ADVERTISEMENT

ಅಧ್ಯಯನದ ಫಲವಾಗಿ ‘ಗ್ರೇಡಿ’ ಮಂಗ ಹುಟ್ಟಿದ್ದು ಹೇಗೆ?

ಡಾ.ಎಸ್.ಎಸ್.ವಾಸನ್
Published 20 ಸೆಪ್ಟೆಂಬರ್ 2019, 19:30 IST
Last Updated 20 ಸೆಪ್ಟೆಂಬರ್ 2019, 19:30 IST
   

ಪ್ರೌಢಾವಸ್ಥೆಗೆ ಮುನ್ನ ಕ್ರೈಪ್ರಿಸರ್ವ್‌ ಮಾಡಲಾದ ಮಕಾಕ್‌ನ ವೃಷಣ ಅಂಗಾಂಶದಿಂದ ವೀರ್ಯದ ಉತ್ಪಾದನೆ ಮಾಡಿ, ಆ ವೀರ್ಯವನ್ನು ಹೆಣ್ಣುರೀಸಸ್ ಮಕಾಕ್‌ನ (ಒಂದು ಜಾತಿಯ ಮಂಗ) ಅಂಡಾಣುವಿನೊಂದಿಗೆ ಸೇರಿಸಿ ಜನಿಸಿದ ಮೊದಲ ಮರಿ ‘ಗ್ರೇಡಿ’. ಇನ್ನು ಮೇಲೆ ಈ ಚಿಕಿತ್ಸೆಯನ್ನು ಚಿಕಿತ್ಸಾಲಯದಲ್ಲಿ ಅನ್ವಯಿಸಬಹುದು ಎನ್ನುವ ಆಶಾಭಾವ ವಿಜ್ಞಾನಿಗಳದ್ದು...

***

‘ಪ್ರೂಫ್-ಆಫ್-ಕಾನ್ಸೆಪ್ಟ್’ ಅಧ್ಯಯನದ ಫಲವಾಗಿ ಜನ್ಮ ತಾಳಿದ ಮೊದಲ ಮಕಾಕ್‌ಮರಿ ‘ಗ್ರೇಡಿ’. ಈ ಅಧ್ಯಯನದಲ್ಲಿ ವಿಜ್ಞಾನಿಗಳು ವೀರ್ಯಾಣು ಉತ್ಪಾದಿಸಲು ಅಸಮರ್ಥವಾದ, ಅಂದರೆ ಪ್ರೌಢಾವಸ್ಥೆಯನ್ನು ತಲುಪದ ಐದು ರೀಸಸ್ ಮಕಾಕ್‌ಗಳ ದೇಹದಿಂದ ವೀರ್ಯಾಣು ಕಾಂಡಕೋಶಗಳಿರುವ ವೃಷಣ ಅಂಗಾಂಶಗಳನ್ನು ತೆಗೆದುಕೊಂಡು ಘನೀಭವಿಸಿದರು.

ADVERTISEMENT

ಅವು ಪ್ರೌಢಾ‌‌‌‌ವಸ್ಥೆಯನ್ನು ತಲುಪಿದ ನಂತರ, ಅಂದರೆ ಎಂಟರಿಂದ ಹನ್ನೆರಡು ತಿಂಗಳ ನಂತರ ಮತ್ತೆ ಪರೀಕ್ಷಿಸಿದಾಗ ವೃಷಣ ಅಂಗಾಂಶವು ವೀರ್ಯವನ್ನು ಉತ್ಪಾದಿಸಿರುವುದು ಕಂಡುಬಂತು. ಈ ಪಕ್ವವಾದ ವೃಷಣ ಅಂಗಾಂಶದ ವೀರ್ಯವನ್ನು ತೆಗೆದುಹೆಣ್ಣು ರೀಸಸ್ ಮಕಾಕ್‌ನ ಅಂಡಾಣುವಿಗೆಚುಚ್ಚಲಾಯಿತು.

ಈ ಯಶಸ್ಸು (ಪ್ರೌಢಾವಸ್ಥೆಗೆ ಮುನ್ನ ಕ್ರೈಪ್ರಿಸರ್ವ್ಡ್ ಮಾಡಿದ ವೃಷಣ ಅಂಗಾಂಶದಿಂದ ವೀರ್ಯದ ಉತ್ಪಾದನೆ) ಮೊದಲಿನ ಇತರ ಅಧ್ಯಯನಗಳಲ್ಲಿಯೂ ಯಶಸ್ವಿಯಾಗಿದೆ. ಆದರೆ ಈ ಅಧ್ಯಯನದ ಸಾರ್ಥಕ್ಯ ಅಡಗಿರುವುದುಇಂತಹ ಅಂಗಾಂಶಗಳಿಂದ ಉತ್ಪತ್ತಿಯಾಗುವ ವೀರ್ಯದಿಂದ ಜೀವಂತ, ಆರೋಗ್ಯಕರ ಮರಿ ಮಕಾಕ್‌ ‘ಗ್ರೇಡಿ’ ಜನಿಸಿದೆ ಎನ್ನುವುದು.

ಸಂಶೋಧಕರು ಮೊದಲು ವೀರ್ಯವನ್ನು ಒರೆಗಾನ್ ರಾಷ್ಟ್ರೀಯ ಪ್ರೈಮೇಟ್ ಸಂಶೋಧನಾ ಕೇಂದ್ರಕ್ಕೆ ಕಳುಹಿಸಿದರು. ಅಲ್ಲಿ ಈ ವೀರ್ಯದಿಂದ 138 ಅಂಡಾಣುಗಳನ್ನು ಫಲವತ್ತಾಗಿಸಲು ಬಳಸಲಾಯಿತು. ಶೇ 41ರಷ್ಟು ಅಂಡಾಣುಗಳು ಆರಂಭಿಕ ಹಂತದ ಭ್ರೂಣಗಳಾಗಿ ಅಭಿವೃದ್ಧಿ ಹೊಂದಿದವು. ಈ 11 ಭ್ರೂಣಗಳನ್ನು ಸ್ತ್ರೀ ಮಕಾಕ್‌ಗಳಲ್ಲಿ ಅಳವಡಿಸಲಾಯಿತು. ಅವುಗಳಲ್ಲಿ ಒಂದು ಗರ್ಭಧಾರಣೆ ಯಶಸ್ವಿಯಾಗಿದ್ದು, ಅದು‘ಗ್ರೇಡಿ’ ಹುಟ್ಟಿಗೆ ಕಾರಣವಾಗಿದೆ. ಇದನ್ನು ವಿಜ್ಞಾನಿಗಳು, “ಯಾವುದೇ ಸಂತಾನೋತ್ಪತ್ತಿ ತಂತ್ರಜ್ಞಾನದ ಪರಿಕಲ್ಪನೆಗೆ ಇದೊಂದು ಚಿನ್ನದ-ಗುಣಮಟ್ಟದ ಪುರಾವೆ” ಎಂದು ಬರೆದಿದ್ದಾರೆ.

ಅಪಾಯಗಳೇನು?
ಈ ಅಧ್ಯಯನಕ್ಕೂ ತನ್ನದೇ ಆದ ಮಿತಿಗಳು–ಅಪಾಯಗಳಿವೆ.ವೃಷಣ ಅಂಗಾಂಶವನ್ನು ಕ್ಯಾಸ್ಟ್ರೇಟೆಡ್ (ಬೀಜ ಒಡೆಯದ) ಪ್ರಾಣಿಗಳಿಂದ ಕಸಿ ಮಾಡಲಾಗಿದೆ ಎಂಬುದು ಇಲ್ಲಿ ಒಂದು ಪ್ರಮುಖ ಎಚ್ಚರಿಕೆಯಾಗಿದೆ, ‌ಪ್ರೌಢಾವಸ್ಥೆಯನ್ನು ತಲುಪದ ಕ್ಯಾನ್ಸರ್‌ ಪೀಡಿತರ ವಿಷಯದಲ್ಲಿ ಇದೇ ಫಲಿತಾಂಶ ಬರಲಿಕ್ಕಿಲ್ಲ.

ಮತ್ತೊಂದು ಸವಾಲೆಂದರೆ, ಮಾನವರ ವಿಷಯಕ್ಕೆ ಬಂದಾಗ, ಕ್ಯಾನ್ಸರ್ ಚಿಕಿತ್ಸೆಯ ಮೊದಲು ಸಂಗ್ರಹಿಸಲಾದ ವೃಷಣ ಅಂಗಾಂಶಗಳು ಮಾರಕ ಕೋಶಗಳನ್ನು ಸಹ ಒಳಗೊಂಡಿರಬಹುದಾದ ಸಾಧ್ಯತೆ ಇರುತ್ತದೆ. ಆದಾಗ್ಯೂ, ಇದನ್ನು ಪೂರಕ ಹೆಜ್ಜೆ ಎಂದು ಭಾವಿಸಿರುವ ವಿಜ್ಞಾನಿಗಳು ಈಗ ಕ್ಲಿನಿಕಲ್ ಪರಿವರ್ತನೆಗೆ ತಯಾರಿ ನಡೆಸುತ್ತಿದ್ದಾರೆ. ಪಿಟ್ಸ್‌ಬರ್ಗ್‌ನ ಯುಪಿಎಂಸಿ ಮ್ಯಾಗೀ-ಮಹಿಳಾ ಆಸ್ಪತ್ರೆಯಲ್ಲಿ, ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಯನ್ನು ಪ್ರಾರಂಭಿಸುವ ಮೊದಲು ವೃಷಣ ಅಥವಾ ಅಂಡಾಶಯದ ಅಂಗಾಂಶಗಳನ್ನು ಕ್ರೈಪ್ರಿಸರ್ವ್‌ ಮಾಡುವ ಆಯ್ಕೆಯನ್ನು ಒದಗಿಸುವ ಕ್ರಮ ಈಗಾಗಲೇ ಜಾರಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.