ADVERTISEMENT

ಏನಾದ್ರೂ ಕೇಳ್ಬೋದು: ಹೊರಸಂಬಂಧ ಬೆಂಕಿಯೊಡನೆ ಸರಸವಾಡಿದಂತೆ

ನಡಹಳ್ಳಿ ವಂಸತ್‌
Published 11 ಡಿಸೆಂಬರ್ 2020, 19:35 IST
Last Updated 11 ಡಿಸೆಂಬರ್ 2020, 19:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   
""

42ರ ವಿವಾಹಿತ, ಸುಖೀ ಸಂಸಾರ. 33ರ ಪ್ರಾಯದ ವಿಧವೆ ಸೊಸೆಯೊಂದಿಗೆ ದೈಹಿಕ ಸಂಬಂಧವಿದೆ. ಅವಳಿಗೆ ಎಚ್‌ಐವಿ ಪಾಸಿಟಿವ್‌ ಇರುವುದು ಗೊತ್ತಾಗಿದೆ. ನಿರೋಧ್‌ ಉಪಯೋಗಿಸಿದ್ದರಿಂದ ನನಗೆ ನೆಗೆಟಿವ್‌ ಬಂದಿದೆ. ನಾನು ಅವಳನ್ನು ಬಿಟ್ಟಿರಲು ಆಗುತ್ತಿಲ್ಲ. ನಿರೋಧ್ ಉಪಯೋಗಿಸುವುದು ಸುರಕ್ಷಿತವೇ ಅಥವಾ ಬೇರೆ ಯಾವುದಾದರೂ ಟಿಪ್ಸ್ ಇದೆಯೇ?

- ಹೆಸರು, ಊರು ಇಲ್ಲ.

ನಿಮ್ಮದು ಸುಖೀ ಸಂಸಾರ ಎಂದು ಹೇಳಿದ್ದೀರಲ್ಲವೇ? ಎಚ್‌ಐವಿ ಸೋಂಕಿತ ಸೊಸೆಯೊಡನೆ ಇರುವ ಹೊರಸಂಬಂಧದ ವಿಷಯ ಹೆಂಡತಿ ಮಕ್ಕಳಿಗೆ ನಿಧಾನವಾಗಿಯಾದರೂ ತಿಳಿದುಹೋಗುತ್ತದೆ. ಆಗ ನಿಮ್ಮ ಕುಟುಂಬದ ಪರಿಸ್ಥಿತಿ ಹೇಗಿರಬಹುದು ಕಲ್ಪಿಸಿಕೊಂಡಿದ್ದೀರಾ? ಕುಟುಂಬಕ್ಕೆ ಅನ್ಯಾಯ ಮಾಡುತ್ತಿದ್ದೇನೆ, ಆದರೂ ಅದನ್ನು ಮುಂದುವರೆಸಲು ಸಹಾಯ ಮಾಡಿ ಎಂದು ಕೇಳಿದರೆ ಉತ್ತರಿಸಲು ಹೇಗೆ ಸಾಧ್ಯ? ನಿರೋಧ್‌ ಎಚ್ಐವಿ ಸೋಂಕಿನಿಂದ ಯಾವಾಗಲೂ ರಕ್ಷಣೆ ನೀಡುವ ಖಾತ್ರಿಯೇನೂ ಇಲ್ಲ. ಆರೋಗ್ಯ, ಕೌಟುಂಬಿಕ ಜೀವನ, ಸಾಮಾಜಿಕ ಸ್ಥಾನಮಾನ ಎಲ್ಲಾ ದೃಷ್ಟಿಯಿಂದಲೂ ನೀವು ಬೆಂಕಿಯೊಡನೆ ಸರಸವಾಡುತ್ತಿದ್ದೀರಿ. ಕೂಡಲೇ ಈ ಸಂಬಂಧವನ್ನು ನಿಲ್ಲಿಸದಿದ್ದರೆ ಅಪಾಯಗಳು ಯಾವುದೇ ಕ್ಷಣದಲ್ಲಾದರೂ ಬಂದೆರಗಬಹುದು.

ADVERTISEMENT

***

30 ವರ್ಷದ ಮಹಿಳೆ. ಗಂಡನಿಗೆ 50 ವರ್ಷ. ಮದುವೆಯಾಗಿ 10 ವರ್ಷಗಳಾಗಿವೆ. ಅವರಿಗೆ ಸಾಕಷ್ಟು ಸ್ತ್ರೀಯರೊಡನೆ ದೈಹಿಕ ಸಂಬಂಧವಿದೆ ಎಂದು ನನಗೆ ಇತ್ತೀಚೆಗೆ ತಿಳಿಯಿತು. ಕೇಳಿದರೆ ನಿನಗೆ ಅನುಮಾನದ ಕಾಯಿಲೆ ಎಂದು ದೂಷಿಸುತ್ತಾರೆ. ಅವರ ಮೇಲೆ ಪ್ರೀತಿಯಿದೆ, ಆದರೆ ದೈಹಿಕ ಸಂಪರ್ಕ ಮಾಡಲು ಇಷ್ಟವಿಲ್ಲ. ಸಲಹೆನೀಡಿ.

- ಮಮತಾ, ಊರಿನ ಹೆಸರಿಲ್ಲ.

ಪತಿ– ಪತ್ನಿ ಆಗಿರುವವರೆಗೆ ಪ್ರೀತಿ ಮತ್ತು ದೇಹ ಸಂಪರ್ಕವನ್ನು ಬೇರೆ ಮಾಡಲು ಹೇಗೆ ಸಾಧ್ಯ? ಅವರಿಂದ ಹೊರತಾಗಿ ನಿಮ್ಮ ಲೈಂಗಿಕ ಆಗತ್ಯಗಳನ್ನು ಹೇಗೆ ಪೂರೈಸಿಕೊಳ್ಳುತ್ತೀರಾ? ಆತ್ಮಗೌರವಿಲ್ಲದ ಇಂತಹ ಜೀವನದಿಂದ ನಿಮಗೆ ಸಿಗುವುದಾದರೂ ಏನು? ಹೊರಸಂಬಂಧಗಳನ್ನು ಬಿಡುವುದಕ್ಕೆ ಸಿದ್ಧರಿಲ್ಲವೆಂದಾದರೆ ವಿಚ್ಛೇದನವೇ ನಿಮಗೆ ಉಳಿದಿರುವ ಮಾರ್ಗ. ಇಲ್ಲದಿದ್ದರೆ ಅವರಿಗೆ ಬರಬಹುದಾದ ಕಾಯಿಲೆಗಳು ನಿಮಗೂ ಅಂಟಿಕೊಳ್ಳಬಹುದು. ಆರ್ಥಿಕವಾಗಿ ಸ್ವತಂತ್ರರಾಗಿ ಆತ್ಮಗೌರವದ ಹೊಸಬದುಕನ್ನು ಕಟ್ಟಿಕೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು. ತವರುಮನೆ ಸ್ನೇಹಿತರು, ಮಹಿಳಾ ಸಂಘಟನೆಗಳ ಸಹಾಯದಿಂದ ವಿಚ್ಛೇದನ ಪಡೆಯುವ ಬಗೆಗೆ ಯೋಚಿಸಿ.

***

45 ವರ್ಷದ ವಿವಾಹಿತ, ಪತ್ನಿಗೆ 38. ಇಬ್ಬರು ಮಕ್ಕಳಿದ್ದಾರೆ. ಸಂತೃಪ್ತ ಲೈಂಗಿಕ ಜೀವನ ನಡೆಸುತ್ತಿದ್ದೇವೆ. ಕೊರೊನಾ ಕಾಯಿಲೆಯಿಂದ ಗುಣವಾದ ನಂತರ ಸಂಭೋಗ ಮಾಡಿದ ಕೂಡಲೇ ಪತ್ನಿಗೆ ತಲೆನೋವು ಶುರುವಾಗುತ್ತಿದೆ. ಅವರ ಎತ್ತರ 5.4, ತೂಕ 80ಕಿಲೋ. ಲೈಂಗಿಕ ಆಸಕ್ತಿ ಚೆನ್ನಾಗಿದೆ. ತಲೆನೋವಿನ ಕಾರಣ ಮತ್ತು ಪರಿಹಾರಗಳನ್ನು ತಿಳಿಸಿ.

- ಹೆಸರು, ಊರು ತಿಳಿಸಿಲ್ಲ.

ತಲೆನೋವಿಗೆ ಮನಸ್ಸಿನ ಮೂಲೆಯಲ್ಲೆಲ್ಲೋ ಕಾಡುತ್ತಿರುವ ತಪ್ಪುತಿಳಿವಳಿಕೆ, ಭಯ, ಆತಂಕಗಳು ಕಾರಣವಿರಬಹುದು ಅಥವಾ ಕಾಯಿಲೆ ಮತ್ತು ಔಷಧಗಳ ನಂತರದ ಪರಿಣಾಮವೂ ಇರಬಹುದು. ತಲೆನೋವು ಸಂಭೋಗದ ನಂತರ ಮಾತ್ರ ಬರುತ್ತಿದೆ ಎಂದಾದರೆ ದಣಿವಿನ ಕಾರಣವೂ ಇರಬಹುದು. ಸ್ಪಷ್ಟವಾಗಿ ಹೇಳುವುದು ಕಷ್ಟ. ಸದ್ಯಕ್ಕೆ ಸಹನೀಯವಾಗಿದ್ದರೆ ಕೆಲವು ಕಾಲ ಕಾದು ವೈದ್ಯರನ್ನು ಸಂಪರ್ಕಿಸಿ. ದೈಹಿಕ ಆರೋಗ್ಯದ ದೃಷ್ಟಿಯಿಂದ ಪತ್ನಿಯ ದೇಹದ ತೂಕವನ್ನು ಇಳಿಸಲು ನೀವು ಸಹಾಯಮಾಡಿ.

ನಾವು ಮದುವೆಯಾಗಲಿರುವ ಉದ್ಯೋಗಸ್ಥ ಜೋಡಿ. ಪರಸ್ಪರ ನಂಬಿಕೆ, ಪ್ರೀತಿಯಿದೆ. ಲೈಂಗಿಕತೆಯ ಬಗೆಗೆ ಸಹಜ ಆಸಕ್ತಿ, ಕುತೂಹಲಗಳಿದ್ದರೂ ಸಾಂಪ್ರದಾಯಿಕ ವಾತಾವರಣದಲ್ಲಿ ಬೆಳೆದಿರುವುದರಿಂದ ಧೈರ್ಯ ಸಾಲುತ್ತಿಲ್ಲ. ಮದುವೆಗೆ ಇನ್ನೂ ಕಾಯಬೇಕಾಗಿರುವುದರಿಂದ ಈಗಲೇ ದೈಹಿಕ ಸಂಪರ್ಕ ಮಾಡಿದರೆ ಅವಘಡಗಳಾಗಬಹುದೇ? ವೈಚಾರಿಕವಾಗಿ ಇದು ತಪ್ಪೇ?

***

- ಹೆಸರು, ಊರು ತಿಳಿಸಿಲ್ಲ.

ನಿಮ್ಮಿಬ್ಬರ ನಡುವಿನ ಪ್ರೀತಿ, ನಂಬಿಕೆ, ಪ್ರಾಮಾಣಿಕತೆಗಳು ಬಹಳ ಅಮೂಲ್ಯವಾದದ್ದು. ಇದನ್ನು ಹಾಗೆಯೇ ಉಳಿಸಿಕೊಳ್ಳಿ. ಲೈಂಗಿಕ ಆಸಕ್ತಿ ಸಹಜವಾದರೂ, ಮದುವೆಗೆ ಮೊದಲು ದೇಹಸಂಪರ್ಕ ಮಾಡುವುದು ನಿಮ್ಮಿಬ್ಬರ ಮನಸ್ಥಿತಿಗೆ ಸಂಬಂಧಿಸಿದ ವಿಚಾರ. ಕಾರಣಗಳೇನೇ ಇದ್ದರೂ ನಿಮಗೆ ಹಿಂಜರಿಕೆಗಳಿರುವುದು ಸ್ಪಷ್ಟ. ಇಂತಹ ಮನಸ್ಥಿತಿಯಲ್ಲಿ ಮುಕ್ತವಾಗಿ ಬೆರೆಯಲು ಸಾಧ್ಯವೇ? ಅರೆಮನಸ್ಸಿನ ಮಿಲನಕ್ಕಿಂತ ಲೈಂಗಿಕತೆಯ ಬಗೆಗೆ ಹೆಚ್ಚಾಗಿ ತಿಳಿಯುವುದಕ್ಕೆ ಮತ್ತು ಪರಸ್ಪರರನ್ನು ಭಾವನಾತ್ಮಕವಾಗಿ ಅರಿಯುವುದಕ್ಕೆ ಈ ಸಮಯವನ್ನು ಉಪಯೋಗಿಸಿದರೆ ಹೇಗಿರುತ್ತದೆ? ಸದ್ಯಕ್ಕೆ ಚುಂಬನ, ಅಪ್ಪುಗೆಗಳಿಗೆ ಮಾತ್ರ ಸಂಪರ್ಕವನ್ನು ಸೀಮಿತಗೊಳಿಸಿದರೆ ಇಬ್ಬರ ನಡುವಿನ ಆಕರ್ಷಣೆ ಹೆಚ್ಚಬಹುದಲ್ಲವೇ?

***

32ರ ಪುರುಷ, ಪತ್ನಿಗೆ 28. ಮಕ್ಕಳಾಗಿಲ್ಲ. ಲೈಂಗಿಕ ಕ್ರಿಯೆಯನ್ನು ಪತ್ನಿ ಆನಂದಿಸುತ್ತಾಳೆ. ನನಗೆ ಸುಖವಿಲ್ಲ. ಪರಿಹಾರ ತಿಳಿಸಿ.

- ಹೆಸರು, ಊರು ತಿಳಿಸಿಲ್ಲ.

ಮದುವೆಯಾಗಿ ನಾಲ್ಕು ವರ್ಷವಾಗಿದ್ದರೂ ಪತ್ನಿಯ ಜೊತೆ ಲೈಂಗಿಕ ವಿಚಾರಗಳನ್ನು ನೀವು ಹೆಚ್ಚಾಗಿ ಮಾತನಾಡಿದಂತಿಲ್ಲ. ಲೈಂಗಿಕತೆಯಲ್ಲಿ ಕ್ರಿಯೆ ಒಂದೇ ಆಗಿದ್ದರೂ ಅದನ್ನು ಸ್ವೀಕರಿಸುವ ಮನಸ್ಥಿತಿ ಅವರವರ ವೈಶಿಷ್ಟ್ಯವಾಗಿರುತ್ತದೆ. ನಿಮ್ಮ ಕನಸು, ಕಲ್ಪನೆಗಳಲ್ಲಿ ಯಾವ ರೀತಿಯ ಲೈಂಗಿಕತೆಯಿಂದ ಆಕರ್ಷಿತರಾಗುತ್ತೀರಿ ಎಂದು ಗುರುತಿಸಿಕೊಂಡು ಪತ್ನಿಯ ಜೊತೆ ಚರ್ಚೆಮಾಡಿ. ಹಾಗೆಯೇ ಪತ್ನಿಗೂ ಅವರಿಗೆ ಇಷ್ಟವಾಗುವ ಲೈಂಗಿಕ ಪ್ರಪಂಚದ ಬಗೆಗೆ ಮಾತನಾಡಲು ಉತ್ತೇಜಿಸಿ. ಹೀಗೆ ಇಬ್ಬರೂ ಪರಿಚಿತರಾಗುತ್ತಾ ಹೋದಂತೆ ಪರಸ್ಪರ ಹಂಚಿಕೊಂಡು ಸುಖಿಸುವುದು ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.