ADVERTISEMENT

ಗಾಯದ ಮೇಲೆ ಗಮನ ಇರಲಿ

ಡಾ.ಪಲ್ಲವಿ ಹೆಗಡೆ
Published 11 ಜುಲೈ 2022, 19:30 IST
Last Updated 11 ಜುಲೈ 2022, 19:30 IST
   

ಗಾಯವು ದೇಹದಲ್ಲಿ ಎಲ್ಲಿ, ಹೇಗೇ ಆಗಿದ್ದರೂ ಒಂದು ವಾರದ ನಂತರ ಹಳೆಯದಾಗುತ್ತದೆ. ವಾರದೊಳಗಿನ ಎಲ್ಲಾ ಗಾಯವೂ ‘ಹೊಸ ಗಾಯ’ ಅಥವಾ ‘ಸದ್ಯೋವ್ರಣ’ ಅಥವಾ ‘ನವವ್ರಣ’. ಆಯುರ್ವೇದದ ದೃಷ್ಟಿಯಿಂದ ಇಂತಹ ಹೊಸ ಗಾಯಗಳು ಆರು ಬಗೆ:

1. ಛಿನ್ನ: ಅಂಗಗಳು ತುಂಡಾಗಿದ್ದು/ ಕೆತ್ತಿ ಹೋಗಿರುವುದು

2. ಭಿನ್ನ: ಒಡೆದದ್ದು, ಚೂರಾಗಿದ್ದು, ಬಿರಿದದ್ದು

ADVERTISEMENT

3. ವಿದ್ಧ: ಚುಚ್ಚಿದ್ದು, ತೂತಾಗಿದ್ದು

4. ಕ್ಷತ: ಹರಿದದ್ದು, ಕುಯ್ದಿದ್ದು, ಪರಚಿದ್ದು

5. ಘೃಷ್ಟ: ತರಚಿದ್ದು

6. ಪಿಚ್ಚಿತ: ಅಪ್ಪಚ್ಚಿಯಾದ್ದು, ಜಜ್ಜಿದ್ದು

ಗಾಯವಾಗಿ ಒಂದು ವಾರದ ಅವಧಿಯಲ್ಲಿ ಯಾವುದೇ ಬಗೆಯ ಗಾಯದ ಆರೈಕೆ‌ಯಲ್ಲಿ ತಪ್ಪಾದರೆ ಒಣಗುವುದು, ಬಿರಿಯುವುದು, ಚರ್ಮ ಉದುರುವುದು, ಕಪ್ಪಾಗುವುದು – ಇಂತಹ ವಾತದೋಷ; ಉರಿಯುವುದು, ಕೆಂಪು, ಹಳದಿಯಾಗುವುದು, ಬಾಯುವುದು, ವಾಸನೆಯಾಗುವುದು, ಕೊಳೆಯುವುದು – ಇಂತಹ ಪಿತ್ತದೋಷ; ಊತ, ಸ್ರಾವ, ಕೀವುಗಳಂತಹ ಕಫದೋಷದಿಂದ ದೂಷಣೆ ಆಗತೊಡಗುತ್ತದೆ. ಅಂದರೆ ‘ದುಷ್ಟವ್ರಣ’ವೆಂಬ ಹೆಸರು ಪಡೆಯುತ್ತದೆ. ಹೀಗೆ ದೋಷಗಳ ಪರಿಣಾಮವಾಗಿ ಚರ್ಮ, ಮಾಂಸ ಸೇರದೆ ಗಾಯವು ಮಾಯುವುದು ನಿಧಾನವಾಗುತ್ತದೆ‌. ಇಂತಹ ದುಷ್ಟವ್ರಣದ ಚಿಕಿತ್ಸೆ, ಆಹಾರ, ವಿಹಾರಗಳ ಕ್ರಮ ಬೇರೆ. ಗಾಯವಾದವರಿಗೆ ಮೊದಲ ವಾರದ ಶುಶ್ರೂಷೆ ಅತ್ಯಂತ‌ ಮುಖ್ಯವಾಗುತ್ತದೆ. ಈ ಆರೈಕೆ ಎಡವಿದಲ್ಲಿ ವ್ರಣವೊಂದು ಆ ಗಾಯಾಳುವಿಗೆ ಬಹುಕಾಲ ತೊಂದರೆ ನೀಡುವ ರೋಗವಾಗುವುದು ಖಂಡಿತ. ಮೊದಲ ಆ ಒಂದು ವಾರದಲ್ಲಿ ಮಾಡಬೇಕಾದ ಮುಖ್ಯ ‘ವ್ರಣಿತೋಪಾಸನೆ’ಯ ಕುರಿತು ತಿಳಿಯೋಣ. ಈ ಆರೈಕೆಗಳು ವ್ರಣದ ತೀವ್ರತೆ, ವ್ಯಾಪ್ತಿ, ಆಳಕ್ಕನುಗುಣವಾಗಿ ಹೆಚ್ಚುಕಡಿಮೆ ಇರುತ್ತವೆ.

ಗಾಯವಾದವನ ಕೊಠಡಿ:

*ಗಾಯವಾದ ವ್ಯಕ್ತಿಯನ್ನು ಬೀಸುವ ಗಾಳಿಯ ತೀವ್ರತೆ ಇಲ್ಲದ, ಬಿಸಿಲಿನ ಝಳ ತಾಕದ, ಸ್ವಚ್ಛ, ಸ್ಪಷ್ಟ ಕೊಠಡಿಯಲ್ಲಿ ವಾಸಿಸಲು ಅನುವು ಮಾಡಬೇಕು.

*ಹಾಸಿಗೆ, ಮಂಚ, ಹೊದಿಕೆ, ದಿಂಬು, ಆರಾಮವಾಗಿ ಕುಳಿತುಕೊಳ್ಳಲು ಗಾಯಕ್ಕೆ ಅನುಗುಣವಾದ ಆಸನ ಇತ್ಯಾದಿಗಳ ಸುಖಮಯ, ಮನೋಹರ ವ್ಯವಸ್ಥೆಯಿಂದ ಕೂಡಿರಬೇಕು.

*ಗಾಯವನ್ನು ಆರೈಕೆ ‌ಮಾಡಲು ಶುಶ್ರೂಷಕರೂ ವೈದ್ಯರೂ ಓಡಾಡುವಷ್ಟು ಕೊಠಡಿಯಲ್ಲಿ ಅವಕಾಶವೂ ಇರಬೇಕು. ಇಕ್ಕಟ್ಟಿನಲ್ಲಿ ಎಲ್ಲರಿಗೂ ಹಿಂಸೆ. ಗಾಯಕ್ಕೆ ಏನಾದರೂ ತಟ್ಟಿ ಪೆಟ್ಟಾಗಲೂಬಹುದು.

*ಸ್ನೇಹಿತರು, ಪ್ರೀತಿಪಾತ್ರರು, ಹಿರಿಯರು, ಆಪ್ತರು ಆಗಾಗ ಮನಸ್ಸನ್ನು ಹಗುರವಾಗಿಡಲು ಪ್ರಯತ್ನಿಸಬೇಕು. ಆಶ್ವಾಸನೆಯಿಂದ ನೋವು ಸಹಿಸುವ ಶಕ್ತಿ ಇಮ್ಮಡಿಗೊಳ್ಳುತ್ತದೆ. ಇದೊಂದು ಭದ್ರಭಾವನೆ.

*ಮೃದುವಾದ ಗಾಳಿ ಬೀಸುವ ಬೀಸಣಿಕೆ‌ ಅಥವಾ ಯಂತ್ರಚಾಲಿತ ಫ್ಯಾನ್‌ಗಳ ಮೃದುಗಾಳಿ ಹಿತಕರ.

*ಧನಾತ್ಮಕವಾಗಿ ಯೋಚಿಸುವ, ಯೋಚಿಸುವಂತೆ ಪ್ರೇರೇಪಿಸುವ ವ್ಯಕ್ತಿಗಳ ನಡುವೆ ಪಠಣ, ಜಪ, ಚಿಂತನೆ, ಪ್ರಾರ್ಥನೆ, ಕಥೆಗಳ ಶ್ರವಣ – ಇಂತಹ ಆಚರಣೆಗಳು ತೀವ್ರಾಘಾತದಲ್ಲಿ ಗುಣಮುಖವಾಗಲು ಸ್ಥೈರ್ಯ ನೀಡುತ್ತವೆ.

*ಚಿಂತೆ, ದುಃಖ, ವಿಷಾದ, ಸಿಟ್ಟು, ಜಗಳ, ದ್ವೇಷ, ಚಾಪಲ್ಯ, ಕಠೋರವಾದ ಮಾತು ಇಂತಹವನ್ನು ಮಾಡುವುದು ಅಥವಾ ಮಾಡಲು ಪ್ರೇರೇಪಿಸುವ ವ್ಯಕ್ತಿ, ವಿಚಾರ, ವಿಷಯಗಳಿಂದ‌ ದೂರವಿರಿಸಬೇಕು. ಅಂದರೆ ವ್ರಣಿತನ ಕೊಠಡಿಯಲ್ಲಿ ಬಂದುಹೋಗುವವರ‌ ಬಗ್ಗೆ ನಿಗಾ ವಹಿಸಬೇಕು.

*ವ್ರಣಿತನ ಕೊಠಡಿಯ ಕುರಿತು ಆಸ್ಪತ್ರೆಯಿರಲಿ, ಮನೆಯಲ್ಲೇ ಆಗಿರಲಿ – ಇವೇ ಅಂಶಗಳನ್ನು ಗಮನಿಸಿರಬೇಕು.

*ಧೂಪನವನ್ನು ಹಾಕುವುದು ವಾತಾವರಣವನ್ನು ಶುದ್ಧಗೊಳಿಸುವ ಸರಳ ವ್ಯವಸ್ಥೆ. ಸ್ವಚ್ಛತೆಯ ಬಗ್ಗೆ ಕಾಳಜಿ ಇವೆಲ್ಲವೂ ಆರೈಕೆ ಮಾಡುವ ವ್ಯಕ್ತಿಗಳಿಗೆ ಸಂಬಂಧಿಸಿದ್ದು.

*ಅಗತ್ಯವಿದ್ದಾಗ ವೈದ್ಯರು ತತ್‌ಕ್ಷಣದಲ್ಲಿ ಲಭ್ಯವಾಗುವಂತೆ, ಸಂವಹನಕ್ಕೆ ಸಿಗುವಂತೆ ಕೊಠಡಿಯಿರಬೇಕು.

*ಚಿಕ್ಕ ಗಾಯಗಳಲ್ಲಿ ಈ‌ ಮೇಲೆ ಹೇಳಿದ ಅಂಶಗಳು ಅಷ್ಟೇನೂ ಮುಖ್ಯ‌ ಅನಿಸದಿದ್ದರೂ, ತೀವ್ರಾಘಾತದಲ್ಲಿ ಈ ಸಣ್ಣ ಅಂಶಗಳೂ ಅತಿಮುಖ್ಯ ಪಾತ್ರ ವಹಿಸುತ್ತವೆ.

ಗಾಯವಾದವರಿಗೆ ಆರೈಕೆಯನ್ನು ಮಾಡುವಾಗ ಆಹಾರ, ನಿದ್ರೆ, ಚಟುವಟಿಕೆಗಳ ಬಗ್ಗೆ ತಿಳಿದಿರಬೇಕು.

ಆಹಾರ

ಹೊಟ್ಟೆ ತುಂಬಾ ಉಣ್ಣುವುದು, ಎಲ್ಲೆಲ್ಲೋ – ಹೇಗೋ ಯಾರೋ – ತಯಾರಿಸಿದ ಹೊಸಬಗೆಯ ಆಹಾರ ಸೇವಿಸುವುದು, ಹಸಿವಾದರೂ ತಿನ್ನದಿರುವುದು, ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯುವುದು, ಬಾಯಾರಿಕೆ ಇದ್ದರೂ ನೀರು ಕುಡಿಯದಿರುವುದು, ಹಳಸಿದ, ತಂಗಳಾದ, ಶೀತಲೀಕೃತ, ಮತ್ತೆ ಬಿಸಿಮಾಡಿದ, ಅರೆಬೆಂದ, ಸೀದುಹೋದ, ಹಸಿತರಕಾರಿ, ಮೊಳಕೆಕಾಳು, ಯಥೇಚ್ಛ ತರಕಾರಿಯುಳ್ಳ, ಈಗಷ್ಟೇ ಕಟಾವು ಆದ ಧಾನ್ಯಗಳಿಂದ ತಯಾರಾದ ಆಹಾರ, ಮೊಸರು, ಹುಳಿಮಜ್ಜಿಗೆ, ಮದ್ಯ, ಉಪ್ಪು-ಹುಳಿ ಯಥೇಚ್ಛವಾಗಿ ಇರುವ ಗೊಜ್ಜು, ಉಪ್ಪಿನಕಾಯಿ, ತೊಕ್ಕು, ಅಪ್ಪೇಹುಳಿಯಂತಹ ಅಡುಗೆಗಳು, ಮೇಲೊಗರಗಳು, ನೊಣ-ಕೀಟಗಳಿಂದ ಮುತ್ತಿದ ಅಶುದ್ಧ ಆಹಾರ-ವಿಧಾನವೆಲ್ಲವೂ ವರ್ಜ್ಯ. ಇವೆಲ್ಲವೂ ಗಾಯವನ್ನು ಮಾಯಗೊಡದೆ ಕೆರೆತ, ಬಾವು, ಸ್ರಾವ, ಕೀವುಗಳಿಗೆ ಕಾರಣವಾಗುತ್ತವೆ.

*ಹಿಂದಿನ ವರ್ಷದಲ್ಲಿ ಬೆಳೆದ ಧಾನ್ಯಗಳು, ಅಭ್ಯಾಸವಿರುವ ಆಹಾರ, ಮನೆಯಲ್ಲಿ ಆಗಷ್ಟೇ ತಯಾರಾದ, ತುಪ್ಪ, ಎಣ್ಣೆ, ತಂಗಿನಕಾಯಿ, ಹೀಗೆ ಜಿಡ್ಡುಗಳಿಂದ ಸಂಸ್ಕರಿಸಿದ, ಬೇಯಿಸಿದ, ಸಂಸ್ಕರಿಸಿದ ಸ್ವಲ್ಪಮಾತ್ರ ತರಕಾರಿಗಳಿರುವ ಆಹಾರ ಯೋಗ್ಯ.

*ಎಣ್ಣೆಯಲ್ಲಿ ಕರಿದದ್ದು, ಹುರಿದದ್ದು, ಹಲವು ರೀತಿಯ ಮಸಾಲೆವಸ್ತುಗಳಿಂದ ತಯಾರಿಸಿದ ಅಡುಗೆಗಳು ತೊಂದರೆಯಾದೀತು.

*ಮಾಂಸಾಹಾರಿಗಳಿಗೆ ಬಹುತೇಕ ಮಾಂಸ ವರ್ಜ್ಯ. ಆಡಿನ ಮಾಂಸರಸ ಬಲದಾಯಕ. ಹಸಿವೆ ಗಮನಿಸಿಯೇ ಮಾಂಸಸೇವನೆ ಇರಲಿ.

*ದಿನದಲ್ಲಿ ಎರಡು ಅಥವಾ ಮೂರು ಹೊತ್ತು ಆಹಾರಕಾಲದಲ್ಲಿ ಮಾತ್ರ ಆಹಾರಸೇವನೆ ‌ಹಿತಕರ.

*ಹಣ್ಣಿನ, ತರಕಾರಿಯ, ಸೊಪ್ಪಿನ ಜ್ಯೂಸ್, ಹಾಲಿನೊಂದಿಗೆ ಹುಳಿಹಣ್ಣುಗಳ ಶೇಕ್, ಸಂಸ್ಕರಿಸಿದ, ಪ್ಯಾಕಿನಲ್ಲಿ ಕಾದಿಟ್ಟ ಹಣ್ಣಿನರಸಗಳು, ಮೊಸರಿನ ಸೇವನೆ, ಮಜ್ಜಿಗೆ ಕುಡಿಯುವುದು – ಈ ಎಲ್ಲವೂ ಹುಳಿರುಚಿಯಿಂದಾಗಿ ರಕ್ತದೂಷಕ; ಸೇವಿಸಬಾರದು. ಹಣ್ಣುಗಳನ್ನು ಆಹಾರದ ಮೊದಲು ಸೇವಿಸಿ‌ ಉಳಿದ ಆಹಾರ ತಿನ್ನುವುದು ಕ್ಷೇಮ. ಆಗಷ್ಟೇ ಕಡೆದ ಸಿಹಿ ಮಜ್ಜಿಗೆಯನ್ನು ಅನ್ನದೊಂದಿಗೆ ಬೆರೆಸಿ, ಅಡುಗೆ ಮಾಡಿ ಉಣ್ಣಬಹುದು. ಬಿಸಿಹಾಲನ್ನು ಬೆಳಗ್ಗಿನ ತಿಂಡಿಯೊಂದಿಗೆ, ಸಂಜೆ ಒಮ್ಮೆ ಸೇವನೆ ಹಿತ.

*ಗೋಧಿ, ಹಳೇ ಅಕ್ಕಿ, ಜವೆಗೋಧಿ, ಹೆಸರುಬೇಳೆ, ಚೆನ್ನಂಗಿಬೇಳೆ, ಎಳೆಮೂಲಂಗಿ, ಎಳೆಯ ಬದನೆ, ಪಡವಲ, ಹಾಗಲ, ಹೀರೆ, ಬಿಳಿ-ಕೆಂಪು ಹರಿವೆ, ದಾಳಿಂಬೆಹಣ್ಣು, ನೆಲ್ಲಿಕಾಯಿ – ಇವುಗಳ ರುಚಿಕರ ಸರಳ ಅಡುಗೆ ಹಿತಕರ.

ಚಟುವಟಿಕೆ

ಏಳುವಾಗ, ಕೂರುವಾಗ, ತಿರುಗಾಡುವಾಗ, ತಿರುಗುವಾಗ, ಏರುದನಿಯಲ್ಲಿ‌ ಮಾತನಾಡುವಾಗ ಮೈಮರೆಯಬಾರದು. ಎಚ್ಚರಿಕೆಯಿಂದ ಗಾಯವನ್ನು ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ‌ಮೈನೋವು, ಗಾಯದಲ್ಲಿಯೂ ನೋವಿನ ತೀವ್ರತೆ ಅರಿವಿಗೆ ಬರುವುದು.

*ಮೈಥುನ ನಿಷಿದ್ಧ. ಹಸ್ತಮೈಥುನ ಕೂಡ ದೇಹದಲ್ಲಿ ಬಲಹ್ರಾಸಕ್ಕೆ ಕಾರಣ. ಗಾಯಕ್ಕೆ ‘ಸಂಸರ್ಗ’(ಇನ್‌ಫೆಕ್ಷನ್)ಆಗುವ ಸಾಧ್ಯತೆಯಿದೆ. ವೀರ್ಯವು ಸ್ರವಿಸಿದರೆ ಬಲವೂ ಉಡುಗಿದಂತೆ. ಇದು ಸ್ತ್ರೀಯರಿಗೂ ಅನ್ವಯಿಸುತ್ತದೆ.

*ಬಿಸಿಲು, ಬೀಸುವ ಗಾಳಿ, ಮಳೆ, ಛಳಿ, ಹಿಮಪಾತ – ಹೀಗೆ ವಿಪರೀತ ವಾತಾವರಣಕ್ಕೆ ಮೈಯೊಡ್ಡುವುದು ಕೂಡ ಗಾಯದ ಮಾಯುವಿಕೆಗೆ ಅಡ್ಡಿ.

*ದಿನಕ್ಕೆರಡು ಬಾರಿ, (ಬೆಳಗ್ಗೆ ಮತ್ತು ಸಂಜೆ), ಕೊಠಡಿಯಲ್ಲಿ ‘ಧೂಪ’ವನ್ನು ಹಾಕಬೇಕು. ಸಾಸಿವೆ, ಕಹಿಬೇವಿನ ಸೊಪ್ಪು, ತೊಗಟೆ, ಬಜೆಬೇರು, ಲಕ್ಕೀ ಸೊಪ್ಪು, ತುಳಸೀ, ಅರಿಶಿನ – ಹೀಗೆ ಲಭ್ಯವಿರುವ ಔಷಧಗಳೊಂದಿಗೆ ಉಪ್ಪು, ತುಪ್ಪ ಸೇರಿಸಿ ಹೊಗೆ ಹಾಕಬೇಕು. ಇದು ಕ್ರಿಮಿ, ಕೀಟ, ಗಾಳಿ, ವಾತಾವರಣದ ಸೂಕ್ಷ್ಮಜೀವಿಗಳನ್ನೂ ದೂರವಿರಿಸಿ ಶುದ್ಧಗೊಳಿಸುತ್ತದೆ. ಗಾಯವು ಇನ್ಫೆಕ್ಷನ್ ಅಥವಾ ಸಂಸರ್ಗಕ್ಕೊಳಗಾಗುವುದು ತಪ್ಪುತ್ತದೆ.

ಮೇಲಿನ ಆರೈಕೆಗಳನ್ನು ಗಾಯದ ತೀವ್ರತೆಗೆ ಅನುಗುಣವಾಗಿ ವೈದ್ಯರ ಮಾರ್ಗದರ್ಶನದಲ್ಲಿ ಅನುಸರಿಸುವುದು ಹಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.