. ಇದರ ಹಿನ್ನೆಲೆ ಅವರ ಬಾಲ್ಯದ ಅನುಭವಗಳಲ್ಲಿದೆ. ಬಾಲ್ಯದಲ್ಲಿ ಅವರು ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ್ದಾರೆ. ತೀವ್ರವಾಗಿ ಟೀಕಿಸುವ ಹಿಂಸಿಸುವ ಪೋಷಕರು ಅಥವಾ ಯಾವುದೇ ಭಾವನಾತ್ಮಕ ಬೆಂಬಲ ದೊರೆಯದ ಕೌಟುಂಬಿಕ ವಾತಾವರಣ ಅಥವಾ ಅಸ್ಥಿರ ಕೌಟುಂಬಿಕ ಸಂಬಂಧಗಳು ಮುಂತಾದವುಗಳನ್ನು ಅವರು ಎದುರಿಸಿರುವ ಸಾಧ್ಯತೆಗಳಿವೆ. ಇಂತವರಿಗೆ ಯಾವ ಸಂಬಂಧದಲ್ಲೂ ನಂಬಿಕೆ ಉಳಿದಿರುವುದಿಲ್ಲ. ಬಹಳ ಅಭದ್ರತೆಯಿಂದ ನರಳುತ್ತಿರುವ ಇವರು ಎಲ್ಲರ ಮೇಲೂ ದಬ್ಬಾಳಿಕೆ ಮಾಡಿ ಅವರನ್ನು ನಿಯಂತ್ರಿಸುವುದಕ್ಕೆ ಮಾತ್ರ ಪ್ರಯತ್ನಿಸುತ್ತಾರೆ. ಸಹಜವಾದ ಕೌಟುಂಬಿಕ ಸಂಬಂಧಗಳ ಮಾದರಿ ಅವರಿಗೆ ಬಾಲ್ಯದಲ್ಲಿ ಸಿಕ್ಕಿರುವುದಿಲ್ಲ. ಇದರ ಪರಿಣಾಮಗಳು ಜೀವಮಾನವಿಡೀ ಉಳಿಯುವ ಸಾಧ್ಯತೆಗಳಿರುತ್ತವೆ. ಕೇವಲ ಮಾತ್ರೆಗಳಿಂದ ಎಲ್ಲಾ ಬದಲಾವಣೆಗಳೂ ಸಾಧ್ಯವಾಗಲಾರದು. ದೀರ್ಘಕಾಲದ (ಕಡಿಮೆಯೆಂದರೆ ಒಂದು ವರ್ಷ) ಮನೋಚಿಕಿತ್ಸೆಯ (Psychotherapy) ಅಗತ್ಯವಿದೆ. ಇಂತಹ ತಜ್ಞರ ಸೇವೆ ಲಭ್ಯವಿದ್ದರೆ ಬಳಸಿಕೊಳ್ಳಿ.

ಎರಡನೆಯದು ಕುಟುಂಬದ ಉಳಿದ ಸದಸ್ಯರ ಮಾನಸಿಕ ಸ್ಥಿತಿ. ಇದರ ಬಗೆಗೆ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಕುಟುಂಬದ ಸಂಪೂರ್ಣ ವಾತಾವರಣದಲ್ಲಿ ಆತಂಕ ತುಂಬಿರುವಾಗ ನಿಮ್ಮ ಮನಸ್ಸಿನ ಸಮಾಧಾನ ಉಳಿಸಿಕೊಳ್ಳುವುದು ಸುಲಭವಲ್ಲ. ಹಾಗಾಗಿ ಮೊದಲು ನೀವು ಮನೋಚಿಕಿತ್ಸಕರನ್ನು ಭೇಟಿಯಾಗಿ. ನಿಮಗೆ ಮಾತ್ರೆಗಳ ಅಗತ್ಯವಿಲ್ಲ. ಆದರೆ ಹಿಡಿತದಲ್ಲಿ ಇಲ್ಲದ ವಿಷಮ ಕೌಟುಂಬಿಕ ವಾತಾವರಣದಲ್ಲಿ ನೀವು ಮನಸ್ಸಿನ ಸಮಾಧಾನ ಸಮತೋಲನ ಕಳೆದುಕೊಂಡರೆ ಮಕ್ಕಳಿಗೆ ಉಳಿದಿರುವ ಏಕೈಕ ಮಾನಸಿಕ ಬೆಂಬಲ ತಪ್ಪಿಹೋಗುತ್ತದೆ. ಹಾಗಾಗಿ ನಿಮ್ಮ ಬೇಸರ ಅಸಹಾಯಕತೆ ದುಃಖ ಕೋಪ ಮುಂತಾದವುಗಳನ್ನು ನಿಭಾಯಿಸುವನ್ನು ಕಲಿಯಬೇಕಾಗಿದೆ. ಮನೋಚಕಿತ್ಸೆಯ ಅಗತ್ಯ ಮಕ್ಕಳಿಗೂ ಇದೆ. ಸಾಧ್ಯವಿದ್ದರೆ ನೀವು ಮತ್ತು ಮಕ್ಕಳು ತಜ್ಞರ ಸಹಾಯ ಪಡೆಯಿರಿ.

ನಿಮ್ಮ ಮತ್ತು ಮಕ್ಕಳ ಮಾನಸಿಕ ದೈಹಿಕ ಆರೋಗ್ಯ ನಿಮ್ಮ ಪ್ರಮುಖ ಕಾಳಜಿಯಾಗಿರಲಿ. ವಿಚ್ಛೇದನವನ್ನು ಸಾಮಾಜಿಕ ಕಳಂಕವಾಗಿ ನೋಡುವ ಅಗತ್ಯವೇನಿಲ್ಲ. ಪರಿಸ್ಥಿತಿಗಳು ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎನ್ನಿಸಿದರೆ ವಿಚ್ಚೇದನದ ಕುರಿತು ಯೋಚಿಸಬಹುದು. ಇದಕ್ಕೆ ಸಾಕಷ್ಟು ಕಾನೂನಿನ ತೊಡಕುಗಳಿರುತ್ತವೆ. ಸಂಗಾತಿಯ ಮಾನಸಿಕ ಅಸ್ವಾಸ್ಥ್ಯ ವಿಚ್ಚೇದನಕ್ಕೆ ಕಾರಣವಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ತಾತ್ಕಾಲಿಕವಾಗಿ ಪತ್ನಿಯನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡುವ ಸಾಧ್ಯತೆಗಳ ಕುರಿತು ಯೋಚಿಸಿ. ಇಂತಹ ವ್ಯವಸ್ಥೆಯಿರುವ ಪುನರ್ವಸತಿ ಕೇಂದ್ರಗಳಿವೆ. ಅವುಗಳನ್ನು ಸಂಪರ್ಕಿಸಿ.

ಹದಿಹರೆಯ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮೋಚಿಕಿತ್ಸಕ ನಡಹಳ್ಳಿ ವಸಂತ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.inಗೆ ಕಳುಹಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.