ADVERTISEMENT

ಕೀಳರಿಮೆಗೆ ಪರಿಹಾರ ಕಾಮವಲ್ಲ!

ನಡಹಳ್ಳಿ ವಂಸತ್‌
Published 19 ಜೂನ್ 2020, 19:30 IST
Last Updated 19 ಜೂನ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಿಎ, ಬಿಎಡ್‌ ಮಾಡಿದ್ದೀನಿ, ವಯಸ್ಸು 33, ಅವಿವಾಹಿತ, ಉಪಾಧ್ಯಾಯನಾಗಿದ್ದೆ. ಸ್ತ್ರೀಯರನ್ನು ಕಲ್ಪಿಸಿಕೊಂಡು ಹಸ್ತಮೈಥುನ ಮಾಡುವ ಕೆಟ್ಟಚಟವಿದೆ. ಇದು ಶಾಲೆಯ ಸಹೋದ್ಯೋಗಿಗಳಿಗೆ ತಿಳಿದು ಅವರು ಎಲ್ಲರಿಗೂ ಹೇಳಿಬಿಟ್ಟರು. ಇದರಿಂದ ಮಾನಸಿಕ ಹಿಂಸೆಯಾಗಿ ಕೆಲಸವನ್ನು ಬಿಟ್ಟು ಕೂಲಿ ಮಾಡುತ್ತಿದ್ದೇನೆ. ಹಸ್ತಮೈಥುನ ಮಾಡುವುದನ್ನು ನೋಡಿದ್ದ ಸೋದರಮಾವ ಎಲ್ಲರಿಗೂ ಹೇಳಿದ್ದರಿಂದ ನೆಂಟರಿಷ್ಟರೆಲ್ಲಾ ನನ್ನನ್ನು ಕಾಮುಕನ ರೀತಿಯಲ್ಲಿ ನೋಡುತ್ತಾರೆ. ನಾನು ಎಷ್ಟು ಕಾಮುಕನಾಗಿದ್ದೇನೆಂದರೆ ಮಕ್ಕಳನ್ನೂ ಸೇರಿಸಿ ಎಲ್ಲಾ ಹೆಣ್ಣುಮಕ್ಕಳನ್ನೂ ಸುತ್ತಲಿನ ಪರಿಜ್ಞಾನವೂ ಇಲ್ಲದೆ ಅದೇ ದೃಷ್ಟಿಯಿಂದ ನೋಡುತ್ತೇನೆ. ನೀಲಿಚಿತ್ರ ನೋಡುತ್ತೇನೆ. ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಆಗುತ್ತಿಲ್ಲ. ಬಹಳ ನೊಂದಿದ್ದೇನೆ. ಹೆಣ್ಣುಮಕ್ಕಳನ್ನು ಕಾಮದ ದೃಷ್ಟಿಯಿಂದ ನೋಡುವ ಚಟದಿಂದ ಹೊರಬರುವುದು ಹೇಗೆ? ಕಾಮವನ್ನು ಆರಿಸುವುದು ಹೇಗೆ? ಇವೆಲ್ಲಾ ಭವಿಷ್ಯಕ್ಕೆ ಮಾರಕವಾಗುತ್ತಿದೆ. ದಯವಿಟ್ಟು ಸಲಹೆ ನೀಡಿ.

- ಜಗದೀಶ, ಊರಿನ ಹೆಸರಿಲ್ಲ.

ಕಾಮದ ಹಂಬಲದ ಬಗೆಗೆ ಬರೆದ ದೀರ್ಘವಾದ ನಿಮ್ಮ ಪತ್ರದಲ್ಲಿ ಇರುವ ಸ್ಪಷ್ಟತೆ ಮತ್ತು ಬದಲಾಗಬೇಕು ಎನ್ನುವ ಪ್ರಾಮಾಣಿಕತೆ ನನಗೆ ಬಹಳ ಮೆಚ್ಚುಗೆಯಾಗಿದೆ. ನಿಮ್ಮ ಪರಿಸ್ಥಿತಿಯನ್ನು ಮೂರು ಕೋನಗಳಲ್ಲಿ ನೋಡೋಣ.

ADVERTISEMENT

1. ಕಾಮದ ಬಯಕೆ ಸಹಜವಾದದ್ದು, ಅದು ಚಟವಲ್ಲ. ಹಸ್ತಮೈಥುನದ ಮೂಲಕ ತೃಪ್ತಿ ಪಡೆಯುವುದರಲ್ಲಿಯೂ ಯಾವುದೇ ತೊಂದರೆಗಳಿಲ್ಲ. ಕಲ್ಪನೆಗಳಲ್ಲಿ ನಿಮ್ಮ ಸುತ್ತಲೂ ಇರುವ ಸ್ತ್ರೀಯರು ಬರುತ್ತಿರುವುದರಿಂದ ಪಾಪಪ್ರಜ್ಞೆಯನ್ನು ಬೆಳೆಸಿಕೊಂಡಿದ್ದೀರಿ. ಹಸ್ತಮೈಥುನ ಮತ್ತು ನೀಲಿಚಿತ್ರಗಳ ಬಗೆಗೆ ಕಳೆದ ಮಾರ್ಚ್‌ 5. ರ ಸಂಚಿಕೆಯ ಉತ್ತರಗಳನ್ನು ಓದಿ. ನೀವು ಮದುವೆಯಾಗಿ ಸಂಗಾತಿಯೊಡನೆ ಕಾಮತೃಪ್ತಿ ಹೊಂದುವುದು ಸಾಧ್ಯವಾದಾಗ ಈ ಎಲ್ಲಾ ಒತ್ತಡಗಳು ಕಡಿಮೆಯಾಗುತ್ತವೆ.

2. ವಿದ್ಯಾವಂತರಾಗಿದ್ದೂ ಶಿಕ್ಷಕ ವೃತ್ತಿಯನ್ನು ತೊರೆದು ಕೂಲಿ ಮಾಡುತ್ತಿರುವುದಕ್ಕಾಗಿ ನಿಮ್ಮಲ್ಲಿ ತೀವ್ರವಾದ ಕೀಳರಿಮೆಯಿರುವಂತೆ ಕಾಣಿಸುತ್ತದೆ. ಕೀಳರಿಮೆಯ ಮಾನಸಿಕ ನೋವಿನಿಂದ ತಪ್ಪಿಸಿಕೊಳ್ಳಲು ಕಾಮವೊಂದನ್ನೇ ಪರಿಹಾರವಾಗಿ ಆಯ್ದುಕೊಂಡಿದ್ದೀರಿ. ಹಾಗಾಗಿ ಕಾಮ ನಶೆಯಾಗಿ ಅಂಟಿಕೊಂಡಿದೆ. ಇದರಿಂದ ನಿಮ್ಮ ಕೀಳರಿಮೆಯೂ ಕಡಿಮೆಯಾಗುತ್ತಿಲ್ಲ, ಕಾಮಸುಖವನ್ನೂ ಸಹಜವಾಗಿ ಅನುಭವಿಸಲು ಸಾಧ್ಯವಾಗುತ್ತಿಲ್ಲ. ಮೊದಲು ನಿಮ್ಮದೇ ಕಣ್ಣಿನಲ್ಲಿ ನಿಮ್ಮ ವ್ಯಕ್ತಿತ್ವವನ್ನು ಮೇಲೇರಿಸಿಕೊಳ್ಳುವುದು ಹೇಗೆಂದು ಯೋಚಿಸಿ. ಉದಾಹರಣೆಗೆ ದೂರದ ಊರಿಗೆ ಹೋಗಿ ಶಿಕ್ಷಕ ವೃತ್ತಿಯನ್ನು ಹುಡುಕಿಕೊಳ್ಳಿ. ಮನೆಪಾಠ, ಸಣ್ಣಪುಟ್ಟ ವ್ಯಾಪಾರದ ಮೂಲಕ ಹಣಕಾಸಿನ ಸ್ಥಿತಿಯನ್ನು ಸುಧಾರಿಸಿಕೊಳ್ಳಿ. ಬೇರೆಬೇರೆ ಹವ್ಯಾಸಗಳ ಮೂಲಕ ನಿಮ್ಮಲ್ಲಿರುವ ಆಸಕ್ತಿ, ಪ್ರತಿಭೆಗಳನ್ನು ಹೊರತನ್ನಿ. ಆತ್ಮಗೌರವ ಹೆಚ್ಚುತ್ತಾ ಬಂದಂತೆ ಸಂಗಾತಿಯೊಬ್ಬಳನ್ನು ಹುಡುಕಿ ಮದುವೆಯಾಗುವ ಬಗೆಗೆ ಯೋಚಿಸಿ.

3. ಹಸ್ತಮೈಥುನದ ಕುರಿತು ತಿಳಿದಿರುವ ಕೆಲವರು ನಿಮ್ಮನ್ನು ಕೀಳಾಗಿ ನೋಡಿರಬಹುದು. ಸಹೋದ್ಯೋಗಿಗಳು, ವಿದ್ಯಾರ್ಥಿಗಳು, ಸ್ನೇಹಿತರು, ಬಂಧುಗಳು - ಹೀಗೆ ಪರಿಚಿತರೆಲ್ಲರೂ ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದಿರಲು ಹೇಗೆ ಸಾಧ್ಯ? ಎಲ್ಲಾ ಸ್ತ್ರೀಯರ ಕಡೆ ಕಾಮದ ದೃಷ್ಟಿಯನ್ನು ಹರಿಸುವ ನಿಮ್ಮ ಪ್ರವೃತ್ತಿಯಿಂದ ಅವರಿಗೆ ಮುಜುಗರವಾಗಿ ನಿಮ್ಮಿಂದ ದೂರಹೋಗುತ್ತಿದ್ದಾರೆ. ಇದರಿಂದ ನಿಮ್ಮ ಕೀಳರಿಮೆ ಹೆಚ್ಚಿ ನೀವೇ ಎಲ್ಲರಿಂದ ದೂರಸರಿಯುತ್ತಿದ್ದೀರಿ.

ಆತ್ಮಗೌರವ ಇಲ್ಲದಿರುವುದಕ್ಕಾಗಿ ಬೇಸರ, ಬೇಸರವನ್ನು ಕಳೆಯಲು ಕಾಮ-ಎಲ್ಲರ ಮೇಲೆ ಬೀರುವ ಕಾಮದೃಷ್ಟಿಯಿಂದ ಹಾಳಾಗುವ ಸಂಬಂಧಗಳು-ಇದರಿಂದ ಹೆಚ್ಚುವ ಬೇಸರ, ಕೀಳರಿಮೆ-ಮತ್ತೆ ಕಾಮದಿಂದ ಅದಕ್ಕೆ ಪರಿಹಾರ. ಇಂತಹ ಚಕ್ರವ್ಯೂಹದಲ್ಲಿ ನೀವು ನೋಯುತ್ತಿದ್ದೀರಿ. ತಜ್ಞ ಮನೋಚಿಕಿತ್ಸಕರ ಸೇವೆ ಲಭ್ಯವಿದ್ದರೆ ನಿಮ್ಮ ಈ ಪರಿಸ್ಥಿತಿಯಿಂದ ಸಂಪೂರ್ಣವಾಗಿ ಹೊರಬಂದು ನೆಮ್ಮದಿಯ ಬದುಕನ್ನು ಪಡೆಯಬಹದು.

(ಲೇಖಕ: ಶಿವಮೊಗ್ಗದಲ್ಲಿ ಮನೋಚಿಕಿತ್ಸಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.