ADVERTISEMENT

ಏನಾದ್ರು ಕೇಳ್ಬೊದು: ಸಲಿಂಗಕಾಮದ ಆಕರ್ಷಣೆ ತಪ್ಪೇ?

ನಡಹಳ್ಳಿ ವಂಸತ್‌
Published 14 ನವೆಂಬರ್ 2020, 19:31 IST
Last Updated 14 ನವೆಂಬರ್ 2020, 19:31 IST
ನಡಹಳ್ಳಿ ವಸಂತ್‌
ನಡಹಳ್ಳಿ ವಸಂತ್‌   

26ರ ಯುವಕ. ಸಲಿಂಗ ಕಾಮದ ವ್ಯಾಮೋಹ ಕಾಡುತ್ತಿದೆ. ಆಕರ್ಷಕ ಹುಡುಗರನ್ನು ನೋಡಿದರೆ ಕಾಮದ ಆಸೆ ಹೆಚ್ಚುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ ನನ್ನಲ್ಲಿ ಬದಲಾವಣೆ ಕಂಡುಬರುತ್ತಿಲ್ಲ. ಪರಿಹಾರವೇನು?

-ಹೆಸರು, ಊರು ಇಲ್ಲ.

ನೀವು ಮಾಡುತ್ತಿರುವ ಬದಲಾವಣೆಯ ಪ್ರಯತ್ನಗಳೆಲ್ಲಾ ಹತಾಶೆಯನ್ನು ಹೆಚ್ಚಿಸುವುದರಲ್ಲಿ ಮಾತ್ರ ಕೊನೆಗೊಳ್ಳುತ್ತಿರಬೇಕಲ್ಲವೇ? ಸಲಿಂಗಕಾಮ ಮಾನಸಿಕ ಕಾಯಿಲೆ ಎಂದು ಎಲ್ಲರೂ ಹೇಳುವುದನ್ನು ನೀವು ನಂಬಿಕೊಂಡಿದ್ದೀರಿ. ಹಾಗಾಗಿ ಸಾಮಾಜಿಕವಾಗಿ ಒಪ್ಪಿತವಾಗುವ ಲೈಂಗಿಕ ಆಯ್ಕೆಗಳನ್ನು ಮಾಡಿಕೊಳ್ಳಲು ಪ್ರಯತ್ನಿಸುತ್ತಾ ನಿಮ್ಮ ಗೊಂದಲ ಬೇಸರಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದೀರಿ. ಸಲಿಂಗಕಾಮ ಕಾಯಿಲೆಯಲ್ಲ, ಕೆಲವರ ಮನಸ್ಸಿನಲ್ಲಿ ಸಹಜವಾಗಿ ಮೂಡುವ ಲೈಂಗಿಕ ಆಯ್ಕೆ. ಇದನ್ನು ಮೊದಲು ನೀವು ಒಪ್ಪಿಕೊಳ್ಳಬೇಕು. ಸರ್ವೋಚ್ಛ ನ್ಯಾಯಲಯ ಕೂಡ ಸಲಿಂಗಕಾಮವು ಕ್ರಿಮಿನಲ್‌ ಅಪರಾಧವಲ್ಲ ಎಂದು ಘೋಷಿಸಿದೆ. ಸಾಮಾಜಿಕವಾಗಿ, ಧಾರ್ಮಿಕವಾಗಿ ಇದರ ಬಗೆಗೆ ಬಹಳ ಹಿಂಜರಿಕೆ ತಪ್ಪುತಿಳಿವಳಿಕೆಗಳು ಇರುವುದರಿಂದ ನೀವು ಕೌಟುಂಬಿಕವಾಗಿ ಕಿರಿಕಿರಿಗಳನ್ನು ಅನುಭವಿಸುವ ಸಾಧ್ಯತೆಗಳಿವೆ. ಇವುಗಳನ್ನು ನಿಭಾಯಿಸಲು ತಜ್ಞ ಮನೋಚಿಕಿತ್ಸಕರನ್ನು ಭೇಟಿಯಾಗಿ.

ADVERTISEMENT

32ರ ಪುರುಷ. ಮದುವೆಗೆ ಮೊದಲು 10 ವರ್ಷ ದೊಡ್ಡವಳಾದ ಗೃಹಿಣಿಯ ಜೊತೆ ದೈಹಿಕ ಸಂಬಂಧವಿತ್ತು. ಮದುವೆಯಾಗಿ 11 ತಿಂಗಳಾಗಿವೆ. ಲೈಂಗಿಕ ಆಸಕ್ತಿ ಕುಂದಿಹೋಗಿದೆ, ಮಕ್ಕಳೂ ಆಗುತ್ತಿಲ್ಲ. ಪರಿಹಾರವೇನು?

-ಚಂದ್ರು, ಊರು ತಿಳಿಸಿಲ್ಲ.

ಮದುವೆಯಾದ ಮೇಲೆಯೂ ಹೊರಸಂಬಂಧ ಮುಂದುವರೆದಿದೆಯೇ? ಹೌದು ಎಂದಾದರೆ ಪರಿಹಾರಗಳು ಕಷ್ಟ. ಹೊರಸಂಬಂಧದಲ್ಲಿ ರೋಚಕತೆಯನ್ನು ಕಂಡಿರುವ ಮನಸ್ಸು ಅಂತದೇ ರೋಚಕತೆಯನ್ನು ದಾಂಪತ್ಯದಲ್ಲಿಯೂ ಕಂಡುಕೊಳ್ಳಲು ಸಿದ್ಧವಿರುವುದಿಲ್ಲ ಮತ್ತು ಯಾವಾಗಲೂ ಹೋಲಿಕೆಯಲ್ಲಿಯೇ ತೊಡಗಿರುತ್ತದೆ. ಹಾಗಾಗಿ ಗಟ್ಟಿಯಾದ ವೈವಾಹಿಕ ಸಂಬಂಧವನ್ನು ಕಟ್ಟಿಕೊಳ್ಳುವ ಪ್ರಯತ್ನವನ್ನೇ ಮಾಡುವುದಿಲ್ಲ. ರೋಚಕತೆಗೆ ಹೊರಸಂಬಂಧ ಮತ್ತು ಮಕ್ಕಳಿಗಾಗಿ ಪತ್ನಿ ಎಂದುಕೊಂಡು ಮುಂದುವರೆದರೆ ಮಾನಸಿಕ, ಸಾಮಾಜಿಕ, ಕೌಟುಂಬಿಕ.. ಹೀಗೆ ಎಲ್ಲಾ ರೀತಿಯ ಅಪಾಯಗಳನ್ನು ಎದುರಿಸಬಹುದು. ಹಾಗಾಗಿ ಮೊದಲು ಹೊರಸಂಬಂಧವನ್ನು ಕೊನೆಗೊಳಿಸುವ ನಿರ್ಧಾರ ಕೈಗೊಂಡು ದಾಂಪತ್ಯಚಿಕಿತ್ಸಕರನ್ನು ಭೇಟಿಯಾದರೆ ಪತ್ನಿಯೊಡನೆ ಹೊಸ ಬಾಳಿಗೆ ನಾಂದಿ ಹಾಡಬಹುದು.

28ರ ಅವಿವಾಹಿತ. ವಾರದಲ್ಲಿ ಮೂರು ದಿನವಾದರೂ ಸ್ವಪ್ನಸ್ಖಲನವಾಗುತ್ತದೆ. ಗಡ್ಡದಲ್ಲಿ ಬಿಳಿಕೂದಲು ಬಂದು ವಯಸ್ಸಾದವನಂತೆ ಕಾಣುತ್ತೇನೆ. ಶಕ್ತಿ ಕಡಿಮೆಯಾದಂತೆ ಅನಿಸುತ್ತದೆ. ಪರಿಹಾರವನ್ನು ತಿಳಿಸಿ.

-ಪ್ರಸಾದ್‌, ಊರಿನ ಹೆಸರಿಲ್ಲ.

ಹದಿನೆಂಟು ವರ್ಷಕ್ಕೆ ಮದುವೆಯಾಗಿದ್ದರೆ ಪತ್ನಿಯೊಡನೆ ಕೂಡುವಾಗಲೂ ಸ್ಖಲನವಾಗಲೇಬೇಕಿತ್ತಲ್ಲವೇ? ಅದರಲ್ಲಿ ಲೈಂಗಿಕ ತೃಪ್ತಿಯಿರುತ್ತಿತ್ತು. ಆದರೆ ಈಗ ಸ್ವಪ್ನಸ್ಖಲನ ಅಪಾಯಕಾರಿ ಎಂಬ ತಪ್ಪುತಿಳಿವಳಿಕೆಯಿಂದಾಗಿ ಆತಂಕದಲ್ಲಿದ್ದೀರಿ. ನಿಮ್ಮ ಬಿಳಿಕೂದಲು ಮತ್ತು ಸುಸ್ತು ಆತಂಕದ ಪರಿಣಾಮಗಳು. ಸ್ವಪ್ನಸ್ಖಲನಕ್ಕೂ ಇದಕ್ಕೂ ಸಂಬಂಧವಿಲ್ಲ. ವ್ಯಾಯಾಮ, ಸ್ನೇಹಿತರು, ಹವ್ಯಾಸಗಳ ಮೂಲಕ ಆರೋಗ್ಯವನ್ನು ಹೆಚ್ಚಿಸಿಕೊಂಡು ಮನಸ್ಸನ್ನು ಮುದಗೊಳಿಸಿ. ಆರ್ಥಿಕ ಸ್ವಾವಲಂಬನೆಗೆ ದಾರಿ ಮಾಡಿಕೊಂಡು ಜೀನವಸಂಗಾತಿಯ ಜೊತೆಗೂಡಿದರೆ ಉತ್ಸಾಹ ತಾನಾಗಿಯೇ ಉಕ್ಕುತ್ತದೆ.

ಪದವಿ ವಿದ್ಯಾರ್ಥಿ. ತಂದೆ ಬದುಕಿಲ್ಲ. ಯಾವುದೇ ಕಾರ್ಯವನ್ನು ಕೈಗೊಳ್ಳಲು ತಾಯಿಯ ಸಲಹೆಯನ್ನು ಕೇಳುತ್ತೇನೆ. ಹೆಚ್ಚಿನ ಸಾರಿ ಅವರ ಉತ್ತರಗಳು ನಕಾರಾತ್ಮಕವಾಗಿರುತ್ತವೆ. ಇದರಿಂದ ಆ ಕಾರ್ಯದ ಬಗ್ಗೆ ನನ್ನ ಆಸಕ್ತಿ ಕುಂದುತ್ತದೆ. ಪರಿಹಾರವೇನು?

-ಹೆಸರು, ಊರು ತಿಳಿಸಿಲ್ಲ.

ತಾಯಿಯ ಸಲಹೆ ಕೇಳುವುದೇನೋ ಸರಿ. ಅವರ ಸಲಹೆಯನ್ನೇ ನಿರ್ಧಾರ ಎಂದು ನೀವು ಒಪ್ಪಿಕೊಳ್ಳುತ್ತಿರುವುದು ಹೇಗೆ? ನಿಮಗೆ ಸರಿಯೆನಿಸುವ ನಿರ್ಧಾರಗಳನ್ನು ತೆಗೆದುಕೊಂಡರೆ ಏನಾಗಬಹುದು? ತಾಯಿಗೆ ಬೇಸರವಾಗಬಹುದು ಎಂದುಕೊಂಡಿದ್ದರೆ ಅವರನ್ನೇ ಕೇಳಿನೋಡಿ ಅಥವಾ ನಿಮ್ಮ ನಿರ್ಧಾರಗಳು ತಪ್ಪಾಗಿದ್ದರೆ ಎನ್ನುವ ಆತಂಕ ಕಾಡುತ್ತಿದೆಯೇ? ತಪ್ಪನ್ನೇ ಮಾಡದೆ ಕಲಿಯುವುದು ಸಾಧ್ಯವೇ ಎಂದು ಯೋಚಿಸಿ. ನಿರ್ಧಾರಗಳು ತಪ್ಪಾದರೆ ತಾಯಿಯ ಟೀಕೆ, ಸಿಟ್ಟನ್ನು ಎದುರಿಸಬೇಕಾಗಬಹುದು ಎನ್ನಿಸುವುದಾದರೆ ಅವರ ಜೊತೆ ಮುಕ್ತವಾಗಿ ಮಾತನಾಡಿ. ಮಾನಸಿಕವಾಗಿ, ಭಾವನಾತ್ಮಕವಾಗಿ ತಾಯಿಯಿಂದ ಸ್ವಾತಂತ್ರ ಪಡೆಯುತ್ತಲೇ ಅವರೊಡನೆ ಪ್ರೀತಿಯನ್ನು ಹಂಚಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕಿಕೊಂಡರೆ ನಿಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸಾಧ್ಯ.

ಹಸ್ತಮೈಥುನದಿಂದ ಮುಕ್ತಿ ಪಡೆಯುವುದು ಹೇಗೆ? ಇದರಿಂದಾಗಿ ಉಂಟಾಗಿರುವ ನೀಲಿಚಿತ್ರಗಳ ಆಕರ್ಷಣೆಯಿಂದ ಹೊರಬರುವುದು ಹೇಗೆ?

-ಹೆಸರು, ಊರು ಇಲ್ಲ.

ವೈಯುಕ್ತಿಕ ವಿವರಗಳಿದ್ದರೆ ಸಹಾಯವಾಗುತ್ತದೆ. ಹಸ್ತಮೈಥುನ ವೈಜ್ಞಾನಿಕವಾಗಿ ಸಂಪೂರ್ಣ ಆರೋಗ್ಯಕರ ಪ್ರವೃತ್ತಿ ಎಂದು ಹಲವಾರು ಬಾರಿ ಈ ಅಂಕಣದಲ್ಲಿ ಹೇಳಲಾಗಿದೆ. ನೀಲಿಚಿತ್ರಗಳು ಕೇವಲ ವ್ಯಾಪಾರೀ ದೃಷ್ಟಿಯಿಂದ ಮಾಡಿರುವಂತಹದು. ಪ್ಲಾಸ್ಟಿಕ್‌ ಹೂವಿಗೆ ನಿಜವಾದ ಹೂವಿನ ಮೃದುತ್ವ, ಸುವಾಸನೆ ಇರುವುದು ಸಾಧ್ಯವೇ? ಜೀವನ ಸಂಗಾತಿಯೊಂದಿಗೆ ನೀವು ಹಂಚಿಕೊಳ್ಳಬೇಕೆಂದಿರುವ ಲೈಂಗಿಕತೆ ಅಲ್ಲಿದೆಯೇ ಎಂದು ಯೋಚಿಸಿ. ಜೊತೆಗೆ ನಿಮ್ಮ ಓದು, ವೃತ್ತಿ, ಹವ್ಯಾಸಗಳು, ಸ್ನೇಹಿತರಿಂದ ಸಂತೋಷವಾಗಿರಲು ನೀಲಿಚಿತ್ರಗಳು ತಮ್ಮ ಆಕರ್ಷಣೆಯನ್ನು ಕಳೆದುಕೊಳ್ಳುತ್ತವೆ.

ಯಾವ ದಿನಗಳಲ್ಲಿ ಸಂಭೋಗ ಮಾಡಿದರೆ ಗರ್ಭಿಣಿ ಆಗುತ್ತಾರೆ. ಒಮ್ಮೆ ಸೇರಿದರೂ ಗರ್ಭಿಣಿಯಾಗಬಹುದೇ?

-ಹೆಸರು, ಊರು ಇಲ್ಲ.

ಸಾಮಾನ್ಯವಾಗಿ ಮಹಿಳೆಯರು ಮಾಸಿಕ ಋತುಚಕ್ರದ 10ನೇ ದಿನದಿಂದ 20ನೇ ದಿನದವರೆಗೆ ಗರ್ಭಿಣಿಯಾಗುತ್ತಾರೆ. ಇದನ್ನು ಖಚಿತವಾಗಿ ಹೇಳಲಾಗದು. ಒಮ್ಮೆ ಸೇರಿದರೂ ಗರ್ಭಿಣಿಯಾಗಬಹದು.

ಏನಾದ್ರೂ ಕೇಳ್ಬೋದು

ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್‌ ಉತ್ತರಿಸಲಿದ್ದಾರೆ. bhoomika@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.