ADVERTISEMENT

ಬಹೂಪಯೋಗಿ ಪುಳ್ಳಂಪುರ್ಚಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 19:30 IST
Last Updated 17 ಜನವರಿ 2020, 19:30 IST
ಪುಳ್ಳಂಪುರ್ಚಿ
ಪುಳ್ಳಂಪುರ್ಚಿ   

ಮಲೆನಾಡಿನ ಹಳ್ಳಿಗಳಲ್ಲಿ ಹುಟ್ಟಿ ಬೆಳೆದವರಿಗೆ ಗೊತ್ತಿರಬಹುದು– ಗಿಡ– ಮರಗಳ ಬುಡದಲ್ಲಿ, ತೇವಾಂಶವಿರುವ ನೆಲದ ಮೇಲೆ ಹಬ್ಬಿಕೊಂಡಿರುವ ಹಸಿರು ರಂಗಿನ ಪುಟ್ಟ ಪುಟ್ಟ ಎಲೆಗಳಿರುವ ಚಿಕ್ಕ ಕಾಂಡಗಳ ಮೂಲಿಕೆ; ಚಿಕ್ಕ ಚಿಕ್ಕ ಹಳದಿ ಹೂವುಗಳನ್ನು ಬಿಡುವ ಇದರ ಕಾಂಡಗಳು ನೆಲದಲ್ಲಿ ಬೇರನ್ನು ಇಳಿಸಿ ಹಬ್ಬುತ್ತ ಸಾಗುತ್ತವೆ; ತಿಂದರೆ ಹುಳಿ ಹುಳಿಯಾಗಿರುವ ಈ ಸಸ್ಯ ಪುಳ್ಳಂಪುರ್ಚಿ. ಕೆಲವು ಕಡೆ ಹುಳಿಚಿಕ್ಕ ಎಂಬ ಹೆಸರಿನಿಂದಲೂ ಕರೆಯುವುದುಂಟು. ಇದರ ಸಸ್ಯಶಾಸ್ತ್ರೀಯ ಹೆಸರು ಆಕ್ಸಾಲಿಸ್‌ ಕಾರ್ನಿಕ್ಯುಲೇಟ. ಈ ಪುಟ್ಟ ಸಸ್ಯ ಔಷಧೀಯ ಗುಣಗಳ ಆಗರ.

ಹೇರಳವಾಗಿ ವಿಟಮಿನ್‌ ಸಿ, ಕ್ಯಾಲ್ಶಿಯಂ, ಪೊಟ್ಯಾಶಿಯಂ, ಕ್ಯಾರೊಟೀನ್‌ ಅಂಶಗಳಿರುವ ಈ ಹುಳಿ ಸೊಪ್ಪು ಆಯುರ್ವೇದ ಔಷಧದಲ್ಲಿ ಬಳಕೆಯಾಗುತ್ತದೆ. ಆದರೆ ಕೆಲವರು ಇದೊಂದು ಕಳೆ ಸಸ್ಯ ಎಂದು ನಿರ್ಲಕ್ಷಿಸುವುದೂ ಇದೆ.

ಮೂಲವ್ಯಾಧಿಯಿಂದ ಬಳಲುವವರು ರಕ್ತಸ್ರಾವಕ್ಕೆ ಇದನ್ನು ಬಳಸಬಹುದು. ಸಾಮಾನ್ಯವಾಗಿ ಈ ಸಮಸ್ಯೆ ಇರುವವರು ಹೆಚ್ಚು ಖಾರವಿರುವ ಆಹಾರ ಸೇವಿಸಿದರೆ ಸಮಸ್ಯೆ ಉಲ್ಬಣಿಸುತ್ತದೆ. ಈ ಪುಳ್ಳಂಪುರ್ಚಿ ಎಲೆಗಳನ್ನು ಹುರಿಯಬೆಕು. ತುಪ್ಪದಲ್ಲಿ ಹುರಿದರೆ ಒಳಿತು. ನಂತರ ಅದನ್ನು ಮೊಸರಿನಲ್ಲಿ ಕಲೆಸಿ ತಿನ್ನಬೇಕು.

ADVERTISEMENT

ತಲೆನೋವು, ಅರೆದಲೆಶೂಲೆ (ಮೈಗ್ರೇನ್‌) ಸಮಸ್ಯೆಯಿರುವವರೂ ಇದನ್ನು ಮನೆಮದ್ದಾಗಿ ಬಳಸಬಹುದು. ಈ ಸಸ್ಯದ ಎಲೆಗಳನ್ನು ರುಬ್ಬಿ ರಸ ತೆಗೆಯಿರಿ. ಅದಕ್ಕೆ ಸಮ ಪ್ರಮಾಣದಲ್ಲಿ ಈರುಳ್ಳಿ ರಸ ಸೇರಿಸಿ ಹಣೆಗೆ, ತಲೆಗೆ ಲೇಪಿಸಿ. ಕೆಲವು ದಿನಗಳವರೆಗೆ ನಿರಂತರ ಮಾಡುವುದರಿಂದ ಮೈಗ್ರೇನ್‌ನಿಂದ ಶಮನ ದೊರೆಯುತ್ತದೆ.

ಇದು ನೋವು ನಿವಾರಕ ಕೂಡ. ಅಂದರೆ ಹೊಟ್ಟೆ ನೋವು ಅಥವಾ ಯಾವುದೇ ಬಗೆಯ ದೈಹಿಕ ನೋವಿಗೆ ಉಪಶಮನ ನೀಡುತ್ತದೆ. ಇದರ ಎಲೆಗಳನ್ನು ನೀರಿಗೆ ಸೇರಿಸಿ ಕುದಿಸಿ. ಇದನ್ನು ಸೋಸಿ. ನಂತರ ಚಿಟಿಕೆ ಇಂಗನ್ನು ಸೇರಿಸಿ. ಇದು ಹೊಟ್ಟೆನೋವು ಮಾತ್ರವಲ್ಲ, ಅಜೀರ್ಣ, ಗ್ಯಾಸ್‌, ಮಲಬದ್ಧತೆಯಿಂದಲೂ ಮುಕ್ತ ನೀಡುತ್ತದೆ.

ಬಾಯಿ ದುರ್ವಾಸನೆಯಿಂದ ಕೂಡಿದ್ದರೆ, ವಸಡಿನಿಂದ ರಕ್ತಸ್ರಾವವಾಗುತ್ತಿದ್ದರೆ ಅಥವಾ ಹಲ್ಲಿನ ಬುಡ ಅಲ್ಲಾಡುತ್ತಿದ್ದರೆ ಈ ಎಲೆ ರಾಮಬಾಣವಿದ್ದಂತೆ. 8– 10 ಎಲೆಗಳನ್ನು ಚೆನ್ನಾಗಿ ತೊಳೆದು ಅಗಿಯಿರಿ. ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ರಕ್ತಹೀನತೆ, ಕಿವಿನೋವುಗಳಲ್ಲಿ ಇದರ ತಾಜಾ ರಸವನ್ನು ಮಾಡಿ ಬಳಸಬಹುದು. ಜೀರ್ಣಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ತಂಪುಕಾರಕವಾಗಿಯೂ ಎಲೆಗಳನ್ನು ಉಪಯೋಗಿಸಲಾಗುತ್ತದೆ. ಜ್ವರ, ಆಮಶಂಕೆಯಲ್ಲಿ, ಪಾದದಲ್ಲಾಗುವ ಅಣಿಗಳಿಗೆ ಬಳಸಬಹುದು. ಕಣ್ಣು ತುರಿಕೆಯಾದರೂ ಇದರ ತಾಜಾ ರಸ ಬಿಡಬಹುದು.

ಇದು ಸಿಟ್ರಿಕ್‌ ಆಮ್ಲವನ್ನು ಹೊಂದಿದ್ದು, ಅತಿಯಾಗಿ ತಿಂದರೆ ಅಪಾಯಕಾರಿ.

(ಪೂರಕ ಮಾಹಿತಿ: ಡಾ.ಟಿ.ಎಸ್‌.ತೇಜಸ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.