ADVERTISEMENT

ಆರೋಗ್ಯ ಪರೀಕ್ಷೆಗೆ ಇನ್ನು ರಕ್ತದ ಮಾದರಿ ಬೇಕಿಲ್ಲ! ಯಾಕೆ ಗೊತ್ತೇ?

ಬೆವರಿನ ಅಂಶ ವಿಶ್ಲೇಷಿಸುವ ಅತ್ಯಾಧುನಿಕ ಉಪಕರಣ ಅಭಿವೃದ್ಧಿ

ಪಿಟಿಐ
Published 19 ಆಗಸ್ಟ್ 2019, 12:26 IST
Last Updated 19 ಆಗಸ್ಟ್ 2019, 12:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಾಸ್‌ ಏಂಜಲಿಸ್‌: ಆಯಾಸ, ನಿರ್ಜಲೀಕರಣ ಮುಂತಾದ ಅನಾರೋಗ್ಯವನ್ನು ತಕ್ಷಣದಲ್ಲೇ ಪತ್ತೆ ಹಚ್ಚಬಹುದಾದಂತ ಅತ್ಯಾಧುನಿಕ ಉಪಕರಣವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಹಣೆ, ಕೈ, ಬೆನ್ನಿನಲ್ಲಿ ಧರಿಸಬಹುದಾದ ಮಾದರಿಯಲ್ಲಿ ಸೆನ್ಸರ್‌(ಸಂವೇದಕ)ಉಪಕರಣ ಅಭಿವೃದ್ಧಿಪಡಿಸಲಾಗಿದ್ದು, ಇದು ಬೆವರಿನ ಅಂಶವನ್ನು ವಿಶ್ಲೇಷಿಸಿ ಆರೋಗ್ಯದ ಮಾಹಿತಿ ನೀಡಲಿದೆ. ಹೀಗಾಗಿ ರಕ್ತದ ಮಾದರಿ ಪಡೆದೇ ಆರೋಗ್ಯ ಪರೀಕ್ಷಿಸುವ ಅಗತ್ಯ ಮುಂದಿಲ್ಲ.

ಉಪಕರಣದ ವಿನ್ಯಾಸದ ಕುರಿತು ಸೈನ್ಸ್‌ ಅಡ್ವಾನ್ಸಸ್‌ ನಿಯತಕಾಲಿಕದಲ್ಲಿ ವಿವರಿಸಲಾಗಿದೆ. ಉಪಕರಣದಲ್ಲಿರುವ ಸೆನ್ಸರ್, ಬೆವರಿನ ಪ್ರಮಾಣವನ್ನು ಪತ್ತೆಹಚ್ಚುತ್ತದೆ. ಜತೆಗೆ ಬೆವರಿನಲ್ಲಿನ ಎಲೆಕ್ಟ್ರೋಲೈಟ್ಸ್‌ ಮತ್ತು ಮೆಟಾಬೊಲೈಟ್ಸ್‌ ಪ್ರಮಾಣವನ್ನು ಗುರುತಿಸುವ ಸಾಮರ್ಥ್ಯ ಇದಕ್ಕಿದೆ. ‘ಕೇವಲ ಸೆನ್ಸರ್‌ಗಳ ಅಭಿವೃದ್ಧಿ ಈ ಯೋಜನೆಯ ಉದ್ದೇಶವಲ್ಲ, ಬದಲಾಗಿ ಬೆವರಿನಿಂದ ಯಾವೆಲ್ಲಾ ಅನಾರೋಗ್ಯಗಳನ್ನು ಪತ್ತೆಹಚ್ಚಬಹುದು ಎನ್ನುವುದು ಗುರಿಯಾಗಿದೆ’ ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರೊ.ಅಲಿ ಜವೇ ತಿಳಿಸಿದರು.

ADVERTISEMENT

ಸೆನ್ಸರ್‌ಗಳಲ್ಲಿ ಅತಿ ಸೂಕ್ಷ್ಮ ಕೊಳವೆಗಳಿದ್ದು, ಇವುಗಳು ಚರ್ಮದಿಂದ ಬೆವರನ್ನು ಹೀರಿಕೊಳ್ಳುತ್ತವೆ. ಈ ಮೂಲಕ ಬೆವರಿನ ಪ್ರಮಾಣ, ಬೆವರಿನಲ್ಲಿರುವ ಪೊಟ್ಯಾಸಿಯಮ್‌, ಸೋಡಿಯಂ ಹಾಗೂ ಗ್ಲೂಕೋಸಿನ ಪ್ರಮಾಣವನ್ನು ಪತ್ತೆಹಚ್ಚಬಹುದಾಗಿದೆ. ಫಿನ್‌ಲ್ಯಾಂಡ್‌ನ ವಿಟಿಟಿ ತಾಂತ್ರಿಕ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಜವೇ ಮತ್ತವರ ತಂಡ ಕಡಿಮೆ ವೆಚ್ಚದಲ್ಲಿ ಉತ್ಪಾದಿಸಬಹುದಾದ ಸೆನ್ಸರ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಬೆವರಿನಲ್ಲಿರುವ ಗ್ಲೂಕೋಸ್‌ ಪ್ರಮಾಣ ಹಾಗೂ ರಕ್ತದಲ್ಲಿರುವ ಗ್ಲೂಕೋಸ್‌ ಪ್ರಮಾಣವನ್ನೂ ಈ ಸೆನ್ಸರ್‌ ಮೂಲಕ ಹೊಂದಾಣಿಕೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.