ADVERTISEMENT

ಆರೋಗ್ಯಕ್ಕೆ ಅಭ್ಯಂಗ

ಡಾ.ರಾಘವೇಂದ್ರ ಎನ್.ಚಿಂತಾಮಣಿ
Published 25 ಅಕ್ಟೋಬರ್ 2019, 19:30 IST
Last Updated 25 ಅಕ್ಟೋಬರ್ 2019, 19:30 IST
   

ಎಣ್ಣೆಯನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡುವ ಆಯುರ್ವೇದ ಪದ್ಧತಿ ಅಭ್ಯಂಗ ಅಥವಾ ಅಭ್ಯಂಜನ. ಇದನ್ನು ಹಬ್ಬದ ಸಂದರ್ಭದಲ್ಲಿ ಮಾತ್ರ ಮಾಡುವ ಬದಲು ನಿತ್ಯ ಅನುಸರಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು.

ಜೀವನಶಾಸ್ತ್ರವಾದ ಆಯುರ್ವೇದದ ಪ್ರಕಾರ ಸ್ವಾಸ್ಥ್ಯ ರಕ್ಷಣೆಯ ವಿಚಾರದಲ್ಲಿ ದಿನಚರ್ಯೆ (ಪ್ರತಿನಿತ್ಯ ಆರೋಗ್ಯ ರಕ್ಷಣೆ), ಋತುಚರ್ಯೆ (ಋತುಗಳಿಗೆ ತಕ್ಕಂತೆ ಆರೋಗ್ಯ ಕ್ರಮಗಳ ಪಾಲನೆ) ಹಾಗೂ ಸದ್ವೃತ್ತ (ಸದಾಚಾರ) ಪ್ರಮುಖವಾದುದು.

ಆರೋಗ್ಯ ವೃದ್ಧಿ ಹಾಗೂ ರಕ್ಷಣೆಗೆ ಕಲಶಪ್ರಾಯವಾದ ವಿಚಾರವೆಂದರೆ ಅಭ್ಯಂಗ. ಆದರೆ ಇದನ್ನು ಯುಗಾದಿ ಮತ್ತು ದೀಪಾವಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.

ADVERTISEMENT

ಎಣ್ಣೆ ಸ್ನಾನ ಮಾಡುವುದು ಹೇಗೆ? ಯಾವ ಎಣ್ಣೆಯನ್ನು ಬಳಸಬೇಕು? ಯಾವ ಸಮಯದಲ್ಲಿ ಎಣ್ಣೆ ಸ್ನಾನ ಮಾಡಬೇಕು? ಯಾವ ಸಂದರ್ಭದಲ್ಲಿ ಇದು ವರ್ಜ್ಯ? ಎಂಬುದನ್ನು ತಿಳಿಯುವುದು ಮುಖ್ಯ.

ಅಭ್ಯಂಗಕ್ಕೆ ಸೂಕ್ತ ಎಣ್ಣೆಗಳು
ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ, ಹರಳೆಣ್ಣೆ, ಶೇಂಗಾ ಎಣ್ಣೆ, ಸೂರ್ಯಕಾಂತಿ ಎಣ್ಣೆ ಸೂಕ್ತ. ಎಲ್ಲಾ ಎಣ್ಣೆಗಳಲ್ಲಿ ಅಭ್ಯಂಗಕ್ಕೆ ಶ್ರೇಷ್ಠವಾದುದು ಎಳ್ಳೆಣ್ಣೆ.

ನಾವು ಅನೇಕ ಪುರಾತನ ದೇವಸ್ಥಾನಗಳನ್ನು ನೋಡಿರುತ್ತೇವೆ. ಸೂಕ್ಷ್ಮವಾಗಿ ಗಮನಿಸಿದರೆ ದೇವಸ್ಥಾನದ ಬಾಹ್ಯ ಭಾಗ ಬಹುತೇಕ ಶಿಥಿಲಗೊಂಡಿರುತ್ತದೆ.

ಆದರೆ ಗರ್ಭಗುಡಿಯಲ್ಲಿರುವ ಲಿಂಗ ಅಥವಾ ಮೂರ್ತಿ ಮಾತ್ರ ಹೊಚ್ಚ ಹೊಸದರಂತೆ ಹೊಳೆಯುತ್ತಿರುತ್ತದೆ. ಆ ದೇವಸ್ಥಾನಗಳ ಇತಿಹಾಸ ನೂರಾರು-ಸಾವಿರಾರು ವರ್ಷಗಳನ್ನು ಸಾರುತ್ತವೆ. ಬಾಹುಬಲಿಗೆ ಮಜ್ಜನ, ದೇವರ ಮೂರ್ತಿಗಳಿಗೆ ಅಭಿಷೇಕ ಇವುಗಳ ಹಿಂದಿನ ಸತ್ಯವೇ ಅಭ್ಯಂಗ.

ಈ ಶರೀರವು ಕ್ಷಣಕ್ಷಣವೂ ಮುಪ್ಪಿನೆಡೆಗೆ ಧಾವಿಸುತ್ತಾ ಶಿಥಿಲತೆಗೆ ಎಡೆ ಮಾಡಿಕೊಡುವುದು. ಒರಟು ಚರ್ಮ, ಬಿಳಿ- ಒರಟು- ಸೀಳು ಕೂದಲು, ತುಟಿ- ಮೈ ಚರ್ಮದಲ್ಲಿ ಬಿರುಕು, ಪಾದಗಳಲ್ಲಿ ಬಿರುಕು, ಹೀಗೆ ಹತ್ತು ಹಲವು ಸಮಸ್ಯೆಗಳಿಗೆ ಮೂಲಕಾರಣ ಅಭ್ಯಂಗವನ್ನು ನಿರ್ಲಕ್ಷಿಸಿರುವುದು.

ಯಾವ ಸಮಯ ಸೂಕ್ತ?
ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಅಂದರೆ 4.30– 5.30ರೊಳಗೆ ಏಳುವುದು ಉತ್ತಮ ಎನ್ನುತ್ತದೆ ಶಾಸ್ತ್ರ. ಬೆಳಿಗ್ಗೆ 5–6ರ ಒಳಗೆ ಅಭ್ಯಂಗ ಮಾಡುವುದು ಒಳಿತು. ಆಗಲಿಲ್ಲ ಎಂದರೆ ಚಿಂತೆ ಬೇಡ. ದಿನದ 24 ಗಂಟೆಗಳಲ್ಲಿ ಸೂಕ್ತ ಸಮಯವನ್ನು ನೀವೇ ಆರಿಸಿಕೊಳ್ಳಿ. ಆದರೆ ಒಂದು ಮುಖ್ಯ ವಿಚಾರ. ಆಹಾರ ಸೇವಿಸಿದ ತಕ್ಷಣ ಅಭ್ಯಂಗ ಮಾಡುವಂತಿಲ್ಲ. ಆಹಾರ ಜೀರ್ಣಗೊಂಡ ಬಳಿಕ, ಉದಾ: ಬೆಳಿಗ್ಗೆ 11–12, ಸಂಜೆ 5–6, ಹೀಗೆ ಅವರವರಿಗೆ ಸೂಕ್ತವಾದ ಸಮಯದಲ್ಲಿ ಆರೋಗ್ಯ ಹಿತಕ್ಕಾಗಿ ಅಭ್ಯಂಗ ಆಚರಣೆ ಉತ್ತಮ.

ವಿಧಾನ
ಸೂಕ್ತ ಎಣ್ಣೆಯನ್ನು (ಒಂದು ಭಾಗ ಎಳ್ಳೆಣ್ಣೆಗೆ ಒಂದು ಭಾಗ ಕೊಬ್ಬರಿ ಎಣ್ಣೆ ಬೆರೆಸಿ ಬಳಸುವುದು ಸರ್ವಕಾಲಕ್ಕೂ ಹಿತ). ಕೇವಲ 4–5 ಚಮಚ ತೆಗೆದುಕೊಂಡು ಸ್ವಲ್ಪ ಬಿಸಿ ಮಾಡಿ ಅದನ್ನು ಸೂಕ್ತ ರೀತಿಯಲ್ಲಿ ದೇಹದ ಅಂಗಗಳಿಗೆ ಅನುಲೋಮ ರೀತಿಯಲ್ಲಿ ಅಂದರೆ ಮೇಲಿನಿಂದ ಕೆಳಕ್ಕೆ ಹಾಗೂ ಸಂಧಿಗಳಲ್ಲಿ ವರ್ತುಲಾಕಾರವಾಗಿ ಎಣ್ಣೆಯನ್ನು ಹಚ್ಚಿಕೊಳ್ಳುವುದು ಸೂಕ್ತ. ತಲೆಗೆ, ಕಿವಿಗಳಿಗೆ ಹಾಗೂ ಪಾದಗಳಿಗೆ ಸೂಕ್ತ ರೀತಿಯಲ್ಲಿ ಅಭ್ಯಂಗವನ್ನು ಮಾಡಿಕೊಳ್ಳಬೇಕು. ಹಲವರು ಕಿವಿಗಳಿಗೆ ಎಣ್ಣೆ ಹಾಕಿಕೊಳ್ಳುವುದಕ್ಕೆ ಹೆದರುತ್ತಾರೆ. ಯಾವುದೇ ಭಯ ಬೇಡ. ಕೊಬ್ಬರಿ ಅಥವ ಎಳ್ಳೆಣ್ಣೆಯನ್ನು 5–6 ತೊಟ್ಟು ಬೆಚ್ಚಗೆ ಮಾಡಿ ಕಿವಿಗಳಿಗೆ ಹಾಕಿಕೊಳ್ಳುವುದು ಅತಿ ಮುಖ್ಯ. ಕಿವಿ ಸೋರಿಕೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮಾತ್ರ ಇದು ವರ್ಜ್ಯ. ಕಿವಿಗಳಿಗೆ ಎಣ್ಣೆ ಸ್ಪರ್ಶವಾದರೆ ಸಹಜವಾಗಿ ಕಿವುಡುತನ ಬಾಧಿಸುವುದಿಲ್ಲ. ಪಾದಗಳಿಗೆ ಅಭ್ಯಂಗ ಮಾಡುವುದರಿಂದ ಚಲನೆ ಮತ್ತು ದೃಷ್ಟಿಗೆ ಲಾಭದಾಯಕ.

ಸಕಲ ಜ್ಞಾನೇಂದ್ರಿಯಗಳು ಶಿರದಲ್ಲೇ ವಾಸವಿರುವ ಕಾರಣ ಅವುಗಳ ಉತ್ತಮ ಕಾರ್ಯನಿರ್ವಹಣೆಗೆ ಶಿರೋಭ್ಯಂಗ ಅತಿಮುಖ್ಯ. ನೀವು ನಿಜವಾದ ಆರೋಗ್ಯದ ಆನಂದವನ್ನು ಅನುಭವಿಸಬೇಕೆಂದರೆ ಪ್ರತಿನಿತ್ಯವಾಗಲಿ ಇಲ್ಲವೇ ದಿನ ಬಿಟ್ಟು ದಿನ ಅದೂ ಆಗಲಿಲ್ಲವೇ ವಾರಕ್ಕೆ ಕನಿಷ್ಠ ಒಂದೆರಡು ದಿನ ಎಣ್ಣೆ ಸ್ನಾನ ಮಾಡಿಕೊಂಡು ಉತ್ತಮ ಆರೋಗ್ಯವನ್ನು ಪಡೆಯಿರಿ.

ಜೀವನಶೈಲಿಗೆ ಸಂಬಂಧಿಸಿದ ಮಾನಸಿಕ ಒತ್ತಡಗಳಿಂದ ಬರುವ ಬಿ.ಪಿ., ಮಧುಮೇಹ, ಬಿಳಿಕೂದಲು, ಬಂಗು, ಸಂಧಿವಾತ, ಸೊಂಟನೋವು, ಮೈಕೈ ನೋವು ಇತ್ಯಾದಿ ಕಾಯಿಲೆಗಳನ್ನು ದೂರವಿಡುವಲ್ಲಿ ನಿಮಗೆ ಆಪ್ತ ಸಖನಂತೆ ಸಹಕರಿಸುವುದು ಅಭ್ಯಂಗ ಮಾತ್ರ. ಕ್ರಿಮಿಕೀಟಗಳು, ಬ್ಯಾಕ್ಟೀರಿಯ- ವೈರಸ್‌, ಫಂಗಸ್ ಇತ್ಯಾದಿಗಳು ಎಣ್ಣೆ ಸ್ಪರ್ಶಗೊಂಡರೆ ಅವು ಹೆಚ್ಚು ಕಾಲ ಉಳಿಯುವುದಿಲ್ಲ, ಇದು ಆಧುನಿಕ ವಿಜ್ಞಾನಿಗಳ ಸಂಶೋಧನೆ. ಹಾಗಾಗಿ ದೇಹದ ರಕ್ಷಣಾಕೋಟೆಯಂತಿರುವ ಚರ್ಮಕ್ಕೆ ಮತ್ತೊಂದು ಬಲಿಷ್ಠ ರಕ್ಷಾ ಕವಚವೇ ಅಭ್ಯಂಗ.

ಯಾರಿಗೆ ಅಭ್ಯಂಗ ಹಿತವಲ್ಲ

*ಜ್ವರದಿಂದ ಬಳಲುತ್ತಿರುವವರು, ಶ್ವಾಸಕೋಶ ಸಮಸ್ಯೆಯಿರುವವರು, ಆಮವಾತ (ರುಮಟೈಡ್ ಸಂಧಿವಾತ) ಉಳ್ಳವರು, ಸ್ನಾನ ಮಾಡಿಕೊಳ್ಳಲು ಬಿಸಿನೀರಿಗೆ ಕೊರತೆಯುಳ್ಳವರು ಅಭ್ಯಂಗಕ್ಕೆ ವರ್ಜ್ಯರು.

*ಎಣ್ಣೆಯನ್ನು ಲೇಪಿಸಿಕೊಂಡು ಸ್ವಲ್ಪ ಸಮಯ ವ್ಯಾಯಾಮ ಮಾಡಿಕೊಳ್ಳಬಹುದು.

*ಎಣ್ಣೆ ಹಚ್ಚಿಕೊಂಡ ನಂತರ ಕೇವಲ 7–15 ನಿಮಿಷ ಮಾತ್ರ ವಿರಾಮ ನೀಡಿ ಸ್ನಾನ ಮಾಡಬಹುದು. ಗಂಟೆಗಟ್ಟಲೆ ಎಣ್ಣೆಯಲ್ಲಿ ನೆಂದರೆ ಪ್ರಯೋಜನವಿಲ್ಲ.

*ಸ್ನಾನದಲ್ಲಿ ಕಡಲೆಹಿಟ್ಟು, ಸೀಗೇಪುಡಿ ಇಲ್ಲವೆ ಹೆಸರುಬೇಳೆ ಪುಡಿ ಬಳಸುವುದು ಉತ್ತಮ.

*ಬಿಸಿನೀರಿನ ಸ್ನಾನ ಕಡ್ಡಾಯ.

*ಮಳೆಗಾಲದಲ್ಲಿ ಸಂಪೂರ್ಣ ಬಿಸಿಲಿನ ಕೊರತೆಯಿದ್ದಾಗ ಅಭ್ಯಂಗ ಬೇಡ.

*ಕಲಬೆರಕೆ ಎಣ್ಣೆ ನಿಷಿದ್ಧ.

ಸೂಕ್ತ ರೀತಿಯ ಸ್ನಾನದಿಂದ ಹಸಿವು ವೃದ್ಧಿಯಾಗುತ್ತದೆ, ಬಲ-ವೀರ್ಯಗಳು ವೃದ್ಧಿ ಹೊಂದಿ, ದೀರ್ಘಾಯುಷ್ಯಕ್ಕೆ ಕಾರಣವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.