ADVERTISEMENT

ದಿಗ್ಬಂಧನ ಕೇಂದ್ರಗಳಲ್ಲ ಮನೋಲ್ಲಾಸ ತಾಣಗಳು...

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 19:45 IST
Last Updated 22 ಮಾರ್ಚ್ 2020, 19:45 IST
ಪ್ಯಾಕ್‌ ಮಾಡಿದ ಆಹಾರ
ಪ್ಯಾಕ್‌ ಮಾಡಿದ ಆಹಾರ   

ಕೋವಿಡ್‌–19 ಸೋಂಕಿತರು ಮತ್ತು ಶಂಕಿತರಿಗೆ ಚಿಕಿತ್ಸೆ ನೀಡುವ ಪ್ರತ್ಯೇಕ ವಾರ್ಡ್‌ (ಐಸೊಲೇಷನ್‌ ವಾರ್ಡ್‌) ಮತ್ತು ನಿಗಾ ಕೇಂದ್ರಗಳು (ಕ್ವಾರಂಟೈನ್‌ ಸೆಂಟರ್‌) ಈಗ ಕೊರೊನಾ ವೈರಾಣುವಿನಷ್ಟೇ ಎಲ್ಲರ ಗಮನ ಸೆಳೆಯುತ್ತಿವೆ.

ಈ ವಾರ್ಡ್ ಮತ್ತು ಕೇಂದ್ರಗಳ ಬಗ್ಗೆ ಕೆಲವರಿಗೆ ಎಲ್ಲಿಲ್ಲದ ಭೀತಿ.ಇನ್ನು ಕೆಲವರು ಇವುಗಳನ್ನು ‘ಆಸ್ಪತ್ರೆಯೊಳಗಿನ ಜೈಲು ಕೋಠಡಿ’ಗಳಂತೆ ಭಾವಿಸಿದ್ದಾರೆ. ಇನ್ನೂ ಹಲವರಿಗೆ ಈ ಭಯದ ಜತೆಗೆ ‘ಅದು ಹೇಗೆ ಇರ್ತದೆ‘ ಎಂಬ ಕುತೂಲವೂ ಸೇರಿಕೊಂಡಿರುತ್ತದೆ. ಹಾಗಾದರೆ ಈ ವಾರ್ಡ್‌ಗಳು, ನಿಗಾ ಕೇಂದ್ರ ಹೇಗಿರಬಹುದು ಎಂದು ನೋಡಲು ‘ಮೆಟ್ರೊ ಪುರವಣಿ ತಂಡ‘ ಮಲ್ಲೇಶ್ವರದ ಕೆ.ಸಿ. ಜನರಲ್‌ ಆಸ್ಪತ್ರೆಗೆ ಹೋದಾಗ, ‘ಬಿಲ್ ಕುಲ್‘ ಒಳಗೆ ಬಿಡಲ್ಲ ಎಂದರು ಅಧಿಕಾರಿಗಳು. ನಿಜ, ಐಸೋಲೇಷನ್, ಕ್ವಾರಂಟೇನ್ ವಾರ್ಡ್‌ಗಳನ್ನು ಅಷ್ಟು ಸುರಕ್ಷಿತವಾಗಿಟ್ಟಿದ್ದಾರೆ ಆಸ್ಪತ್ರೆಯ ವೈದ್ಯರು. ಆದರೂ ವಾರ್ಡ್ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದ್ದಿದ್ದರಿಂದ, ಹಿರಿಯ ಅಧಿಕಾರಿಗಳು ಹೊರಗಿನಿಂದಲೇ ವಾರ್ಡ್‌ ಮತ್ತು ಕೇಂದ್ರಗಳ ಬಗ್ಗೆ ಕಣ್ಣಿಗೆ ಕಟ್ಟುವಂತೆ ವಿವರಣೆ ನೀಡಿದರು.

ವಾರ್ಡ್, ಕೇಂದ್ರಗಳು ಹೀಗಿವೆ..

ADVERTISEMENT

ಕೋವಿಡ್‌ ವೈರಸ್ ಶಂಕಿತ ಸೋಂಕಿತರು ಮತ್ತು ಸೋಂಕಿತರಿಗಾಗಿ ಇಲ್ಲಿ 20 ಹಾಸಿಗೆಗಳ ಎರಡು ಪ್ರತ್ಯೇಕ ವಾರ್ಡ್‌ ಮತ್ತು ನಿಗಾ ಕೇಂದ್ರ ತೆರೆಯಲಾಗಿದೆ. ಇವುಗಳಿಗೆ ಸಾರ್ವಜನಿಕರಿಗಷ್ಟೇ ಅಲ್ಲ, ಆಸ್ಪತ್ರೆಯ ಎಲ್ಲ ಸಿಬ್ಬಂದಿಗೂ ಮುಕ್ತ ಪ್ರವೇಶ ಇಲ್ಲ. ಇದನ್ನು ನಿಷೇಧಿತ ವಲಯ ಎಂದು ಘೋಷಿಸಲಾಗಿದೆ. ಸಾರ್ವಜನಿಕರು ಇದರ ಹತ್ತಿರವೂ ಸುಳಿದಾಡುವಂತಿಲ್ಲ.

ಐಸೊಲೇಷನ್‌ ವಾರ್ಡ್‌ಗಳಲ್ಲಿ ಧ್ಯಾನ, ಪ್ರಾರ್ಥನೆ, ಆಪ್ತ ಸಮಾಲೋಚನೆ ಕೇಂದ್ರಗಳಿರುತ್ತವೆಯಂತೆ. ಆಪ್ತ ಸಮಾಲೋಚನೆ ಮೂಲಕ ರೋಗಿಗಳ ಜತೆಗೆ ಚರ್ಚೆ ನಡೆಸಿ, ಅವರಲ್ಲಿ ಮನೆ ಮಾಡಿರುವ ಆತಂಕ, ಭೀತಿಯನ್ನು ದೂರ ಮಾಡುತ್ತಾರೆ ವೈದ್ಯರು.

ಐಸೊಲೇಷನ್‌ ವಾರ್ಡ್‌ಗಳಲ್ಲಿ ಕೆಲಸ ಮಾಡಲು ವೈದ್ಯರು, ಶುಶ್ರೂಷಕಿಯರು, ಅರೆ ವೈದ್ಯಕೀಯ ಸಿಬ್ಬಂದಿ, ಗ್ರೂಪ್‌ ಡಿ ನೌಕರರನ್ನು ಒಳಗೊಂಡ ಪ್ರತ್ಯೇಕ ತಂಡ ತಂಡವನ್ನು ನಿಯೋಜಿಸಲಾಗಿದೆ. ಈ ವಾರ್ಡ್‌ಗಳಲ್ಲಿ ಕೆಲಸ ಮಾಡುವರಿಗಷ್ಟೇ ವಿಶೇಷ ಗುರುತಿನ ಚೀಟಿ, ವಿಭಿನ್ನ ಡ್ರೆಸ್‌ ಕೋಡ್‌, ಸುರಕ್ಷತಾ ಕ್ರಮಗಳನ್ನು ಸಿದ್ಧಪಡಿಸಲಾಗಿದೆ.

ಶ್ವಾಸಕೋಶ ತಜ್ಞರು, ಮನೋವೈದ್ಯರು ಸೇರಿದಂತೆ 15–20 ನುರಿತ ವೈದ್ಯರು ಈ ತಂಡದಲ್ಲಿದ್ದಾರೆ. 40 ಶುಶ್ರೂಷಕಿಯರು, 30 ಅರೆ ವೈದ್ಯಕೀಯ ಸಿಬ್ಬಂದಿ, 20 ಪ್ರಯೋಗಾಲಯ ಸಿಬ್ಬಂದಿ, 20 ಗ್ರೂಪ್‌ ಡಿ ನೌಕರರು, 25 ಸ್ವಚ್ಛತಾ ಕೆಲಸಗಾರರ ಪಡೆ ಹಗಲು, ರಾತ್ರಿ ಕೆಲಸ ಮಾಡುತ್ತಾರೆ.

ಸುರಕ್ಷತಾ ಕಿಟ್‌

ಸದಾ ಶಂಕಿತರು ಮತ್ತು ಸೋಂಕಿತರ ನಡುವೆ ಕೆಲಸ ಮಾಡುವ ಸಿಬ್ಬಂದಿಗೂ ಸೋಂಕು ತಗುಲುವ ಅಪಾಯ ಇರುತ್ತದೆ. ಹಾಗಾಗಿ ಭಾರಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ವಾರ್ಡ್‌ಗಳಲ್ಲಿರುವ ರೋಗಿಗಳ ಜತೆಗೆ ಇಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿಗೂ ಪ್ರತ್ಯೇಕ ಡ್ರೆಸ್‌, ಗೌನ್‌, ಕನ್ನಡಕ,ಮಾಸ್ಕ್‌ (ಎನ್‌–95), ಕೈಗವಸು, ಕ್ಯಾಪ್‌, ಶೂ ಕವರ್‌, ಟವೆಲ್‌, ಸೋಪ್‌, ಸ್ಯಾನಿಟೈಸರ್‌, ಬ್ರಷ್‌, ಹೊಂದಿದ ಸುರಕ್ಷತಾ ಕಿಟ್‌ (ಪರ್ಸನಲ್‌ ಪ್ರೊಟೆಕ್ಷನ್‌ ಕಿಟ್‌) ನೀಡಲಾಗಿದೆ.ಸ್ನಾನಕ್ಕೆ ಬಿಸಿನೀರು ನೀಡಲಾಗಿದೆ.

ವಿದೇಶದಿಂದ ಬರುವಾಗ ಸೂಟ್‌ಕೇಸ್‌ ಕಳೆದುಕೊಂಡ ವ್ಯಕ್ತಿಯೊಬ್ಬರಿಗೆ ಮೊಬೈಲ್‌ ಚಾರ್ಜರ್‌ ಸೇರಿದಂತೆ ಹೊಸ ಬಟ್ಟೆಗಳನ್ನೂ ಕೊಡಿಸಲಾಗಿದೆ. ಕುಟುಂಬ ಸದಸ್ಯರೊಂದಿಗೆ ಸದಾ ಸಂಪರ್ಕದಲ್ಲಿರಲು ಎಲ್ಲರಿಗೂ ಮೊಬೈಲ್‌ ಬಳಸಲು ಅವಕಾಶ ನೀಡಲಾಗಿದೆ.

ವಿಶೇಷ ಮೆನು

ಆಸ್ಪತ್ರೆಯ ಆಹಾರತಜ್ಞರ ಮಾರ್ಗದರ್ಶನದಲ್ಲಿ ವಿಶೇಷ ಊಟ, ಉಪಾಹಾರದ ಮೆನು ಸಿದ್ಧಪಡಿಸಲಾಗಿದೆ. ರೋಗಿಗಳು ಮತ್ತು ಸಿಬ್ಬಂದಿಗೆ ಇಲ್ಲಿಯೇ ಊಟ, ಉಪಾಹಾರ. ಮನೆಯಿಂದ ತರಲು ಅವಕಾಶ ಇಲ್ಲ. ಸಮಯಕ್ಕೆ ಸರಿಯಾಗಿ ಊಟ, ಉಪಾಹಾರ, ಕಾಫಿ, ಟೀ, ಬಿಸ್ಕತ್‌ ಪೂರೈಸಲಾಗುತ್ತದೆ. ಊಟದಲ್ಲಿ ಚಪಾತಿ, ರಾಗಿ ಮುದ್ದೆ, ಪಲ್ಯ, ಅನ್ನ, ಸಾಂಬಾರ್‌, ರಸಂ, ಮೊಳಕೆ ಕಾಳು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣುಗಳನ್ನು ನೀಡಲಾಗುತ್ತದೆ. ಬಳಸಿ, ಬಿಸಾಡುವ ತಟ್ಟೆಗಳಲ್ಲಿ ಪ್ಲಾಸ್ಟಿಕ್‌ ಹಾಳೆ ಸಿಲ್ವರ್‌ ಫಾಯಿಲ್‌ನಿಂದ ಸಂರಕ್ಷಿಸಲಾದ ಆಹಾರ ಸರಬರಾಜು ಮಾಡಲಾಗುತ್ತದೆ. ಜತೆಗೆ ಮಿನರಲ್ ವಾಟರ್ ಕೊಡಲಾಗುತ್ತದೆ.

ಪ್ರತಿದಿನ ಎರಡು ಐಸೊಲೇಷನ್‌ ವಾರ್ಡ್‌ ಮತ್ತು ನಿಗಾ ಕೇಂದ್ರದಲ್ಲಿ ತಪ್ಪದೆ ಎರಡರಿಂದ ಮೂರು ಬಾರಿ ಧೂಮೀಕರಣ (ಫ್ಯೂಮಿಗೇಶಷನ್‌) ಮಾಡಲಾಗುತ್ತಿದೆ. ಈ ವಾರ್ಡ್‌ ಒಳಗೆ ಬರುವ ಫೈಲ್‌ ಮತ್ತು ಪ್ರತಿ ವಸ್ತುವನ್ನೂ ಕಡ್ಡಾಯವಾಗಿ ರಾಸಾಯನಿಕ ಸಂಪಡಿಸಿ ಶುಚಿಗೊಳಿಸಲಾಗುತ್ತದೆ.

ಇಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಒಳಗೊಂಡ ‘ಕೋವಿಡ್‌–19 ಕೆಸಿಜಿಎಚ್‌ ಟೀಮ್‌’ ಎಂಬ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಳ್ಳಲಾಗಿದೆ. ಇಲ್ಲಿ ಪ್ರತಿದಿನ ನಡೆಯುವ ಬೆಳವಣಿಗೆ, ಸಭೆಗಳ ಪ್ರಮುಖ ನಿರ್ಣಯಗಳ ಮಾಹಿತಿ, ಸಲಹೆ, ಸೂಚನೆ ವಿನಿಮಯವಾಗುತ್ತದೆ.

ಹೆಜ್ಜೆ, ಹೆಜ್ಜೆಗೂ ಶುಚಿತ್ವದ ಮಂತ್ರ

‘ಸುಸಜ್ಜಿತವಾದ ವಾರ್ಡ್‌ಗಳಲ್ಲಿ ಸ್ವಚ್ಛವಾದ ಹಾಸಿಗೆ, ಹೊದಿಕೆ, ಪ್ರತ್ಯೇಕ ಲಾಕರ್‌, ಆಕ್ಸಿಜನ್‌ ಮಾಸ್ಕ್‌, ವೆಂಟಿಲೇಟರ್‌ಗಳಿವೆ. ರೋಗಿಗಳು ತಪ್ಪಿಸಿಕೊಳ್ಳದಂತೆ ಮತ್ತು ಹೊರಗಿನವರು ಸುಲಭವಾಗಿ ಒಳಬರದಂತೆ ಎರಡು ಮೂರು ಸುತ್ತಿನ ಭದ್ರತೆಯನ್ನೂ ಇಲ್ಲಿಗೆ ಒದಗಿಸಲಾಗಿದೆ‘ ಎನ್ನುತ್ತಾರೆ ಕೆ.ಸಿ. ಜನರಲ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ವೆಂಕಟೇಶಯ್ಯ ರಾಮಯ್ಯ.

‘ಐಸೊಲೇಷನ್‌ ವಾರ್ಡ್‌ ಮತ್ತು ನಿಗಾ ಕೇಂದ್ರಗಳು ‘ಆಸ್ಪತ್ರೆಯಲ್ಲಿರುವ ಜೈಲುಗಳಂತೆ’ ಎಂದು ಎಲ್ಲರೂ ತಪ್ಪು ತಿಳಿದುಕೊಂಡಿದ್ದಾರೆ. ಸಾರ್ವಜನಿಕರಲ್ಲಿ ಮನೆಮಾಡಿರುವ ಈ ತಪ್ಪು ತಿಳಿವಳಿಕೆ ಮತ್ತು ಭಯವನ್ನು ಹೋಗಲಾಡಿಸುವ ಅಗತ್ಯ ಇದೆ. ಇಲ್ಲಿ ರೋಗಿಗಳಿಗೆ ಮನೆಯಲ್ಲಿರುವತಂಹ ಆಪ್ತ ವಾತಾವರಣ ಕಲ್ಪಿಸಲಾಗಿದೆ. ಎಲ್ಲರೂ ಮನೆಯಲ್ಲಿರುವಂತೆ ಸಂತಸದಿಂದ ಇದ್ದಾರೆ‘ ಎಂದು ಅವರು ತಿಳಿಸಿದರು.

ಸೋಂಕಿತರು ಮತ್ತು ಶಂಕಿತ ಸೋಂಕಿತರೊಂದಿಗೆ ಸೌಜನ್ಯದೊಂದಿಗೆ ವರ್ತಿಸುವಂತೆ ಹಾಗೂ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ. ಚಿಕಿತ್ಸೆಯ ಜತೆಗೆ ಆಪ್ತ ಸಮಾಲೋಚನೆಗೆ ಒತ್ತು ನೀಡಲಾಗಿದೆ. ಇದಕ್ಕಾಗಿ ಮೂವರು ಮನೋವೈದ್ಯರ ತಂಡವನ್ನು ನಿಯೋಜಿಸಲಾಗಿದೆ. ‘ನಮ್ಮ ಈ ಯತ್ನ ಒಳ್ಳೆಯ ಪ್ರತಿಫಲ ನೀಡುತ್ತಿದೆ.ಆತಂಕದಲ್ಲಿ ಬಂದವರು ನಗು, ನಗುತ್ತಾ ಮನೆಗೆ ಹೋಗಿದ್ದಾರೆ‘ ಎನ್ನುವ ವೈದ್ಯರ ಮೊಗದಲ್ಲಿ ಧನ್ಯತಾ ಭಾವವಿತ್ತು. ‘ವೈಯಕ್ತಿಕ ಜೀವನ ಮರೆತು, ಜೀವದ ಹಂಗು ತೊರೆದು24 ಗಂಟೆಯೂ ಕೆಲಸ ಮಾಡುತ್ತಿರುವ ವೈದ್ಯಕೀಯ ತಂಡಕ್ಕೆ ಹೇಗೆ ಕೃತಜ್ಞತೆ ಸಲ್ಲಿಸಬೇಕು ತಿಳಿಯುತ್ತಿಲ್ಲ ಎಂಬ ಕೃತಜ್ಞತಾ ಭಾವ ಆಸ್ಪತ್ರೆಗೆ ಬಂದಿದ್ದ ರೋಗಿಗಳ ಸಂಬಂಧಿಕರಲ್ಲಿತ್ತು.

ರಿಕ್ರಿಯೇಷನ್‌ ಸೆಂಟರ್‌

ಇಲ್ಲಿರುವವರ ಮನೋಸ್ಥೈರ್ಯ ಹೆಚ್ಚಿಸಲು ಮತ್ತು ಒತ್ತಡ ನಿವಾರಣೆಗಾಗಿ ದಿನಕ್ಕೆ ಎರಡು ಬಾರಿ ಆಪ್ತ ಸಮಾಲೋಚನೆ ನಡೆಯುತ್ತದೆ.ಸಂಜೆ ಪ್ರಾರ್ಥನೆ, ಧ್ಯಾನ, ಪ್ರಾಣಾಯಾಮ ಹೇಳಿಕೊಡಲಾಗುತ್ತದೆ.

‘ಇಲ್ಲಿಗೆ ಬರುವ ರೋಗಿಗಳು ಆರಂಭದಲ್ಲಿ ತುಂಬಾ ಆತಂಕದಲ್ಲಿ ರುತ್ತಾರೆ. ಕೊರೊನಾ ಎಂದರೆ ಸಾವಲ್ಲ. ಅದು ವಾಸಿಯಾಗದ ಕಾಯಿಲೆ ಅಲ್ಲ ಎಂದು ಅವರಲ್ಲಿ ವಿಶ್ವಾಸ ತುಂಬುತ್ತೇವೆ. ಅವರಲ್ಲಿರುವ ಭಯವನ್ನು ನಿವಾರಿಸುವುದು ನಮ್ಮ ಮೊದಲ ಆದ್ಯತೆ’ ಎನ್ನುತ್ತಾರೆ ಮನೋವೈದ್ಯ ಡಾ. ಗಿರೀಶ್‌ ಕುಮಾರ್‌.

‘ಈ ಸೋಂಕಿನಿಂದ ಗುಣಮುಖರಾದ ಕತೆಗಳನ್ನು ಒಳರೋಗಿಗಳಿಗೆ ಹೇಳುತ್ತೇವೆ. ಸಕಾರಾತ್ಮಕ ಯೋಚನೆ,ಒತ್ತಡ ನಿವಾರಣೆ, ಮನೋಸ್ಥೈರ್ಯ ಮುಂತಾದ ವಿಷಯಗಳ ಕುರಿತು ಆಪ್ತ ಸಮಾಲೋಚನೆ ವೇಳೆ ಅವರಿಗೆ ಧೈರ್ಯ ತುಂಬುತ್ತೇವೆ‘ ಎನ್ನುತ್ತಾರೆ.

ಚಿತ್ರಗಳು: ಕೆ.ಸಿ. ಜನರಲ್ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.