ದೀರ್ಘಕಾಲದವರೆಗೆ ಉಸಿರಾಟ ಸಮಸ್ಯೆ ಉಂಟು ಮಾಡುವ ಕ್ರೋನಿಕ್ ಅಬ್ಸ್‌ಟ್ರಕ್ಟರಿ ಪಲ್ಮನರಿ ಕಾಯಿಲೆ (ಸಿಒಪಿಡಿ)ಯು ಇತ್ತೀಚೆಗೆ ಬಹುತೇಕ ಜನರನ್ನು ಕಾಡುತ್ತಿದೆ, ನಿರ್ಲಕ್ಷಿಸಿದರೆ ಸಾವಿಗೆ ಕೂಡ ಕಾರಣವಾಗಬಲ್ಲ ಈ ಕಾಯಿಲೆಗೆ ಪ್ರತಿವರ್ಷ 10 ದಶಲಕ್ಷ ಮಂದಿ ಭಾರತೀಯರು ತುತ್ತಾಗುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಿಒಪಿಡಿ ಸಮಸ್ಯೆಯು ನಮ್ಮ ದೇಶದಲ್ಲಿ ಮಹಿಳೆಯರಲ್ಲಿ ಮತ್ತು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಮೂಲಕ ಆತಂಕ ಮೂಡಿಸಿದೆ. ಎರಡನೇ ಹಂತದ ಧೂಮಪಾನಿಗಳು ಅಥವಾ ನಿಷ್ಕ್ರಿಯ ಧೂಮಪಾನಿಗಳು ಈ ಸಿಒಪಿಡಿಯ ಅತಿದೊಡ್ಡ ಬಲಿಪಶುಗಳು. ಇನ್ನು ಮಕ್ಕಳ ವಿಚಾರಕ್ಕೆ ಬಂದಾಗಲಂತೂ ಈ ರೋಗ ಅವರನ್ನು ಹೈರಾಣಾಗಿಸಿಬಿಡುತ್ತದೆ. ಅತ್ಯಂತ ಸೂಕ್ಷ್ಮ ಶರೀರ ಹೊಂದಿರುವ ಮಕ್ಕಳು ಎರಡನೇ ಹಂತದ ಧೂಮಪಾನದಿಂದ ಬಾಧೆಗೆ ಒಳಗಾಗುತ್ತಿದ್ದಾರೆ. ಒಮ್ಮೆ ಒಂದು ಮಗು ಪೋಷಕರು ಅಥವ ಕುಟುಂಬದವರ ಧೂಮಪಾನದ ಹೊಗೆಯಿಂದ ತೊಂದರೆಗೆ ಈಡಾದರೆ ಆ ಮಗುವಿನ ಉಸಿರಾಟದ ಸಾಮರ್ಥ್ಯ ಕಡಿಮೆಯಾಗುತ್ತದೆ. ಉಸಿರಾಟದ ಮಾರ್ಗದಲ್ಲಿ ಊತ ಇಲ್ಲವೇ ಲೋಳೆಗಟ್ಟುವ ಸಂಭವ ಇರುತ್ತದೆ. ಈ ಸಮಸ್ಯೆಯಿಂದಾಗಿ ಮಗು ಉಸಿರಾಟದ ಸಮಸ್ಯೆಯಿಂದ ತೀವ್ರವಾಗಿ ಬಳಲುತ್ತದೆ.
ಮಹಿಳೆ ತಾನು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಧೂಮಪಾನವನ್ನು ಮಾಡಿದರಂತೂ ಇನ್ನೂ ಅಪಾಯಕಾರಿ. ಇದು ಆಕೆಯ ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಈ ಸಂದರ್ಭದಲ್ಲಿ ಮಗು ಅತ್ಯಂತ ಕಡಿಮೆ ಪ್ರಮಾಣದ ಆಮ್ಲಜನಕವನ್ನು ಸ್ವೀಕರಿಸುತ್ತದೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ ಮೊನಾಕ್ಸೈಡ್ ರಕ್ತದಲ್ಲಿರುತ್ತದೆ. ಇದರಿಂದ ಮುಂದೆ ಮಕ್ಕಳಲ್ಲಿ ಹಲವು ವಿಧದ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಕಾರಣಗಳು
ಸಿಒಪಿಡಿ ಮುಖ್ಯವಾಗಿ ಧೂಮಪಾನಿಗಳಲ್ಲಿ ಕಂಡು ಬರುವ ಸಮಸ್ಯೆ. ಆದರೆ ಇಂದಿನ ಸ್ಥಿತಿ ಹೇಗಾಗಿದೆ ಎಂದರೆ ಧೂಮಪಾನಿಗಳಲ್ಲದವರು ಹಾಗೂ ನಿಷ್ಕ್ರಿಯ ಧೂಮಪಾನಿಗಳು ಅಪಾಯಕಾರಿ ಸನ್ನಿವೇಶ ಎದುರಿಸುತ್ತಿದ್ದಾರೆ. ಹೆಚ್ಚಾದ ಮನೆಯೊಳಗಿನ ಮಾಲಿನ್ಯ, ಅತಿಯಾದ ಜೈವಿಕ ಇಂಧನ ಬಳಕೆ, ರಾಸಾಯನಿಕ ಹೊಗೆಗಳು ಮತ್ತು ಧೂಳು ಮನೆಯೊಳಗಿರುವವರನ್ನು ಬಾಧಿಸುತ್ತಿರುವುದು ಸಮಸ್ಯೆಗೆ ಪ್ರಮುಖ ಕಾರಣ.
ಭಾರತದಲ್ಲಿ, ಅರ್ಧದಷ್ಟು ಜನಸಂಖ್ಯೆ ಇಂದಿಗೂ ಜೈವಿಕ ಅನಿಲ, ಉರುವಲು ಬಳಕೆಗೆ ಒಗ್ಗಿಹೋಗಿದೆ. ಗ್ರಾಮೀಣ ಭಾಗದಲ್ಲಿ ಬಹುತೇಕ ನಿವಾಸಿಗಳು ಜೈವಿಕ ಇಂಧನವನ್ನು ಅಡುಗೆ ಹಾಗೂ ಬೇಯಿಸುವ ಕಾರ್ಯಕ್ಕೆ ಹೆಚ್ಚಾಗಿ ಬಳಸುತ್ತಾರೆ. ಇದು ಗ್ರಾಮೀಣ ಭಾಗದಲ್ಲಿ ಸಾವಿನ ಪ್ರಮಾಣ ಹೆಚ್ಚಾಗಲು ಪ್ರಮುಖ ಕಾರಣ.
ಸಿಒಪಿಡಿಯಿಂದ ಬರುವ ಸರಿಸುಮಾರು ಶೇ.50ರಷ್ಟು ಸಾವು ಜೈವಿಕ ಇಂಧನದ ಹೊಗೆಯ ಪರಿಣಾಮದಿಂದಾಗಿ ಆಗುತ್ತಿದೆ. ಮಹಿಳೆಯರು ತಮ್ಮ ಹೆಚ್ಚಿನ ಸಮಯವನ್ನು ಅಡುಗೆಮನೆಯಲ್ಲಿಯೇ ಕಳೆಯುವುದರಿಂದ ಶೇ.75ರಷ್ಟು ಮಹಿಳೆಯರನ್ನು ಈ ಸಮಸ್ಯೆ ಕಾಡುತ್ತದೆ.
ಸಮಸ್ಯೆಗಳು
ಉಸಿರಾಟದ ಸೋಂಕುಗಳು- ಇದು ಶೀತ, ಜ್ವರ, ನ್ಯುಮೋನಿಯಾ ಇತ್ಯಾದಿ ಅಪಾಯಗಳನ್ನು ಹೆಚ್ಚಿಸುತ್ತದೆ. ಇದು ಮುಂದುವರಿದು ದೊಡ್ಡ ಸಮಸ್ಯೆಗಳನ್ನು ತಂದಿಟ್ಟು ಶ್ವಾಸಕೋಶದ ಅಂಗಾಂಶ ಮತ್ತು ಗಾಳಿಯ ಹರಿವನ್ನು ನಿರ್ಬಂಧಿಸಬಹುದು.
ಹೃದಯ ಸಮಸ್ಯೆ- ಧೂಮಪಾನದಲ್ಲಿರುವ ನಿಕೋಟಿನ್ ಅಂಶದಿಂದಾಗಿ ಹೃದಯ ಸಂಬಂಧಿ ಸಮಸ್ಯೆಗೆ ಅವಕಾಶ ಆಗಬಹುದು.
ಶ್ವಾಸಕೋಶ ಕ್ಯಾನ್ಸರ್- ಸಿಒಪಿಡಿ ಕಾಯಿಲೆಗೆ ತುತ್ತಾದ ರೋಗಿಗೆ ಶ್ವಾಸಕೋಶದ ಕ್ಯಾನ್ಸರ್ ದಾಳಿ ಇಡುವ ಅವಕಾಶಗಳು ಹೆಚ್ಚಿರುತ್ತವೆ.
ಅಧಿಕ ರಕ್ತದೊತ್ತಡ- ಸಿಒಪಿಡಿ ಬಾಧಿತ ರೋಗಿಗಳಲ್ಲಿ ಶ್ವಾಸಕೋಶಕ್ಕೆ ರಕ್ತ ಪೂರೈಸುವ ಅಪಧಮನಿಗಳ ರಕ್ತದೊತ್ತಡದ ಹೆಚ್ಚಳದ ಅಪಾಯ ಎದುರಾಗಬಹುದು.ಸೂಕ್ತ ತಪಾಸಣೆ ಹಾಗೂ ಚಿಕಿತ್ಸೆ ಪಡೆಯುವುದರಿಂದ ಕಾಯಿಲೆ ಗಂಭೀರ ಸ್ವರೂಪಕ್ಕೆ ತಿರುಗುವುದನ್ನು ತಡೆಯಬಹುದು.
ಸೂಕ್ತ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಸಿಒಪಿಡಿ ನಿರ್ವಹಣೆಗೆ ಸಹಕಾರಿ. ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯಿಂದ ಸೋಂಕಿನ ವಿರುದ್ಧ ಹೋರಾಡಲು ಶರೀರಕ್ಕೆ ಶಕ್ತಿ ಬರುತ್ತದೆ. ಎದೆಯ ಭಾಗದ ಸೋಂಕುರೋಗ ಸಾಮಾನ್ಯವಾಗಿ ಸಿಒಪಿಡಿ ಗೆ ತುತ್ತಾಗಿ ಆಸ್ಪತ್ರೆ ಸೇರುವಂತೆ ಮಾಡುತ್ತದೆ. ಹೀಗಾಗಿ ಆರೋಗ್ಯಕಾರಿ ಡಯಟ್ ವಿಧಾನವನ್ನು ಅನುಸರಿಸುವುದರಿಂದ ಅಪಾಯದಿಂದ ದೂರ ಇರಬಹುದು.
ಸಿಒಪಿಡಿಗೆ ತುತ್ತಾದ ಜನರು ಸಾಮಾನ್ಯ ಜನರಿಗಿಂತ ಹೆಚ್ಚು ಶಕ್ತಿ ಹಾಕಿ ಉಸಿರಾಟ ನಡೆಸುತ್ತಾರೆ. ಇದರಿಂದಾಗಿ ಪಲ್ಮನರಿ (ಉಸಿರಾಟ) ಸ್ನಾಯುಗಳು ಆರೋಗ್ಯವಂತ ವ್ಯಕ್ತಿಗಿಂತ ಹತ್ತು ಪಟ್ಟು ಹೆಚ್ಚು ಕ್ಯಾಲೊರಿ ಹೊಂದಿರಬೇಕಾಗುತ್ತದೆ. ಅಗತ್ಯ ಶಕ್ತಿ ಪಡೆಯಲು ಮತ್ತು ಡಯಾಫ್ರಮ್ ಹಾಗೂ ಇತರೆ ಪಲ್ಮನರಿ ಸ್ನಾಯುಗಳು ದುರ್ಬಲಗೊಳ್ಳುವ ಇಲ್ಲವೆ ಕ್ಷೀಣಗೊಳ್ಳುವುದನ್ನು ತಡೆಯಲು ಪೌಷ್ಟಿಕಾಂಶ ಅಗತ್ಯ.
ನಿಯಮಿತ ಚಿಕಿತ್ಸೆ, ಆರೋಗ್ಯಕಾರಿ ಆಹಾರ ಪದ್ಧತಿ ರೂಢಿಸಿಕೊಳ್ಳುವುದು, ಮಧ್ಯಮ ದೈಹಿಕ ಚಟುವಟಿಕೆ ಸಿಒಪಿಡಿ ಬಾಧಿತ ವ್ಯಕ್ತಿಯ ಜೀವನ ಶೈಲಿ ಹಾಗೂ ಪರಿಸ್ಥಿತಿಯನ್ನು ಸುಧಾರಿಸಲು ಸಹಕಾರಿ. ರೋಗಿಗಳು ತಮ್ಮ ವೈದ್ಯರನ್ನು ಕಾಲಕಾಲಕ್ಕೆ ಸಂಪರ್ಕಿಸಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅತಿ ಮುಖ್ಯ.
ಲಕ್ಷಣಗಳು
ಈ ರೋಗದ ಸಾಮಾನ್ಯ ಲಕ್ಷಣವೆಂದರೆ ಉಸಿರಾಟದ ತೊಂದರೆ ಹಾಗೂ ಕೆಮ್ಮು. ಸಾಮಾನ್ಯವಾಗಿ ಈ ಸಮಸ್ಯೆಗಳನ್ನು ಕಡೆಗಣಿಸಲಾಗುತ್ತದೆ. ಸಿಒಪಿಡಿ ಕುರಿತು ಅರಿವಿನ ಕೊರತೆಯಿಂದಾಗಿ ಸೂಕ್ತ ಚಿಕಿತ್ಸೆ ದೊರಕದೇ ಸಮಸ್ಯೆ ಹೆಚ್ಚಾಗುತ್ತಿದೆ. ಚಿಕಿತ್ಸೆ ಕೂಡ ಸಕಾಲಕ್ಕೆ ಸಿಗುತ್ತಿಲ್ಲ. ಆದಾಗ್ಯೂ, ಕೆಲ ಪ್ರಕರಣದಲ್ಲಿ ಲಕ್ಷಣಗಳು ಬೇರೆ ಬೇರೆ ರೀತಿಯಲ್ಲೂ ಇರುತ್ತವೆ. ಸಿಒಪಿಡಿ ಯಾವುದೇ ಲಕ್ಷಣವನ್ನೂ ತೋರಿಸದೇ ತನ್ನ ಸಮಸ್ಯೆಗಳನ್ನು ಶರೀರದಲ್ಲಿ ವರ್ಷಗಳಿಂದ ಬೆಳೆಸುತ್ತಾ ಸಾಗಬಹುದು. ಉಸಿರಾಟದ ಸಮಸ್ಯೆಯೂ ಸೇರಿದಂತೆ ಯಾವುದೇ ಸಮಸ್ಯೆಯ ಗುಣಲಕ್ಷಣ ಕಾಣಿಸದೇ ಸಮಸ್ಯೆ ಬೆಳೆಯಬಹುದಾಗಿದೆ.
ಗಮನಕ್ಕೆ ಬಂದ ಸರ್ವೇಸಾಮಾನ್ಯ ಗುಣಲಕ್ಷಣಗಳು ಇಂತಿವೆ
* ಉಸಿರಾಟದ ವೇಗ ಕಡಿಮೆ ಆಗುವುದು ಗೊರಗುಟ್ಟುವಿಕೆ
* ಎದೆಯ ಬಿಗಿತ ಕಫದೊಂದಿಗೆ ಕೆಮ್ಮು
* ಆಯಾಸ ತೂಕ ಇಳಿಕೆ
(ಲೇಖಕರು ಬೆಂಗಳೂರಿನ ಬಿಆರ್ ಲೈಫ್ ಎಸ್‌ಎಸ್‌ಎನ್‌ಎಂಸಿ ಆಸ್ಪತ್ರೆಯಲ್ಲಿ ಶ್ವಾಸಕೋಶ ತಜ್ಞ )
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.