ADVERTISEMENT

ಬದುಕು ನಿಂತ ನೀರಾಗಬಾರದು

ರುಕ್ಮಿಣಿಮಾಲಾ
Published 18 ಸೆಪ್ಟೆಂಬರ್ 2018, 19:30 IST
Last Updated 18 ಸೆಪ್ಟೆಂಬರ್ 2018, 19:30 IST
   

ನಾವು ನಮ್ಮ ಜೀವನದಲ್ಲಿ ಹಿಂದೆ ನಡೆದ ಕಹಿ ಘಟನೆಗಳನ್ನು, ದುಃಖವನ್ನು, ಕೊರತೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಅದರಿಂದ ಮನಸ್ಸನ್ನು ಕೆರಳಿಸಿಕೊಂಡೇ ಇರುತ್ತೇವೆ. ಆ ಸಿಟ್ಟಿನ ಭರದಲ್ಲಿ ಲೋಕದ ಜನರೆಲ್ಲ ಕೆಟ್ಟವರು ಎಂದು ಶಪಿಸುತ್ತೇವೆ. ‘ಕಾಮಾಲೆಕಣ್ಣಿಗೆ ಕಾಣುವುದೆಲ್ಲ ಹಳದಿ’ ಎಂಬಂತೆ ನಮ್ಮ ಕಣ್ಣಿಗೆ ಆಗ ನಮ್ಮ ಸುತ್ತಮುತ್ತ ಇರುವವರೆಲ್ಲರೂ ಕೆಟ್ಟವರಾಗಿಯೇ ಕಾಣುತ್ತಾರೆ. ಜೀವನವಿಡೀ ಕೊರಗುತ್ತ, ಮಾನಸಿಕ ಕ್ಲೇಶವನ್ನು ಅನುಭವಿಸುತ್ತ, ಮನೆಯವರೊಂದಿಗೆ ಜಗಳ ಮಾಡುತ್ತ ತನ್ನ ನೆಮ್ಮದಿಯಿಲ್ಲದೆ ಮನೆಯವರೆಲ್ಲರ ಶಾಂತಿಯನ್ನೂ ಹಾಳು ಮಾಡುತ್ತ ಕಾಲ ಕಳೆಯುತ್ತೇವೆ. ಕಳೆದುಹೋದುದರ ಬಗ್ಗೆಯೇ ಚಿಂತೆ ಮಾಡುತ್ತ ಕೂರುತ್ತೇವೆ.

ನಮ್ಮ ಬಾಲ್ಯದಲ್ಲಿ ಅಥವಾ ಪ್ರೌಢಾವಸ್ಥೆಯಲ್ಲಿ ಹಾಗೂ ಯೌವನದಲ್ಲಿ ನಡೆದ ಕಹಿ ಘಟನೆಗಳನ್ನು ನೆನಪಿನಿಂದ ಕಿತ್ತು ಬಿಸಾಕಬೇಕು. ನಮಗಿರುವುದು ಕೇವಲ ನಾಲ್ಕೇ ದಿನಗಳ ಬಾಳು. ಅದನ್ನಾದರೂ ಮುಂದಿನ ದಿನಗಳಲ್ಲಿ ನೆಮ್ಮದಿಯಿಂದ ಬದುಕುತ್ತೇವೆ ಎಂಬ ದೃಢಸಂಕಲ್ಪ ಮಾಡಿಕೊಂಡರೆ ಮನದ ಆರೋಗ್ಯ ಉತ್ತಮಗೊಂಡು ಮನೆಯವರೆಲ್ಲರೊಡನೆ ಸುಖ–ಸಂತೋಷದಿಂದ ಬಾಳುವುದು ಕಷ್ಟವೇನಲ್ಲ. ಅದಕ್ಕೆ ಮನಸ್ಸು ಮಾಡಬೇಕು. ಬದುಕು ನಿಂತ ನೀರಾಗಬಾರದು. ನಿಂತ ನೀರಿನಲ್ಲಿ ಹೇಗೆ ಕ್ರಿಮಿಕೀಟಗಳು ಉತ್ಪತ್ತಿಯಾಗುತ್ತವೆಯೋ ಹಾಗೆಯೇ ನಮ್ಮ ಬದುಕಲ್ಲಿ ಕೂಡ ಹಳೆಯ ಕಹಿ ಘಟನೆಗಳನ್ನು ಮನಸ್ಸಿನಿಂದ ಹೊರಹಾಕದೆ ಇದ್ದರೆ ಮನಸ್ಸು ಕೊಳೆಯುತ್ತದೆ. ಹಾಗಾಗಿ ಕಹಿ, ನೋವು, ದುಮ್ಮಾನ ಮರೆತು ಹೊಸ ಚಿಂತನೆಗಳತ್ತ ಮುನ್ನಡೆಯಬೇಕು.

ಕೋತಿಗೂ ಮನುಜನಿಗೂ ಅವಿನಾಭಾವ ಸಂಬಂಧವಿದೆ. ಸಣ್ಣ ತರಚಿದ ಗಾಯವನ್ನು ಕೋತಿ ಕೆರೆದು ಕೆರೆದು ಅದನ್ನು ದೊಡ್ಡ ಹುಣ್ಣನ್ನಾಗಿ ಮಾಡಿಕೊಂಡು ನರಳುತ್ತದೆ. ಹಾಗೆಯೇ ಮನುಜ ಕೂಡ ಯಾವುದೋ ಕೊರತೆಯನ್ನು ನೆನೆದು ಕೋಪಿಸಿಕೊಳ್ಳುತ್ತ ಅದನ್ನೇ ಕೆದಕಿ, ಕೆದಕಿ ಮನೆಯನ್ನು ನರಕ ಮಾಡುತ್ತಾನೆ ಎಂದು ಡಿವಿಜಿಯವರು ಮಂಕುತಿಮ್ಮನ ಕಗ್ಗದಲ್ಲಿ ನಮ್ಮ ಮನದ ರೀತಿಯನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ. ನರಳಾಟ ನಮ್ಮ ಬದುಕಾಗಬಾರದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ADVERTISEMENT

ತರಚು ಗಾಯವ ಕೆರೆದು ಹುಣ್ಣನಾಗಿಪುದು ಕಪಿ |
ಕೊರತೆಯೊಂದನು ನೀನು ನೆನೆ ನೆನೆದು ಕೆರಳಿ || ಧರೆಯೆಲ್ಲವನು ಶಪಿಸಿ ಮನದಿ ನರಕವ ನಿಲಿಸಿ |
ನರಳುವುದು ಬದುಕೇನೊ? – ಮಂಕುತಿಮ್ಮ ||

ರುಕ್ಮಿಣಿಮಾಲಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.