ADVERTISEMENT

ಸಿಕಲ್‌ ಸೆಲ್‌ ಕಾಯಿಲೆ: ಗುಣವಿಲ್ಲದ ರೋಗಕ್ಕೆ ಕಾಯಕ ಚಿಕಿತ್ಸೆ

ಕೊಳ್ಳೇಗಾಲ ಶರ್ಮ
Published 12 ಏಪ್ರಿಲ್ 2023, 4:34 IST
Last Updated 12 ಏಪ್ರಿಲ್ 2023, 4:34 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಇ ದುವರೆಗೂ ಚಿಕಿತ್ಸೆಯೇ ಇಲ್ಲ ಎಂದು ಪರಿಗಣಿಸಿಬಿಟ್ಟಿದ್ದ ‘ಸಿಕಲ್‌ ಸೆಲ್’ಗೆ ಕಾಯಿಲೆಗೆ ಜೀನ್‌ ಚಿಕಿತ್ಸೆಯನ್ನು ಅಮೆರಿಕೆ ಮತ್ತು ಯುರೋಪಿನ ಎರಡು ಕಂಪೆನಿಗಳು ಸಿದ್ಧಪಡಿಸಿವೆಯಂತೆ.

ಮಧ್ಯಪ್ರದೇಶದ ಬುಡಕಟ್ಟು ಜನಾಂಗ ಹಾಗೂ ಕರ್ನಾಟಕದ ಸೋಲಿಗರಲ್ಲಿ ಹೆಚ್ಚಿರುವ ಗುಣಪಡಿಸಲಾಗದ ‘ಸಿಕಲ್‌ ಸೆಲ್‌ ಕಾಯಿಲೆ’ಗೆ ಎಂದು ಫೆಬ್ರುವರಿಯಲ್ಲಿ ಕೇಂದ್ರ ಸರ್ಕಾರದ ಬಜೆಟ್ಟಿನಲ್ಲಿ, ಯೋಜನೆಯೊಂದನ್ನು ಪ್ರಕಟಿಸಿತು. ದೇಶದಲ್ಲಿ ಈ ರೋಗ ಖಾತ್ರಿಯಾಗಿರುವ ಅಂದಾಜು ಎರಡು ಸಾವಿರ ರೋಗಿಗಳ ಕಾಯಿಲೆಯ ಚಿಕಿತ್ಸೆ, ಹಾಗೂ ಅಂತಹವರನ್ನು ಪತ್ತೆ ಮಾಡುವ ಪ್ರಯತ್ನಗಳನ್ನು ಇನ್ನಷ್ಟು ಬಲಗೊಳಿಸುವ ಯೋಜನೆ ಇದು. ಇಷ್ಟು ಅಲ್ಪ ಸಂಖ್ಯೆಯ ಕಾಯಿಲೆಗೆಂದು ವಿಶೇಷ ಯೋಜನೆ ಏಕೆ ಎನ್ನುವ ಪ್ರಶ್ನೆಗೆ ಉತ್ತರ ಇಷ್ಟೆ. ಇದೊಂದು ಅನುವಂಶೀಯ ಕಾಯಿಲೆ. ಕರ್ನಾಟಕದ ಸೋಲಿಗ ಸಮುದಾಯದಲ್ಲಿ ಸುಪ್ತವಾಗಿರುವ ಇದು, ಕೆಲವರಲ್ಲಿ ಮಾತ್ರ ವ್ಯಕ್ತವಾಗುತ್ತದೆ. ರಕ್ತಹೀನತೆ, ಕೆಲವೊಮ್ಮೆ ಪಾರ್ಶ್ವವಾಯು, ವಿಪರೀತ ಸಂಧಿವಾತದಂತಹ ನೋವಿನಿಂದ ಅಂತಹ ನತದೃಷ್ಟರನ್ನು ಕಾಡುತ್ತದೆ.

ಈ ಕಾಯಿಲೆಯನ್ನು ‘ಹೀಮೋಗ್ಲೋಬಿನೋಪಥಿ’ ಅರ್ಥಾತ್‌ ಹೀಮೋಗ್ಲೋಬಿನ್ನಿನ ದೋಷ ಎಂದು ಕರೆಯುತ್ತಾರೆ. ದೇಹದ ವಿವಿಧ ಅಂಗಗಳು ಜೀವಂತವಾಗಿರಲು ಅಗತ್ಯವಾದ ಆಕ್ಸಿಜನನ್ನು ಪೂರೈಸುವ ರಕ್ತದಲ್ಲಿರುವ ಹೀಮೊಗ್ಲೋಬಿನ್‌ ಎನ್ನುವ ಪ್ರೊಟೀನಿನಲ್ಲಿ ದೋಷವಿರುವುದರಿಂದ ಉಂಟಾಗುವ ಕಾಯಿಲೆ ಇದು. ಈ ದೋಷ ಉಂಟಾಗುವುದಕ್ಕೆ ಕಾರಣ, ಅದನ್ನು ತಯಾರಿಸುವ ಜೀನು ಅಥವಾ ತಳಿಗುಣದಲ್ಲಿ ದೋಷವಿರುತ್ತದೆ. ಫಲವಾಗಿ ಹೀಮೊಗ್ಲೋಬಿನ್ನಿನಲ್ಲಿ ಇರುವ ನಾಲ್ಕು ಎಳೆ ಪ್ರೊಟೀನುಗಳಲ್ಲಿ ಎರಡು ತುಸು ವಿಭಿನ್ನವಾಗಿ ಮಡಿಚಿಕೊಳ್ಳುತ್ತವೆ. ಇಡೀ ರಕ್ತಕೋಶವೇ ಆಕಾರ ಕಳೆದುಕೊಳ್ಳುತ್ತದೆ. ಸಾಮಾನ್ಯವಾಗಿ ದುಂಡುಬಿಲ್ಲೆಗಳಂತೆ ಸುಂದರವಾಗಿ ತೋರುವ ಕೋಶಗಳು, ಬಿದಿಗೆ ಚಂದ್ರನಂತೆ ಆಕಾರವನ್ನೂ ಗಾತ್ರವನ್ನೂ ಕಳೆದುಕೊಳ್ಳುತ್ತವೆ. ರಕ್ತಕೋಶಗಳು ಒಟ್ಟಾಗಿ ಹೆಪ್ಪುಗಟ್ಟುವಂತೆ ಮಾಡುತ್ತದೆ.

ADVERTISEMENT

ಈ ತೊಂದರೆಗೆ ಜೀನಿನಲ್ಲಿರುವ ‘ಒಂದಕ್ಷರ’ ದೋಷ ಕಾರಣ ಎಂದು ಸುಮಾರು 65 ವರ್ಷಗಳ ಹಿಂದೆಯೇ ಪತ್ತೆ ಮಾಡಲಾಗಿತ್ತು. ಒಂದಕ್ಷರ ದೋಷ ಎಂದರೆ ಇನ್ನೇನಲ್ಲ. ಪ್ರೊಟೀನಿನಲ್ಲಿ ಜೋಡಿಸಲಾಗಿರುವ ಅಮೈನೊ ಆಮ್ಲಗಳು ಯಾವುವು ಎಂಬ ನಿರ್ದೇಶ ಜೀನಿನಲ್ಲಿ ಇರುತ್ತದೆ. ಈ ನಿರ್ದೇಶದಲ್ಲಿ ಎಲ್ಲೋ ಒಂದು ಅಮೈನೊ ಆಮ್ಲದ ಬದಲಿಗೆ ಇನ್ನೊಂದು ಆಮ್ಲದ ನಿರ್ದೇಶ ಇದೆ ಅಷ್ಟೆ. ಅದರ ಫಲವಾಗಿ ಇಡೀ ಪ್ರೊಟೀನು ಎಳೆ ತಪ್ಪಾಗಿ ಮಡಚಿಕೊಳ್ಳುತ್ತದೆ. ಹೀಮೊಗ್ಲೋಬಿನೊಪಥಿ ಉಂಟಾಗುತ್ತದೆ.

ಹಾಗಿದ್ದರೆ ಜೀನಿನಲ್ಲಿರುವ ಈ ದೋಷವನ್ನು ತಿದ್ದಿಬಿಟ್ಟರೆ ಕಾಯಿಲೆ ಗುಣವಾಗುವುದೇ? ಇದೇ ಆಸೆ. ಈ ತರ್ಕ ನಿಜವೋ ಸುಳ್ಳೋ ಎನ್ನುವುದನ್ನು ಪರೀಕ್ಷಿಸಲು ಕೂಡ ಇದುವರೆವಿಗೆ ಅವಕಾಶಗಳಿರಲಿಲ್ಲ. ಏಕೆಂದರೆ ಜೀವಕೋಶದಲ್ಲಿರುವ ಲಕ್ಷಾಂತರ ಜೀನುಗಳಲ್ಲಿ ನಿರ್ದಿಷ್ಟವಾದುದನ್ನಷ್ಟೆ ತಿದ್ದುವುದು ಕಷ್ಟವಾಗಿತ್ತು. ಅದನ್ನು ಏನಿದ್ದರೂ ಗರ್ಭಸ್ಥ ಭ್ರೂಣದಲ್ಲಿಯಷ್ಟೆ ಮಾಡ ಬೇಕಾಗುತ್ತಿತ್ತು. ಭ್ರೂಣಾವಸ್ಥೆಯಲ್ಲಿಯೇ ಹೀಗೆ ಪತ್ತೆ ಮಾಡುವುದಾಗಲಿ, ತಿದ್ದುವುದಾಗಲಿ ಸುಲಭವೂ ಅಲ್ಲ; ಕಾನೂನಿನ ಪ್ರಕಾರ ನೈತಿಕವೂ ಅಲ್ಲ. ಹೀಗಾಗಿ ಇದುವರೆವಿಗೂ ಸಿಕಲ್‌ ಸೆಲ್‌ ಕಾಯಿಲೆಗೆ ಕೇವಲ ನೋವು ಕಡಿಮೆಗೊಳಿಸುವ ಅಥವಾ ಲಕ್ಷಣಗಳನ್ನು ಕಡಿಮೆ ಮಾಡುವ ಚಿಕಿತ್ಸೆಗಳಷ್ಟೆ ಇದ್ದುವು. ರಕ್ತಹೀನತೆ ಇದ್ದಲ್ಲಿ ರಕ್ತ ಕಸಿ ಮಾಡುವುದು, ನೋವು ಇದ್ದಾಗ ನೋವುಶಮನಕಗಳನ್ನು ಕೊಡುವುದು, ರಕ್ತ ಹೆಪ್ಪುಗಟ್ಟದಂತೆ ‘ಹೈಡ್ರಾಕ್ಸಿ ಯೂರಿಯಾ’ ಎನ್ನುವ ಔಷಧ ನೀಡುವುದಷ್ಟೆ ಸಾಧ್ಯವಾಗುತ್ತಿತ್ತು. ರೋಗಿಗಳಿಗೆ ಇದು ಸ್ವಲ್ಪ ಸಾಂತ್ವನ ನೀಡುತ್ತಿದ್ದಾದರೂ, ಕಾಯಿಲೆ ಗುಣವಾಯಿತೆಂದಾಗಲಿ, ಸಮುದಾಯದಲ್ಲಿ ಅದು ಮತ್ತೆ ಮರಳುವುದಿಲ್ಲವೆಂದಾಗಲಿ ಖಾತ್ರಿ ಇರುತ್ತಿರಲಿಲ್ಲ.

ಇದೀಗ ವರದಿಯಾಗಿರುವ ಚಿಕಿತ್ಸೆಗಳು ಜೀನಿನಲ್ಲಿರುವ ದೋಷಗಳನ್ನು ನೇರವಾಗಿ ತಿದ್ದಿವೆ. ಅದಕ್ಕಾಗಿ ‘ಕ್ರಿಸ್ಪರ್‌ ಕ್ಯಾಸ್‌-9’ ಅಥವಾ ‘ಕ್ರಿಸ್ಪರ್‌’ ಎನ್ನುವ ವಿನೂತನ ತಂತ್ರಜ್ಞಾನವನ್ನು ಬಳಸುತ್ತಿವೆ. ಯುರೋಪಿನ ‘ಕ್ರಿಸ್ಪರ್‌ ಥೆರಪ್ಯೂಟಿಕ್ಸ್‌‘ ಹಾಗೂ ಅಮೆರಿಕೆಯ ‘ವರ್ಟೆಕ್ಸ್‌’ ಎಂಬ ಸಂಸ್ಥೆಗಳು ಈ ಸಾಧನೆಯನ್ನು ಮಾಡಿವೆ. ಕ್ರಿಸ್ಪರ್‌ ಥೆರಪ್ಯೂಟಿಕ್ಸ್‌ ಕ್ರಿಸ್ಪರ್‌ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ, ಅದರಿಂದ ಜೀನುಗಳನ್ನು ನಿರ್ದಿಷ್ಟ ಸ್ಥಾನದಲ್ಲಿಯೇ ತಿದ್ದಬಹುದು ಎಂದು ನಿರೂಪಿಸಿದ್ದಕ್ಕಾಗಿ 2020ನೇ ಇಸವಿಯಲ್ಲಿ ನೊಬೆಲ್‌ ಪಾರಿತೋಷಕವನ್ನು ಪಡೆದ ಎಮ್ಯಾನುಯೆಲ್‌ ಚಾರ್ಪೆಂಟಿಯರ್‌ ಹಾಗೂ ಜೆನ್ನಿಫರ್‌ ಡೌಡ್ನಾ ಸ್ಥಾಪಿಸಿದ ಸಂಸ್ಥೆ. ಇದರ ಮುಖ್ಯಸ್ಥರು ಭಾರತೀಯ ಮೂಲದ ಸಮರ್ಥ್‌ ಕುಲಕರ್ಣಿ.

ಕ್ರಿಸ್ಪರ್‌ ಥೆರಪ್ಯೂಟಿಕ್ಸ್‌ ಹಾಗೂ ವರ್ಟೆಕ್ಸ್‌ ಸಂಸ್ಥೆಗಳೆರಡೂ ಮಾಡಿರುವುದು ಇಷ್ಟೆ. ಹತ್ತಾರು ವರ್ಷಗಳಿಂದ ಸಿಕಲ್‌ ಸೆಲ್‌ ಕಾಯಿಲೆಯಿಂದ ನರಳುತ್ತಿರುವ ರೋಗಿಗಳ ದೇಹದಿಂದ ರಕ್ತಕೋಶಗಳನ್ನು ಹುಟ್ಟಿಸುವ ಆಕರ ಅಥವಾ ಸ್ಟೆಮ್‌ ಸೆಲ್‌ ಗಳನ್ನು ಹೊರತೆಗೆದು ಅವುಗಳಲ್ಲಿರುವ ‘ಬಿಸಿಎಲ್‌11ಎ’ ಎನ್ನುವ ಜೀನನ್ನು ಕ್ರಿಸ್ಪರ್‌ ತಂತ್ರಜ್ಞಾನದಿಂದ ತಿದ್ದಿದ್ದಾರೆ. ಅದು ಕೆಲಸ ಮಾಡದಂತೆ ನಿರ್ಬಂಧಿಸಿದ್ದಾರೆ. ಬಿಸಿಎಲ್‌11ಎ ಭ್ರೂಣಾವಸ್ಥೆಯಲ್ಲಿ ಹೀಮೊಗ್ಲೋಬಿನ್‌ ತಯಾರಿಸುವ ಜೀನಿಗೆ ಅಡ್ಡಿಯಾಗುವಂತಹ ಪ್ರೊಟೀನನ್ನು ತಯಾರಿಸುತ್ತದೆ. ಈ ಅಡ್ಡಿಯನ್ನು ನಿವಾರಿಸಿದಲ್ಲಿ ಜೀವಕೋಶಗಳು ಭ್ರೂಣಾವಸ್ಥೆಯ ಹೀಮೊಗ್ಲೋಬಿನನ್ನು ತಯಾರಿಸಬಲ್ಲುವು. ಇದರ ಕೊರತೆಯಿಂದಾಗಿಯೇ ಸಿಕಲ್‌ ಸೆಲ್‌ ಕಾಯಿಲೆಯಲ್ಲಿ ಎಲ್ಲ ಲಕ್ಷಣಗಳೂ ತೋರುತ್ತವೆ. ಆದ್ದರಿಂದ ಕ್ರಿಸ್ಪರ್‌ ತಂತ್ರಜ್ಞಾನದಿಂದ ಈ ಜೀನನ್ನಷ್ಟೆ ತಿದ್ದಿ, ತಿದ್ದಿದ ರಕ್ತಕೋಶಗಳನ್ನು ಮರಳಿ ಕಸಿಮಾಡಿದರೆ, ರೋಗಿಗಳ ದೇಹದಲ್ಲಿ ಎಂದಿನಂತೆ ಹೀಮೊಗ್ಲೋಬಿನ್‌ ಪೂರೈಕೆ ಆಗುತ್ತದೆ ಎನ್ನುವುದು ತರ್ಕ.

ಇದುವರೆವಿಗೂ ಈ ಕಲ್ಪನೆಯನ್ನು ನನಸಾಗಿಸಲು ಹಲವು ತೊಂದರೆಗಳಿದ್ದುವು. ಮೊದಲನೆಯದಾಗಿ ನಿರ್ದಿಷ್ಟವಾದ ಜೀನನ್ನಷ್ಟೆ ತಿದ್ದುವುದು ಕಷ್ಟವಾಗಿತ್ತು. ಜೀನ್‌ ತಿದ್ದುಪಡಿ ಮಾಡಿದರೂ, ಅದು ಯಾವ ಜೀನನ್ನು ತಾಕುತ್ತಿದೆ ಎಂದು ಹೇಳಲಾಗುತ್ತಿರಲಿಲ್ಲ. ಹೀಗಾಗಿ ಇತರೆ ಹಲವು ವಿಧಾನಗಳಲ್ಲಿ ರಕ್ತಕೋಶಗಳು ಹೀಮೊಗ್ಲೋಬಿನನ್ನು ತಯಾರಿಸುವಂತೆ ಮಾಡಲು ಪ್ರಯತ್ನಿಸಲಾಗಿತ್ತು. ಕ್ರಿಸ್ಪರ್‌ ಥೆರಪ್ಯೂಟಿಕ್ಸ್‌ ಹಾಗೂ ವರ್ಟೆಕ್ಸ್‌ ಕಂಪೆನಿಗಳ ಎಕ್ಸಾ-ಸೆಲ್‌ ಎನ್ನುವ ಪ್ರಯೋಗಗಳು ಈಗ ಆಸೆಯನ್ನು ಹುಟ್ಟಿಸಿವೆ. ಈ ಕಂಪೆನಿಗಳು ಸುಮಾರು ಹದಿನೈದು ವರ್ಷಗಳಿಂದಲೂ ಸಿಕಲ್‌ ಸೆಲ್‌ ಕಾಯಿಲೆ ಹಾಗೂ ‘ಥಲಾಸೀಮಿಯಾ’ ಎನ್ನುವ ಇನ್ನೊಂದು ರಕ್ತದೋಷದಿಂದ ನರಳುತ್ತಿದ್ದ 75 ರೋಗಿಗಳಲ್ಲಿ ಕ್ರಿಸ್ಪರ್‌ ತಂತ್ರಜ್ಞಾನ ಬಳಸಿ ತಿದ್ದಿದ ರಕ್ತಕೋಶಗಳನ್ನು ಕಸಿ ಮಾಡಿ ಚಿಕಿತ್ಸೆ ನೀಡಿದ್ದಾರೆ. ಎರಡು ವರ್ಷಗಳವರೆಗೆ ಅವರ ತೊಂದರೆಗಳು ಕಡಿಮೆಯಾಗುವುವೇ ಎಂದು ಗಮನಿಸಿದ್ದಾರೆ.

ತೀವ್ರತೆರನ ಕಾಯಿಲೆ ಇರುವ ರೋಗಿಗಳ ರಕ್ತದಲ್ಲಿ ಹೀಮೋಗ್ಲೋಬಿನ್‌ ಪ್ರಮಾಣ ಬಹಳ ಕಡಿಮೆ ಇರುತ್ತದೆ. ಹೀಗಾಗಿ ಅವರಿಗೆ ಆಗಾಗ್ಗೆ ರಕ್ತಕಸಿ ಅಥವಾ ರಕ್ತದಾನ ಮಾಡಬೇಕಾಗುತ್ತದೆ. ಎಕ್ಸಾ-ಸೆಲ್‌ ಚಿಕಿತ್ಸೆಯನ್ನು ಒಮ್ಮೆ ನೀಡಿದ ಮೂವತ್ತಮೂರು ಮಂದಿ ಸಿಕಲ್‌ ಸೆಲ್‌ ಕಾಯಿಲೆ ರೋಗಿಗಳ ರಕ್ತದಲ್ಲಿ ಹೀಮೊಗ್ಲೋಬಿನ್‌ ಪ್ರಮಾಣ ಎಷ್ಟು ಇತ್ತೆಂದರೆ, ಅವರ್ಯಾರೂ ರಕ್ತದಾನವನ್ನು ಪಡೆಯಲೇ ಇಲ್ಲ. ಸಾಮಾನ್ಯವಾಗಿ ಪ್ರತಿ ಮಿ.ಲೀ. ರಕ್ತದಲ್ಲಿ ನಾಲ್ಕೋ ಐದೋ ಗ್ರಾಂ ಅಷ್ಟೆ ಇರುತ್ತಿದ್ದ ಹೀಮೊಗ್ಲೋಬಿನ್‌ ಮೂವತ್ತಮೂರು ರೋಗಿಗಳಲ್ಲಿ ಹನ್ನೊಂದು ಗ್ರಾಂನಷ್ಟು ಇತ್ತು ಎಂದು ಇವರ ಪರೀಕ್ಷೆಗಳು ವರದಿ ಮಾಡಿವೆ. ಹಾಗೆಯೇ ರಕ್ತಕಣಗಳು ಗಂಟುಗಟ್ಟಿ ನೋವು ಅನುಭವಿಸಬೇಕಾದ ಘಟನೆಗಳೂ ಕಡಿಮೆಯಾದವಂತೆ. ಎಲ್ಲ ರೋಗಿಗಳೂ ಎಕ್ಸಾ-ಸೆಲ್‌ ಚಿಕಿತ್ಸೆಗೂ ಮುನ್ನ ಏನಿಲ್ಲವೆಂದರೂ ವರ್ಷಕ್ಕೆ ನಾಲ್ಕೈದು ಬಾರಿ ನೋವಿಗಾಗಿ ಚಿಕಿತ್ಸೆ ಪಡೆಯಲು ಆಸ್ಪತ್ರೆಯನ್ನು ಸೇರುತ್ತಿದ್ದರು. ಹಾಗಿದ್ದರೆ ಇದು ನಮ್ಮ ಸೋಲಿಗರ ಸಂಕಟವನ್ನೂ ದೂರ ಮಾಡಬಹುದೇ? ಅದು ಇನ್ನೂ ದೂರದ ಆಸೆ ಎನ್ನಿ. ಏಕೆಂದರೆ ಈ ಚಿಕಿತ್ಸೆಗೆ ಏನಿಲ್ಲವೆಂದರೂ ಅಂದಾಜು ಎರಡು ಕೋಟಿ ರೂಪಾಯಿ(ಹದಿನೆಂಟು ಲಕ್ಷ ಡಾಲರು)ಗಳ ವೆಚ್ಚ ತಗುಲಿದೆ ಎಂದು ‘ನೇಚರ್‌’ ವರದಿ ಮಾಡಿದೆ.

ಅದಷ್ಟೆ ಅಲ್ಲ. ಒಮ್ಮೆ ಈ ಚಿಕಿತ್ಸೆ ನೀಡಿದರೆ ಸಾಕೆ? ಮತ್ತೆ ಅದನ್ನು ಮರುಕಳಿಸಬೇಕೆ? ಹಾಗಿದ್ದರೆ ಯಾವಾಗ ಎನ್ನುವುದೂ ಗೊತ್ತಿಲ್ಲ. ಜೊತೆಗೆ, ತಿದ್ದಿದ ರಕ್ತಕೋಶಗಳು ಹೀಮೊಗ್ಲೋಬಿನ್‌ ತಯಾರಿಸಿದ್ದು ಸತ್ಯ. ಅದರ ಜೊತೆಗೇ ಇದೇ ರೀತಿ ಸುಪ್ತವಾಗಿದ್ದ ಇನ್ಯಾವಾವ ಪ್ರೊಟೀನುಗಳನ್ನು ಅವು ತಯಾರಿಸುತ್ತಿವೆಯೋ ಗೊತ್ತಿಲ್ಲ. ಅಂತಹದ್ದೇನೂ ಆಗಿಲ್ಲವೆನ್ನುವದೂ ಗ್ಯಾರಂಟಿ ಆಗಬೇಕು. ಇವೆಲ್ಲವೂ ಆಗುವವರೆಗೂ ಇದು ಇನ್ನೂ ಪ್ರಾಯೋಗಿಕ ಚಿಕಿತ್ಸೆ ಎಂದೇ ಹೇಳಬಹುದು.

ಇವೆಲ್ಲ ಆದ ಮೇಲೂ ಈ ಚಿಕಿತ್ಸೆ ಭಾರತಕ್ಕೆ ಬರಲು ಹಲವಾರು ವರ್ಷಗಳೇ ಬೇಕಾಗಬಹುದು. ಇದೀಗವಷ್ಟೆ ಈ ಕಾಯಿಲೆಯನ್ನು ಪತ್ತೆ ಮಾಡುವ ಸರಳ ವಿಧಾನವನ್ನು ಬೆಂಗಳೂರಿನ ‘ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌’ನ ವಿಜ್ಞಾನಿಗಳು ರೂಪಿಸಿದ್ದಾರೆ. ಈ ದೋಷಪೂರ್ಣ ಜೀನು ಎಷ್ಟು ಜನರಲ್ಲಿ ಇದೆ ಎನ್ನುವುದು ಇನ್ನೂ ಖಾತ್ರಿಯಿಲ್ಲ. ಇದುವರೆವಿಗೂ ಸುಮಾರು ಹತ್ತು ಲಕ್ಷ ಮಂದಿಯನ್ನು, ಅಂದರೆ ಭಾರತದ ಒಟ್ಟಾರೆ ಜನಸಂಖ್ಯೆಯ ಶೇಕಡ 0.1ರಷ್ಟು ಜನರನ್ನಷ್ಟೆ ಪರಿಶೀಲಿಸಲಾಗಿದೆ. ಸುಲಭ ಪತ್ತೆಯ ವಿಧಾನಗಳ ಕೊರತೆ ಇದ್ದುದರಿಂದ ಹೀಗಾಗಿತ್ತು. ಈಗ ಪತ್ತೆಯ ಕಾರ್ಯ ನಡೆಯಲಿದೆ. ಆದರೆ ಚಿಕಿತ್ಸೆ? ಹಳೆಯ ಚಿಕಿತ್ಸೆಯೇ ಅವಶ್ಯವಿರುವ ರೋಗಿಗಳಿಗೆ ತಲುಪದೇ ಇರುವಾಗ, ಹೊಸ ಜೀನ್‌ ಚಿಕಿತ್ಸೆ ಒಂದೋ ಮರೀಚಿಕೆಯೋ, ದೂರದ ಬೆಟ್ಟವೋ ಆಗುತ್ತದಷ್ಟೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.