ಸಿಹಿ ಪದಾರ್ಥಗಳೆಂದರೆ ಬಹುಕರಿಗೆ ಬಲುಪ್ರೀತಿ. ಅದರಲ್ಲೂ ಮಕ್ಕಳಿಗೆ ಸಿಹಿ ತಿನಿಸುಗಳೆಂದರೆ ವಿಶೇಷ ಒಲವು. ಇದು ಬಾಯಿಗಷ್ಟೇ ರುಚಿ ಹೊರತು ಆರೋಗ್ಯಕ್ಕಲ್ಲ. ಬಾಲ್ಯದಿಂದಲೇ ಮಕ್ಕಳನ್ನು ಸಿಹಿ ಪದಾರ್ಥಗಳಿಂದ ದೂರವಿರಿಸುವುದು ಉತ್ತಮ. ಇದು ಅವರ ಭವಿಷ್ಯದ ಆರೋಗ್ಯಕ್ಕೂ ಹಿತ.
ನಿಮ್ಮ ಪುಟ್ಟ ಕಂದಮ್ಮನಿಗೆ ಸಿಹಿ ಎಂದರೆ ಪಂಚಪ್ರಾಣವೇ? ನಿಮ್ಮ ಕೂಸು ಸದಾ ಸಿಹಿ ತಿನಿಸುಗಳನ್ನು ತಿನ್ನಲು ಹಪಹಪಿಸುತ್ತದೆಯೇ? ಹಾಗಾದರೆ ಸಿಹಿ ತಿನಿಸುಗಳಿಂದ ನಿಮ್ಮ ಮಗುವಿನ ಆರೋಗ್ಯದ ಮೇಲಾಗುವ ಪರಿಣಾಮಗಳೇನು ಎಂದು ತಿಳಿದುಕೊಳ್ಳಲು ಇದು ಸಕಾಲ. ಕೆಲವೊಂದು ವಿಧಾನಗಳಿಂದ ಮಗುವನ್ನು ಸಿಹಿ ತಿನಿಸುಗಳಿಂದ ದೂರವಿರಿಸಬಹುದು. ಇದರಿಂದ ಮಗುವಿನ ಆರೋಗ್ಯದೊಂದಿಗೆ ಭವಿಷ್ಯದ ಜೀವನಕ್ಕೂ ಒಳಿತು.
ಬಾಲ್ಯದಿಂದಲೇ ಸಿಹಿ ಪದಾರ್ಥಗಳಿಂದ ದೂರವಿದ್ದರೆ ಆರೋಗ್ಯಕ್ಕೂ ಉತ್ತಮ, ಸ್ಥೂಲಕಾಯ ಬರದಂತೆ ನೋಡಿಕೊಳ್ಳಬಹುದು.ಸಿಹಿಯಿಂದ ದೂರವಿರಲು ಸಹಾಯವಾಗುವ ಕೆಲವು ಸರಳ ಉಪಾಯಗಳನ್ನು ಇಲ್ಲಿ ತಿಳಿಸಲಾಗಿದೆ. ಇದು ಮಕ್ಕಳಿಗೂ, ವಯಸ್ಕರಿಗೂ ಅನ್ವಯವಾಗುತ್ತದೆ.
ಸಂಸ್ಕರಿತ ಆಹಾರ ಪದಾರ್ಥಗಳಿಂದ ದೂರವಿರಿ
ಸಂಸ್ಕರಿಸಿದ, ಸಿಹಿ ಅಂಶ ಇರುವ ಪದಾರ್ಥಗಳನ್ನು ನಿಮ್ಮ ಮನೆಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬೇಡಿ. ಇದರಿಂದ ಮಕ್ಕಳು ತಿನ್ನುವುದಕ್ಕೂ ಕಡಿವಾಣ ಹಾಕಬಹುದು. ಜೊತೆಗೆ ಅತಿಯಾದ ಸಕ್ಕರೆ ಅಂಶ ಇರುವ ಸಂಸ್ಕರಿಸಿದ ಆಹಾರ ಪದಾರ್ಥಗಳಿಂದ ಮಕ್ಕಳನ್ನು ದೂರವಿರಿಸಿ. ದೈನಂದಿನ ಬಳಕೆಗೆ ಸಕ್ಕರೆಯ ಅವಶ್ಯಕತೆ ಇದ್ದರೆ ಬಹಳ ಸೀಮಿತ ಪ್ರಮಾಣದಲ್ಲಿ ಮನೆಯಲ್ಲಿ ಇರಿಸಿಕೊಳ್ಳಿ. ಬಾಟಲಿಗಳಲ್ಲಿ ಸಿಗುವ ಪಾನೀಯಗಳಿಗೆ ಪರ್ಯಾಯವಾಗಿ ಎಳನೀರು, ಜೇನುತುಪ್ಪ ಹಾಗೂ ಆ್ಯಪಲ್ ಸಿರಪ್‌ನಂತಹ ಆರೋಗ್ಯಕರ ವಸ್ತುಗಳನ್ನು ಸೇವಿಸಬಹುದು.
ನೈಸರ್ಗಿಕ ಸಿಹಿಗೆ ಒತ್ತು ನೀಡಿ
ಸಿಹಿ ಅಂಶ ಇರುವ ಹಣ್ಣು ಹಾಗೂ ತರಕಾರಿಗಳ ಸೇವನೆ ತುಂಬಾ ಒಳ್ಳೆಯದು. ಹಣ್ಣು, ತರಕಾರಿ ಹಾಗೂ ಒಣಹಣ್ಣುಗಳನ್ನು ಸಂಗ್ರಹಿಸಿಟ್ಟುಕೊಳ್ಳಿ. ಹೊಟ್ಟೆ ತುಂಬಿಸುವ, ಅತಿಯಾದ ಪ್ರೊಟೀನ್ ಅಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಆಹಾರವನ್ನು ಸಮತೋಲನಗೊಳಿಸಿಕೊಳ್ಳಬಹುದು. ರಕ್ತದಲ್ಲಿನ ಸಕ್ಕರೆ ಅಂಶ ಹಾಗೂ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವ ಆರೋಗ್ಯಕರ ಕೊಬ್ಬಿನ ಅಂಶಗಳು ನಮ್ಮ ದೇಹದಲ್ಲಿ ದೀರ್ಘಕಾಲ ಶಕ್ತಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತವೆ. ಮಕ್ಕಳಿಗೆ ಅತಿಯಾಗಿ ಹಸಿವಾದಾಗ ಹಣ್ಣು, ತರಕಾರಿ ಹಾಗೂ ಒಣಹಣ್ಣುಗಳನ್ನು ನೀಡುವುದರಿಂದ ಹೊಟ್ಟೆ ತುಂಬಿಸಬಹುದು.
ಒತ್ತಡರಹಿತ ಜೀವನ
ದೇಹ ಅತಿಯಾಗಿ ಒತ್ತಡಕ್ಕೆ ಒಳಗಾದಾಗ ದೇಹದಲ್ಲಿನ ಕಾರ್ಟಿಸೋಲ್ ಎಂಬ ಹಾರ್ಮೋನ್ ಅಂಶದಲ್ಲಿ ಏರಿಕೆಯಾಗುತ್ತದೆ. ಇದು ನಮಗೆ ಹಸಿವಾಗುವಂತೆ ಮಾಡುತ್ತದೆ. ಇದರಿಂದ ಬೆಲ್ಲಿ ಫ್ಯಾಟ್ ಹಾಗೂ ಎರಡು ರೀತಿಯ ಮಧುಮೇಹ ಕಾಣಿಸಿಕೊಳ್ಳುತ್ತದೆ. ಒತ್ತಡವು ಮಕ್ಕಳು ಹಾಗೂ ವಯಸ್ಕರಲ್ಲಿ ಋಣಾತ್ಮಕ ಪರಿಣಾಮ ಬೀರುವಂತೆ ಮಾಡುತ್ತದೆ. ಇದು ಅವರನ್ನು ಜಂಕ್ ಪುಡ್ ಹಾಗೂ ಸಿಹಿ ತಿನಿಸುಗಳನ್ನು ಸೇವಿಸುವಂತೆ ಉತ್ತೇಜಿಸುತ್ತದೆ. ಯಾವಾಗ ಅತಿಯಾಗಿ ಒತ್ತಡ ಕಾಣಿಸಿಕೊಳ್ಳುತ್ತದೋ ಆಗ ಮಾಡುತ್ತಿರುವ ಕೆಲಸಕ್ಕೆ ವಿರಾಮ ನೀಡಿ ದೀರ್ಘ ಉಸಿರು ತೆಗೆದುಕೊಳ್ಳಬೇಕು. ಜೊತೆಗೆ ಮಾಡುತ್ತಿರುವ ಕೆಲಸವನ್ನು ಕೆಲವು ಹೊತ್ತು ನಿಲ್ಲಿಸಿ ಗಮನವನ್ನು ಬೇರೆಡೆಗೆ ಹರಿಸಬೇಕು. ನಿಮ್ಮ ಮಗುವಿಗೂ ಇದನ್ನು ಅಭ್ಯಾಸ ಮಾಡಿಸಿ. ನಿದ್ದೆಯ ಕೊರತೆಯಿಂದಲೂ ಮನುಷ್ಯರು ಸಿಹಿ ತಿನ್ನಲು ಇಷ್ಟಪಡುತ್ತಾರೆ. ಇದರಿಂದ ಕ್ಯಾಲೊರಿಯ ಪ್ರಮಾಣವೂ ಹೆಚ್ಚುತ್ತದೆ. ಸಿಹಿ ತಿನಿಸುಗಳ ಅತಿ ಬಯಕೆಯನ್ನು ನಿಯಂತ್ರಿಸಲು ದಿನಕ್ಕೆ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡುವುದು ಅವಶ್ಯಕ.
ಜ್ಯೂಸ್ ಬದಲು ನೀರು
ಹಣ್ಣಿನ ರಸ ಹಾಗೂ ಸೋಡಾದಂತಹ ತಂಪುಪಾನೀಯಗಳಲ್ಲಿ ಕ್ಯಾಲೊರಿ ಅಂಶ ಇರುವುದಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಅದರ ಅರ್ಥ ಅದು ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ. ಆದರೆ ಸಕ್ಕರೆ ನೇರವಾಗಿ ರಕ್ತನಾಳಗಳಲ್ಲಿ ಸೇರಿ, ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಅಲ್ಲದೇ ರಕ್ತನಾಳದಲ್ಲಿನ ಸಿಹಿ ಅಂಶ ಯಕೃತ್ತಿಗೆ ಸೇರಿ ಯಕೃತ್ತಿನಲ್ಲಿನ ಕೊಬ್ಬು ಶೇಖರಣಾ ಕಾರ್ಯವನ್ನು ತಡೆದು ಹೊಟ್ಟೆಯಲ್ಲಿ ಹೆಚ್ಚಿನ ಕೊಬ್ಬು ಶೇಖರವಾಗಿ ಸೊಂಟದ ಸುತ್ತ ಕೊಬ್ಬು ಉಂಟಾಗಲು ಕಾರಣವಾಗುತ್ತದೆ.
ಇದನ್ನೂ ಓದಿ:ಶಿಶುಗಳಿಗೂ ಕಣ್ಣಿನ ಪೊರೆ
ಹೀಗಾಗಿ ಸಿಹಿ ಹೆಚ್ಚಿರುವ ಪಾನೀಯಗಳನ್ನು ತ್ಯಜಿಸಿ. ಅದರ ಬದಲು ನೀರು ಸೇವಿಸಿ. ಸಿಹಿ ಅಂಶ ರಹಿತ ಪಾನೀಯಗಳು ಹಾಗೂ ಹರ್ಬಲ್ ಟೀ ಸೇವಿಸಿ. ಇದು ನಿಮ್ಮಲ್ಲಿ ಪರಿಣಾಮಕಾರಿಯಾಗಿ ಸಕ್ಕರೆ ಅಂಶ ಕಡಿಮೆಯಾಗುವಂತೆ ಮಾಡಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಮಧ್ಯಂತರ ಉಪವಾಸ ಮಾಡಿ
ಮಧ್ಯಂತರ ಉಪವಾಸವೂ ಈಗಿನ ಡಯೆಟ್ ವಿಧಾನದಲ್ಲಿ ಒಂದು ಹೊಸ ಟ್ರೆಂಡ್. ಇದರಲ್ಲಿ ಮೊದಲೇ ನಿಮಗೆ ಯಾವ ವಸ್ತುವನ್ನು ಯಾವ ಸಮಯದ ಒಳಗೆ ತಿನ್ನಬೇಕು ಎಂಬುದು ನಿರ್ಧಾರವಾಗಿರುತ್ತದೆ. ಆ ಸಮಯದಲ್ಲಿ ತಿಂದು ನಂತರ ಪೂರ್ಣವಾಗಿ ಉಪವಾಸ ಮಾಡಬಹುದು. ಉಪವಾಸದಿಂದ ನಮ್ಮ ದೇಹದ ಶಕ್ತಿಗೆ ಬೇಕಾಗುವಷ್ಟು ಕೊಬ್ಬಿನಂಶ ಶೇಖರಣೆಗೆ ನೆರವಾಗುತ್ತದೆ. ಜೊತೆಗೆ ಇನ್ಸುಲಿನ್ ಹಾರ್ಮೋನ್‌ನ ನಿಯಂತ್ರಣಕ್ಕೂ ಇದು ಸಹಾಯ ಮಾಡುತ್ತದೆ.
ಕ್ಯಾಂಡಿಡ್ ಹೆಚ್ಚದಂತೆ ನೋಡಿಕೊಳ್ಳಿ
ಕ್ಯಾಂಡಿಡ್ ಎನ್ನುವುದು ಮನುಷ್ಯನ ದೇಹದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಶಿಲೀಂಧ್ರಗಳ ಸೋಂಕು. ಇದು ಕರುಳಿನಲ್ಲಿರುವ ಒಂದು ರೀತಿಯ ಯೀಸ್ಟ್‌ನಿಂದ ಉತ್ಪತ್ತಿಯಾಗುತ್ತದೆ. ಇದು ನಮ್ಮನ್ನು ಸುಸ್ತು ಮಾಡುತ್ತದೆ. ಅಲ್ಲದೇ ಕಿರಿಕಿರಿ ಉಂಟಾಗುವಂತೆ ಮಾಡುತ್ತದೆ. ಇದು ಸಿಹಿ ಅಂಶಗಳಿಂದ ಬೆಳೆಯುವಂತಹದ್ದು. ಹೀಗಾಗಿ ದೇಹದಲ್ಲಿ ಅತಿಯಾದ ಸಿಹಿಯ ಬಯಕೆಯನ್ನು ಹುಟ್ಟುವಂತೆ ಮಾಡುತ್ತದೆ. ಇದು ಒಂದು ರೀತಿಯ ವಿರೋಧಾಭಾಸದ ಸಂಗತಿ. ಒಂದು ಕಡೆ ಕರುಳಿನ ಯೀಸ್ಟ್‌ನ ಉತ್ತೇಜನದಿಂದ ಸಕ್ಕರೆ ತಿಂದರೆ, ಇನ್ನೊಂದು ಕಡೆ ಅತಿಯಾದ ಯೀಸ್ಟ್ ನಿಮ್ಮ ಕರುಳಿನಲ್ಲಿದ್ದರೆ ಅವು ಇನ್ನೂ ಹೆಚ್ಚು ಸಕ್ಕರೆ ತಿನ್ನಲು ಪ್ರೇರೆಪಿಸುತ್ತವೆ.
ನಿಮ್ಮ ಆರೋಗ್ಯದ ಬಗ್ಗೆ ಗಮನ ನೀಡಿ. ಒಂದು ವೇಳೆ ನಿಮ್ಮಲ್ಲೂ ಕ್ಯಾಂಡಿಡ್ ಲಕ್ಷಣ ಕಾಣಿಸಿಕೊಂಡರೆ ಸಿಹಿಯ ಅತಿಯಾದ ಬಯಕೆಯನ್ನು ನಿಯಂತ್ರಿಸಲು ಕ್ಯಾಂಡಿಡ್‌ಗೆ ಚಿಕಿತ್ಸೆ ಪಡೆಯಿರಿ.
(ಪೂರಕ ಮಾಹಿತಿ: ಡಾ. ಟಿ.ಎಸ್. ತೇಜಸ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.