ADVERTISEMENT

ತಲೆ ಸುತ್ತುವ ಸಮಸ್ಯೆಗೆ ತಜ್ಞರ ಕೊಡುವ ಸಲಹೆ ಏನು?

ಸುನೀತಾ ರಾವ್
Published 20 ಸೆಪ್ಟೆಂಬರ್ 2019, 19:42 IST
Last Updated 20 ಸೆಪ್ಟೆಂಬರ್ 2019, 19:42 IST

ನಾನು ಕಳೆದ ಒಂದು ವರ್ಷದಿಂದ ತಲೆಸುತ್ತಿನಿಂದ ಬಳಲುತ್ತಿದ್ದು ನರತಜ್ಞರು ಹಾಗೂ ಇ&ಟಿ ತಜ್ಞರ ಸಲಹೆ ಪಡೆದುಕೊಂಡಿದ್ದೇನೆ. ಮಾತ್ರೆ ನುಂಗಿ ನುಂಗಿ ಸಾಕಾಗಿದೆ. (vertin&diamox). ಇದರಿಂದ ನಾನು ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿ ಹೋಗಿದ್ದೇನೆ. ಇದಕ್ಕೆ ಪರಿಹಾರ ಏನು?
-ರಮೇಶ್, ಊರು ಬೇಡ

ನೀವು ಈಗಾಗಲೇ ವರ್ಟಿಗೊ ಸಮಸ್ಯೆಗಾಗಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಅದನ್ನು ಮುಂದುವರಿಸಬೇಕು. ಅದರೊಂದಿಗೆ ನೀವು ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಬಹುದು. ಯೋಗ ಹಾಗೂ ಧ್ಯಾನ ಮಾಡುವ ಮೂಲಕ ದೀರ್ಘ ಕಾಲದಿಂದ ನಿಮ್ಮನ್ನು ಕಾಡುತ್ತಿರುವ, ನೀವು ಚಿಕಿತ್ಸೆ ಪಡೆಯುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ವರ್ಟಿಗೊ ಅನೇಕರಲ್ಲಿ ಕಾಣಿಸಿಕೊಳ್ಳುತ್ತಿರುವ ಸಾಮಾನ್ಯ ಸಮಸ್ಯೆ.

ಅದರ ಬಗ್ಗೆ ಹೆಚ್ಚು ಚಿಂತಿಸಬೇಡಿ. ನಿಮ್ಮನ್ನು ನೀವು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಆಗ ನಿಮ್ಮ ಮನಸ್ಸು ಸದಾ ಆರೋಗ್ಯ ಸಮಸ್ಯೆಯ ಬಗ್ಗೆ ಚಿಂತಿಸಲು ಅವಕಾಶ ಇರುವುದಿಲ್ಲ.ಉತ್ತಮ ನಿದ್ದೆ ಹಾಗೂ ಆರೋಗ್ಯಕರ ಡಯೆಟ್ ಪಾಲಿಸಿ. ನಿಮಗೆ ಅಲ್ಟಿಟ್ಯುಡ್‌ ಸಿಕ್‌ನೆಸ್‌ ಅಥವಾ ವರ್ಟಿಗೊ ಇದೆ ಎಂಬುದನ್ನು ಒಪ್ಪಿಕೊಳ್ಳಿ. ಅದಕ್ಕಾಗಿ ವೈದ್ಯರು ನಿಮಗೆ ಔಷಧಿ ತೆಗೆದುಕೊಳ್ಳಲು ತಿಳಿಸಿದ್ದಾರೆ. ನಿಮಗೆ ಅಗತ್ಯ ಇದ್ದಾಗ ಆ ಔಷಧಿಗಳನ್ನು ತೆಗೆದುಕೊಳ್ಳುವುದು ಅಗತ್ಯ.

ADVERTISEMENT

ನನಗೆ 23 ವರ್ಷ. ಒಂದು ವರ್ಷದಿಂದ ಸಾವಿನ ಭಯ ಕಾಡುತ್ತಿದೆ. ಅದರಲ್ಲೂ ಬೆಂಕಿ ನೋಡಿದರೆ ವಿಪರೀತ ಭಯ. ದೂರದಲ್ಲಿ ಬೆಂಕಿ ಹಿಡಿದಿರುವುದು ನೋಡಿದರೂ ಎದೆ ನಡುಗಲು ಆರಂಭವಾಗುತ್ತದೆ. ಎಲ್ಲಿ ಬೆಂಕಿ ಬಿದ್ದರೂ ಅದು ನನ್ನನ್ನು ಸುಡುತ್ತದೆ ಎನ್ನಿಸುತ್ತದೆ. ನನಗಿರುವ ಸಮಸ್ಯೆ ಏನು?
-ವೈಷ್ಣವಿ, ತುಮಕೂರು

ಕೆಲವು ಹಂತದವರೆಗೂ ಬೆಂಕಿಯ ಬಗೆಗಿನ ಭಯ ಸಾಮಾನ್ಯ ಹಾಗೂ ಅದನ್ನು ಅರ್ಥ ಮಾಡಿಕೊಳ್ಳಬಹುದು. ಕೆಲವರಲ್ಲಿ ಬೆಂಕಿಯ ಭಯ ದಿನ ಕಳೆದಂತೆ ಹೆಚ್ಚಾಗುತ್ತಾ ಹೋಗುತ್ತದೆ ಮತ್ತು ಅದು ಅವರ ದೈನಂದಿನ ಬದುಕಿನ ಮೇಲೂ ಪರಿಣಾಮ ಬೀರುವಂತೆ ಮಾಡುತ್ತದೆ. ಕಾರಣವಿಲ್ಲದೆ, ನಿರಂತರವಾಗಿ ಬೆಂಕಿಯ ಬಗೆಗೆ ಭಯ ಉಂಟಾಗುವುದಕ್ಕೆವೈದ್ಯಕೀಯ ಭಾಷೆಯ‌ಲ್ಲಿ ಫೈರೋಫೋಬಿಯಾ ಎಂದು ಕರೆಯುತ್ತಾರೆ. ನಿಮ್ಮ ಭಯದ ಬಗ್ಗೆ ಆತ್ಮೀಯರ ಬಳಿ ಹೇಳಿಕೊಳ್ಳಿ. ಅವರ ಸಹಕಾರವೂ ನಿಮಗೆ ಸಹಾಯವಾಗುತ್ತದೆ.

ಬೆಂಕಿಯ ಎದುರು ನಿಮಗೆ ಭಯವಾದರೆ ನಿಮ್ಮ ಮನಸ್ಸಿನತ್ತ ಗಮನಹರಿಸಿ ಹಾಗೂ ಉಸಿರಾಟವನ್ನು ನಿಯಂತ್ರಿಸಿ. ನಿಮ್ಮ ನಿಯಂತ್ರಣಕ್ಕೆ ಸಿಗದ ತನ್ನಷ್ಟಕ್ಕೆ ತಾನು ಆವರಿಸಿಕೊಳ್ಳುವ ಭಯದ ಯೋಚನೆಗಳ ಮೇಲೆ ಗಮನ ಹರಿಸಬೇಡಿ. ಅದರ ಬದಲು ನಿಧಾನಗತಿಯಲ್ಲಿ ದೀರ್ಘವಾಗಿ ಉಸಿರಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ದೇಹ ಮಾನಸಿಕ ಭಯಕ್ಕೆ ಪ್ರತಿಕ್ರಿಯೆ ನೀಡುವುದನ್ನು ಕಡಿಮೆ ಮಾಡುತ್ತದೆ. ಬಹಳ ಸಮಯದಿಂದ ನಿಮ್ಮನ್ನು ಕಾಡುತ್ತಿರುವ ಫೋಬಿಯಾಗೆ ಇರುವ ಒಂದು ಪ್ರಮುಖ ಚಿಕಿತ್ಸೆ ಎಂದರೆ ನಿಮ್ಮನ್ನು ನೀವು ಬೆಂಕಿಯ ಮುಂದೆ ಉಪಸ್ಥಿತರಿರುವಂತೆ ನೋಡಿಕೊಳ್ಳುವುದು. ಇದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ತಕ್ಷಣಕ್ಕೆ ಬೆಂಕಿಯ ಭಯಕ್ಕೆ ಪ್ರತಿಕ್ರಿಯೆ ನೀಡುವುದನ್ನು ಕಡಿಮೆ ಮಾಡುತ್ತದೆ. ಒಂದು ವೇಳೆ ಫೋಬಿಯಾ ನಿಮ್ಮ ದಿನನಿತ್ಯದ ಜೀವನದಲ್ಲಿ ಮಧ್ಯಪ್ರವೇಶ ಮಾಡಿ, ನಿಮಗೆ ಸವಾಲು ತಂದೊಡ್ಡಿದ್ದರೆ ಆಗ ನೀವು ಒಳ್ಳೆಯ ಮಾನಸಿಕ ತಜ್ಞರ ಸಹಾಯ ಪಡೆದುಕೊಳ್ಳಿ.

ನನಗೆ ನಾಲ್ಕು ವರ್ಷದ ಹಿಂದೆ ಮದುವೆ ಆಯ್ತು. ಆಗಿನಿಂದ ಮನುಷ್ಯರ ಮನಸ್ಥಿತಿಯೇ ಅರ್ಥ ಆಗುತ್ತಿಲ್ಲ. ಮನೆಯಲ್ಲಿ ಏನೇ ಆದರೂ ಅದಕ್ಕೆ ನಾನೇ ಕಾರಣ ಎನ್ನುತ್ತಾರೆ. ನನಗೆ ಸ್ವಲ್ಪ ನೋವಾದರೂ ಮನಸ್ಸಿಗೆ ಒತ್ತಡ ಎನ್ನಿಸುತ್ತದೆ. ನನಗೆ ಇನ್ನೂ ಮಕ್ಕಳಾಗಿಲ್ಲ. ನಾನು ಎಷ್ಟೇ ಪ್ರಯತ್ನಪಟ್ಟರೂ ಯಾವುದೂ ಸಾಧ್ಯವಾಗುತ್ತಿಲ್ಲ. ವೈದ್ಯರಿಗೆ ತೋರಿಸಿದರೂ ಉಪಯೋಗವಿಲ್ಲ. ಎಲ್ಲ ದೇವರಿಗೂ ಕೈ ಮುಗಿದೆ. ಆದ್ರೂ ಯಾವುದೇ ಫಲ ಸಿಗುತ್ತಿಲ್ಲ. ಇದರಿಂದ ತುಂಬಾನೇ ನೊಂದಿದ್ದೇನೆ. ಇದರಿಂದ ಹೊರ ಬರಲು ಏನು ಮಾಡಬೇಕು.
-ಹೆಸರು, ಊರು ಬೇಡ

ಮದುವೆಯ ನಂತರ ಅನೇಕರ ಜೀವನದಲ್ಲಿ ನಿಜವಾದ ಸವಾಲು ಎದುರಾಗುತ್ತದೆ. ಮೊದ ಮೊದಲು ಅವರು ನಮ್ಮನ್ನು ಅರ್ಥ ಮಾಡಿಕೊಳ್ಳದಿದ್ದರೂ, ನಮಗೆ ಹೊಂದಾಣಿಕೆಯಾಗದಿದ್ದರೂ ನಾವು ಹೊಸ ಕುಟುಂಬದೊಂದಿಗೆ ಹೊಂದಿಕೊಳ್ಳುವುದು ಅನಿವಾರ್ಯ. ನಿಮಗೆ ಈಗಾಗಲೇ ಮದುವೆಯಾಗಿ 4 ವರ್ಷ ಕಳೆದಿದೆ. ಈಗ ನಿಮ್ಮ ಮನೆಯಲ್ಲಿರುವ ಪ್ರತಿಯೊಬ್ಬರ ಬಗ್ಗೆಯೂ ನಿಮಗೆ ತಿಳಿದಿರಬಹುದು, ನಿಮ್ಮ ಬಗ್ಗೆ ಅವರಿಗೆ ತಿಳಿದಿರಬಹುದು.

ಮನೆಯ ಹಿರಿಯರ ಜೊತೆ ಆರೋಗ್ಯಕರ ಸಂವಹನ ನಡೆಸಲು ಪ್ರಯತ್ನಿಸಿ. ಅವರ ಜೊತೆ ಬೆರೆಯಿರಿ. ಆಗ ಅವರಿಗೂ ನೀವು ಅವರ ಕುಟುಂಬದಲ್ಲಿ ಒಬ್ಬರು ಎಂಬ ಭಾವನೆ ಮೂಡುತ್ತದೆ. ನಿಮ್ಮ ಗಂಡನ ಜೊತೆ ಮಾತನಾಡಿ. ನಿಮಗಾದ ನೋವಿನ ಬಗ್ಗೆ ಅವರಿಗೆ ತಿಳಿಸಿ. ಅವರ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಬೇಡಿ. ಸಾಧ್ಯವಾದರೆ ಬೇರೆ ರೀತಿಯಲ್ಲೇ ಪ್ರತಿಕ್ರಿಯೆ ನೀಡಿ. ನೀವು ಮಾಡಿದ್ದು ಸರಿ ಇದ್ದರೆ ಸುಮ್ಮನೆ ಬಿಟ್ಟು ಬಿಡಿ. ಇನ್ನು ನೀವು ತಾಯಿಯಾಗುವ ಬಗ್ಗೆ ಹೇಳುವುದಾದರೆ ಇದಕ್ಕೆ ಸರಿಯಾದ ಸಮಯ ಬರಬೇಕು. ಆಗುವ ಸಮಯದಲ್ಲಿ ಆಗೇ ಆಗುತ್ತದೆ. ನೀವು ಈಗಾಗಲೇ ಡಾಕ್ಟರ್ ಬಳಿ ತೋರಿಸಿದ್ದೀರಿ. ಹಾಗಾಗಿ ತಾಳ್ಮೆಯಿಂದ ಇರಿ. ಅದರಲ್ಲೂ ನೀವಿಬ್ಬರೂ ಈಗ ಶಾಂತ ರೀತಿಯಿಂದ ಇರಬೇಕು. ಮಕ್ಕಳಿಲ್ಲದೇ ಇರುವುದರ ಬಗ್ಗೆ ಆತಂಕ ಪಡಬೇಡಿ. ಯೋಗ ಹಾಗೂ ಧ್ಯಾನ ಮಾಡುವುದು ನಿಮ್ಮಿಬ್ಬರಿಗೂ ಒಳ್ಳೆಯದು. ನಿಮ್ಮ ದೇಹ ಹಾಗೂ ಮನಸ್ಸು ಎರಡನ್ನೂ ಆರೋಗ್ಯವಾಗಿರಿಸಿಕೊಳ್ಳಿ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.