ADVERTISEMENT

ಮನೋಲ್ಲಾಸಕ್ಕಿರಲಿ ಒಂದಿಷ್ಟು ಯೋಜನೆ

ವಿದ್ಯಾಶ್ರೀ ಎಸ್.
Published 18 ಡಿಸೆಂಬರ್ 2020, 19:30 IST
Last Updated 18 ಡಿಸೆಂಬರ್ 2020, 19:30 IST
ಧ್ಯಾನ (ಪ್ರಾತಿನಿಧಿಕ ಚಿತ್ರ)
ಧ್ಯಾನ (ಪ್ರಾತಿನಿಧಿಕ ಚಿತ್ರ)   

‘ಬೆಳಗ್ಗಿನ ತಿಂಡಿ ತಯಾರು ಮಾಡೋದೇ ದೊಡ್ಡ ತಲೆ ನೋವು ನನಗೆ. ರಾತ್ರಿ ಏನೋ ಒಂದು ಯೋಚಿಸಿರುತ್ತೇನೆ ಬೆಳಿಗ್ಗೆ ನೋಡಿದ್ರೆ ಒಂದು ವಸ್ತು ಇದ್ರೆ, ಇನ್ನೊಂದು ಇರೋದಿಲ್ಲ. ತಿಂಡಿ ತಯಾರಾಗುತ್ತಲೇ ಹತ್ತು ಗಂಟೆ ಆಗೋಗಿ ಬಿಡುತ್ತೆ. ನನಗಾಗಿ ಸಮಯಾನೇ ಸಿಗ್ತಿಲ್ಲ. ಎಷ್ಟು ಮಾಡಿದ್ರೂ ಕೆಲಸಾನೇ ಮುಗಿಯೊಲ್ಲ’ ಹೀಗೆ ಗೆಳತಿ ಸ್ನೇಹಾಳ ಬಳಿ ಪ್ರಿಯಾ ಸಮಸ್ಯೆಗಳ ಸರಮಾಲೆಯನ್ನೇ ಒಪ್ಪಿಸುತ್ತಿದ್ದರೆ, ಆಕೆಯೂ ತನ್ನದೂ ಇದೇ ಸಮಸ್ಯೆ ಎಂಬಂತೆ ತಲೆಯಾಡಿಸಿದ್ದಳು.

ಪ್ರತಿದಿನವನ್ನು ವ್ಯವಸ್ಥಿತವಾಗಿ ಎದುರಿಸುವುದರಿಂದ ಉತ್ಸಾಹದಿಂದ ದಿನ ಕಳೆಯಲುಸಾಧ್ಯವಾಗುತ್ತದೆ. ಆದರೆ, ಪೂರ್ವ ಸಿದ್ಧತೆಯೇ ಇಲ್ಲದೇ ಹೋದರೆ, ಯಾವುದೇ ಕೆಲಸವನ್ನು ಮಾಡಲು ಹೊರಟರೂ, ಒಂದು ಗಂಟೆಯಲ್ಲಿ ಆಗುವ ಕೆಲಸಕ್ಕೆ ದುಪ್ಪಟ್ಟು ಸಮಯ ಹಿಡಿಯುತ್ತದೆ. ಅಲ್ಲದೇ ಒತ್ತಡವೂ ಹೆಚ್ಚುತ್ತದೆ. ದಿನ ಸರಾಗವಾಗಿ ಸಾಗಬೇಕೆಂದರೆ ತಯಾರಿ ಅತಿ ಮುಖ್ಯ.

ಯೋಜನೆ ಅವಶ್ಯ

ADVERTISEMENT

ಎಲ್ಲ ದಿನವೂ ಒಂದೇ ಆಗಿರುವುದಿಲ್ಲ. ಒಮ್ಮೆ ಮನೆ ಕೆಲಸಕ್ಕೆ ಹೆಚ್ಚು ಸಮಯವಿದ್ದರೆ, ಇನ್ನೊಮ್ಮೆ ಕಚೇರಿ ಕೆಲಸ, ವೈಯಕ್ತಿಕ ಕೆಲಸಗಳಿಗೆ ಹೆಚ್ಚು ಪ್ರಾಮುಖ್ಯ ನೀಡುವುದು ಅಗತ್ಯವಾಗಿರುತ್ತದೆ. ಹಾಗಾಗಿ, ಆದ್ಯತೆ ಮೇರೆಗೆ ಅಂದು ಮಾಡುವ ಕೆಲಸಗಳಿಗೆ ಎಷ್ಟು ಸಮಯವನ್ನು ವಿನಿಯೋಗಿಸಬಹುದು ಎಂಬುದರ ಯೋಜನೆ ಮಾಡಿಕೊಳ್ಳಿ. ಮನೆ ಕೆಲಸಗಳಿಗಾಗಿ ಹೆಚ್ಚು ಸಮಯ ಇಲ್ಲ ಎಂದಾದರೆ, ಸರಳವಾಗಿ ಸಿದ್ಧಪಡಿಸಬಹುದಾದ ಅಡುಗೆಗಳ ಮೊರೆ ಹೋಗಬಹುದು.

ಮೊದಲೇ ಯೋಚಿಸಿ

ಬೆಳಿಗ್ಗಿನ ಉಪಾಹಾರದಿಂದ ರಾತ್ರಿಯ ಊಟದವರೆಗೆ ಏನೇನು ಮಾಡಬೇಕು ಎಂಬುದರ ಯೋಜನೆ ಸಿದ್ಧಪಡಿಸಿಕೊಳ್ಳಿ. ಅಡುಗೆ ಮಾಡಲು ಹೋಗುವ ಸಂದರ್ಭದಲ್ಲಿ ದಿನಸಿ, ತರಕಾರಿ ಇಲ್ಲ ಎಂದು ಪದೇ ಪದೇ ಅಂಗಡಿಗೆ ಓಡುವ ಬದಲು, ಸಾಮಗ್ರಿಗಳು ಖಾಲಿಯಾಗುತ್ತಿದ್ದಂತೆ ಅದರ ಪಟ್ಟಿ ಮಾಡಿಟ್ಟುಕೊಂಡು, ಎಲ್ಲವನ್ನೂ ಒಟ್ಟಿಗೆ ತಂದಿಟ್ಟುಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಿ. ಹಿಂದಿನ ದಿನವೇ ಮರುದಿನ ಬೆಳಿಗ್ಗೆ ಯಾವ ತಿಂಡಿಯನ್ನು ಮಾಡಬೇಕು. ಅದಕ್ಕೆ ಯಾವೆಲ್ಲ ಸಾಮಗ್ರಿಗಳು ಅಗತ್ಯವಿವೆ ಎಂಬುದನ್ನು ಮನನ ಮಾಡಿಕೊಳ್ಳಿ. ಇದರಿಂದ ಮುಂಜಾನೆಯನ್ನು ಆಹ್ಲಾದಕರವಾಗಿರಿಸಬಹುದು.

ಚಿಕ್ಕ–ಪುಟ್ಟ ವಿಷಯಗಳಿಗೂ ಗಮನ ನೀಡಿ

ಹೊರಗೆ ಅತಿ ಮುಖ್ಯವಾದ ಕೆಲಸಕ್ಕೆ ಹೋಗುತ್ತಿದ್ದೀರಿ ಎಂದಾದರೆ, ಹಿಂದಿನ ದಿನವೇ ಉಡುಪನ್ನು ಇಸ್ತ್ರೀ ಮಾಡಿಟ್ಟುಕೊಳ್ಳಿ. ಅಗತ್ಯವಾದ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕಿದ್ದರೆ ಅದನ್ನು ಮೊದಲೇ ತೆಗೆದಿಟ್ಟುಕೊಂಡಿರಿ. ಇದರಿಂದ ಕೊನೆ ಗಳಿಗೆಯಲ್ಲಿ ಒದ್ದಾಡುವುದು ತಪ್ಪುತ್ತದೆ. ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಬಳಕೆದಾರರು ನೀವಾಗಿದ್ದರೆ, ಅದನ್ನು ನೋಡಲು ದಿನದ ಇಂತಿಷ್ಟು ಸಮಯವನ್ನು ನಿಗದಿಪಡಿಸಿ. ಪದೇ ಪದೇ ನೋಡುವುದರಿಂದ ಅಲ್ಲಿಯೇ ನಿಮ್ಮ ಅಮೂಲ್ಯವಾದ ಸಾಕಷ್ಟು ಸಮಯ ಕಳೆದು ಹೋಗಿರುತ್ತದೆ.

ವ್ಯಾಯಾಮಕ್ಕೂ ಇರಲಿ ಆದ್ಯತೆ

ಮನೋಲ್ಲಾಸವಾಗಿರಲು ಎಷ್ಟೇ ಜಂಜಾಟಗಳಿದ್ದರೂ, ಒಂದಷ್ಟು ಸಮಯವನ್ನು ನಿಮಗಾಗಿ ಮೀಸಲಿಡುವುದು ಅಗತ್ಯ. ವ್ಯಾಯಾಮ ದಿನಪೂರ್ತಿ ಆಹ್ಲಾದಕರವಾಗಿರುವಂತೆ ಮಾಡಬಲ್ಲದು. ಹಾಗಾಗಿ, ಎಲ್ಲ ಕೆಲಸಗಳ ಮಧ್ಯೆಯೂ ವ್ಯಾಯಾಮಕ್ಕಾಗಿ ಸಮಯವನ್ನು ಹೊಂದಿಸಿಕೊಳ್ಳಿ. ಈಗಂತೂ ವ್ಯಾಯಾಮ ಕಲಿಸಲು ಸಾಕಷ್ಟು ಆ್ಯಪ್‌ಗಳು ಇರುವುದರಿಂದ ಮನೆಯಲ್ಲಿಯೇ ದೇಹದಂಡಿಸಲು ಒಂದಿಷ್ಟು ಸಮಯ ಮೀಸಲಿರಿಸುವುದು ಕಷ್ಟವಾಗುವುದಿಲ್ಲ.

***

ನಾಗರಿಕತೆಯ ಜೊತೆಗೆ ‘ಸೆನ್ಸ್‌ ಆಫ್‌ ಪ್ಲಾನಿಂಗ್‌’ ಬೆಳೆದುಕೊಂಡು ಬಂದಿದೆ. ಪ್ರಕೃತಿಯೇ ನಮಗೆ ಅದನ್ನು ಕಲಿಸಿಕೊಟ್ಟಿದೆ. ಆದರೆ ಈಗಿನ ಧಾವಂತದ ಬದುಕಿನಲ್ಲಿ ಯೋಜನಾಬದ್ಧ ಕ್ರಮವೇ ಏರುಪೇರಾಗುತ್ತಿದೆ. ಇದರಿಂದ ಒತ್ತಡವೂ ಹೆಚ್ಚುತ್ತಿದೆ. ಸಹನೆಯನ್ನು ಬೆಳೆಸಿಕೊಳ್ಳುವ ಮೂಲಕ ಯೋಜನೆಯನ್ನು ನಮ್ಮ ಸ್ವಭಾವದಲ್ಲಿಯೇ ರೂಢಿಸಿಕೊಳ್ಳಬೇಕು. ಇದರಿಂದ ಬದುಕು ಸರಾಗವಾಗಿ ಸಾಗಲು ಅನುಕೂಲವಾಗುತ್ತದೆ.

–ಶಾಂತಾ ನಾಗರಾಜ್‌, ಆಪ್ತ ಸಮಾಲೋಚಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.