ADVERTISEMENT

ಸ್ಪೋರ್ಟ್ಸ್‌ ಬ್ರಾ ಆಯ್ಕೆ ಹೇಗೆ?

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 19:30 IST
Last Updated 31 ಆಗಸ್ಟ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವ್ಯಾಯಾಮ ಮಾಡುವಾಗ, ಓಡುವಾಗ, ಜಿಮ್‌ನಲ್ಲಿ ವರ್ಕೌಟ್‌ ಮಾಡುವಾಗ ಮಹಿಳೆಯರು ಟ್ರ್ಯಾಕ್‌ ಸ್ಯೂಟ್‌, ಆರಾಮದಾಯಕ ಶೂ ಧರಿಸಿದರೆ ಮಾತ್ರ ಸಾಲದು, ಆರಾಮದಾಯಕ ಸ್ಪೋರ್ಟ್ಸ್‌ ಬ್ರಾ ಧರಿಸುವುದು ಕೂಡ ಅಷ್ಟೇ ಅವಶ್ಯಕ. ಎದೆಯ ಲಿಗಾಮೆಂಟ್‌, ಭುಜಕ್ಕೆ ನೋವಾಗುವುದನ್ನು ತಡೆಯಲು ಇದು ಅಗತ್ಯ ಎನ್ನುತ್ತಾರೆ ತಜ್ಞರು.

ವಿಶೇಷವಾಗಿ ಕೂಪರ್‌ ಲಿಗಾಮೆಂಟ್‌ಗೆ ಪೆಟ್ಟಾದರೆ ಸರಿಪಡಿಸುವುದು ಕಷ್ಟ. ನಿತ್ಯ ಧರಿಸುವ ಸಾಮಾನ್ಯ ಕಂಚುಕದಿಂದ ಸಣ್ಣಪುಟ್ಟ ವ್ಯಾಯಾಮ, ವೇಗದ ನಡಿಗೆ ಮಾಡಿದರೂ ನೋವನ್ನು ತಡೆಗಟ್ಟುವುದು ಕಷ್ಟ. ಜೊತೆಗೆ ಭುಜದಲ್ಲಿ ನೋವು ಕಾಣಿಸಿಕೊಳ್ಳಬಹುದು.

ನಿಮಗೆ ಯಾವ ರೀತಿಯ ಸ್ಪೋರ್ಟ್ಸ್‌ ಬ್ರಾ ಸೂಕ್ತ ಎಂಬುದು ಯಾವ ರೀತಿಯ ವ್ಯಾಯಾಮ ಮಾಡುತ್ತೀರಿ ಎಂಬುದರ ಮೇಲೆ ಅವಲಂಬಿಸಿದೆ. ಜಾಗಿಂಗ್‌ ಅಥವಾ ಯೋಗ ಅಥವಾ ಕಾರ್ಡಿಯೊ ವ್ಯಾಯಾಮ.. ಹೀಗೆ ವರ್ಕೌಟ್‌ನ ತೀವ್ರತೆಯನ್ನು ಅವಲಂಬಿಸಿದೆ. ಇದು ತೀರಾ ಬಿಗಿ ಇರಬಾರದು, ಎದೆಯನ್ನು ಪೂರ್ತಿ ಆವರಿಸಿರಬೇಕು, ಸ್ಟ್ರಾಪ್ ಕೂಡ ತೀರಾ ಬಿಗಿಯಾಗಿರಬಾರದು. ಭುಜವನ್ನು ಆರಾಮವಾಗಿ ಚಲಿಸುವಂತಿರಬೇಕು.

ADVERTISEMENT

ಕಂಚುಕದ ಬಟ್ಟೆ ಬೆವರನ್ನು ಹೀರಿಕೊಳ್ಳದೆ ಆರಿಹೋಗುವಂಥದ್ದಿರಬೇಕು. ಹೀಗಾಗಿ ಹತ್ತಿಯ ಬ್ರಾ ಅಷ್ಟು ಸೂಕ್ತವಲ್ಲ. ನೀವು ನಿತ್ಯ ಬಳಸುವ ಕಂಚುಕದ ಅಳತೆಯದ್ದೇ ಸ್ಪೋರ್ಟ್ಸ್‌ ಬ್ರಾ ಖರೀದಿಸುವುದು ಸೂಕ್ತ. ಕಪ್‌ ಅಳತೆಗೂ ಆದ್ಯತೆ ನೀಡಿ.

ತಲೆಯ ಮೇಲಿಂದ ಹಾಕುವಂತಹ ಬ್ರಾ ಅಷ್ಟು ಆರಾಮದಾಯಕವಲ್ಲ. ಜೊತೆಗೆ ಅಗತ್ಯಕ್ಕಿಂತ ಹೆಚ್ಚು ಹಿಗ್ಗುತ್ತವೆ. ಹೀಗಾಗಿ ಕ್ಲಾಸ್ಪ್‌ ಅಥವಾ ಹುಕ್‌ ಇರುವುದನ್ನೇ ಆಯ್ಕೆ ಮಾಡಿಕೊಳ್ಳಿ. ಜೊತೆಗೆ ಸ್ಟ್ರಾಪ್‌ ಕೂಡ ಹೆಚ್ಚು ಕಡಿಮೆ ಮಾಡುವಂತಿರಬೇಕು. ಹಾಗೆಯೇ ಕಂಪ್ರೆಶನ್‌ಗಿಂತ ಕಪ್‌ ಇರುವ ಬ್ರಾ ಖರೀದಿಸಿ. ವ್ಯಾಯಾಮ ಮಾಡುವಾಗ ಚಲನೆಯಿಂದಾಗಿ ನಿಮ್ಮ ಎದೆಗೆ ನೋವಾಗುವುದು ತಪ್ಪುತ್ತದೆ. ಬೆನ್ನಿಗೆ ಬಿಗಿಯಾಗಿ ಅಪ್ಪುವ (ರೇಸರ್‌ಬ್ಯಾಕ್‌) ಕಂಚುಕವನ್ನೇ ಆಯ್ಕೆ ಮಾಡಿಕೊಳ್ಳಿ. ಅಗಲ ಸ್ಟ್ರಾಪ್‌ ಇದ್ದರೆ ಸೂಕ್ತ. ಇದರಿಂದ ಭುಜಕ್ಕೆ ಉಜ್ಜಿ ಗಾಯವಾಗುವುದನ್ನು ತಡೆಯಬಹುದು. ಜೊತೆಗೆ ದೇಹದ ತೂಕ ಸರಿಸಮನಾಗಿ ಹಂಚಿಕೆಯಾಗಿ ಭುಜದ ನೋವಿನಿಂದ ಮುಕ್ತರಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.