ಇಂದು ಸಾಕಷ್ಟು ಜನರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ಗಳ ಪೈಕಿ ಥೈರಾಯ್ಡ್ ಕ್ಯಾನ್ಸರ್ ಕೂಡ ಒಂದು. ದೇಶದಲ್ಲಿ ಥೈರಾಯ್ಡ್ ಕ್ಯಾನ್ಸರ್‌ನ ಪ್ರಮಾಣ ಪ್ರತಿ 1 ಲಕ್ಷ ವ್ಯಕ್ತಿಗಳಲ್ಲಿ ಸುಮಾರು 5.4 ಜನರಲ್ಲಿ ಕಂಡು ಬರುತ್ತಿದೆ. ಜಾಗತಿಕವಾಗಿಯೂ ಈ ಪ್ರಮಾಣ ಹೆಚ್ಚೇ ಇದೆ. ಈ ಥೈರಾಯ್ಡ್ ಕ್ಯಾನ್ಸರ್‌ನ ಲಕ್ಷಣ ಹಾಗೂ ಅದಕ್ಕಿರುವ ಪರಿಹಾರದ ಬಗ್ಗೆ ಫೋರ್ಟಿಸ್ ಆಸ್ಪತ್ರೆಯ ಇಎನ್‌ಟಿ, ತಲೆ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸಕಿ ಡಾ.ಅತಿರಾ ರಾಮಕೃಷ್ಣನ್ ಮಾಹಿತಿ ನೀಡಿದ್ದಾರೆ.
ಏನಿದು ಥೈರಾಯ್ಡ್ ಕ್ಯಾನ್ಸರ್?
ಗಂಟಲಿನಲ್ಲಿರುವ ಥೈರಾಯ್ಡ್ ಹಾರ್ಮೋನ್ ಉತ್ಪತ್ತಿ ಮಾಡುವ ಗ್ರಂಥಿಯನ್ನು ಥೈರಾಯ್ಡ್ ಎನ್ನಲಾಗುತ್ತದೆ. ಇದು ಕುತ್ತಿಗೆಯ ಕೆಳಭಾಗದಲ್ಲಿ ಪ್ರತಿಯೊಬ್ಬರಲ್ಲೂ ಇರಲಿದೆ. ಮನುಷ್ಯನಿಗೆ ಥೈರಾಯಿಡ್ ಕ್ಯಾನ್ಸರ್ ಬಹಳ ನಿಧಾನವಾಗಿ ಹರಡಲಿದೆ. ಈ ಥೈರಾಯ್ಡ್‌ನಲ್ಲಿ ಮೂರು ವಿಧಗಳಿದ್ದು, ಇದನ್ನು ಜೀವಕೋಶಗಳ ಆಧಾರದ ಮೇಲೆ ಗುರುತಿಸಲಾಗುತ್ತದೆ. ಅವುಗಳೆಂದರೆ ಪ್ಯಾಪಿಲರಿ, ಫಾಲಿಕ್ಯುಲರ್, ಮೆಡ್ಯುಲರಿ (Papillary, Follicular, Medullary) ಥೈರಾಯಿಡ್ ಕ್ಯಾನ್ಸರ್‌ಗಳಿವೆ. ಇವುಗಳಲ್ಲಿ ಮೆಡ್ಯುಲರಿ ಥೈರಾಯಿಡ್ ಕ್ಯಾನ್ಸರ್ ಬಹಳ ಅಪರೂಪವಾಗಿ ಕಾಣಿಸಿಕೊಳ್ಳುತ್ತದೆ. ಹೆಚ್ಚು ಜನರಲ್ಲಿ ಪ್ಯಾಪಿಲರಿ ಮತ್ತು ಫಾಲಿಕ್ಯುಲರ್ ಥೈರಾಯ್ಡ್ ಕ್ಯಾನ್ಸರ್‌ಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಪ್ಯಾಪಿಲರಿ ಥೈರಾಯ್ಡ್ ಕ್ಯಾನ್ಸರ್‌ನ ಪ್ರಮಾಣ ಚಿಕ್ಕದಿದ್ದರೂ ಇದು ಹೆಚ್ಚಾಗಿ ಹರಡಲಿದೆ. ಈ ಕ್ಯಾನ್ಸರ್ ಹೊಂದಿರುವವರಿಗೆ ಕುತ್ತಿಗೆಯ ಭಾಗ ನೋಡಲು ದಪ್ಪ ಕಾಣಲಿದೆ. ಫಾಲಿಕ್ಯುಲರ್ ಥೈರಾಯ್ಡ್ ಕ್ಯಾನ್ಸರ್ ಕೂಡ ಗಂಟಲಿನ ಭಾಗಕ್ಕೆ ಹೆಚ್ಚು ಹಾನಿ ಉಂಟು ಮಾಡುವುದಲ್ಲದೆ, ಹತ್ತಿರದ ಮೂಳೆಗಳಿಗೆ ಅಥವಾ ದೇಹದ ಇನ್ನಿತರ ಭಾಗಗಳಿಗೂ ಈ ಕ್ಯಾನ್ಸರ್ ಹರಡುವ ಸಾಧ್ಯತೆ ಹೆಚ್ಚು.
ಥೈರಾಯ್ಡ್‌ನ ಲಕ್ಷಣಗಳು:
ಗಡ್ಡೆ ನಿರ್ಮಾಣ: ಥೈರಾಯ್ಡ್‌ನ ಪ್ರಮುಖ ಲಕ್ಷಣವೆಂದರೆ ಗಂಟಲಿನ ಭಾಗದಲ್ಲಿ ಗೆಡ್ಡೆ ನಿರ್ಮಾಣವಾಗುವುದು. ಇದು ನಿಧಾನವಾಗಿ ಸಣ್ಣ ಗೆಡ್ಡೆಯಂತೆ ಕಂಡು ಬಂದರೂ, ಕ್ರಮೇಣ ಈ ಗೆಡ್ಡೆ ದೊಡ್ಡದಾಗುತ್ತಾ, ಆಹಾರ ನುಂಗಲು ಸಾಧ್ಯವಾಗದಷ್ಟು ನೋವು ನೀಡಲಿದೆ. ಈ ಲಕ್ಷಣ ಕಂಡು ಬಂದ ಕೂಡಲೇ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.
ಕುತ್ತಿಗೆಯಲ್ಲಿ ಬಿಗಿತ: ಥೈರಾಯ್ಡ್ ಗೆಡ್ಡೆಗಳು ಬೆಳೆದಂತೆ, ಅವು ಕುತ್ತಿಗೆಯ ಸುತ್ತಲೂ ಬಿಗಿತ ಉಂಟಾಗಲಿದೆ. ಕುತ್ತಿಗೆ ಸಹ ಊದಿಕೊಂಡಂತೆ ದಪ್ಪವಾಗುತ್ತಾ ಹೋಗಬಹುದು.
ಧ್ವನಿ ಬದಲಾವಣೆ: ಥೈರಾಯ್ಡ್ ಕ್ಯಾನ್ಸರ್ ಕೆಲವೊಮ್ಮೆ ವ್ಯಕ್ತಿಯ ಧ್ವನಿಯನ್ನೇ ಬದಲಾಗುವಂತೆ ಮಾಡಬಹುದು, ಮಾತನಾಡುವಾಗ ನೋವು ಹಾಗೂ ಕರ್ಕಶ ಶಬ್ಧ ಬರಬಹುದು.
ನುಂಗುವ ತೊಂದರೆ: ಥೈರಾಯ್ಡ್ ಗೆಡ್ಡೆಗಳು ಅನ್ನನಾಳ ಅಥವಾ ಸುತ್ತಮುತ್ತಲಿನ ರಚನೆಗಳ ಮೇಲೆ ಒತ್ತಡ ಉಂಟಾಗುವುದರಿಂದ ಎಂಜಲು ನುಂಗುವಾಗಲು ಸಹ ನೋವಾಗಬಹುದು. ಇದನ್ನು ಸಾಮಾನ್ಯವಾಗಿ ಡಿಸ್ಫೇಜಿಯಾ ಎಂದು ಕರೆಯಲಾಗುತ್ತದೆ.
ಕೆಮ್ಮು: ಗೆಡ್ಡೆಗಳು ಬೆಳೆದಂತೆ ಕೆಮ್ಮೂ ಸಹ ಹೆಚ್ಚಾಗಬಹುದು
ಉಸಿರಾಟದ ತೊಂದರೆ: ಥೈರಾಯ್ಡ್ ಗ್ರಂಥಿಯು ಹಿಗ್ಗಿದಾಗ, ಅದು ಶ್ವಾಸನಾಳದ ವಿರುದ್ಧ ಒತ್ತಡ ಏರಲಿದ್ದು, ಉಸಿರಾಟಕ್ಕೂ ತೊಂದಲು ಉಂಟು ಮಾಡಬಹುದು.
ತೂಕ ಕಳೆದುಕೊಳ್ಳುವುದು: ಥೈರಾಯ್ಡ್ ಕ್ಯಾನ್ಸರ್ ಇರುವ ವ್ಯಕ್ತಿಯ ತೂಕ ಒಂದೇ ಬಾರಿಗೆ ಇಳಿದು ಬಿಡುತ್ತದೆ, ಕೆಲವರಲ್ಲಿ ತೂಕ ಹೆಚ್ಚಳ ಸಹ ಆಗಬಹುದು. ಈ ಎರಡೂ ಸಹ ಕ್ಯಾನ್ಸರ್‌ನ ಲಕ್ಷಣವಾಗಿದೆ.
ಆಯಾಸ: ಆಯಾಸ, ಅತಿಯಾಗಿ ಬೆವರುವುದು, ದೇಹ ನಿಶ್ಶಕ್ತಿಯಾಗುತ್ತಾ ಹೋಗಬಹುದು.
ಚಿಕಿತ್ಸೆ ಏನು?
ಥೈರಾಯ್ಡ್ ಕ್ಯಾನ್ಸರ್ ಗುಣಪಡಿಸಬಹುದಾದ ಕಾಯಿಲೆಯಾಗಿದ್ದು, ಪ್ರಾರಂಭದಲ್ಲಿಯೇ ಥೈರಾಯ್ಡ್ ಸಮಸ್ಯೆ ಗುರುತಿಸಿದರೆ ಶೇ.90ರಷ್ಟು ಜನರನ್ನು ಗುಣಪಡಿಸಬಹುದು. ಥೈರಾಯ್ಡ್ ಅನ್ನು ಥೈರಾಯ್ಡ್ ಗ್ರಂಥಿಯ ಅಲ್ಟ್ರಾಸೌಂಡ್ ಸೇರಿದಂತೆ ನಿಯಮಿತ ಸ್ಕ್ರೀನಿಂಗ್ ಮೂಲಕ ನಿಖರವಾಗಿ ಪತ್ತೆ ಹಚ್ಚಬಹುದು. ಕ್ಯಾನ್ಸರ್‌ನ ಹಂತವನ್ನು ಗಮನಿಸಿ ಚಿಕಿತ್ಸೆ ನೀಡಲಾಗುವುದು, ಸಾಮಾನ್ಯವಾಗಿ ಥೈರಾಯ್ಡ್ ಕ್ಯಾನ್ಸರ್‌ಗೆ ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ ಮತ್ತು ಹಾರ್ಮೋನ್ ಚಿಕಿತ್ಸೆ ನೀಡುವ ಮೂಲಕ ಉಪಶಮನಗೊಳಿಸಬಹುದು. ಥೈರಾಯ್ಡ್ ಕ್ಯಾನ್ಸರ್‌ನ ಲಕ್ಷಣಗಳು ಹೆಚ್ಚು ಗಮನಕ್ಕೆ ಬರುವುದರಿಂದ ಆರಂಭದಲ್ಲಿಯೇ ಇದರ ಪತ್ತೆ ಹಚ್ಚಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ, ಈ ಬಗ್ಗೆ ಪ್ರತಿಯೊಬ್ಬರು ಜಾಗೃತರಾಗಿರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.