ADVERTISEMENT

ಆಹಾರ-ಆರೋಗ್ಯ: ಅನ್ನಸಂಸ್ಕೃತಿ ಅನ್ಯಸಂಸ್ಕೃತಿ ಆಗದಿರಲಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 19:30 IST
Last Updated 17 ಜನವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅನ್ನ ಎಂದರೆ ಏನು? ಯಾವುದೋ ಧಾನ್ಯವೊಂದರಿಂದ ಸಿದ್ಧವಾದ ಪಾಕವಿಶೇಷವೋ? ಅಥವಾ ತನ್ನ ಸಂತತಿಯ ಪೋಷಣೆಗಾಗಿ ತಾಯೊಂದರ ಎದೆಯಿಂದ ಮಿಡಿದ ಸುಧೆಯೋ? ಅಥವಾ ಒಂದು ಮೃಗಕೆ ಬೇಟೆಯಾಗಿ ದೊರೆತ ಪಶುವೋ? ಯಾವುದು‌ ಅನ್ನ? ಯಾವುದು ಅಲ್ಲ!

ಹಸಿವನ್ನು ಹಿಂಗಿಸಿ ದೇಹಕ್ಕೆ ಕಸುವನ್ನು ಕೊಡುವ ಎಲ್ಲವೂ ಅನ್ನವೇ – ಗಾಳಿ, ನೀರು, ಬೆಳಕು, ಪಂಚೇಂದ್ರಿಯಗಳ ಮೂಲಕ ದೇಹವನ್ನು ಹೊಗುವ ಎಲ್ಲವೂ ಅನ್ನವೇ ಆಗಿದೆ. ಉದರಪೋಷಣೆಗಾಗಿ ಎಲ್ಲ ಜೀವಿಗಳೂ ಒಂದನ್ನೊಂದು ಆಶ್ರಯಿಸಿಯೇ ಇರುತ್ತವಷ್ಟೆ. ಸೃಷ್ಟಿನಿಯಮವೇ ಹೀಗಲ್ಲವೇನು? ಇದಕ್ಕೆ ಮನುಷ್ಯನು ಹೊರತಾದವನೇನಲ್ಲ. ಆದರೆ ಬುದ್ಧಿವಂತನೆನಿಸಿರುವ ಈ ಪ್ರಾಣಿಯು ತನ್ನ ಸಹಜ ಆವಶ್ಯಕತೆಯನ್ನು ಪೂರೈಸಿಕೊಳ್ಳುವ ಹಾಗೂ ಆಸ್ವಾದಿಸುವ ರೀತಿ ಅನನ್ಯವಾಗಿದೆ. ಇದು ಒಂದು ಸಂಸ್ಕೃತಿಯಿಂದ ಮತ್ತೊಂದಕ್ಕೆ ವಿಭಿನ್ನವೂ ವಿಶಿಷ್ಟವೂ ಆಗಿರುತ್ತದೆ.

ಅನ್ನದಿಂದ ಹೊಟ್ಟೆತುಂಬಿದರಷ್ಟೇ ಮಾನವನಿಗೆ ಸಾಕೆನಿಸದು; ಮನುಷ್ಯನ ಅನ್ನವ್ಯಾಪ್ತಿ ಜೀವಕೋಶವನ್ನು ಭರಿಸಿಕೊಳ್ಳುವುದಕ್ಕಷ್ಟೇ ಸೀಮಿತವಲ್ಲವಲ್ಲ! ಇವನಿಗೆ ಭಾವವೆಂಬ ಅಮಿತಕೋಶವೆಂಬುದೂ ಒಂದಿದೆಯಲ್ಲ. ಆ ಕೋಶದ ಭರಣಕ್ಕಾಗಿ ಮಾನವನು ಕಂಡುಹುಡುಕಿಕೊಂಡಿರುವ ದಾರಿ ಹತ್ತುಹಲವು: ಸ್ನೇಹಪ್ರೀತಿಗಳು, ಸರಸವಿರಸಗಳು, ಕೊಡುಕೊಳ್ಳುವಿಕೆಯ ಆಟಗಳು, ಶ್ರೇಷ್ಠ ಕನಿಷ್ಠಗಳೆಂಬ ನಾಟಕಗಳು – ಇವುಗಳೆಲ್ಲೆದರ ಜೊತೆ ಜೊತೆಗೆ ಕರಕುಶಲ ಕಲಾಕೌಶಲ, ಗೀತ ನೃತ್ಯ ಕಾವ್ಯ ಚಿತ್ರ ಶಿಲ್ಪಗಳೇ ಮೊದಲಾದ ಆಮೋದಗಳು! ಇವುಗಳಿಂದ ತನ್ನ ಕೋಶ ತುಂಬಿಸಿಕೊಳ್ಳುವ ಬಗೆಯನ್ನು ಮಾನವ ಅನಾದಿಕಾಲದಿಂದಲೂ ಹತ್ತುಹಲವು ವಿಧಗಳಲ್ಲಿ ಅನ್ವೇಷಿಸುತ್ತಲೇ ಬಂದಿದ್ದಾನೆ. ಈ ಜೀವಭಾವಕೋಶಗಳಿಂದ ಇವನ ಸರ್ವೇಂದ್ರಿಯಗಳೂ ತಣಿಯಬೇಕು, ಆ ಮೂಲಕ ಸರ್ವಾಂಗೀಣವಾಗಿ ಇವನು ಬಲಗೊಳ್ಳಬೇಕು. ಮಾನವನು ಅನ್ನವನ್ನು ಕಂಡುಕೊಂಡಿರುವ ರೀತಿ ಹೀಗೆ.

ADVERTISEMENT

ಅನ್ನಪಾನಗಳ ಕುರಿತು ದಾರ್ಶನಿಕ ಕವಿ ಖಲಿಲ್ ಗಿಬ್ರಾನ್ ತನ್ನ ‘ಪ್ರಾಫೆಟ್’ ಸಂಕಲನದಲ್ಲಿ ಹೇಳುವ ಮಾತು ಸೊಗಸಾಗಿದೆ:
‘...ಬೆಳಕನ್ನು ಹೀರಿ ಬದುಕುವ ಗಿಡಮರಗಳ ಹಾಗೆಯೇ ನೀನೂ ಬದುಕಬಹುದಾಗಿದ್ದರೆ ಆಗಬಹುದಿತ್ತು. ಆದರೆ, ನಿನ್ನ ತೃಷೆಯನ್ನು ಹಿಂಗಿಸಲು ಮತ್ತೊಂದರ ಪ್ರಾಣವನ್ನು ಹೀರಬೇಕಿದೆ, ತಾಯ ಹಾಲನ್ನು ಹಸುಗೂಸಿನಿಂದ ಕಸಿಯಬೇಕಿದೆ. ಇದು ಅನಿವಾರ್ಯವೇ ಆಗಿರುವಾಗ ಆ ನಿನ್ನ ಕ್ರಿಯೆಯು ಒಂದು ಆರಾಧನೆಯೇ ಆಗಿರಲಿ.

‘ನಿನ್ನ ಭೋಜನಪಾತ್ರೆಯು, ಮಾನವನೊಳಗೆ ಪರಮಪವಿತ್ರವಾಗಿ ಇರುವೊಂದಕ್ಕೆ ವನೋಪವನಗಳಿಂದ ತಂದ ಪವಿತ್ರವಾದೊಂದನ್ನು ನಿವೇದಿಸುವ ಯಜ್ಞವೇದಿಯೇ ಆಗಿರಲಿ...’

ಒಂದು ಜೀವದ ಪೋಷಣೆಗೆ ಮತ್ತೊಂದು ಜೀವವು ಆಹುತಿಯಾಗಲೇಬೇಕು ಎನ್ನುವ ಮಾತಿನೊಂದಿಗೆ, ತನ್ನ ಜೀವವು ಸಹ ಮತ್ತಾವುದೋ ಮಹತ್ತಿಗೆ ಆಹುತಿಯಾಗಲೇಬೇಕಿದೆ ಎನ್ನುವ ಅರಿವೂ ಸಮರ್ಪಣೆಯೂ ಮನುಷ್ಯನಲ್ಲಿ ಸದಾ ಜಾಗೃತವಾಗಿರಬೇಕು ಎನ್ನುವ ಭಾವವನ್ನು ಕವಿ‌ಯು ಸೂಚಿಸಿದ್ದಾನೆ.

ಮೇಲಿನ ಮಾತುಗಳು ‘ಅನ್ನವನ್ನು ನಿಂದಿಸಬಾರದು, ಅನ್ನವನ್ನು ತಿರಸ್ಕರಿಸಬಾರದು...’ ಮುಂತಾಗಿರುವ ಉಪನಿಷತ್ತು ಮಾತುಗಳಿಗೆ ಪೂರಕವಾಗಿ ಇರುವಂಥದ್ದೇ ಆಗಿದೆ. ನಮಗೆ ಅನ್ನವನ್ನು ನಿಂದಿಸುವ ಮನಸ್ಸು ಮೂಡುವುದಾದರೂ ಏಕೆ? ಅನ್ನದ ಬಗೆಗೆ ತಿರಸ್ಕಾರಬುದ್ಧಿ ತೋರಿಕೊಳ್ಳುವುದಾದರೂ ಏತಕ್ಕಾಗಿ? ಅದಕ್ಕೆ ಬಹುಮುಖ್ಯ ಕಾರಣ, ಸಹಜವಾಗಿಯೇ ಎಲ್ಲರಿಗೂ ದೊರಕಬೇಕಾದ ಜೀವಪೋಷಕ ಅನ್ನವು ಇಂದು ಬಿಕರಿಯಾಗುವ ಮೋಜಿನ ಅಥವಾ ಆಮೋದದ ಸರಕಾಗಿ ಮಾರ್ಪಾಟಾಗಿರುವುದೂ ಇರಬಹುದು. ಇಂಥ ಸರಕು ವಿಕ್ರಯವಾಗುವ ತಾಣವಾದರೂ ನಮ್ಮದೇ ಚಪಲ ನಾಲಗೆಯಲ್ಲದೇ ಮತ್ತಾವುದು? ಎಷ್ಟೇ ಬಗೆಬಗೆಯ ಆಹಾರವನ್ನು ಅನ್ವೇಷಿಸಿದರೂ ಹೊಸರುಚಿಗಾಗಿ ಹಾತೊರೆಯುತ್ತ ಬುವಿಯನ್ನೇ ನೆಕ್ಕಿ ನೊಣೆಯಬಯಸುವ ನಮ್ಮ ಹುಸಿ ಹಸಿವು ತಣಿದಿದೆಯೇ? ದಿಟದ ಹಸಿವು ಹುಟ್ಟದೆಯೇ ಅನ್ನಕ್ಕೆ ರುಚಿ ಮೂಡುವುದಾದರೂ ಸಾಧ್ಯವಿದೆಯೇ? ಇದೇ ಅರಿವಿನಿಂದ, ಎಲ್ಲ ರುಚಿಗಳ ಉಗಮಸ್ಥಾನವಾಗಿರುವ ಜಠರಾಗ್ನಿಯ ಪ್ರಜ್ವಲನಕ್ಕಾಗಿ ಎಲ್ಲ ಸಂಸ್ಕೃತಿಗಳಲ್ಲಿಯೂ ಉಪವಾಸ ಮಾಡುವ ಅಥವಾ ನಿರಾಹಾರವ್ರತಗಳನ್ನು ಹಿಡಿಯುವ ಪರಿಕಲ್ಪನೆ ಹುಟ್ಟಿಕೊಂಡಿರಬೇಕು. ಮನುಷ್ಯನ ಅವಿವೇಕದಿಂದ ಹುಟ್ಟುವ ಅಸಮತೋಲನವನ್ನು ಸಂಸ್ಕೃತಿಯು ಸರಿದೂಗಿಸಿಕೊಳ್ಳುವ ಒಂದು ಬಗೆ ಹೀಗೆಯೋ ಏನೋ! ಸಮತೋಲನ ಕಾಪಾಡುವ ಶಕ್ತಿ ಸಂಸ್ಕೃತಿಗಿದೆಯೆಂದೆನಷ್ಟೆ. ಉಣ್ಣುವ ಮುನ್ನ ಹಂಚಬೇಕು ಎಂಬ ವಿವೇಕವನ್ನು ಮಾನವನಿಗೆ ಸಂಸ್ಕೃತಿಯು ನೀಡುತ್ತದೆ. ಅಂಥೊಂದು ಮೌಲ್ಯವನ್ನು ಮಾನವನಲ್ಲಿ ಊರುವ ಮೂಲಕ ಅನ್ನವನ್ನು ಎಲ್ಲಕ್ಕೂ ದೊರಕಿಸಿಕೊಡಲು ಸಂಸ್ಕೃತಿಯು ಹವಣಿಸುತ್ತದೆ.

ಅದೇನೇ ಇರಲಿ, ಸೃಷ್ಟಿಯಲ್ಲಿ ಒಂದು ಪಾತ್ರದಿಂದ ಮತ್ತೊಂದು ಪಾತ್ರಕ್ಕೆ ಅನ್ನವಾಗಿ ಚೈತನ್ಯವನ್ನು ಪ್ರವಹಿಸಿ ಎಲ್ಲವನ್ನೂ ಪೋಷಿಸಿ ಪೊರೆಯುತ್ತಿರುವ ತತ್ತ್ವವೇ ಅನ್ನಸ್ವರೂಪಿಯಾಗಿರುವ ಭಗವಂತ. ಆಹಾರವನ್ನು ಸೇವಿಸುವ ಹೊತ್ತಿನಲ್ಲಿ ಭಗವಂತನನ್ನೇ ಧರಿಸುತ್ತಿರುವ ಭಾವ ಜಾಗೃತವಾಗಿದ್ದಲ್ಲಿ ಅನ್ನನಿಂದೆಯಾಗಲಿ, ತಿರಸ್ಕಾರವಾಗಲಿ ನಮ್ಮಲ್ಲಿ ತಲೆದೋರಲು ಕಾರಣವಿರುವುದಿಲ್ಲ. ಬದಲಿಗೆ ಮೂಡುವ ಕೃತಜ್ಞತಾಭಾವವು ನಮ್ಮನ್ನು ವಿನಮ್ರರನ್ನಾಗಿ ಮಾಡಬಹುದು; ಸೃಷ್ಟಿ ಸಮಸ್ತದಲ್ಲಿನ ಅನ್ನವೈವಿಧ್ಯವನ್ನು ಗೌರವಾದರದಿಂದ ಕಾಣುವ ದೃಷ್ಟಿಯನ್ನು ನಮಗೆ ನೀಡಿ ನಮ್ಮನ್ನು ಧನ್ಯರನ್ನಾಗಿಸಬಹುದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.