ADVERTISEMENT

ಸ್ಪಂದನ: ಸಹಜ ಸಂತಾನೋತ್ಪತ್ತಿ ಬಗ್ಗೆ ತಿಳಿದುಕೊಳ್ಳಿ

ಡಾ.ವೀಣಾ ಎಸ್‌ ಭಟ್ಟ‌
Published 26 ಆಗಸ್ಟ್ 2022, 19:30 IST
Last Updated 26 ಆಗಸ್ಟ್ 2022, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

1. ನಾನು ಎರಡು ತಿಂಗಳ ಗರ್ಭಿಣಿ ಈಚೆಗೆ ನನ್ನ ಅಜ್ಜಿಗೆ ಹಿಸ್ಟೀರಿಯಾ ಇತ್ತು. ಅದು ಅವರು ಬಾಣಂತಿಯಾಗಿ ದ್ದಾಗ ಬಂದಿತ್ತು ಎಂದು ಕೇಳಲ್ಪಟ್ಟಿದ್ದೇನೆ. ಹಿಸ್ಟೀರಿಯಾ ಅನುವಂಶೀಯವೇ? ನನಗೂ ಅದು ಬರಬಹುದೇ? ಹಾಗೇ ಬಾರದಂತೆ ಮಾಡಲು ಮುನ್ನೆಚ್ಚರಿಕೆ ಕ್ರಮಗಳೇನಾದರೂ ಇದಿಯೇ? ದಯವಿಟ್ಟು ತಿಳಿಸಿ.
ಊರು, ಹೆಸರು ತಿಳಿಸಿಲ್ಲ

ನೀವು ಈಗ ಎರಡು ತಿಂಗಳ ಗರ್ಭಿಣಿ ಆಗಿರುವುದರಿಂದ ಮೊದಲನೆಯದಾಗಿ ನಿಮ್ಮ ಅಜ್ಜಿಯಿಂದ ಹಿಸ್ಟೀರಿಯಾ ಅಥವಾ ಬಾಣಂತಿ ಸನ್ನಿ ಬಳುವಳಿಯಾಗಿ ಬರುತ್ತದೆ ಎಂಬ ಒತ್ತಡವನ್ನ ತೆಗೆದುಹಾಕಲು ಪ್ರಯತ್ನಿಸಿ. ಕೌಟುಂಬಿಕ ಸಂಬಂಧಿಗಳಲ್ಲಿ ಈ ರೀತಿಯ ತೊಂದರೆ ಇದ್ದಾಗ ಬಾಣಂತನದಲ್ಲಿ ಮಾನಸಿಕ ಅಸ್ವಸ್ಥತೆಗೆ ಕಾರಣವಾಗುತ್ತದೆ ಎಂಬುದು ಒಂದು ಪ್ರೇರಣಕಾರಕ ಅಂಶ. ಆದರೂ ಇದೊಂದೇ ಕಾರಣಕ್ಕೆ ನಿಮಗೆ ಅದು ಬರಬೇಕೆಂದೆನಿಲ್ಲಾ. ಇದಲ್ಲದೇ ಬೇರೆ ಬೇರೆ ರೀತಿಯ ಮನೋಸಾಮಾಜಿಕ ಹಾಗೂ ದೈಹಿಕ ಮತ್ತು ವೈದ್ಯಕೀಯ ಕಾರಣಗಳು ಬಾಣಂತಿಯರಲ್ಲಿ ಮಾನಸಿಕ ಅಸ್ವಸ್ಥತೆಯನ್ನುಂಟು ಮಾಡಬಹುದು.

ಅವುಗಳೆಂದರೆ;

ADVERTISEMENT

ಸತಿಪತಿ ದಾಂಪತ್ಯದಲ್ಲಿ ವಿರಸ, ಆರ್ಥಿಕ ಸಂಕಷ್ಟ, ಬೇಡದ ಗರ್ಭಧಾರಣೆ, ಹದಿವಯಸ್ಸಿಲ್ಲೇ ಗರ್ಭಧಾರಣೆ , ಕುಟುಂಬದ ಇತರ ಸದಸ್ಯರೊಂದಿಗೆ ವೈಮನಸ್ಸು, ಅವಳಿ ಮಕ್ಕಳು ಜನನ, ಔದ್ಯೋಗಿಕ ಒತ್ತಡಗಳು, ಗರ್ಭಧಾರಣೆಯ ಜೊತೆಜೊತೆಗೆ ರಕ್ತಹೀನತೆ, ಸೋಂಕು, ಮಧುಮೇಹ, ಏರುರಕ್ತದೊತ್ತಡ ಇವೆಲ್ಲ ಸೇರಿಕೊಂಡಿ ದ್ದರೆ, ಕಷ್ಟಕರ ಹೆರಿಗೆ, ಹೆರಿಗೆಯ ನಂತರ ಅಧಿಕ ರಕ್ತಸ್ರಾವ, ಸೋಂಕು ಇತ್ಯಾದಿಗಳಿಂದ ಬಳಲಿದರೆ, ಹುಟ್ಟಿದ ಮಗುವಿನಲ್ಲಿ ಅಂಗವೈಕಲ್ಯ ಇದ್ದರೆ, ಏಕಪೋಷಕರಿದ್ದರೆ ಇಂಥವುಗಳಿಂದ ಹೆರಿಗೆಯ ನಂತರ ಬಾಣಂತನದಲ್ಲಿ ಖಿನ್ನತೆ, ಬಾಣಂತಿಸನ್ನಿ, ಬೇಬಿಬ್ಲೂಸ್ ಇತ್ಯಾದಿ ಮಾನಸಿಕ ಸಮಸ್ಯೆಗಳು ಉಂಟಾಗಬಹುದು. ಆದರೆ ಹಲವರು ಇದನ್ನ ಭೂತಪ್ರೇತ ಚೇಷ್ಠೆಯಿಂದ ಬರುತ್ತದೆ, ಗಾಳಿಸೋಂಕಿನಿಂದ ಬರುತ್ತದೆ, ಮಾಟ ಮಂತ್ರದಿಂದ ಬರುತ್ತದೆ. ಆಹಾರ ಸೇವನೆಯಿಂದ ಬರುತ್ತದೆ ಎಂದೆಲ್ಲಾ ತಪ್ಪು ತಿಳಿವಳಿಕೆ ಹೊಂದಿರುತ್ತಾರೆ.

ನೀವಂತೂ ಯಾವುದೇ ಒತ್ತಡಕ್ಕೊಳಗಾಗದೇ ಗರ್ಭಧಾರಣೆಯ ಆರಂಭದಿಂದಲೇ ಸೂಕ್ತವೈದ್ಯರ ಮೇಲ್ವಿಚಾರಣೆ ಯಲ್ಲಿ, ಪ್ರಸವ ಪೂರ್ವ ತಪಾಸಣೆಯೊಂದಿಗೆ, ಉತ್ತಮ ಅರಿವು ಮೂಡಿಸಿಕೊಂಡು ಪೂರ್ವ ತಯಾರಿ ಮಾಡಿಕೊಳ್ಳಿ. ತಾಯ್ತನ ಪ್ರತಿ ಮಹಿಳೆಗೂ ಅಭೂತ ಪೂರ್ವ ಅನುಭವ ಕೊಡುವ ಪುನರುತ್ಪತ್ತಿ ಹಂತ. ಅದು ಮಹಿಳೆಗೆ ದೊರೆಕಿರುವ ಸಹಜ ಬಹುಮಾನ. ಈ ಹಂತವನ್ನು ಧೈರ್ಯವಾಗಿ ದಾಟಬೇಕೆಂದು ಮನಸ್ಸಿನಲ್ಲಿ ಧೃಡತೆ ತಂದುಕೊಳ್ಳಿ. ಕುಟುಂಬದ ಆತ್ಮೀಯರೊಡನೆ ಸಂತೋಷದಿಂದ ಸಮಯವನ್ನ ಕಳೆಯಿರಿ. ಕಾಫಿ, ಟೀ ಸೇವನೆ ಆದಷ್ಟು ಕಡಿಮೆ ಮಾಡಿ. ಧನಾತ್ಮಕ ವಿಷಯಗಳನ್ನು ಬಿಂಬಿಸುವ ಸಾಹಿತ್ಯಗಳನ್ನ ಓದಿ. ನಡುವೆ ಇಂಪಾದ ಸಂಗೀತ ಆಲಿಸಿ. ಮದ್ಯಪಾನ, ಧೂಮಪಾನ ಬೇಡ. ನಿಮಗೆ ದೇವರಲ್ಲಿ ನಂಬಿಕೆ ಇದ್ದರೆ ನಿಮ್ಮ ಇಷ್ಟ ದೈವವನ್ನು ಆಗಾಗ ಧ್ಯಾನಿಸುತ್ತಿರಿ. ಸದಾ ಸಕಾರಾತ್ಮಕ ಚಿಂತನೆ ಮಾಡುತ್ತಿರಿ. ಹಗಲು ನಿದ್ರೆ ಬೇಡ. ನಿತ್ಯ ರಾತ್ರಿ 6 ರಿಂದ 8 ತಾಸು ನಿದ್ದೆ ಮಾಡಿ. ಹಣ್ಣು ಹಸಿರು ಸೊಪ್ಪು ತರಕಾರಿಗಳನ್ನೊಳಗೊಂಡ ಸಂತುಲಿತ ಆಹಾರ ಸೇವಿಸಿ. ನಿಯಮಿತವಾಗಿ ಅರ್ಧಗಂಟೆಯಾದರೂ ವಾಕಿಂಗ್ ಮಾಡಿ. ಸೂಕ್ತ ಮಾರ್ಗದರ್ಶನದೊಂದಿಗೆ ಪ್ರಾಣಾಯಾಮ (ಭ್ರಮರಿ ಹಾಗೂ ನಾಡಿಶೋಧನ) ಮತ್ತು ಧ್ಯಾನ ಮತ್ತು ಹಲವು ಯೋಗಾಸನ ಮಾಡಿ. ಬಾಣಂತನದಲ್ಲಿ ಕುಟುಂಬದವರ, ಆತ್ಮೀಯರ ಸಹಾಯ ಹಸ್ತಪಡೆಯಲು ಹಿಂಜರಿಯಬೇಡಿ. ಇವೆಲ್ಲಾ ಕ್ರಮಗಳನ್ನ ಅನುಸರಿಸಿದರೆ ನೀವು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಂಡು ಆರೋಗ್ಯವಂತ ಮಗುವನ್ನ ಖಂಡಿತ ಪಡೆಯುತ್ತೀರಾ ಎಂದು ಆಶಿಸುತ್ತೇನೆ.

2. ನನ್ನ ವಯಸ್ಸು 26. ಗೃಹಿಣಿ. ಮದುವೆಯಾಗಿ 2 ವರ್ಷ ಆಗಿದೆ. ಮಕ್ಕಳು ಪಡೆಯಲು ಸತತ ಪ್ರಯತ್ನ ನಡೆಯುತ್ತಿದೆ. ಇನ್ನೂ ಮಕ್ಕಳಾಗಿಲ್ಲ. ಎಚ್.ಎಸ್.ಜಿ ಪರೀಕ್ಷೆ ನಡೆಸಿದಾಗ ಬೈಲಾಟರಲ್ ಟ್ಯೂಬಲ್ ಬ್ಲಾಕ್ ಇದೆ ಅಂತ ರಿಪೋರ್ಟ್ ಬಂದಿದೆ. ಟಿ.ಎಸ್.ಎಚ್ 5.11 ಇದೆ ಹಾಗೂ ಅಂಡಾಣುಗಳ ಸಂಖ್ಯೆ 2ಕ್ಕೆ ಇಳಿದಿದೆ ಎಂದು ವೈದ್ಯರು ತಿಳಿಸಿದರು. ನನ್ನ ಪತಿಯಲ್ಲಿ ಯಾವುದೇ ತೊಂದರೆ ಇಲ್ಲ. ಥೈರಾಯಿಡ್‌ಗೆ 12.5 ಎಂ.ಜಿ ಮಾತ್ರೆ ಹಾಗೂCholecalciferolಸಿರಪ್, ಫೋಲಿಕ್ ಆಸಿಡ್, M Torr 800 ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಲ್ಯಾಪ್ರೋಸ್ಕೋಪಿ ಮಾಡಿಸಿದರೂ ಪ್ರಯೋಜನ ಇಲ್ಲ. ಐ.ವಿ.ಎಫ್ ಮಾಡಿಸಿಕೊಳ್ಳಿ ಎಂದು ತಿಳಿಸಿದರು. ನಾಟಿ ಔಷಧಿಯಲ್ಲಿ ಪರಿಹಾರ ಆಗಬಹುದೇ? ನಮ್ಮ ಮುಂದಿನ ಆಯ್ಕೆ ತಿಳಿಸಿ.

ಅನಾಮಿಕ ಬೆಂಗಳೂರು.

ಉತ್ತರ: ಸಹಜವಾಗಿ ಮಗುವಾಗುವ ಪ್ರಕ್ರಿಯೆಯಲ್ಲಿ ತಿಂಗಳಿಗೊಮ್ಮೆ ಅಂಡಾಶಯದಿಂದ ಅಂಡೋತ್ಪತ್ತಿ ಸರಿಯಾಗಿ ಆಗುತ್ತಿರಬೇಕು. ಹೀಗೆ ಬಿಡುಗಡೆಯಾದ ಅಂಡಾಣು ಗರ್ಭನಾಳದಿಂದ ಸೆಳೆಯಲ್ಪಟ್ಟು ಗರ್ಭ ನಾಳದಲ್ಲಿ ವೀರ್ಯಾಣುವಿನ ಬರುವಿಕೆಗೆ ಕಾಯುತ್ತಿರುತ್ತದೆ. ಈ ಸಮಯದಲ್ಲಿ ಗಂಡು ಹೆಣ್ಣಿನ ಸಂಪರ್ಕವಾದಗ ಹೆಣ್ಣಿನ ಯೋನಿಯೊಳಗಿಂದ ವೀರ್ಯಾಣುಗಳು ಗರ್ಭದ್ವಾರದಮೂಲಕ ಗರ್ಭಕೋಶದೊಳಗೆ ಚಲಿಸುತ್ತದೆ. ಅಲ್ಲಿಂದ ಗರ್ಭನಾಳದೊಳಗೆ ಹೋಗಿ, ಅಲ್ಲೇ ಅಂಡಾಣು ಹಾಗೂ ವೀರ್ಯಾಣುಗಳ ಮಿಲನವಾಗುತ್ತದೆ. ಹೀಗೆ ಫಲಿತವಾದ ಭ್ರೂಣವು ನಿಧಾನವಾಗಿ ಗರ್ಭನಾಳದಿಂದ ನಾಲ್ಕಾರು ದಿನದೊಳಗಾಗಿ ಗರ್ಭಕೋಶವನ್ನು ಪ್ರವೇಶಿಸುತ್ತದೆ. ಅಲ್ಲಿ 9 ತಿಂಗಳ ಕಾಲ ಮಗುವಾಗಿ ಮಾರ್ಪಡುತ್ತದೆ. ಹೀಗೆ ಉಂಟಾಗುವ ಸಹಜ ಸಂತಾನೋತ್ಪತ್ತಿ ಕ್ರಿಯೆಯಬಗ್ಗೆ ನಿಮಗೆ ತಿಳಿದಿರಬೇಕು.

ನಿಮಗೆ ಟ್ಯೂಬ್ ಟೆಸ್ಟ್‌ನಲ್ಲಿ ಎರಡು ಗರ್ಭನಾಳ ಬ್ಲಾಕ್ ಆಗಿದೆ ಎಂದು ವರದಿ ಬಂದಿರುವುದಾಗಿ ಹೇಳಿದ್ದೀರಿ. ಹಾಗಾಗಿ ಗರ್ಭನಾಳದಲ್ಲಿರುವ ಅಡೆತಡೆಯನ್ನು ಸೂಕ್ಷ್ಮಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಿದರೂ ಫಲಿತಾಂಶವನ್ನು ಹೇಳಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಿಮ್ಮ ತಜ್ಞವೈದ್ಯರು ಐ.ವಿ.ಎಫ್. (ಪ್ರನಾಳಶಿಶು) ಮಾಡಿಸಿಕೊಳ್ಳಲು ತಿಳಿಸಿರಬಹುದು. ನಾಟಿ ಔಷಧಿಯಲ್ಲಿ ನಿಮಗೆ ಪರಿಹಾರ ಸಿಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ನನಗೆ ಹೇಳಲು ಸಾಧ್ಯವಿಲ್ಲ. ಯಾಕೆಂದರೆ ನಾನು ನಾಟಿ ಔಷಧಿ ಪರಿಣಿತಳಲ್ಲ. ನೀವು ಈ ಬಗ್ಗೆ ಅಂತಹ ನಾಟಿ ಔಷಧಿ ಕೊಡುತ್ತಿರುವ ತಜ್ಞರನ್ನ ಬೇಕಾದರೆ ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ ಮತ್ತು ಫೋಲಿಕ್ ಆಸಿಡ್ ಮಾತ್ರೆಗಳನ್ನ ತೆಗೆದುಕೊಳ್ಳುತ್ತಿರುವುದನ್ನ ನಿಲ್ಲಿಸಬೇಡಿ. ಥೈರಾಯಿಡ್‌ಗೆ ತೆಗೆದುಕೊಳ್ಳುತ್ತಿರುವ ಮಾತ್ರೆಯನ್ನು ನಿಲ್ಲಿಸಬೇಡಿ. ನಿಮ್ಮ ವಯಸ್ಸು ಈಗ 26 ವರ್ಷ. ನಿಮ್ಮ ತಜ್ಞವೈದ್ಯರ ಸಲಹೆಮೇರೆಗೆ ಮಕ್ಕಳು ಪಡೆಯಲು ಪ್ರಯತ್ನಿಸಿ. ನಂತರ ಐ.ವಿ.ಎಫ್.ನ ಮೊರೆ ಹೋಗಿ. ನಿಮ್ಮ ಆರ್ಥಿಕ ಅನುಕೂಲವನ್ನು ನೋಡಿಕೊಂಡು ಚಿಕಿತ್ಸೆಯನ್ನು ಮುಂದುವರಿಸಿರಿ. ಒಳ್ಳೆಯದಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.