ADVERTISEMENT

ಬೆನ್ನಿಗೂ ವಿಶ್ರಾಂತಿ ಬೇಕು...

ವಿಶ್ವ ಬೆನ್ನುಮೂಳೆ ದಿನ

ಎಸ್‌.ಸಂಪತ್‌
Published 15 ಅಕ್ಟೋಬರ್ 2018, 19:45 IST
Last Updated 15 ಅಕ್ಟೋಬರ್ 2018, 19:45 IST
   

ಮನುಷ್ಯನನ್ನು ತೀವ್ರವಾಗಿ ಬಾಧಿಸುವ ನೋವುಗಳಲ್ಲಿ ಬೆನ್ನು ನೋವು ಕೂಡ ಒಂದು. ಬೆನ್ನುಮೂಳೆ, ಬೆನ್ನುಹುರಿ ಸವೆತ ಅಥವಾ ಆಘಾತ ಇದಕ್ಕೆ ಕಾರಣ. ಈ ನೋವು ಬೆನ್ನಿಗಷ್ಟೇ ಸೀಮಿತವಾಗಿರದೆ, ತೊಡೆ ಸಂದು, ಮಾಂಸ ಖಂಡಗಳ ಸೆಳೆತ ಹಾಗೂ ಪಾದದವರೆಗಿನ ನೋವಿಗೂ ಕಾರಣವಾಗುತ್ತದೆ. ನರದ ಮೂಲ ಸಂಕುಚಿತಗೊಂಡರೆ ಕುತ್ತಿಗೆ ಮತ್ತು ಸೊಂಟದಲ್ಲಿ ತೀವ್ರ ನೋವು ಕಾಣಿಸಿಕೊಳ್ಳುತ್ತದೆ.

ಬೆನ್ನುಹುರಿ ಸಮಸ್ಯೆ ತತ್‌ ಕ್ಷಣಕ್ಕೆ ಗೊತ್ತಾಗುವುದಿಲ್ಲ. ಕ್ರಮೇಣ ಸಂವೇದನೆ ಗೊತ್ತಾಗದಂತೆ ಆಗುತ್ತದೆ. ಕಾಲುಗಳು ಜುಮ್ಮು ಹಿಡಿದು, ಮರಗಟ್ಟುತ್ತವೆ. ಮಾಂಸಖಂಡಗಳ ದೌರ್ಬಲ್ಯ ನಡೆದಾಡಲು ಆಗದಂತೆ ಮಾಡುತ್ತದೆ. ಶಾಶ್ವತ ಅಂಗವಿಕಲರನ್ನಾಗಿಸುವ ಆತಂಕವೂ ಇರುತ್ತದೆ ಎನ್ನುತ್ತಾರೆ ವೈದ್ಯರು.

‘ಬೆನ್ನು ಮೂಳೆ ಅಥವಾ ಬೆನ್ನುಹುರಿ ಸವೆಯುವುದೇ ಇದಕ್ಕೆಲ್ಲ ಪ್ರಮುಖ ಕಾರಣ. ಇದು ವೃದ್ಧಾಪ್ಯದಲ್ಲಿ ಸಹಜ. ಇತ್ತೀಚೆಗೆ ಯುವ ಸಮುದಾಯದಲ್ಲೂ ಹೆಚ್ಚಾಗಿದೆ. ಬದಲಾದ ಜೀವನಶೈಲಿ, ನಿರಂತರವಾಗಿ ಕುಳಿತುಕೊಂಡೇ ಕೆಲಸ ಮಾಡುವ, ಬಾಗಿ ನಿಲ್ಲುವ, ಹೆಚ್ಚು ಹೊತ್ತು ವಾಹನ ಚಲಾಯಿಸುವುದರಿಂದ, ಭಾರವಾದ ವಸ್ತುಗಳನ್ನು ಎತ್ತುವುದರಿಂದ ಬೆನ್ನು ನೋವು ಬಾಧಿಸುತ್ತದೆ’ ಎನ್ನುತ್ತಾರೆ ಹಾಸ್‌ಮ್ಯಾಟ್‌ ಆಸ್ಪತ್ರೆಯ ವ್ಯದ್ಯಕೀಯ ನಿರ್ದೇಶಕ ಡಾ. ಅಜಿತ್‌ ಬೆನೆಡಿಕ್ಟ್‌ ರಾಯನ್‌.

ADVERTISEMENT

ಅಂಕಿ ಅಂಶ: ಭಾರತದಲ್ಲಿ ಈ ನೋವಿನಿಂದಾಗಿ ಕೆಲವರು ಶಾಶ್ವತ ಅಂಗವಿಕಲರೂ ಆಗಿದ್ದಾರೆ. 2011ರ ಜನಗಣತಿ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯಲ್ಲಿ 2.68 ಕೋಟಿ (ಶೇ 2.21ರಷ್ಟು) ಅಂಗವಿಕಲರಿದ್ದಾರೆ. ರಾಜ್ಯದಲ್ಲಿ ಈ ಪ್ರಮಾಣ ಶೇ 13.2 ಲಕ್ಷವಿದ್ದು, ಅವರಲ್ಲಿ 15 ಸಾವಿರಕ್ಕಿಂತ ಹೆಚ್ಚು ಜನರು ಬೆನ್ನುಹುರಿ ಅಪಘಾತಕ್ಕೆ ಒಳಗಾದವರಾಗಿದ್ದಾರೆ.

ಬೆಂಗಳೂರಿನಲ್ಲಿ ಐಟಿ, ಬಿಟಿ, ಬಿಪಿಒ ಕಂಪನಿಗಳಲ್ಲಿ ಕಂಪ್ಯೂಟರ್ ಮುಂದೆ ದೀರ್ಘಕಾಲ ಕುಳಿತು ಕೆಲಸ ಮಾಡುವ ಯುವ ಸಮುದಾಯದವರಲ್ಲಿ ಬೆನ್ನುನೋವು, ಕುತ್ತಿಗೆ ನೋವು ಸಾಮಾನ್ಯವಾಗಿದೆ. ಸೂಕ್ತ ವ್ಯಾಯಾಮದ ಜತೆಗೆ ಬೇಕಾದಾಗ ವಿಶ್ರಾಂತಿ ತೆಗೆದುಕೊಳ್ಳದಿದ್ದರೆ ಬೆನ್ನುನೋವು ಶಾಶ್ವತವಾಗಿ ಮಲಗುವಂತೆ ಮಾಡಿಬಿಡುತ್ತದೆ ಎಂದು ಎಚ್ಚರಿಸುತ್ತಾರೆ ವೈದ್ಯ ಅಜಿತ್‌.

ಎಚ್ಚರ ಅಗತ್ಯ: ಫಿಟ್‌ನೆಸ್‌ ಕಾಯ್ದುಕೊಳ್ಳುವುದು, ನಿಯಮಿತ ವ್ಯಾಯಾಮ (ಕನಿಷ್ಠ ದಿನಕ್ಕೆ 30 ನಿಮಿಷ ನಡಿಗೆ, 20 ನಿಮಿಷ ಲಘು ವ್ಯಾಯಾಮ), ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು, ತೂಕದ ವಸ್ತುಗಳನ್ನು ಎತ್ತದಿರುವುದು, ಒತ್ತಡವನ್ನು ನಿಯಂತ್ರಿಸುವುದು, ನಡೆಯುವ ಮತ್ತು ಕುಳಿತುಕೊಳ್ಳುವ ಭಂಗಿ ಸರಿಯಾಗಿರುವಂತೆ ನೋಡಿಕೊಳ್ಳುವುದರಿಂದ ಬೆನ್ನುನೋವು ಸುಳಿಯದಂತೆ ಎಚ್ಚರ ವಹಿಸಬಹುದು ಎನ್ನುತ್ತಾರೆ ನರ ಮತ್ತು ಬೆನ್ನುಮೂಳೆ ತಜ್ಞ ವೈದ್ಯ ಡಾ. ಎನ್‌.ಸಿ. ಪ್ರಕಾಶ್‌.

ಕ್ಯಾಲ್ಸಿಯಂ ಮತ್ತು ವಿಟಮಿನ್‌ ‘ಡಿ’ ಕೊರತೆಯಿಂದ ಬೆನ್ನುನೋವು ಕಾಡುತ್ತದೆ. ಹಾಲು, ಸೊಪ್ಪು, ತರಕಾರಿ, ಮೊಟ್ಟೆಯನ್ನು ಅಗತ್ಯವಿರುವಷ್ಟು ಸೇವಿಸುವುದು ಮುಖ್ಯ ಎಂಬುದು ಅವರ ಸಲಹೆ.

ಚಿಕಿತ್ಸಾ ವಿಧಾನ: ಶೇ 75ರಷ್ಟು ನೋವು ನಿವಾರಿಸಲು ಆಕ್ಯುಪಂಚರ್‌, ಹರ್ಬೋಥೆರಪಿ, ಜಲ ಚಿಕಿತ್ಸೆ, ಆಹಾರ ಚಿಕಿತ್ಸೆ, ಪ್ಯಾಕ್‌ ಮತ್ತು ಪೌಲ್ಟಿಸ್‌, ಮಣ್ಣಿನ ಚಿಕಿತ್ಸೆ, ಯೋಗಾಭ್ಯಾಸ, ಪ್ರಾಣಾಯಾಮ, ಜೀವನ ಶೈಲಿಯ ಬದಲಾವಣೆಗಳ ಮೂಲಕ ಶಸ್ತ್ರ ಚಿಕಿತ್ಸೆ ಇಲ್ಲದೆಯೇ ಗುಣ ಹೊಂದಬಹುದು.

‘ಬೆನ್ನು ನೋವಿನಿಂದ ನಡೆದಾಡಲು ಕಷ್ಟವಾಗುತ್ತಿದ್ದರೆ, ಕಾಲುಗಳು ಜೋಮು ಹಿಡಿದು ಸ್ಪರ್ಶ ಜ್ಞಾನ ಕಡಿಮೆಯಾಗುತ್ತಿದ್ದರೆ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಲಾಗುತ್ತದೆ’ ಎನ್ನುತ್ತಾರೆ ಡಾ. ಪ್ರಕಾಶ್‌.

ಬೆನ್ನುನೋವು ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಅಕ್ಟೋಬರ್‌ 16 ಅನ್ನು ‘ವಿಶ್ವ ಬೆನ್ನುಮೂಳೆ ದಿನ’ ಎಂದು ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಹಾಸ್‌ಮ್ಯಾಟ್‌ ಆಸ್ಪತ್ರೆ ಮಂಗಳವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಉಚಿತ ತಪಾಸಣೆ ಹಮ್ಮಿಕೊಂಡಿದೆ. ಮಾಹಿತಿಗೆ: 9108450310/ 9844470489

ಡಾ. ಅಜಿತ್‌ ಹಾಗೂ ಡಾ. ಪ್ರಕಾಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.