ADVERTISEMENT

ಆರೋಗ್ಯಕ್ಕೆ ಉತ್ತಮ ಬಾರ್ಲಿ ಟೀ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 17:13 IST
Last Updated 8 ಸೆಪ್ಟೆಂಬರ್ 2020, 17:13 IST
ಬಾರ್ಲಿ ಟೀ
ಬಾರ್ಲಿ ಟೀ   

ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಟೀ ಕುಡಿಯುವುದು ಅನೇಕರಿಗೆ ಅಭ್ಯಾಸ. ಟೀ ಇಲ್ಲದೇ ದಿನ ಕಳೆಯುವುದೇ ಇಲ್ಲ ಎಂಬ ಭಾವನೆ ಹೊಂದಿರುವವರು ಹಲವರಿದ್ದಾರೆ. ದಿನಕ್ಕೆ ನಾಲ್ಕಾರು ಬಾರಿ ಟೀ ಕುಡಿಯುವವರೂ ‌ಇದ್ದಾರೆ. ಟೀ ಕುಡಿಯುವುದು ಕೆಟ್ಟ ಚಟವೇನೂ ಅಲ್ಲ. ಆದರೆ ಟೀ ಪುಡಿಯ ಟೀ ಕುಡಿಯುವುದಕ್ಕಿಂತ ಬಾರ್ಲಿ ಟೀ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇದು ಅನೇಕ ದೈಹಿಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ಬಾರ್ಲಿ ಟೀ ಅತ್ಯಂತ ಪೌಷ್ಟಿಕಾಂಶ ಹೊಂದಿರುವ ಟೀಗಳಲ್ಲಿ ಒಂದಾಗಿದೆ. ಇದರ ಪರಿಮಳವು ನಮ್ಮನ್ನು ಒತ್ತಡ ಹಾಗೂ ಆತಂಕದಿಂದ ದೂರ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಒಂದು ಲೋಟ ಬಾರ್ಲಿ ಟೀ ಕುಡಿಯುವುದರಿಂದ ದೇಹದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಬಾರ್ಲಿ ಟೀ ಕುಡಿಯುವುದರಿಂದ ಆಗುವ ಪ್ರಯೋಜನಗಳು ಇಲ್ಲಿವೆ.

ಉರಿಯೂತ, ಹೃದಯ ಸಂಬಂಧಿ ಕಾಯಿಲೆಗೆ ರಾಮಬಾಣ

ADVERTISEMENT

ಬಾರ್ಲಿ ಟೀಯಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶ ಅಧಿಕವಾಗಿರುತ್ತದೆ. ಅಲ್ಲದೇ ಇದರಲ್ಲಿ ಸೆಲೇನಿಯಂ, ವಿಟಮಿನ್ ಎ ಹಾಗೂ ಲಿಗ್ನಾನ್ಸ್ ಅಂಶವು ಇದ್ದು ಇದು ಹೃದಯಸಂಬಂಧಿ ಕಾಯಿಲೆ ಹಾಗೂ ಉರಿಯೂತ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ರಕ್ತವನ್ನು ಶುದ್ಧಗೊಳಿಸುತ್ತದೆ

ಬಾರ್ಲಿ ಟೀಯಲ್ಲಿ ರಕ್ತವನ್ನು ಶುದ್ಧಗೊಳಿಸುವ ಅಂಶವಿದೆ. ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಮಧುಮೇಹ, ರಕ್ತದೊತ್ತಡದಂತಹ ಸಮಸ್ಯೆ ಇರುವವರಿಗೂ ಬಾರ್ಲಿ ಟೀ ಉತ್ತಮ.

ನೆಗಡಿ, ಗಂಟಲು ನೋವಿಗೂ ಪರಿಹಾರ

ಆಗಾಗ ಶೀತ, ಜ್ವರ ಕಾಣಿಸಿಕೊಳ್ಳುವವರು ಬಾರ್ಲಿ ಟೀ ಕುಡಿದರೆ ಉತ್ತಮ. ಅದರಲ್ಲೂ ಶೀತ ಜ್ವರ ಕಾಣಿಸಿಕೊಂಡಾಗ ಪ್ರತಿನಿತ್ಯ ಬಾರ್ಲಿ ಟೀ ಸೇವನೆ ಮಾಡಿ. ಇದು ಗಂಟಲನ್ನು ಸ್ವಚ್ಛ ಮಾಡುತ್ತದೆ. ಅಲ್ಲದೇ ಆಸ್ತಮಾ, ಬ್ರಾಂಕೈಟಿಸ್ ಸಮಸ್ಯೆ ಇರುವವರು ಕಡ್ಡಾಯವಾಗಿ ಪ‍್ರತಿನಿತ್ಯ ಬಾರ್ಲಿ ಸೇವಿಸುವುದು ಒಳ್ಳೆಯದು. ಗಂಟಲು ನೋವಿನಂತಹ ಸಮಸ್ಯೆಗಳಿಗೆ ಬಾರ್ಲಿ ಟೀ ಉತ್ತಮ ಔಷಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.