ADVERTISEMENT

ಚಳಿಗಾಲ: ಬಾಣಂತಿ ಆರೈಕೆ ಹೀಗಿರಲಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2022, 19:30 IST
Last Updated 23 ಡಿಸೆಂಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಾಣಂತನವೆಂಬ ಅತಿ ಸೂಕ್ಷ್ಮಘಟ್ಟದಲ್ಲಿ ಹೇಮಂತ ಋತುವಿನಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳು, ಸವಾಲುಗಳು ಮತ್ತು ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆಸ್ತ್ರೀಆರೋಗ್ಯ ತಜ್ಞೆ ಡಾ.ವೀಣಾ ಎನ್‌. ಸುಳ್ಯ ವಿವರಿಸಿದ್ದಾರೆ.

ಬಾಣಂತನವೆಂಬುದು ಹೆಣ್ಣಿನ ಬದುಕಿನ ಬಹುಸೂಕ್ಷ್ಮ ಘಟ್ಟ. ದೈಹಿಕ ಹಾಗೂ ಮಾನಸಿಕವಾಗಿ ಸಾಕಷ್ಟು ಏರಿಳಿತವಿರುತ್ತದೆ. ಇಂಥ ಸಮಯದಲ್ಲಿ ಅತಿ ಹೆಚ್ಚು ಕಾಳಜಿ ವಹಿಸುವುದು ಅಗತ್ಯ. ಅದರಲ್ಲೂ ಆಯಾ ಋತುಗಳು ಒಡ್ಡುವ ಸವಾಲುಗಳ ನಡುವೆ ಬಾಣಂತಿ ಮತ್ತು ಶಿಶುವನ್ನು ರಕ್ಷಿಸಬೇಕು. ಥಂಡಿ ವಾತಾವರಣದಲ್ಲಿ ದೇಹಕ್ಕೆ ಹೆಚ್ಚಿನ ಕೊಬ್ಬಿನಾಂಶದ ಅಗತ್ಯವಿರುತ್ತದೆ.ಸೂಕ್ಷ್ಮಜೀವಿಗಳು ಬೆಳೆಯಲು ಈ ವಾತಾವರಣ ಪೂರಕವಾಗಿರುವುದರಿಂದ ನಂಜು ಉಂಟಾಗುವ ಸಾಧ್ಯತೆಯೂ ಹೆಚ್ಚು.

ಹೆರಿಗೆಯಾದ ನಂತರ ರಕ್ತದ ಪರಿಚಲನೆಯಲ್ಲಿನ ವ್ಯತ್ಯಾಸಗಳು, ಜೀರ್ಣಕ್ರಿಯೆಯ ವ್ಯತ್ಯಾಸ, ತೂಕ ಹೆಚ್ಚಳ, ರಕ್ತದೊತ್ತಡ ಹೀಗೆ ನಾನಾ ಸವಾಲುಗಳು ಎದುರಾಗುತ್ತವೆ. ಜತೆಗೆ ಮಗುವಿನ ಜವಾಬ್ದಾರಿ ಇರುತ್ತದೆ. ಹಾಲಿನ ಉತ್ಪತ್ತಿಗೆ ಹೆಚ್ಚುವರಿ ಕ್ಯಾಲರಿ ಬೇಕಾಗುತ್ತದೆ. ಬಾಣಂತಿ ಪಥ್ಯದಲ್ಲಿ ಇರಬೇಕು ಎಂಬ ಮಿಥ್ಯೆಯಿಂದಾಗಿ ಪೂರಕ ಆಹಾರವೂ ಸಿಗುವುದಿಲ್ಲ. ಹಾಗಾಗಿ ಬಾಣಂತಿ ಹಾಗೂ ಬಾಣಂತನ ಮಾಡುವ ಅಮ್ಮಂದಿರಲ್ಲಿಯೂ ಜಾಗೃತಿ ಮೂಡಬೇಕಿದೆ. ಇನ್ನು ಹೆರಿಗೆಯಾಗಿಯೂ ಶಿಶುವಿನ ಆರೋಗ್ಯ ಸರಿ ಇಲ್ಲದಿದ್ದಾಗ, ಹೆರಿಗೆಯಲ್ಲಿ ತೊಂದರೆಯಾದಾಗಲೂ ತಾಯಿ ಮಗುವಿನ ಆರೈಕೆಗೂ ಪ್ರಾಮುಖ್ಯತೆ ಸಿಗಬೇಕಿದೆ.

ADVERTISEMENT

ಆರೈಕೆಯ ವಿಧಾನ :

ಹೆರಿಗೆಯಾಗಿ ಆರು ವಾರಗಳ ನಂತರವೇ ಗರ್ಭಕೋಶ ತನ್ನ ಮೊದಲಿನ ಸ್ಥಿತಿಗೆ ಬರುತ್ತದೆ. ಯೋನಿ ಮತ್ತು ಯೋನಿಯ ಸುತ್ತಮುತ್ತಲಿನ ಮಾಂಸಖಂಡಗಳು ಯಥಾಸ್ಥಿತಿಗೆ ಬರಲು ಎಂಟು ವಾರಗಳ ಸಮಯ ಹಿಡಿಯುತ್ತದೆ. ಆದರೂ ಮೊದಲಿನ ಶಕ್ತಿ ಮತ್ತು ಬಿಗಿತವನ್ನು ಪೂರ್ಣ ಪ್ರಮಾಣದಲ್ಲಿ ಪಡೆಯುವುದು ಕಷ್ಟ.

ಎಣ್ಣೆ ಮಜ್ಜನ, ಬಿಸಿ ಬಿಸಿ ನೀರಿನ ಸ್ನಾನ ಸಾಕಾಗುವುದಿಲ್ಲ. ಜತೆಗೆ ಹೊಟ್ಟೆಯ ಮಾಂಸಖಂಡಗಳನ್ನು ಬಲಪಡಿಸುವ ವ್ಯಾಯಾಮದ ಅಗತ್ಯವಿರುತ್ತದೆ. ಸರಿಯಾದ ಪ್ರಮಾಣದಲ್ಲಿ ಆಹಾರ ಸೇವನೆ ಹಾಗೂ ನಿಯಮಿತ ವ್ಯಾಯಾಮದಿಂದ ದೇಹ ಮೊದಲಿನ ಸ್ಥಿತಿಗೆ ಬರಲು ಸಹಾಯವಾಗುತ್ತದೆ.ಸ್ಥಳೀಯವಾಗಿ ಲಭ್ಯವಿರುವ ಆಹಾರಕ್ರಮವನ್ನು ಅನುಸರಿಸಬೇಕು. ಗರ್ಭಿಣಿಯಾಗಿದ್ದಾಗ ತೆಗೆದುಕೊಳ್ಳುತ್ತಿದ್ದಕ್ಕಿಂತ ಹೆಚ್ಚಿನ ಕ್ಯಾಲರಿ, ಪ್ರೊಟೀನ್‌ ಬಾಣಂತಿಯರಿಗೆ ಬೇಕು. ಕುಚಲಕ್ಕಿ, ರಾಗಿ ಇವೆಲ್ಲ ಥಂಡಿಯಾಗಬಹುದು ಎನ್ನುವ ತಪ್ಪು ಕಲ್ಪನೆಯಿದೆ. ಬಿಳಿ ಅಕ್ಕಿಗಿಂತಲೂ ಕುಚಲಕ್ಕಿಯನ್ನೇ ನೀಡಬಹುದು. ತರಕಾರಿ, ಸೊಪ್ಪು, ಹಣ್ಣು ಎಲ್ಲವೂ ಬಾಣಂತಿಯರ ಊಟದಲ್ಲಿ ಇರಲಿ. ಚೆನ್ನಾಗಿ ನೀರು ಕುಡಿಯಿರಿ

ಜನನಾಂಗ ದ್ವಾರದ ನಂಜು:ಹೆರಿಗೆ ಬಳಿಕ ಗರ್ಭಕೋಶದ ಒಳಪದರ ಮತ್ತು ಯೋನಿ ಸಣ್ಣ ಪುಟ್ಟ ಗಾಯಗಳಿಗೆ ಒಳಗಾಗಿರುವುದರಿಂದ, ಪದರಗಳಲ್ಲಿ ಬಿರುಕು ಬಿಟ್ಟಿರುವುದರಿಂದಲೂ ಮತ್ತು ತೆರೆದುಕೊಂಡಿರುವುದರಿಂದಲೂ ಸೂಕ್ಷ್ಮಜೀವಿಗಳು (ಬ್ಯಾಕ್ಟೀರಿಯಾಗಳು) ಶರೀರವನ್ನು ಪ್ರವೇಶಿಸಲು ಅವಕಾಶವಿರುತ್ತದೆ. ಯೋನಿಯ ಮೂಲಕ ಪ್ರವೇಶಿಸಿದ ಸೂಕ್ಷ್ಮ ಜೀವಿಗಳು ಗರ್ಭಕೋಶದ ಮೂಲಕ ಗರ್ಭನಾಳಗಳ ಮುಖಾಂತರ ಕೆಳ ಹೊಟ್ಟೆಯ ಒಳಗೆ ಪ್ರವೇಶಿಸಿ ನಂಜು, ಇಡೀ ಹೊಟ್ಟೆಯನ್ನು ತಲುಪಿ ಮಾರಣಾಂತಿಕವಾಗುವ ಸಾಧ್ಯತೆ ಇದೆ .

ಗಾಳಿ, ಬೆಳಕಿರುವ ಸ್ವಚ್ಛ ಕೊಠಡಿಯಲ್ಲಿ ಬಾಣಂತಿ ಹಾಗೂ ಮಗು ಇರಬೇಕು. ಹೆರಿಗೆಯಾದ ನಂತರ 3 ವಾರಗಳವರೆಗೆ ಬಾಣಂತಿಗೆ ರಕ್ತಸ್ರಾವ ಉಂಟಾಗುತ್ತದೆ.ಹಾಸಿಗೆ ಬಟ್ಟೆಗಳು, ಮುಟ್ಟಿನ ಬಟ್ಟೆಗಳು, ಒಳಉಡುಪುಗಳನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿಯೇ ಬಳಕೆ ಮಾಡಬೇಕು. ಚಳಿಗಾಲದಲ್ಲಿ ಬಟ್ಟೆ ಸರಿಯಾಗಿ ಬಿಸಿಲಿಗೆ ಒಣಗದೇ ಮರುಬಳಕೆ ಮಾಡಿದರೆ ಸೂಕ್ಷ್ಮಾಣು ಜೀವಿಗಳಿಂದ ನಂಜು ಉಂಟಾಗುತ್ತದೆ. ಕೆಲವು ಭಾಗಗಳಲ್ಲಿ ಬಾಣಂತಿಯರನ್ನು ಮೈಲಿಗೆಯ ಹೆಸರಿನಲ್ಲಿ ಮನೆಯಿಂದ ಹೊರಗಿರಿಸುವ ಪದ್ಧತಿ ಇದೆ. ಇದರಿಂದ ತಾಯಿ ಹಾಗೂ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಪ್ರಸವೋತ್ತರ ಜ್ವರ: ಯಾವುದೇ ಬಾಣಂತಿಗೆ ಹೆರಿಗೆಯಾಗಿ 10 ದಿನಗಳ ಒಳಗೆ ಜ್ವರ ಕಾಣಿಸಿಕೊಂಡರೆ ಅದನ್ನು ಬಾಣಂತಿ ಜ್ವರ ಎಂದೇ ಕರೆಯಲಾಗುತ್ತದೆ. ಕೆಳಕಂಡ ಸೋಂಕುಗಳು ಈ ಜ್ವರಕ್ಕೆ ಕಾರಣವಾಗಿರಬಹುದು.

ಮೂತ್ರನಾಳದಲ್ಲಿ ನಂಜು:ಗರ್ಭಕೋಶದ ಒತ್ತಡ ಮೂತ್ರಚೀಲಕ್ಕೆ ಬೀಳುವುದರಿಂದ,ಮೂತ್ರಚೀಲದ ಮಾಂಸಖಂಡಗಳು ಸೆಳೆತಕ್ಕೆ ಒಳಗಾಗಿ ಸಣ್ಣದಾಗುವ ಶಕ್ತಿಯನ್ನು ಕಳೆದುಕೊಂಡಿರುವುದರಿಂದ, ಮೂತ್ರಚೀಲ ತುಂಬಿದಾಗ ಸಂವೇದನೆಯನ್ನು ಕಳಿಸುವ ನರತಂತುಗಳ ಕಾರ್ಯಕ್ಷಮತೆಯು ಕುಂಠಿತಗೊಂಡು ಮೂತ್ರ ತುಂಬಿದ ಸೂಚನೆ ಸಿಗದೇ ಇರುವ ಸಂದರ್ಭಗಳಲ್ಲಿ ಮೂತ್ರನಾಳದಲ್ಲಿ ನಂಜು ಉಂಟಾಗುತ್ತದೆ. ಆಗಾಗ ಮೂತ್ರ ವಿಸರ್ಜನೆ ಮಾಡದೇ ಇರುವುದರಿಂದ ಮೂತ್ರದಲ್ಲಿ ಉರಿ ಕಾಣಿಸಿಕೊಳ್ಳಬಹುದು. ಬಾಣಂತಿಗೆ ನೀರು ಕೊಟ್ಟರೆ ನಂಜಾಗುತ್ತದೆ ಎನ್ನುವ ತಪ್ಪು ಕಲ್ಪನೆಯಿದೆ. ಇದರಿಂದ ಮೂತ್ರ ಉತ್ಪತ್ತಿ ಕಡಿಮೆಯಾಗುತ್ತದೆ.

ಮೂತ್ರನಾಳದಲ್ಲಿ ನಂಜು ಉಂಟಾಗಿ (ಯುರಿಟ್ರೈಟಿಸ್‌) ಮೂತ್ರಚೀಲದಿಂದ ಮೂತ್ರಪಿಂಡ ತಲುಪುತ್ತದೆ. ವಿಪರೀತ ನಿರ್ಜಲೀಕರಣನಿಂದಾಗಿ (ಡೀಹೈಡ್ರೇಷನ್‌) ಚಳಿ–ಜ್ವರ ಉಂಟಾಗಿ ಸೂಕ್ತ ಚಿಕಿತ್ಸೆ ಸಿಗದೆ ಮೂತ್ರಪಿಂಡ ವೈಫಲ್ಯ ಉಂಟಾಗಬಹುದು ಮರಣವೂ ಸಂಭವಿಸಬಹುದು.

ಸ್ತನಗಳಲ್ಲಿ ನಂಜು: ಸ್ತನ್ಯಪಾನದ ವೇಳೆ ತೊಟ್ಟಿನ ಸುತ್ತದ ಪೂರ್ತಿ ಭಾಗ ಶಿಶುವಿನ ಬಾಯಿಯ ಒಳಗೆ ಹೋಗುವಂತೆ ನೋಡಿಕೊಳ್ಳಬೇಕು. ತೊಟ್ಟನ್ನು ಮಾತ್ರ ಚೀಪದಂತೆ ಜಾಗ್ರತೆ ವಹಿಸಬೇಕು.ಮಗು ಸರಿಯಾಗಿ ಹಾಲು ಕುಡಿಯದೇ ಇದ್ದಾಗ ಸ್ತನದಲ್ಲಿ ಹಾಲು ಪೂರ್ತಿ ಖಾಲಿಯಾಗುವುದಿಲ್ಲ. ಎದೆಯಲ್ಲಿ ಹಾಲು ತುಂಬಿದಾಗ, ಸಮಯಕ್ಕೆ ಸರಿಯಾಗಿ ಖಾಲಿ ಆಗದೆ ಇದ್ದಾಗಲೂ ಜ್ವರ ಬರುತ್ತದೆ. ಸ್ತನದ ತೊಟ್ಟಿನಲ್ಲಿ ಸಣ್ಣ ಗಾಯವಾದರೂ, ಆ ಗಾಯದಿಂದ ನಂಜು ನಾಳಗಳ ಮೂಲಕ ಹಾಲು ಉತ್ಪತ್ತಿ ಮಾಡುವ ಗ್ರಂಥಿಗಳನ್ನು ತಲುಪುತ್ತದೆ. ನಾಳಗಳಲ್ಲಿ ತಡೆ ಉಂಟಾಗುವುದರ ಜೊತೆಗೆ ಹಾಲು, ಹೊರಬರುವುದು ನಿಲ್ಲುತ್ತದೆ. ಹಿಮ್ಮುಖವಾದ ಒತ್ತಡದಿಂದ ಜೀವಕೋಶಗಳು ಸಾಯು ವುದಲ್ಲದೇ,ರಸಿಕೆತುಂಬಿಕೊಳ್ಳುತ್ತದೆ.ನಂಜಿನ ಲಕ್ಷಣಗಳನ್ನು ಗುರುತಿಸಿದ ಕೂಡಲೇ ಆ್ಯಂಟಿಬಯೋಟಿಕ್‌ ಮತ್ತು ನೋವು ನಿವಾರಕ ಮಾತ್ರೆಗಳನ್ನು ಕೊಟ್ಟು ಸಮಸ್ಯೆಗೆ ಪರಿಹಾರ ಕೊಡಬಹುದು.

ರಕ್ತನಾಳಗಳಲ್ಲಿ ನಂಜು: ರಕ್ತ ಪರಿಚಲನೆಯಲ್ಲಿ ವ್ಯತ್ಯಾಸ, ದೈಹಿಕ ಚಲನೆ ಕಡಿಮೆ, ನೀರು ಕುಡಿಯುವುದು ಕಡಿಮೆ ಆದಾಗಲೂ ರಕ್ತನಾಳದಲ್ಲಿ ನಂಜು ಉಂಟಾಗುತ್ತದೆ.ಹೆಪ್ಪುಕಟ್ಟಿದ್ದ ರಕ್ತದ ಭಾಗಗಳು ಅಲ್ಲಿಂದ ಪ್ರತ್ಯೇಕಗೊಂಡು ಮೆದುಳಿಗೆ ಹೋಗಿ ರಕ್ತಪರಿಚಲನೆಗೆ ತೊಂದರೆ ಕೊಡುತ್ತದೆ. ಪ್ರಜ್ಞೆತಪ್ಪುವುದು, ಶರೀರ ಸ್ವಾಧೀನ ತಪ್ಪಬಹುದು. ಶ್ವಾಸಕೋಶದ ರಕ್ತನಾಳಗಳಲ್ಲಿ ಪ್ರವೇಶಿಸಿ ಯಾವ ಮುನ್ಸೂಚನೆ ಕೊಡದೆ ಮರಣಕ್ಕೆ ಕಾರಣವಾಗಬಹುದು. ಚಟುವಟಿಕೆಯಿಂದ ಇರುವುದು, ದೇಹಕ್ಕೆ ಅಗತ್ಯವಿರುವಷ್ಟು ನೀರು ತೆಗೆದುಕೊಳ್ಳುವುದರಿಂದ ಈ ನಂಜಿನಿಂದ ದೂರವಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.