ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ | ಚಳಿಗಾಲದಲ್ಲಿ ಸಾಮಾನ್ಯ ಫ್ಲು: ಎಚ್ಚರಿಕೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 20:13 IST
Last Updated 25 ಡಿಸೆಂಬರ್ 2020, 20:13 IST
.
.   

ಚಳಿಗಾಲವೆಂದರೆ ಸಹಜವಾಗಿಯೇ ಇತರ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುವ ಸಮಯ. ಹಿಂದೆ ಲಕ್ಷಣಗಳ ಮೇಲೆ ಫ್ಲು, ನೆಗಡಿ, ಆಸ್ತಮಾ.. ಎಂದೆಲ್ಲ ಗುರುತಿಸಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಈ ಸಲ ಕೋವಿಡ್‌–19ನಿಂದಾಗಿ ಈ ಸಾಮಾನ್ಯ ಲಕ್ಷಣಗಳೂ ಕೂಡ ಎಚ್ಚರಿಕೆ ಗಂಟೆ ಎನಿಸಿಬಿಟ್ಟಿವೆ.

ಕೊರೊನಾ ಸೋಂಕು ಮತ್ತು ಸಾಮಾನ್ಯ ಫ್ಲು ಲಕ್ಷಣಗಳು ಮೇಲ್ನೋಟಕ್ಕೆ ಒಂದೇ ಎನಿಸಿಬಿಟ್ಟಿವೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಮೆರಿಕದ ಸಿಡಿಸಿ (ಸೆಂಟರ್ಸ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್ಶನ್‌) ಕೆಲವು ಸಲಹೆ– ಸೂಚನೆಗಳನ್ನು ನೀಡಿವೆ.

ಚಳಿಗಾಲದಲ್ಲಿರುವ ಒಣ ಹವೆ ಮತ್ತು ನಡುಗಿಸುವ ಶೀತ ನಮ್ಮ ಉಸಿರಾಟದ ಮಾರ್ಗವನ್ನು ಒಣಗಿಸುತ್ತವೆ. ಇದು ಗಾಳಿಯನ್ನು ಒಳಗೆಳೆದುಕೊಳ್ಳುವ ಮೂಗಿನ ಒಳಭಾಗ ಹಾಗೂ ಗಂಟಲಿನ ಕೆಲವು ಭಾಗಗಳನ್ನು ಒಳಗೊಂಡಿದೆ. ಇದರಿಂದ ಕಿರಿಕಿರಿಯಾಗಿ ಕೆಮ್ಮು, ಸೋರುವ ಮೂಗು ಹಾಗೂ ಮೂಗಿನಲ್ಲಿ ಶ್ಲೇಷ್ಮ ಕಟ್ಟಿಕೊಳ್ಳುವ ಸಮಸ್ಯೆಗಳು ಉಂಟಾಗಬಹುದು.

ADVERTISEMENT

ಹೊರಗಡೆಯ ಶೀತ ಗಾಳಿಯಿಂದ ಉಂಟಾಗುವ ಈ ರೀತಿಯ ಕೆಮ್ಮು, ಸೋರುವ ಮೂಗು, ಮೂಗು ಕಟ್ಟಿಕೊಳ್ಳುವುದು ಹಾಗೂ ಗಂಟಲು ನೋವಿನಂತಹ ಲಕ್ಷಣಗಳ ಬಗ್ಗೆ ನಿಗಾ ವಹಿಸಬೇಕು. ಕೇವಲ ಶೀತ ವಾತಾವರಣದಿಂದ ಇಂತಹ ಲಕ್ಷಣಗಳಿದ್ದರೆ ಒಂದು ಅಥವಾ ಎರಡು ದಿನಗಳಲ್ಲಿ ಕಡಿಮೆಯಾಗುತ್ತವೆ. ಹಾಗೆಯೇ ಅಲರ್ಜಿ ಇರುವವರಿಗೆ ಕೆಲವರಲ್ಲಿ ಈ ಸಮಯದಲ್ಲಿ ಬಿಡುವ ಹೂವಿನ ಪರಾಗರೇಣುಗಳಿಂದ ಆಸ್ತಮಾ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಅತಿಯಾದ ಶೀತದಿಂದ ಬ್ರಾಂಕೈಟಿಸ್‌ ಕೂಡ ಆಗಬಹುದು.

ಈ ತರಹದ ಕೆಮ್ಮು, ಸೈನುಸೈಟಿಸ್‌, ಗಂಟಲು ನೋವು ಮತ್ತಿತರ ಲಕ್ಷಣಗಳು ಕೋವಿಡ್‌–19ನಲ್ಲೂ ಕಾಣಿಸಿಕೊಳ್ಳುತ್ತವೆ. ಹಾಗೆಯೇ ವಾಸನೆ ಹಾಗೂ ನಾಲಿಗೆ ರುಚಿ ಕಳೆದುಕೊಳ್ಳುವ ಲಕ್ಷಣ ಸೈನುಸೈಟಿಸ್‌ನಲ್ಲೂ ಇರುತ್ತದೆ. ಆದರೆ ಕೋವಿಡ್‌–19ನಲ್ಲಿ ಇದು ತೀವ್ರತರವಾಗಿರುತ್ತದೆ ಮತ್ತು ಒಮ್ಮೆಲೇ ಕಾಣಿಸಿಕೊಳ್ಳುತ್ತದೆ ಎಂದು ಸಿಡಿಸಿ ತಿಳಿಸಿದೆ.

ಹಾಗೆಯೇ ಹೆಚ್ಚು ಗಾಳಿಯಾಡದ ಒಳಾಂಗಣದಲ್ಲಿ ಜಾಸ್ತಿ ಜನ ಸೇರಿದರೆ ಇನ್‌ಫ್ಲುಯೆಂಜ, ಇತರ ವೈರಸ್‌ ಸೋಂಕು ಬೇಗನೆ ಹರಡಬಹುದು. ಈ ಜ್ವರದಲ್ಲಿ ಕೂಡ ಸುಸ್ತು, ಮೈಕೈ ನೋವು, ಕೆಮ್ಮು, ಕೆಲವೊಮ್ಮೆ ವಾಂತಿ, ವಾಕರಿಕೆ ಕಾಣಿಸಿಕೊಳ್ಳುತ್ತವೆ. ಆದರೆ ಇದನ್ನು ನಿಮ್ಮಷ್ಟಕ್ಕೇ ನೀವೇ ಸಾಮಾನ್ಯ ಜ್ವರ ಇರಬಹುದು ಎಂಬ ತೀರ್ಮಾನಕ್ಕೆ ಬರದೆ ಕೂಡಲೇ ಪರೀಕ್ಷೆ ಮಾಡಿಸಿ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

ಪರೀಕ್ಷೆಯಲ್ಲಿ ನೆಗೆಟಿವ್‌ ಬಂದರೂ ಕೂಡ ಕೆಲವು ದಿನ ಕ್ವಾರಂಟೈನ್‌ನಂತಹ ಸುರಕ್ಷತಾ ಕ್ರಮ ಅನುಸರಿಸುವುದು ಒಳ್ಳೆಯದು. ಹಾಗೆಯೇ ಆಸ್ತಮಾ ಅಥವಾ ಸಿಒಪಿಡಿ (ಕ್ರೋನಿಕ್‌ ಅಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌) ಇದ್ದವರು ಚಳಿಗಾಲದಲ್ಲಿ ಉಸಿರಾಟದ ಸಮಸ್ಯೆಯಂತಹ ಲಕ್ಷಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇದು ಕೋವಿಡ್‌–19 ಲಕ್ಷಣಗಳೇ ಅಥವಾ ಅಲ್ಲವೇ ಎಂಬುದನ್ನು ವೈದ್ಯರು ಮಾತ್ರ ಹೇಳಬಲ್ಲರು.

ಹೊರಗಡೆ ಅಡ್ಡಾಡುವಾಗ ಮಾಸ್ಕ್‌ ಧರಿಸಿದರೆ ಇತರ ಸೋಂಕಿನಿಂದಲೂ ಪಾರಾಗಬಹುದು. ಜೊತೆಗೆ ಫ್ಲು ಲಸಿಕೆ ಹಾಕಿಸಿಕೊಳ್ಳುವುದು ಒಳ್ಳೆಯದು ಎಂದು ಡಬ್ಲ್ಯುಎಚ್‌ಒ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.