ADVERTISEMENT

ಕೋವಿಡ್: ಆಂಫೋಟೆರಿಸಿನ್- ಬಿ ಔಷಧ ಉತ್ಪಾದನೆ ಹೆಚ್ಚಳಕ್ಕೆ ಕ್ರಮ: ರಸಗೊಬ್ಬರ ಇಲಾಖೆ

​ಪ್ರಜಾವಾಣಿ ವಾರ್ತೆ
Published 12 ಮೇ 2021, 9:19 IST
Last Updated 12 ಮೇ 2021, 9:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಡ್ ಸೋಂಕಿನ ನಂತರ ಎದುರಾಗುವ ಮ್ಯೂತರ್ ಮೈಕೋಸಿಸ್‌ನಿಂದ ಬಳಲುತ್ತಿರುವ ರೋಗಿಗಳಿಗೆ ವೈದ್ಯರು ಸಕ್ರಿಯವಾಗಿ ಆಂಫೋಟೆರಿಸಿನ್- ಬಿ ನೀಡಲು ಸೂಚಿಸುತ್ತಿರುವುದರಿಂದ ಕೆಲವು ರಾಜ್ಯಗಳಲ್ಲಿಈ ಔಷಧಕ್ಕೆ ದಿಢೀರ್ ಬೇಡಿಕೆ ಹೆಚ್ಚಾಗಿದೆ. ಇದನ್ನು ಗಮನಿಸಿರುವ ಭಾರತ ಸರ್ಕಾರ, ಔಷಧ ಉತ್ಪಾದನೆ ಹೆಚ್ಚಳಕ್ಕೆ ಉತ್ಪಾದಕರ ಜೊತೆ ಸಮಾಲೋಚನೆಯಲ್ಲಿ ತೊಡಗಿದೆ.

ಸ್ಥಳೀಯವಾಗಿ ಉತ್ಪಾದನೆ ಹೆಚ್ಚಳವಾಗುವುದಲ್ಲದೆ, ಈ ಔಷಧವನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುವುದರಿಂದ ಪೂರೈಕೆ ಸ್ಥಿತಿ ಸುಧಾರಿಸುವುದೆಂದು ನಿರೀಕ್ಷಿಸಲಾಗಿದೆ ಎಂದು ಕೇಂದ್ರ ರಸಗೊಬ್ಬರ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಉತ್ಪಾದಕರು ಮತ್ತು ಆಮದುದಾರರೊಂದಿಗೆ ದಾಸ್ತಾನು ಸ್ಥಿತಿಗತಿ ಪರಿಶೀಲನೆ ನಡೆಸಿದ ಬಳಿಕ 2021ರ ಮೇ.11ರವರೆಗಿನ ಆಂಫೋಟೆರಿಸಿನ್- ಬಿ ಔಷಧಿಗೆ ಬೇಡಿಕೆ ಪ್ರವೃತ್ತಿಯನ್ನು ಗಮನಿಸಿ, ಫಾರ್ಮಾ ಇಲಾಖೆ ಔಷಧ ಲಭ್ಯತೆ ಪೂರೈಕೆ ಅಂದಾಜು ಆಧರಿಸಿ 2021ರ ಮೇ 10ರಿಂದ ಮೇ 31ರವರೆಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಔಷಧವನ್ನು ಹಂಚಿಕೆ ಮಾಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಹಾಗೂ ಆರೋಗ್ಯ ರಕ್ಷಣಾ ಸಂಸ್ಥೆಗಳ ನಡುವೆ ನ್ಯಾಯಯುತವಾಗಿ ವಿತರಣೆ ಮಾಡಲು ಕಾರ್ಯತಂತ್ರವನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಈ ಔಷಧವನ್ನು ಪಡೆಯಲು ‘ಪಾಯಿಂಟ್ ಆಫ್ ಕಾಂಟ್ಯಾಕ್ಟ್’ ಅನ್ನು ಸ್ಥಾಪಿಸಿ ಆ ಬಗ್ಗೆ ಪ್ರಚಾರ ಮಾಡುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಈಗಾಗಲೇ ಸರಬರಾಜು ಮಾಡಲಾದ ದಾಸ್ತಾನು ಮತ್ತು ಹಂಚಿಕೆಯಾದ ದಾಸ್ತಾನನ್ನು ನ್ಯಾಯಯುತವಾಗಿ ಬಳಸಬೇಕೆಂದು ರಾಜ್ಯಗಳಿಗೆ ವಿನಂತಿಸಲಾಗಿದೆ. ಪೂರೈಕೆಯ ವ್ಯವಸ್ಥೆಗಳ ಬಗ್ಗೆ ರಾಷ್ಟ್ರೀಯ ಫಾರ್ಮಸಿಟಿಕಲ್ಸ್ ಬೆಲೆ ನಿಗದಿ ಪ್ರಾಧಿಕಾರ (ಎನ್ ಪಿಪಿಎ) ನಿಗಾ ವಹಿಸಲಿದೆ.

ದೇಶ ಸದ್ಯ ಸಾಂಕ್ರಾಮಿಕದ ಗಂಭೀರ ಅಲೆಯನ್ನು ಎದುರಿಸುತ್ತಿದೆ. ಇದರಿಂದ, ದೇಶದ ಹಲವು ಭಾಗಗಳು ಬಾಧಿತವಾಗಿವೆ. ಅಗತ್ಯ ಕೋವಿಡ್ ಔಷಧಿಗಳ ಪೂರೈಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ಅವುಗಳನ್ನು ಪಾರದರ್ಶಕ ಮತ್ತು ನ್ಯಾಯಯುತ ರೀತಿಯಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಭಾರತ ಸರ್ಕಾರ ನಿರಂತರವಾಗಿ ಕಾರ್ಯೋನ್ಮುಖವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.